ಬಿಹಾರದಲ್ಲಿ ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ಹೇಳಿಕೆ; ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದೂರು ದಾಖಲು

ಬಿಹಾರದಲ್ಲಿ ಚುನಾವಣಾ ರ‍್ಯಾಲಿಗಳನ್ನುದ್ದೇಶಿಸಿ ಮಾತನಾಡುವಾಗ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, "ಪ್ರಧಾನಿ ಮೋದಿ ಮತಗಳಿಗಾಗಿ ಏನು ಬೇಕಾದರೂ ಮಾಡುತ್ತಾರೆ, ನೃತ್ಯ ಕೂಡ ಮಾಡುತ್ತಾರೆ" ಎಂದು ಹೇಳಿದ್ದರು. "ಬಿಹಾರದಲ್ಲಿ ನಿತೀಶ್ ಕುಮಾರ್ ಸರ್ಕಾರವನ್ನು ಬಿಜೆಪಿ ರಿಮೋಟ್ ಕಂಟ್ರೋಲ್ ಮೂಲಕ ನಡೆಸುತ್ತಿದೆ" ಎಂದು ಆರೋಪಿಸಿದ್ದರು. ಇದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

ಬಿಹಾರದಲ್ಲಿ ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ಹೇಳಿಕೆ; ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದೂರು ದಾಖಲು
Rahul Gandhi In Bihar

Updated on: Oct 30, 2025 | 9:48 PM

ನವದೆಹಲಿ, ಅಕ್ಟೋಬರ್ 30: ಬಿಹಾರ (Bihar Assembly Elections) ರಾಜ್ಯದಲ್ಲಿ ನಡೆದ ಸಾರ್ವಜನಿಕ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi) ವಿರುದ್ಧ ಅವಹೇಳನಕಾರಿ ಮತ್ತು ವೈಯಕ್ತಿಕ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ಭಾರತೀಯ ಜನತಾ ಪಕ್ಷದ (ಬಿಜೆಪಿ) ಬಿಹಾರ ಘಟಕವು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ ಇಂದು ದೂರು ದಾಖಲಿಸಿದೆ. ಬಿಜೆಪಿ ತನ್ನ ದೂರಿನಲ್ಲಿ ರಾಹುಲ್ ಗಾಂಧಿ ಮಾದರಿ ನೀತಿ ಸಂಹಿತೆ ಮತ್ತು 1951ರ ಜನಪ್ರಾತಿನಿಧ್ಯ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದೆ.

ರಾಹುಲ್ ಗಾಂಧಿಗೆ ಶೋ-ಕಾಸ್ ನೋಟಿಸ್ ಜಾರಿ ಮಾಡಬೇಕು, ಬೇಷರತ್ತಾದ ಸಾರ್ವಜನಿಕ ಕ್ಷಮೆಯಾಚಿಸುವಂತೆ ನಿರ್ದೇಶಿಸಬೇಕು ಮತ್ತು ಪ್ರಜಾಪ್ರಭುತ್ವ ಹಾಗೂ ಚುನಾವಣಾ ಮಾನದಂಡಗಳ ಪಾವಿತ್ರ್ಯವನ್ನು ಎತ್ತಿಹಿಡಿಯಲು ನಿರ್ದಿಷ್ಟ ಅವಧಿಗೆ ಪ್ರಚಾರ ಮಾಡದಂತೆ ನಿರ್ಬಂಧಿಸಬೇಕು ಎಂದು ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.

ಇದನ್ನೂ ಓದಿ: Bihar Elections: ಉಚಿತ ವಿದ್ಯುತ್‌ನಿಂದ ಸರ್ಕಾರಿ ಉದ್ಯೋಗದವರೆಗೆ; ಬಿಹಾರ ಚುನಾವಣೆಗೆ ಮಹಾಘಟಬಂಧನ್ ಪ್ರಣಾಳಿಕೆ ಬಿಡುಗಡೆ

ಬಿಜೆಪಿ ನೀಡಿದ ದೂರಿನ ಪ್ರಕಾರ ತಮ್ಮ ಭಾಷಣದಲ್ಲಿ ರಾಹುಲ್ ಗಾಂಧಿ, “ಚುನಾವಣೆಗೂ ಮೊದಲು ಮತಗಳಿಗೆ ಪ್ರತಿಯಾಗಿ ಪ್ರಧಾನಿ ಮೋದಿಯವರನ್ನು ಮತದಾರರು ವೇದಿಕೆಯ ಮೇಲೆ ನೃತ್ಯ ಮಾಡಲು ಕೇಳಿದರೆ ಅವರು ನೃತ್ಯವನ್ನು ಬೇಕಾದರೂ ಮಾಡುತ್ತಾರೆ. ಪ್ರಧಾನಿ ಮೋದಿ ಮತಗಳಿಗಾಗಿ ವೇದಿಕೆಯಲ್ಲಿ ಭರತನಾಟ್ಯ ಮಾಡಲು ಪ್ರಾರಂಭಿಸುತ್ತಾರೆ” ಎಂದು ಹೇಳಿದ್ದರು. ಇಂತಹ ಹೇಳಿಕೆಗಳು ಪ್ರಧಾನಿ ಕಚೇರಿಯ ಘನತೆಯನ್ನು ಕುಗ್ಗಿಸುತ್ತವೆ ಎಂದು ಬಿಜೆಪಿ ವಾದಿಸಿದೆ.

ಇದನ್ನೂ ಓದಿ: ಮತಕ್ಕಾಗಿ ಮೋದಿ ಡ್ಯಾನ್ಸ್ ಬೇಕಿದ್ರೂ ಮಾಡುತ್ತಾರೆ; ಬಿಹಾರದಲ್ಲಿ ರಾಹುಲ್ ಗಾಂಧಿ ಲೇವಡಿ

ಈ ತಿಂಗಳ ಆರಂಭದಲ್ಲಿ ಚುನಾವಣಾ ಆಯೋಗವು ಬಿಹಾರ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿತು. 243 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 6 ಮತ್ತು ನವೆಂಬರ್ 11ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 14ರಂದು ಮತ ಎಣಿಕೆ ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ