ಗುರಗಾಂವ್: ಕೇದಾರನಾಥ ದೇವಸ್ಥಾನದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಹಲವು ಅಭಿವೃದ್ಧಿಪರ ಯೋಜನೆಗಳನ್ನು ಉದ್ಘಾಟನೆ ಮಾಡಿದ್ದಾರೆ. ಕೇದಾರನಾಥದಲ್ಲಿ ಮೋದಿ ಅವರ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಲು ಹರಿಯಾಣದ ರೋಹ್ಟಕ್ನ ದೇವಸ್ಥಾನಕ್ಕೆ ತೆರಳಿದ್ದ ಹಲವು ಬಿಜೆಪಿ ನಾಯಕರನ್ನು ರೈತರು ಸುತ್ತುವರೆದಿದ್ದು, ರೈತರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದ ಬಿಜೆಪಿ ನಾಯಕ ಮನೀಶ್ ಗ್ರೋವರ್ ತಮ್ಮ ಬಳಿ ಕ್ಷಮೆ ಕೇಳಬೇಕೆಂದು ರೈತರು ಪಟ್ಟು ಹಿಡಿದಿದ್ದಾರೆ. ಅದಕ್ಕಾಗಿ ಅರ್ಧ ಗಂಟೆ ಸಮಯಾವಕಾಶವನ್ನು ಕೂಡ ನೀಡಿದ್ದಾರೆ.
ಕೇಂದ್ರ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಸುಮಾರು ಒಂದು ವರ್ಷದಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರು ರಚಿಸಿದ್ದ ಬಿಗಿ ಬಂದೋಬಸ್ತ್ ಅನ್ನು ಭೇದಿಸಲು ಪೊಲೀಸರು ಪ್ರಯತ್ನಿಸಿದ್ದು, ಪ್ರತಿಭಟನಾಕಾರರು ಕಳೆದ ಆರು ಗಂಟೆಗಳಿಂದ ಮಾಜಿ ಸಚಿವ ಮನೀಶ್ ಗ್ರೋವರ್ ಸೇರಿದಂತೆ ಬಿಜೆಪಿ ಮುಖಂಡರನ್ನು ಒತ್ತೆಯಾಳಾಗಿ ಹಿಡಿದಿಟ್ಟುಕೊಂಡಿದ್ದಾರೆ. ರೈತರ ವಿರುದ್ಧ ಆಕ್ಷೇಪಾರ್ಹ ಭಾಷೆ ಬಳಸಿದ್ದಕ್ಕಾಗಿ ಗ್ರೋವರ್ ಕ್ಷಮೆ ಯಾಚಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಗ್ರೋವರ್ ಅವರ ಹೇಳಿಕೆಗೆ ಕ್ಷಮೆ ಯಾಚಿಸಲು ಅರ್ಧ ಗಂಟೆ ಕಾಲಾವಕಾಶ ನೀಡಿದ್ದೇವೆ ಎಂದು ರೈತರು ಹೇಳಿದ್ದಾರೆ.
ಗುರ್‌ಗಾಂವ್‌ನಿಂದ 78 ಕಿಮೀ ದೂರದಲ್ಲಿರುವ ರೋಹ್ಟಕ್ ಜಿಲ್ಲೆಯ ಕಿಲೋಯ್ ಗ್ರಾಮದ ದೇವಸ್ಥಾನದ ಪರಿಸ್ಥಿತಿಯನ್ನು ನಿಯಂತ್ರಿಸಲು ಇತರ ಜಿಲ್ಲೆಗಳಿಂದ ಹೆಚ್ಚಿನ ಸಿಬ್ಬಂದಿಯನ್ನು ಧಾವಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇಬ್ಬರು ಪ್ರತಿಭಟನಾಕಾರರನ್ನು ಈಗಾಗಲೇ ಬಂಧಿಸಲಾಗಿದೆ. ದೆಹಲಿ-ಹಿಸಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸದ್ಯಕ್ಕೆ ಸಂಚಾರ ಬಂದ್ ಮಾಡಲಾಗಿದೆ.
ಬಿಜೆಪಿ ಪಕ್ಷದ ಸಂಘಟನೆ ಸಚಿವ ರವೀಂದ್ರರಾಜು, ಮೇಯರ್ ಮನಮೋಹನ್ ಗೋಯಲ್, ಬಿಜೆಪಿ ಜಿಲ್ಲಾಧ್ಯಕ್ಷ ಅಜಯ್ ಬನ್ಸಾಲ್ ಮತ್ತು ಪಕ್ಷದ ನಾಯಕ ಸತೀಶ್ ನಂದಲ್ ದೇವಸ್ಥಾನದೊಳಗೆ ಒತ್ತೆಯಾಳಾಗಿರುವ ಇತರ ನಾಯಕರಾಗಿದ್ದಾರೆ.
ಈ ಮಧ್ಯೆ, ಎಲ್ಲಾ ಕಡೆಯಿಂದ ದೇವಸ್ಥಾನವನ್ನು ಸುತ್ತುವರಿಯುವಂತೆ ರೈತರು ನೆರೆದಿದ್ದ ಜನರನ್ನು ಕೇಳಿಕೊಂಡರು. ಸೋನಿಪತ್ ಮತ್ತು ಜಜ್ಜರ್‌ನಲ್ಲಿ ಪೊಲೀಸರು ಕೂಡ ಬೀಡುಬಿಟ್ಟಿದ್ದು, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಿರಲು ಅವರಿಗೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ರಸಗೊಬ್ಬರಕ್ಕಾಗಿ ಸರದಿ ಸಾಲಿನಲ್ಲಿ ನಿಂತು ಮೃತಪಟ್ಟ ರೈತರ ಕುಟುಂಬ ಭೇಟಿ ಮಾಡಿದ ಪ್ರಿಯಾಂಕಾ ಗಾಂಧಿ
ರೈತರು ಪ್ರತಿಭಟನೆ ನಡೆಸುತ್ತಿದ್ದ ಜಾಗದಲ್ಲಿ ಭೀಕರ ಅಪಘಾತ; ಟ್ರಕ್ ಹರಿದು ಮೂವರು ರೈತ ಮಹಿಳೆಯರ ದುರ್ಮರಣ