ಉದ್ಧವ್ ಠಾಕ್ರೆ, ರಾಜ್ ಠಾಕ್ರೆ ‘ಮಹಾ’ ಸಂಗಮ: ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ
ಮಹಾರಾಷ್ಟ್ರ ರಾಜಕಾರಣದಲ್ಲಿ ಇಂದು ಹೊಸ ಸಂಚಲನ ಮೂಡಿದೆ. ಅದಕ್ಕೆ ಕಾರಣ, ದಾಯಾದಿ ಕಲಹ ಬದಿಗಿಟ್ಟು ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಎರಡು ದಶಕದ ಬಳಿಕ ಮತ್ತೆ ಒಂದಾಗಿರುವುದು. ಇಬ್ಬರೂ ಒಂದೇ ವೇದಿಕೆಯಲ್ಲಿ ತಬ್ಬಿಕೊಂಡು ಶಕ್ತಿ ಪ್ರದರ್ಶನ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಬಿಜೆಪಿ ವಿರುದ್ಧ ರಣ ಕಹಳೆ ಮೊಳಗಿಸಿದ್ದಾರೆ.

ಮುಂಬೈ, ಜುಲೈ 5: ಮಹಾರಾಷ್ಟ್ರ ರಾಜಕೀಯದಲ್ಲಿ ಶನಿವಾರ ಮಹಾಸಂಗಮದ ಜೊತೆ ಅತಿ ದೊಡ್ಡ ಸಂಚಲನವೂ ಸೃಷ್ಟಿಯಾಗಿದೆ. ಮರಾಠಿಗರ ಹುಲಿ ಎಂದೇ ಕರೆಸಿಕೊಳ್ಳುತ್ತಿದ್ದ, ಶಿವ ಸೇನಾ (Shiv Sena) ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ (Uddhav Thackeray) ಪುತ್ರ ಉದ್ಧವ್ ಠಾಕ್ರೆ ಹಾಗೂ ಸಹೋದರನ ಪುತ್ರ ರಾಜ್ ಠಾಕ್ರೆ (Raj Thackeray) ಒಂದಾಗಿದ್ದಾರೆ. ಸುಮಾರು 20 ವರ್ಷಗಳ ನಂತರ ಉಭಯ ನಾಯಕರು ಒಟ್ಟಿಗೆ ವೇದಿಕೆ ಹಂಚಿಕೊಂಡಿದ್ದು, ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರದಲ್ಲಿ ಹಿಂದಿ ಹೇರಿಕೆ ವಿರುದ್ಧ ಹೋರಾಟದ ಭಾಗವಾಗಿ ‘ಮರಾಠಿಗರ ಧ್ವನಿ’ ಹೆಸರಿನಲ್ಲಿ ಆಯೋಜಿಸಲಾದ ಬೃಹತ್ ವಿಜಯೋತ್ಸವ ರ್ಯಾಲಿಯಲ್ಲಿ ಇಬ್ಬರೂ ವೇದಿಕೆ ಹಂಚಿಕೊಂಡಿದ್ದಾರೆ.
ಮಹಾರಾಷ್ಟ್ರದ ಪ್ರಾಥಮಿಕ ಶಾಲೆಗಳಲ್ಲಿ ಹಿಂದಿಯನ್ನು ಮೂರನೇ ಭಾಷೆಯಾಗಿ ಕಡ್ಡಾಯಗೊಳಿಸುವ ವಿವಾದಾತ್ಮಕ ನೀತಿಯನ್ನು ಜಾರಿಗೊಳಿಸಲು ಅಲ್ಲಿನ ಸರ್ಕಾರ ಮುಂದಾಗಿತ್ತು. ಅದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ನಂತರ ಇತ್ತೀಚೆಗೆ ಆ ನಿರ್ಧಾರವನ್ನು ಹಿಂಪಡೆದಿತ್ತು. ಇದನ್ನು ಮರಾಠಿಗರ ಬಲು ದೊಡ್ಡ ವಿಜಯ ಎಂದು ಶಿವ ಸೇನಾ ಹಾಗೂ ಮಹಾರಾಷ್ಟ್ರ ನವ ನಿರ್ಮಾಣ ಸೇನಾ (ಎಂಎನ್ಎಸ್) ಬಣ್ಣಿಸಿವೆ. ಅಲ್ಲದೆ, ಜತೆಯಾಗಿ ವಿಜಯೋತ್ಸವ ಆಚರಿಸಿವೆ. ಈ ಒಂದೇ ಕಾರಣ 20 ವರ್ಷಗಳ ನಂತರ ದಾಯಾದಿಗಳು ಜತೆಯಾಗುವಂತೆ ಮಾಡಿದೆ.
ಉದ್ಧವ್ ಠಾಕ್ರೆ, ರಾಜ್ ಠಾಕ್ರೆ ಸಂಘರ್ಷದ ಹಿನ್ನೆಲೆ
ರಾಜ್ ಠಾಕ್ರೆ, ಶಿವ ಸೇನಾ ಪಕ್ಷದ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರ ಸಹೋದರ ಶ್ರೀಕಾಂತ್ ಠಾಕ್ರೆ ಅವರ ಪುತ್ರ. 1966ರಲ್ಲಿ ಬಾಳಾ ಸಾಹೇಬ್ ಠಾಕ್ರೆ ಶಿವ ಸೇನಾ ಪಕ್ಷ ಸ್ಥಾಪಿಸಿದಾಗ ರಾಜ್ ಠಾಕ್ರೆಗೆ ಕೇವಲ 2 ವರ್ಷ. 1990ರ ಹೊತ್ತಿಗೆ 22 ವರ್ಷದವರಾಗಿದ್ದ ರಾಜ್ ಠಾಕ್ರೆ, ದೊಡ್ಡಪ್ಪ ಕಟ್ಟಿದ ಶಿವ ಸೇನಾ ವಿದ್ಯಾರ್ಥಿ ವಿಭಾಗವನ್ನು ಮುನ್ನಡೆಸಿದರು. 1990ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಗುರುತಿಕೊಂಡಿದ್ದರು. ಆದರೆ, ಕಾಲ ಬದಲಾದಂತೆ ಬಾಳಾ ಸಾಹೇಬ್ ಠಾಕ್ರೆ ತಮ್ಮ ಪುತ್ರ ಉದ್ಧವ್ಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟರು. ಹೀಗಾಗಿ 2005ರಲ್ಲಿ ಬಾಳಾ ಸಾಹೇಬ್ ಠಾಕ್ರೆ ವಿರುದ್ಧ ಸಿಡಿದೆದ್ದು, ಶಿವ ಸೇನಾ ತೊರೆದ ರಾಜ್ ಠಾಕ್ರೆ, ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಎಂಬ ಪಕ್ಷವನ್ನು ಸ್ಥಾಪಿಸಿದರು. ಅಂದಿನಿಂದ ಇಂದಿನವರೆಗೂ ಶಿವ ಸೇನಾಗೆ ಪ್ರತಿಸ್ಪರ್ಧಿಯಾಗೇ ಇದ್ದರು. ಇದೀಗ ಒಗ್ಗಟ್ಟಾಗಿ ಸಂಚಲನ ಸೃಷ್ಟಿಸಿದ್ದಾರೆ.
ರಾಜ್ – ಉದ್ಧವ್ ಒಂದಾಗಲು ಕಾರಣವಾಯ್ತು ದ್ವಿ ಭಾಷಾ ಸೂತ್ರ!
ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ತ್ರಿಭಾಷಾ ಸೂತ್ರ ಘೋಷಿಸಿದ್ದ ಮಹಾರಾಷ್ಟ್ರ ಸರ್ಕಾರ 1-5ನೇ ತರಗತಿವರೆಗೂ ಹಿಂದಿ ಕಡ್ಡಾಯಗೊಳಿಸಿ, ತೃತೀಯ ಭಾಷೆ ಎಂದು ಘೋಷಣೆ ಮಾಡಿತ್ತು. ಈ ಬದಲಾವಣೆಯನ್ನು ಜಾರಿಗೆ ತರಲು ಏಪ್ರಿಲ್ 17 ರಂದು ಮಹಾರಾಷ್ಟ್ರ ಸರ್ಕಾರ ನಿರ್ಣಯ ಕೈಗೊಂಡಿತ್ತು. ಜೂನ್ 18 ರಂದು, ವಿಪಕ್ಷಗಳ ಒತ್ತಡಕ್ಕೆ ಮಣಿದು ಸರ್ಕಾರ ನಿರ್ಧಾರವನ್ನು ಮರು ಪರಿಶೀಲನೆಗೆ ಒಳಪಡಿಸಿತ್ತು. ಬಳಿಕ, ಹಿಂದಿಯನ್ನು ಪೂರ್ವನಿಯೋಜಿತ ಮೂರನೇ ಭಾಷೆಯನ್ನಾಗಿ ಮಾಡುವ ಮತ್ತೊಂದು ಮಾರ್ಪಡಿಸಿದ ನಿರ್ಣಯವನ್ನು ಹೊರಡಿಸಿತು. ಸರ್ಕಾರದ ಎರಡೂ ನಿರ್ಣಯಗಳು ಶಿವಸೇನೆ (ಉದ್ಧವ್ ಠಾಕ್ರೆ ಬಣ), ಮಹಾರಾಷ್ಟ್ರ ನವನಿರ್ಮಾಣ ಸೇನೆ ಮತ್ತು ಎನ್‌ಸಿಪಿ (ಎಸ್‌ಪಿ) ಸೇರಿದಂತೆ ವಿರೋಧ ಪಕ್ಷಗಳಾದ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದಿಂದ ತೀವ್ರ ಟೀಕೆಗೆ ಗುರಿಯಾದವು. ಹೆಚ್ಚುತ್ತಿರುವ ರಾಜಕೀಯ ಒತ್ತಡದ ಮಧ್ಯೆ, ರಾಜ್ಯ ಸರ್ಕಾರವು ತ್ರಿಭಾಷಾ ನೀತಿಯ ಎರಡು ನಿರ್ಣಯಗಳನ್ನು ಅಧಿಕೃತವಾಗಿ ರದ್ದುಗೊಳಿಸಿತು. ಇದರ ಬೆನ್ನಲ್ಲೇ ಉದ್ಧವ್ ಹಾಗೂ ರಾಜ್ ಜತೆಯಾಗಿ ವಿಜಯೋತ್ಸವ ಆಚರಿಸಿದ್ದಾರೆ.
ಹಿಂದಿ ಜನರು ಉದ್ಯೋಗಕ್ಕಾಗಿ ಮಹಾರಾಷ್ಟ್ರಕ್ಕೆ ಬರುತ್ತಾರೆ: ರಾಜ್ ಠಾಕ್ರೆ
ರ್ಯಾಲಿಯಲ್ಲಿ ಮಾತನಾಡಿ ರಾಜ್ ಠಾಕ್ರೆ, ನಾವು ಶಾಂತವಾಗಿದ್ದೇವೆ, ನಾವು ಭಯಪಡುತ್ತಿದ್ದೇವೆ ಎಂದಲ್ಲ. ಮುಂಬೈಯನ್ನು ಮಹಾರಾಷ್ಟ್ರದಿಂದ ಯಾರೂ ಬೇರ್ಪಡಿಸಲು ಸಾಧ್ಯವಿಲ್ಲ. ಹಿಂದಿ ಒಳ್ಳೆಯ ಭಾಷೆ, ಆದರೆ ಅದನ್ನು ಹೇರಲು ಸಾಧ್ಯವಿಲ್ಲ. ಹಿಂದಿ ಮಾತನಾಡುವ ಜನರು ಉದ್ಯೋಗಕ್ಕಾಗಿ ಮಹಾರಾಷ್ಟ್ರಕ್ಕೆ ಬರುತ್ತಾರೆ ಎಂದರು.
ಇದನ್ನೂ ಓದಿ: ಮುಖಕ್ಕೆ ಮಸಿ ಬಳಿಯುತ್ತೇವೆ, ಕಲ್ಲು ಎಸೆಯುತ್ತೇವೆ; ಸಾವರ್ಕರ್ ಕುರಿತ ಹೇಳಿಕೆಗೆ ರಾಹುಲ್ ಗಾಂಧಿಗೆ ಶಿವಸೇನೆ ನಾಯಕ ಬೆದರಿಕೆ
ಒಬ್ಬ ಸಚಿವರು ನನ್ನನ್ನು ಭೇಟಿಯಾಗಿ ನನ್ನ ಅಭಿಪ್ರಾಯವನ್ನು ತಿಳಿಸಲು ಕೇಳಿದರು. ನಾನು ಸ್ಪಷ್ಟವಾಗಿ ಹೇಳಿದ್ದೇನೆ, ನಾನು ಕೇಳುತ್ತೇನೆ ಆದರೆ ಒಪ್ಪುವುದಿಲ್ಲ. ಉತ್ತರ ಪ್ರದೇಶ, ಬಿಹಾರ ಮತ್ತು ರಾಜಸ್ಥಾನದಲ್ಲಿ ಮೂರನೇ ಭಾಷೆ ಯಾವುದು ಎಂದು ನಾನು ಅವರನ್ನು ಕೇಳಿದೆ? ಈ ಎಲ್ಲಾ ಹಿಂದಿ ಮಾತನಾಡುವ ರಾಜ್ಯಗಳು ನಮ್ಮ ಹಿಂದೆ ಇವೆ, ನಾವು ಅವರಿಗಿಂತ ಮುಂದಿದ್ದೇವೆ. ಹಾಗಾದರೆ ನಾವು ಬಲವಂತವಾಗಿ ಹಿಂದಿ ಕಲಿಯಬೇಕಾಗಿರುವುದು ಏಕೆ, ಇದು ಅನ್ಯಾಯ ಎಂದು ರಾಜ್ ಠಾಕ್ರೆ ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:55 pm, Sat, 5 July 25