ರಾಹುಲ್ ಗಾಂಧಿ ಜೊತೆ ಬಿಜೆಪಿಯಿಂದ ಮೋದಿ ಬದಲು ಚರ್ಚೆಗೆ ಇಳಿಯಲಿರುವ ಅಭಿನವ್ ಪ್ರಕಾಶ್ ಯಾರು?

ಪ್ರಮುಖ ಚುನಾವಣಾ ವಿಷಯಗಳ ಕುರಿತು ಸಾರ್ವಜನಿಕ ಚರ್ಚೆಗೆ ನಿವೃತ್ತ ನ್ಯಾಯಮೂರ್ತಿ ಮದನ್ ಬಿ ಲೋಕುರ್, ನ್ಯಾಯಮೂರ್ತಿ ಅಜಿತ್ ಪಿ. ಶಾ ಮತ್ತು ಪತ್ರಕರ್ತ ಎನ್ ರಾಮ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್‌ನ ರಾಹುಲ್ ಗಾಂಧಿಗೆ ಆಹ್ವಾನವನ್ನು ನೀಡಿದ್ದರು.

ರಾಹುಲ್ ಗಾಂಧಿ ಜೊತೆ ಬಿಜೆಪಿಯಿಂದ ಮೋದಿ ಬದಲು ಚರ್ಚೆಗೆ ಇಳಿಯಲಿರುವ ಅಭಿನವ್ ಪ್ರಕಾಶ್ ಯಾರು?
ಅಭಿನವ್ ಪ್ರಕಾಶ್

Updated on: May 14, 2024 | 4:52 PM

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಸಾರ್ವಜನಿಕ ಚರ್ಚೆಗೆ ಆಹ್ವಾನವನ್ನು ಸ್ವೀಕರಿಸಿರುವ ಭಾರತೀಯ ಜನತಾ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಈ ಚರ್ಚೆಯಲ್ಲಿ ಪ್ರಧಾನಿ ಮೋದಿ ಬದಲಿಗೆ ಬಿಜೆವೈಎಂ ಉಪಾಧ್ಯಕ್ಷ ಅಭಿನವ್ ಪ್ರಕಾಶ್ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. ಪ್ರಮುಖ ಚುನಾವಣಾ ವಿಷಯಗಳ ಕುರಿತು ಚರ್ಚೆಗಾಗಿ ನಿವೃತ್ತ ನ್ಯಾಯಮೂರ್ತಿ ಮದನ್ ಬಿ ಲೋಕುರ್, ನ್ಯಾಯಮೂರ್ತಿ ಅಜಿತ್ ಪಿ ಶಾ ಮತ್ತು ಪತ್ರಕರ್ತ ಎನ್ ರಾಮ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಅವರಿಗೆ ಕೆಲವು ದಿನಗಳ ಹಿಂದೆ ಆಹ್ವಾನವನ್ನು ನೀಡಿದ್ದರು.

ತೇಜಸ್ವಿ ಸೂರ್ಯ ಅವರು ಅಭಿನವ್ ಪ್ರಕಾಶ್ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಅವರು ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸುತ್ತಿರುವ ರಾಯ್​ಬರೇಲಿಯ ದಲಿತ ನಾಯಕ. ಅಭಿನವ್ ಪ್ರಕಾಶ್ ನಮ್ಮ ಯುವ ಘಟಕದೊಳಗಿನ ಪ್ರಸಿದ್ಧ ನಾಯಕರಲ್ಲದೇ ನಮ್ಮ ಸರ್ಕಾರ ಜಾರಿಗೆ ತಂದ ನೀತಿಗಳು ಮತ್ತು ಸುಧಾರಣೆಗಳ ವಕ್ತಾರರು. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ ಮತ್ತು ಸಹಾಯಕ ಪ್ರಾಧ್ಯಾಪಕರು.

ಇದನ್ನೂ ಓದಿ: ಮೋದಿ ಒಪ್ಪಿದರೆ ನಾನು ಸಿದ್ಧ; ಚುನಾವಣೆ ಕುರಿತ ಚರ್ಚೆಗೆ ತಯಾರೆಂದ ರಾಹುಲ್ ಗಾಂಧಿ

ಮೇ 10ರಂದು ರಾಹುಲ್ ಗಾಂಧಿ ಅವರು ನಿವೃತ್ತ ನ್ಯಾಯಮೂರ್ತಿಗಳಾದ ಮದನ್ ಬಿ. ಲೋಕುರ್, ಅಜಿತ್ ಪಿ. ಶಾ ಮತ್ತು ಪತ್ರಕರ್ತ ಎನ್. ರಾಮ್ ಅವರಿಗೆ ಬರೆದ ಪತ್ರದಲ್ಲಿ, ಮೋದಿ ಒಪ್ಪಿದರೆ ನಾನು ಅಥವಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಚರ್ಚೆಯಲ್ಲಿ ಭಾಗವಹಿಸಲು ಸಿದ್ಧ ಎಂದು ತಿಳಿಸಿದ್ದರು.

ಮೋದಿ ಸಿದ್ಧರಿದ್ದರೆ ನಾನು ಚರ್ಚೆಗೆ ಸಿದ್ಧ ಎಂದು ಹೇಳಿದ್ದ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಮೋದಿಯವರ ಜೊತೆ ಚರ್ಚೆ ನಡೆಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯೇ? ಎಂದು ಪ್ರಶ್ನಿಸಿದ್ದರು. ಇದೀಗ ಎರಡು ಪ್ರತಿಸ್ಪರ್ಧಿ ಪಕ್ಷಗಳ ನಡುವೆ ಸಾರ್ವಜನಿಕ ಚರ್ಚೆಯ ಪ್ರಸ್ತಾಪವನ್ನು ಒಪ್ಪಿಕೊಂಡಿರುವ ತೇಜಸ್ವಿ ಸೂರ್ಯ ತಮ್ಮ ಪಕ್ಷದ ಯುವ ನಾಯಕ ಅಭಿನವ್ ಪ್ರಕಾಶ್ ಅವರನ್ನು ರಾಹುಲ್ ಗಾಂಧಿ ಜೊತೆಗಿನ ಚರ್ಚೆಯಲ್ಲಿ ಭಾಗವಹಿಸಲು ನಾಮನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ