Nayab Singh Saini: ಹರ್ಯಾಣದ ಸಿಎಂ ಸ್ಥಾನಕ್ಕೇರಿದ ಬಿಜೆಪಿ ಮುಖ್ಯಸ್ಥ; ಯಾರು ಈ ನಯಾಬ್ ಸಿಂಗ್ ಸೈನಿ?

|

Updated on: Mar 12, 2024 | 2:50 PM

ಒಬಿಸಿ ಸಮುದಾಯದಿಂದ ಬಂದಿರುವ ಕುರುಕ್ಷೇತ್ರ ಸಂಸದ ನಯಾಬ್ ಸಿಂಗ್ ಸೈನಿ ಅವರನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಜೆಪಿ ಹರ್ಯಾಣದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. 1996 ರಲ್ಲಿ ಬಿಜೆಪಿ ಜತೆ ಸೈನಿ ಅವರ ರಾಜಕೀಯ ಪ್ರಯಾಣ ಪ್ರಾರಂಭವಾಯಿತು.2019 ರ ಲೋಕಸಭೆ ಚುನಾವಣೆಯಲ್ಲಿ, ನಯಾಬ್ ಸಿಂಗ್ ಸೈನಿ ಕುರುಕ್ಷೇತ್ರ ಕ್ಷೇತ್ರದಿಂದ 3.83 ಲಕ್ಷ ಮತಗಳ ಅಂತರದಿಂದ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ನಿರ್ಮಲ್ ಸಿಂಗ್ ಅವರನ್ನು ಪರಾಭವಗೊಳಿಸಿದ್ದರು

Nayab Singh Saini: ಹರ್ಯಾಣದ ಸಿಎಂ ಸ್ಥಾನಕ್ಕೇರಿದ ಬಿಜೆಪಿ ಮುಖ್ಯಸ್ಥ; ಯಾರು ಈ ನಯಾಬ್ ಸಿಂಗ್ ಸೈನಿ?
ನಯಾಬ್ ಸಿಂಗ್ ಸೈನಿ
Follow us on

ಚಂಡೀಗಢ ಮಾರ್ಚ್ 12: ಹರ್ಯಾಣದ (Haryana) ಬಿಜೆಪಿ ಮುಖ್ಯಸ್ಥ ನಯಾಬ್ ಸಿಂಗ್ ಸೈನಿ (Nayab Singh Saini) ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಪಕ್ಷದ ನಾಯಕರು ಇಂದು (ಮಂಗಳವಾರ) ಹೇಳಿದ್ದಾರೆ. ನಯಾಬ್ ಸಿಂಗ್ ಸೈನಿ ಹರ್ಯಾಣದ ಮುಂದಿನ ಸಿಎಂ ಆಗಲಿದ್ದಾರೆ. ಎಲ್ಲರೂ ಈಗ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ. ಉಪಮುಖ್ಯಮಂತ್ರಿ ಬಗ್ಗೆ ಏನೂ ಚರ್ಚೆಯಾಗಿಲ್ಲ ಎಂದು ರಾಜ್ಯ ಬಿಜೆಪಿ ಶಾಸಕ ಕ್ರಿಶನ್ ಲಾಲ್ ಮಿದ್ಧಾ ಹೇಳಿದ್ದಾರೆ. ಇಂದು ಸಂಜೆ 5 ಗಂಟೆಗೆ ಸೈನಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 2019 ರಿಂದ ರಾಜ್ಯವನ್ನು ಆಳಿದ ಆಡಳಿತಾರೂಢ ಬಿಜೆಪಿ-ಜನನಾಯಕ್ ಜನತಾ ಪಕ್ಷ (ಬಿಜೆಪಿ-ಜೆಜೆಪಿ) ಮೈತ್ರಿಯ ಬಿರುಕುಗಳ ಮಧ್ಯೆ ಮನೋಹರ್ ಲಾಲ್ ಖಟ್ಟರ್ (Manohar Lal Khattar)  ರಾಜೀನಾಮೆ ನಂತರ ಸೈನಿ ಅವರನ್ನು ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಯಿತು.

ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಮಾತುಕತೆ ವಿಫಲವಾದ ನಂತರ ಉಭಯ ಪಕ್ಷಗಳ ನಡುವಿನ ಬಾಂಧವ್ಯ ಹದಗೆಟ್ಟಿತ್ತು. ಖಟ್ಟರ್ ಸಂಪುಟದಲ್ಲಿ ಸಿಎಂ ಸೇರಿದಂತೆ 14 ಮಂದಿ ಸಚಿವರಿದ್ದು, ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ನೇತೃತ್ವದ ಜೆಜೆಪಿಯ ಮೂವರು ಸದಸ್ಯರು ರಾಜೀನಾಮೆ ನೀಡಿದ್ದಾರೆ. ಪ್ರಸ್ತುತ, 90 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 41 ಶಾಸಕರನ್ನು ಹೊಂದಿದ್ದರೆ, ಜೆಜೆಪಿ 10 ಹೊಂದಿದೆ. ಆಡಳಿತಾರೂಢ ಒಕ್ಕೂಟವು ಏಳು ಸ್ವತಂತ್ರರ ಪೈಕಿ ಆರು ಮಂದಿಯ ಬೆಂಬಲವನ್ನು ಸಹ ಹೊಂದಿದೆ.

ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ 30 ಶಾಸಕರನ್ನು ಹೊಂದಿದೆ. ಇಂಡಿಯನ್ ನ್ಯಾಷನಲ್ ಲೋಕ ದಳ ಮತ್ತು ಹರಿಯಾಣ ಲೋಕಿತ್ ಪಕ್ಷ ತಲಾ ಒಂದು ಸ್ಥಾನವನ್ನು ಹೊಂದಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ ಎಲ್ಲಾ 10 ಲೋಕಸಭಾ ಸ್ಥಾನಗಳನ್ನು ಗೆದ್ದಿತ್ತು

ನಯಾಬ್ ಸಿಂಗ್ ಸೈನಿ ಯಾರು?

ಒಬಿಸಿ ಸಮುದಾಯದಿಂದ ಬಂದಿರುವ ಕುರುಕ್ಷೇತ್ರ ಸಂಸದ ನಯಾಬ್ ಸಿಂಗ್ ಸೈನಿ ಅವರನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಜೆಪಿ ಹರ್ಯಾಣದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. 1996 ರಲ್ಲಿ ಬಿಜೆಪಿ ಜತೆ ಸೈನಿ ಅವರ ರಾಜಕೀಯ ಪ್ರಯಾಣ ಪ್ರಾರಂಭವಾಯಿತು. 2000 ರವರೆಗೆ ಅವರು ರಾಜ್ಯ ಪ್ರಧಾನ ಕಾರ್ಯದರ್ಶಿಯೊಂದಿಗೆ ಕೆಲಸ ಮಾಡಿದರು. ಶ್ರೇಣಿಗಳ ಮೂಲಕ ಪ್ರಗತಿ ಸಾಧಿಸಿದ ಅವರು 2002 ರಲ್ಲಿ ಅಂಬಾಲಾದಲ್ಲಿ ಬಿಜೆಪಿ ಯುವ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತ್ರವನ್ನು ವಹಿಸಿಕೊಂಡರು. ನಂತರ 2005 ರಲ್ಲಿ ಅಂಬಾಲಾದಲ್ಲಿ ಜಿಲ್ಲಾ ಅಧ್ಯಕ್ಷರಾಗಿ ನೇಮಕಗೊಂಡರು.

2009 ರಲ್ಲಿ ಹರ್ಯಾಣದ ಬಿಜೆಪಿ ಕಿಸಾನ್ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು 2012 ರಲ್ಲಿ ಅಂಬಾಲಾ ಬಿಜೆಪಿಯ ಜಿಲ್ಲಾಧ್ಯಕ್ಷ ಸೇರಿದಂತೆ ವಿವಿಧ ಮಹತ್ವದ ಸ್ಥಾನಗಳನ್ನು ಅವರು ಅಲಂಕರಿಸಿದ್ದರು. 2014 ರಲ್ಲಿ ನಾರಾಯಣಗಢ ಕ್ಷೇತ್ರದಿಂದ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದ ಅವರು 2016 ರಲ್ಲಿ ಹರ್ಯಾಣ ಸರ್ಕಾರದಲ್ಲಿ ಸಚಿವರಾಗಿ ನೇಮಕಗೊಂಡರು.

ಇದನ್ನೂ ಓದಿ: Nayab Saini: ಹರ್ಯಾಣದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ನಯಾಬ್ ಸೈನಿ

2019 ರ ಲೋಕಸಭೆ ಚುನಾವಣೆಯಲ್ಲಿ, ನಯಾಬ್ ಸಿಂಗ್ ಸೈನಿ ಕುರುಕ್ಷೇತ್ರ ಕ್ಷೇತ್ರದಿಂದ 3.83 ಲಕ್ಷ ಮತಗಳ ಅಂತರದಿಂದ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ (INC) ನ ನಿರ್ಮಲ್ ಸಿಂಗ್ ಅವರನ್ನು ಸೋಲಿಸಿದರು. 2014 ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಸಚಿವರಾಗಿ ಉಳಿದ ಸೈನಿ ಅವರನ್ನು ಮನೋಹರ್ ಲಾಲ್ ಖಟ್ಟರ್ ಅವರ ಆಪ್ತ ಎಂದು ಪರಿಗಣಿಸಲಾಗಿದೆ. ರಾಜಕೀಯ ವಿಶ್ಲೇಷಕರು ಹೇಳುವ ಪ್ರಕಾರ, ಚುನಾವಣಾ ಮತ್ತು ಜಾತಿ ಲೆಕ್ಕಾಚಾರಗಳು ಲೋಕಸಭಾ ಸಂಸದರನ್ನು ಹರ್ಯಾಣ ಬಿಜೆಪಿ ಮುಖ್ಯಸ್ಥರ ಹುದ್ದೆಗೆ ಏರಿಸಿವೆ ಎಂದು ತೋರುತ್ತದೆ. ಏಕೆಂದರೆ ಖಟ್ಟರ್ ಅವರು ತಮ್ಮ ಪಾಳಯದ ನಾಯಕರನ್ನು ರಾಜ್ಯ ಘಟಕದ ಮುಖ್ಯಸ್ಥರನ್ನಾಗಿ ಮಾಡಲು ಬಯಸಿದ್ದರು.

ಕುರುಕ್ಷೇತ್ರ, ಯಮುನಾನಗರ, ಅಂಬಾಲಾ, ಹಿಸಾರ್ ಮತ್ತು ರೇವಾರಿ ಜಿಲ್ಲೆಗಳ ಪಾಕೆಟ್‌ಗಳಲ್ಲಿ ಗಣನೀಯ ಉಪಸ್ಥಿತಿಯೊಂದಿಗೆ ಹರ್ಯಾಣ ಸೈನಿ ಜಾತಿಯ ಜನಸಂಖ್ಯೆಯು ಸುಮಾರು 8% ಎಂದು ಪರಿಗಣಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:41 pm, Tue, 12 March 24