ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಮತ್ತೆ ಹಿನ್ನಡೆಯಾಗಿದೆ. ಇಂದು ಪ್ರಕಟವಾದ ವಿಧಾನಪರಿಷತ್ ಚುನಾವಣೆ ಫಲಿತಾಂಶಗಳಲ್ಲಿ ಬಿಜೆಪಿ ಕೇವಲ ಒಂದು ಸ್ಥಾನದಲ್ಲಿ ಜಯಗಳಿಸಿದೆ. ಆಡಳಿತಾರೂಢ ಮಹಾಅಘಾಡಿ ಮೈತ್ರಿಕೂಟದ ಅಭ್ಯರ್ಥಿಗಳು ನಾಲ್ಕರಲ್ಲಿ ಜಯಗಳಿಸಿದ್ದರೆ, ಒಂದು ಸ್ಥಾನ ಪಕ್ಷೇತರ ಅಭ್ಯರ್ಥಿಯ ಪಾಲಾಗಿದೆ.
ಶಿವಸೇನೆ, ಎನ್ಸಿಪಿ ಹಾಗೂ ಕಾಂಗ್ರೇಸ್ನ ಮೈತ್ರಿಕೂಟಕ್ಕೆ ನಾಲ್ಕು ಸ್ಥಾನ ದಕ್ಕಿದರೂ, ಮೈತ್ರಿಒಕ್ಕೂಟದ ಮುಖ್ಯಮಂತ್ರಿ ಸ್ಥಾನ ಸೇರಿದಂತೆ ಪ್ರಮುಖ ಸಚಿವ ಸ್ಥಾನ ಹೊಂದಿರುವ ಶಿವಸೇನೆ ಮಾತ್ರ ಒಂದೂ ಸ್ಥಾನವನ್ನು ಗೆದ್ದಿಲ್ಲ. ಶಿವಸೇನೆಯ ಏಕೈಕ ಅಭ್ಯರ್ಥಿ ಅಮರಾವತಿಯಲ್ಲಿ ಸೋಲನ್ನು ಅನುಭವಿಸಿದ್ದಾರೆ. ಧುಲೆ-ನಂದುರ್ಬಾರ್ ಸ್ಥಳಿಯ ಸಂಸ್ಥೆಯ ಸ್ಥಾನದಲ್ಲಿ ಮಾತ್ರ ಬಿಜೆಪಿ ಜಯಗಳಿಸಿದೆ.
ಬಹುಕಾಲದಿಂದ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿ ಮೇಲುಗೈ ಸಾಧಿಸುತ್ತಿತ್ತು. ಆದರೆ ಈ ಬಾರಿ ಅಲ್ಲಿಯೂ ಹಿನ್ನಡೆಯಾಗಿದೆ. ಪಕ್ಷದ ಭದ್ರಕೋಟೆಯಾದ ನಾಗಪುರ ಕ್ಷೇತ್ರದಲ್ಲಿಯೂ ಬಿಜೆಪಿಗೆ ಹಿನ್ನಡೆಯಾಗದೆ. ಪುಣೆ ಕ್ಷೇತ್ರದತ್ತ ಬಿಜೆಪಿ ಹೆಚ್ಚಿನ ಲಕ್ಷ್ಯವಹಿಸಿತ್ತು. ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮತ್ತು ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಸೇರಿದಂತೆ ಹಲವು ಬಿಜೆಪಿ ನಾಯಕರು ಪುಣೆಯಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು. ಆದರೂ ಈ ಕ್ಷೇತ್ರ ಮೈತ್ರಿಕೂಟ ಅಭ್ಯರ್ಥಿಯ ಪಾಲಾಗಿದೆ.
ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ನಮಗೆ ತೃಪ್ತಿ ನೀಡಿಲ್ಲ. ಮೈತ್ರಿಕೂಟದ ಅಭ್ಯರ್ಥಿಗಳ ಸಾಮರ್ಥ್ಯವನ್ನು ನಾವು ತಪ್ಪಾಗಿ ಅಂದಾಜಿಸಿದ್ದೆವು ಎಂದು ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್ ಎಎನ್ಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.
ಎನ್ಸಿಪಿ ಮತ್ತು ಕಾಂಗ್ರೆಸ್ ತಲಾ ಎರಡು ಸ್ಥಾನಗಳಿಗೆ ಸ್ಪರ್ಧಿಸಿದ್ದವು. ಶಿವಸೇನೆ ತನ್ನ ಅಭ್ಯರ್ಥಿಯನ್ನು ಒಂದೇ ಸ್ಥಾನದಲ್ಲಿ ಕಣಕ್ಕಿಳಿಸಿತ್ತು. ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಮತ್ತೊಂದು ಸ್ಥಾನದಲ್ಲಿ ಮಿತ್ರಪಕ್ಷಕ್ಕೆ ಅವಕಾಶ ಮಾಡಿಕೊಟ್ಟಿತ್ತು.
ಇದನ್ನೂ ಓದಿ: ಶಿವಸೇನೆಗೆ ಸೇರಿದ ಒಂದೇ ತಾಸಿನಲ್ಲಿ ವಿಧಾನ ಪರಿಷತ್ ಸದಸ್ಯೆಯಾದ ಊರ್ಮಿಳಾ ಮಾತೋಂಡ್ಕರ್