ತುರ್ತು ಆರೋಗ್ಯ ಸೇವೆಗೆ ಅಡ್ಡಿ: ಪ್ರತಿಭಟನಾನಿರತ ರೈತರ ತೆರವಿಗೆ ಸುಪ್ರೀಂಕೋರ್ಟ್ನಲ್ಲಿ ಮನವಿ
ದೆಹಲಿಯ ರಿಷಬ್ ಶರ್ಮಾ ಎಂಬವರು ಈ ರೀತಿ ಮನವಿ ಸಲ್ಲಿಸಿದ್ದು, ಬುರಾರಿ ಪ್ರದೇಶದಲ್ಲಿ ಪ್ರತಿಭಟನೆ ಮಾಡುವಂತೆ ಪೊಲೀಸರು ರೈತರಿಗೆ ಹೇಳಿದ್ದರು. ಆದರೂ ರೈತರು ಗಡಿಭಾಗದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದಿದ್ದಾರೆ.
ನವದೆಹಲಿ: ಕೇಂದ್ರದ ನೂತನ ಕೃಷಿ ಕಾನೂನುಗಳ ವಿರುದ್ಧ ದೆಹಲಿಯ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಅಲ್ಲಿಂದ ತೆರವು ಮಾಡಿಸಬೇಕು. ಕೊರೊನಾ ವೈರಸ್ ಸೋಂಕು ವ್ಯಾಪಿಸುತ್ತಿರುವ ಹೊತ್ತಲ್ಲಿ ಅವರು ತುರ್ತು ಆರೋಗ್ಯ ಸೇವೆಗಳಿಗೆ ಅಡ್ಡಿಯುಂಟು ಮಾಡುತ್ತಿದ್ದಾರೆಂದು ಹೇಳಿ ದೆಹಲಿ ನಿವಾಸಿಯೊಬ್ಬರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ದೆಹಲಿಯ ರಿಷಬ್ ಶರ್ಮಾ ಎಂಬವರು ಶುಕ್ರವಾರ ಈ ರೀತಿ ಮನವಿ ಸಲ್ಲಿಸಿದ್ದು, ಬುರಾರಿ ಪ್ರದೇಶದಲ್ಲಿ ಪ್ರತಿಭಟನೆ ಮಾಡುವಂತೆ ಪೊಲೀಸರು ರೈತರಿಗೆ ಹೇಳಿದ್ದರು. ಆದರೂ ರೈತರು ಗಡಿಭಾಗದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದಿದ್ದಾರೆ.
ಕೇಂದ್ರ ಸರ್ಕಾರದ ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ದ ಅಕ್ಟೋಬರ್ ತಿಂಗಳಲ್ಲಿ ದೇಶದಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಈ ರೀತಿಯ ಪ್ರತಿಭಟನೆಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನಡೆಸಬಾರದು ಎಂದು ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ರಿಷಬ್ ಶರ್ಮಾ ಅವರು ತಮ್ಮ ಮನವಿಯಲ್ಲಿ ಈ ಆದೇಶವನ್ನು ಉಲ್ಲೇಖಿಸಿದ್ದಾರೆ.
ಕೊರೊನಾ ವೈರಸ್ ತೀವ್ರವಾಗಿ ವ್ಯಾಪಿಸುತ್ತಿರುವ ವೇಳೆ ದೆಹಲಿ ಗಡಿಭಾಗದಲ್ಲಿ ಲಕ್ಷಗಟ್ಟಲೆ ಜನ ಪ್ರತಿಭಟಿಸುತ್ತಿದ್ದಾರೆ. ಒಂದು ವೇಳೆ ಕೊರೊನಾ ವೈರಸ್ ಸಮುದಾಯ ಪ್ರಸರಣವಾದರೆ, ದೇಶದಲ್ಲಿ ಅನಾಹುತವೇ ಆಗಲಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.