Uma Bharti: ಬಿಜೆಪಿ ನಾಯಕಿ ಉಮಾ ಭಾರತಿ ಇನ್ನು ದೀದಿ ಮಾ; ನಿರ್ಧಾರದ ಹಿಂದಿದೆ ಹೀಗೊಂದು ಕಾರಣ!

| Updated By: Ganapathi Sharma

Updated on: Nov 05, 2022 | 1:26 PM

ಇನ್ನು ಮುಂದೆ ಇಡೀ ವಿಶ್ವವೇ ನನ್ನ ಕುಟುಂಬ, ‘ದೀದಿ ಮಾ’ ಎಂಬುದಾಗಿ ಗುರುತಿಸಿಕೊಳ್ಳಲಿದ್ದೇನೆ ಎಂದು ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕಿ ಉಮಾ ಭಾರತಿ ಘೋಷಿಸಿದ್ದಾರೆ.

Uma Bharti: ಬಿಜೆಪಿ ನಾಯಕಿ ಉಮಾ ಭಾರತಿ ಇನ್ನು ದೀದಿ ಮಾ; ನಿರ್ಧಾರದ ಹಿಂದಿದೆ ಹೀಗೊಂದು ಕಾರಣ!
ಉಮಾ ಭಾರತಿ
Follow us on

ಭೋಪಾಲ್: ಇನ್ನು ಮುಂದೆ ಇಡೀ ವಿಶ್ವವೇ ನನ್ನ ಕುಟುಂಬ, ‘ದೀದಿ ಮಾ (Didi Maa)’ ಎಂಬುದಾಗಿ ಗುರುತಿಸಿಕೊಳ್ಳಲಿದ್ದೇನೆ ಎಂದು ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕಿ ಉಮಾ ಭಾರತಿ (Uma Bharti) ಘೋಷಿಸಿದ್ದಾರೆ. ಕುಟುಂಬದೊಂದಿಗಿನ ಎಲ್ಲ ಬಾಂಧವ್ಯವನ್ನು ಕಡಿದುಕೊಂಡಿರುವುದಾಗಿ ಟ್ವಿಟರ್ (Twitter) ಮೂಲಕ ಅವರು ಮಾಹತಿ ನೀಡಿದ್ದಾರೆ. ಜೈನ ಸಂತ ಆಚಾರ್ಯ ವಿದ್ಯಾಸಾಗರ್ ಮಹಾರಾಜ್ ಅವರ ಆದೇಶದ ಮೇರೆಗೆ ಬಂಧುಗಳು, ಸಂಬಂಧಿಕರು ಸೇರಿದಂತೆ ಎಲ್ಲ ಕೌಟುಂಬಿಕ ಬಂಧಗಳಿಂದ ಮುಕ್ತವಾಗಿರುವುದಾಗಿ ಅವರು ತಿಳಿಸಿದ್ದಾರೆ.

‘ನನ್ನ ಕುಟುಂಬದ ಸದಸ್ಯರ ಜತೆಗಿನ ಎಲ್ಲ ಬಂಧಗಳಿಂದ ಮುಕ್ತಳಾಗುತ್ತಿದ್ದೇನೆ. ಇದೇ 17ರಂದು ನಾನು ಮುಕ್ತಳಾಗಲಿದ್ದೇನೆ. ನನ್ನ ಜಗತ್ತು ಮತ್ತು ಕುಟುಂಬದ ವ್ಯಾಪ್ತಿ ವಿಸ್ತಾರಗೊಂಡಿದೆ. ಈಗ ನಾನು ಇಡೀ ವಿಶ್ವ ಸಮುದಾಯಕ್ಕೇ ಸಹೋದರಿ ಮತ್ತು ತಾಯಿಯಾಗಿದ್ದೇನೆ. ನನಗೆ ವೈಯಕ್ತಿಕವಾಗಿ ಕುಟುಂಬ ಎಂಬುದಿಲ್ಲ. ನನ್ನ ಸನ್ಯಾಸ ದೀಕ್ಷೆಯ 30ನೇ ವರ್ಷದಲ್ಲಿ ನಾನು ಅವರ (ದೀಕ್ಷೆ ನೀಡಿದ್ದ ಸಂತರ) ಆದೇಶವನ್ನು ಪಾಲಿಸಲು ಪ್ರಾರಂಭಿಸುತ್ತೇನೆ ಎಂದು ನಾನು ನಿರ್ಧರಿಸಿದ್ದೆ. ಅದರಂತೆ 2022ರ ಮಾರ್ಚ್ 17ರಂದು ಸಾಗರ್ ಜಿಲ್ಲೆಯ ರಹಾಲಿಯಲ್ಲಿ ಎಲ್ಲ ಸಂತರ ಮುಂದೆ ಕೌಟುಂಬಿಕ ಬಾಂಧವ್ಯಗಳಿಂದ ಮುಕ್ತಳಾಗುವ ಬಗ್ಗೆ ನನಗೆ ಅವರು ಆದೇಶವನ್ನು ನೀಡಿದ್ದರು’ ಎಂದು ಉಮಾ ಭಾರತಿ ಸರಣಿ ಟ್ವೀಟ್​ಗಳಲ್ಲಿ ತಿಳಿಸಿದ್ದಾರೆ. ಕೌಟುಂಬಿಕ ಬಂದಗಳಿಂದ ಮುಕ್ತರಾಗುವ ಬಗ್ಗೆ ಅವರು ಸುಮಾರು 17 ಟ್ವೀಟ್​ಗಳನ್ನು ಮಾಡಿದ್ದಾರೆ.

1992ರಲ್ಲಿ ದೀಕ್ಷೆ ಪಡೆದಿದ್ದ ಉಮಾ ಭಾರತಿ

ಸದ್ಯ ಉಮಾ ಭಾರತಿ ಅವರು ಮಧ್ಯ ಪ್ರದೇಶದಲ್ಲಿ ಮದ್ಯ ನಿಷೇಧ ಚಳವಳಿಯಲ್ಲಿ ತೊಡಗಿಕೊಂಡಿದ್ದಾರೆ. 1992ರ ನವೆಂಬರ್ 17 ರಂದು ಅಮರಕಂಟಕ್‌ನಲ್ಲಿಯೇ ಸನ್ಯಾಸ ದೀಕ್ಷೆಯನ್ನು ತೆಗೆದುಕೊಂಡಿದ್ದೆ. ಹೀಗಾಗಿ ಚಂದ್ರಗ್ರಹಣದ ನಂತರ ಅಲ್ಲಿಗೇ ತೆರಳಿ, ಅದೇ ದಿನ ಕೌಟುಂಬಿಕ ಬಾಂಧವ್ಯದಿಂದ ಮುಕ್ತಳಾಗಲಿದ್ದೇನೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದವರಾದ ಜೈನ ಮುನಿ ಆಚಾರ್ಯ ವಿದ್ಯಾಸಾಗರ ಜೀ ಮಹಾರಾಜ್ ಅವರು ಈಗಲೂ ನನಗೆ ಗುರುಗಳು. ಎಲ್ಲಾ ವೈಯಕ್ತಿಕ ಸಂಬಂಧಗಳು ಮತ್ತು ಬಾಂಧವ್ಯಗಳನ್ನು ತ್ಯಜಿಸಲು ಅವರು ನನಗೆ ಆದೇಶಿಸಿದ್ದಾರೆ. ನನ್ನನ್ನು ‘ದೀದಿ ಮಾ’ ಎಂದೇ ಕರೆಯಬೇಕು. ನನ್ನ ಭಾರತಿ ಹೆಸರನ್ನು ಅರ್ಥಪೂರ್ಣಗೊಳಿಸಲು ಭಾರತದ ಎಲ್ಲಾ ನಾಗರಿಕರು ಇದನ್ನು ಒಪ್ಪಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ