
ಪಾಟ್ನಾ, ಜು.5: ಬಿಹಾರ ಮೂಲದ ಉದ್ಯಮಿ ಹಾಗೂ ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ (BJP leader Gopal Khemka) ಅವರನ್ನು ಶುಕ್ರವಾರ ರಾತ್ರಿ ಪಾಟ್ನಾದ ಅವರ ಮನೆಯ ಮುಂದೆ ಗುಂಡಿಕ್ಕಿ ಕೊಲ್ಲಲಾಗಿದೆ. ಗಾಂಧಿ ಮೈದಾನ ಪೊಲೀಸ್ ಠಾಣೆ ಪ್ರದೇಶದ ‘ಪನಾಚೆ’ ಹೋಟೆಲ್ ಬಳಿ ಈ ಘಟನೆ ನಡೆದಿದ್ದು, ಖೇಮ್ಕಾ ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಹೋಟೆಲ್ ಪಕ್ಕದಲ್ಲಿರುವ ‘ಟ್ವಿನ್ ಟವರ್’ ಸೊಸೈಟಿಯಲ್ಲಿ ವಾಸಿಸುತ್ತಿದ್ದ ಗೋಪಾಲ್ ಖೇಮ್ಕಾ ಅವರ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಇನ್ನು ಆರೋಪಿಗಳು ಗುಂಡು ಹಾರಿಸಿ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾರೆ.
ಗುಂಡಿನ ದಾಳಿಗೆ ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಅವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಇನ್ನು ಘಟನೆಯ ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು, ಗುಂಡು ಮತ್ತು ಶೆಲ್ ಕವಚವನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ನಗರ ಕೇಂದ್ರ ಎಸ್‌ಪಿ ದೀಕ್ಷಾ, ಜುಲೈ 4 ರ ರಾತ್ರಿ, ರಾತ್ರಿ 11 ಗಂಟೆ ಸುಮಾರಿಗೆ, ಗಾಂಧಿ ಮೈದಾನ ದಕ್ಷಿಣ ಪ್ರದೇಶದಲ್ಲಿ ಈ ಗುಂಡಿನ ದಾಳಿ ನಡೆಸಲಾಗಿದೆ. ಉದ್ಯಮಿ ಹಾಗೂ ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಅವರನ್ನು ಟಾರ್ಗೆಟ್ ಮಾಡಿ ಈ ದಾಳಿಯನ್ನು ನಡೆಸಲಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ನಮ್ಮ ತಂಡ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಬಂದಿದ್ದಾರೆ. ಇನ್ನು ಅವರನ್ನು ಆಸ್ಪತ್ರೆಗೆ ಸ್ಥಳೀಯರು ಸಾಗಿಸಿದ್ದಾರೆ. ಇದೀಗ ತನಿಖೆ ಆರಂಭಿಸಲಾಗಿದೆ. ಇದರ ಜತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡ ವಶ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಇನ್ನು ಈ ದಾಳಿ ನಡೆಯಲು ಸೂಕ್ತವಾದ ಕಾರಣ ತಿಳಿದಿಲ್ಲ. ಮೂರು ವರ್ಷಗಳ ಹಿಂದೆ ಅವರ ಮಗ ಗುಂಜನ್ ಖೇಮ್ಕಾ ಅವರನ್ನುಕೂಡ ಹೀಗೆ ಕೊಲೆ ಮಾಡಲಾಗಿತ್ತು. ಇನ್ನು ಘಟನಾ ಸ್ಥಳಕ್ಕೆ ಪೂರ್ಣಿಯಾದ ಸ್ವತಂತ್ರ ಸಂಸದ ಪಪ್ಪು ಯಾದವ್ ಅಲಿಯಾಸ್ ರಾಜೇಶ್ ರಂಜನ್ ನಿನ್ನೆ ರಾತ್ರಿ ಬಂದಿದ್ದು, ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಿತೀಶ್ ಕುಮಾರ್ ನೇತೃತ್ವದ ಸರ್ಕಾರವನ್ನು ಟೀಕಿಸುತ್ತಾ, “ಬಿಹಾರದಲ್ಲಿ ಯಾರೂ ಸುರಕ್ಷಿತವಾಗಿಲ್ಲ” ಎಂದು ಹೇಳಿದ್ದಾರೆ. ಬಿಹಾರ ಅಪರಾಧಿಗಳಿಗೆ ಆಶ್ರಯ ತಾಣವಾಗಿದೆ! ನಿತೀಶ್ ಜೀ, ದಯವಿಟ್ಟು ಬಿಹಾರವನ್ನು ಉಳಿಸಿ” ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ