ಭೋಪಾಲ್ ಆಗಸ್ಟ್ 05: ಬಿಜೆಪಿ (BJP) ಶಾಸಕರ ಪುತ್ರ ಮಧ್ಯಪ್ರದೇಶದಲ್ಲಿ (Madhya Pradesh) ಗುರುವಾರ ಬುಡಕಟ್ಟು ವ್ಯಕ್ತಿಯೊಬ್ಬನ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಬಿಜೆಪಿ ಶಾಸಕನ ಪ್ರತಿನಿಧಿಯೊಬ್ಬರು ಬುಡಕಟ್ಟು ಜನಾಂಗದ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಒಂದು ತಿಂಗಳ ನಂತರ ಈ ಘಟನೆ ನಡೆದಿದೆ. ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ನೇತೃತ್ವದ ರಾಜ್ಯದಲ್ಲಿ ನಡೆಯುತ್ತಿರುವ ಅಪರಾಧಗಳ ಖಂಡಿಸಿ ವಾಗ್ದಾಳಿ ನಡೆಸಿದ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್, ಬಿಜೆಪಿ ನಾಯಕರಿಗೆ ಉಳಿದಿರುವ ಕೆಲಸವೆಂದರೆ ಆದಿವಾಸಿಗಳು, ದಲಿತರು, ಮಹಿಳೆಯರು ಮತ್ತು ಎಲ್ಲಾ ಸಮುದಾಯಗಳ ಜನರಿಗೆ ಕಿರುಕುಳ ನೀಡುವುದು ಮಾತ್ರವೇ ಎಂದು ಪ್ರಶ್ನಿಸಿದ್ದಾರೆ. ಘಟನೆಗೆ ಖೇದ ವ್ಯಕ್ತಪಡಿಸಿರುವ ಶಾಸಕರು, ನನ್ನ ಪುತ್ರ ತಪ್ಪಿತಸ್ಥರಾಗಿದ್ದರೆ ಬಂಧಿಸಬೇಕು ಎಂದಿದ್ದಾರೆ.
ಬಿಜೆಪಿ ಸಿಂಗ್ರೌಲಿ ಶಾಸಕ ರಾಮ್ ಲಲ್ಲು ವೈಶ್ಯ ಅವರ ಪುತ್ರ ವಿವೇಕಾನಂದ್ ವೈಶ್ಯ ಗುರುವಾರ ಸಂಜೆ 34 ವರ್ಷದ ಸೂರ್ಯ ಕುಮಾರ್ ಖೈರ್ವಾರ್ ಮೇಲೆ ಗುಂಡು ಹಾರಿಸಿದ್ದಾನೆ. ಈತನ ವಿರುದ್ಧ ಕೊಲೆ ಯತ್ನ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ವೈಶ್ಯ ಅವರು ತಮ್ಮ ಕಾರಿನಲ್ಲಿ ಸಿಂಗ್ರೌಲಿ ಜಿಲ್ಲಾ ಕೇಂದ್ರದಿಂದ 25 ಕಿ.ಮೀ ದೂರದಲ್ಲಿ ಪ್ರಯಾಣಿಸುತ್ತಿದ್ದಾಗ ಕಿರಿದಾದ ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿಗಳ ಗುಂಪಿನೊಂದಿಗೆ ವಾಗ್ವಾದ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ವೈಶ್ಯ ಅವರ ಮೇಲೆ ಗುಂಡು ಹಾರಿಸಿದಾಗ ಪರಿಸ್ಥಿತಿಯನ್ನು ಶಾಂತಗೊಳಿಸಲು ಖೈರ್ವಾರ್ ಬಂದರು. ಗುಂಡು ಖೈರ್ವಾರ್ ಅವರ ಬಲಗೈಯ ಅಂಗೈಗೆ ತಗುಲಿತು. ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಚಿಕಿತ್ಸೆಗೆ ಒಳಗಾಗಿದ್ದು, ಅವರ ಸ್ಥಿತಿ ಸುಧಾರಿಸಿದೆ ಎಂದು ಸಹಾಯಕ ಪೊಲೀಸ್ ಅಧೀಕ್ಷಕ (ಸಿಂಗ್ರೌಲಿ) ಶಿವ ಕುಮಾರ್ ವರ್ಮಾ ಹೇಳಿದ್ದಾರೆ.
ವೈಶ್ಯ ಪರಾರಿಯಾಗಿದ್ದು, ಆತನ ಬಂಧನದ ಬಗ್ಗೆ ಮಾಹಿತಿ ನೀಡಿದವರಿಗೆ ₹ 10,000 ಬಹುಮಾನ ಘೋಷಿಸಲಾಗಿದೆ. ಈ ಹಿಂದೆ ಅರಣ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ವೈಶ್ಯ ಕಳೆದ ವರ್ಷ ಬಂಧನಕ್ಕೊಳಗಾಗಿ ನಂತರ ಜಾಮೀನು ಪಡೆದಿದ್ದ. ಹಲ್ಲೆ ಪ್ರಕರಣದಲ್ಲಿ ಜಾಮೀನು ರದ್ದುಗೊಳಿಸುವಂತೆ ನ್ಯಾಯಾಲಯದ ಮೊರೆ ಹೋಗುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಾನೂನು ತನ್ನ ಕ್ರಮ ತೆಗೆದುಕೊಳ್ಳಬೇಕು. ನಾನು ಯಾವಾಗಲೂ ಸಹೋದರತ್ವದಲ್ಲಿ ನಂಬಿಕೆ ಇಟ್ಟಿದ್ದೇನೆ. ನನ್ನ ಕ್ಷೇತ್ರದ ಜನರೇ ನನ್ನ ಜನರು ಮತ್ತು ನನ್ನನ್ನು ಮೂರು ಬಾರಿ ಆಯ್ಕೆ ಮಾಡಿದ್ದಾರೆ. ನಾನು ಎಂದಿಗೂ ಪೊಲೀಸರ ಮೇಲೆ ಒತ್ತಡ ಹೇರಿಲ್ಲ. ಕಾನೂನು ತನ್ನ ಮಾರ್ಗವನ್ನು ತೆಗೆದುಕೊಳ್ಳಲಿ ಎಂದು ಶಾಸಕ ರಾಮ್ ಲಲ್ಲು ವೈಶ್ಯ ಹೇಳಿದ್ದಾರೆ.
ವಿವೇಕ್ ತಪ್ಪಿತಸ್ಥನಾಗಿದ್ದರೆ, ಅವರನ್ನು ಬಂಧಿಸಬೇಕು, ಸೂರ್ಯಕುಮಾರ್ ನನ್ನ ಗ್ರಾಮದವನಾಗಿದ್ದು, ಘಟನೆ ನನಗೆ ದುಃಖ ತಂದಿದೆ. ವಿವೇಕ್ ಕಳೆದ ಐದಾರು ವರ್ಷಗಳಿಂದ ನಮ್ಮೊಂದಿಗೆ ವಾಸಿಸುತ್ತಿಲ್ಲ, ಸ್ವತಂತ್ರ ತನಿಖೆಯಾಗಬೇಕು. ಕಾಂಗ್ರೆಸ್ ಪಕ್ಷ ಪ್ರತಿಭಟನೆ ಮಾಡಿದ್ದು ತಪ್ಪು, ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವೈಶ್ಯ ಹೇಳಿದ್ದಾರೆ.
ಸಿದ್ಧಿ ಬಿಜೆಪಿ ಶಾಸಕ ಕೇದಾರನಾಥ್ ಶುಕ್ಲಾ ಅವರ ಪ್ರತಿನಿಧಿ ಎಂದು ಹೇಳಿಕೊಳ್ಳುವ ಪ್ರವೇಶ್ ಶುಕ್ಲಾ ಅವರು ಬುಡಕಟ್ಟು ವ್ಯಕ್ತಿಯ ಮುಖ, ಕೂದಲು ಮತ್ತು ಕುತ್ತಿಗೆಯ ಮೇಲೆ ಮೂತ್ರ ವಿಸರ್ಜಿಸಿ ಸಿಗರೇಟ್ ಸೇದುತ್ತಿರುವ ವಿಡಿಯೊವೊಂದು ವೈರಲ್ ಆಗಿತ್ತು.
ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಮಲ್ ನಾಥ್ “ಬುಡಕಟ್ಟು ಸಮುದಾಯವನ್ನು ಹಿಂಸಿಸಲು ಮಧ್ಯಪ್ರದೇಶದ ಬಿಜೆಪಿ ನಾಯಕರ ನಡುವೆ ಪೈಪೋಟಿ ಇದೆ. ಸಿದ್ಧಿಯಲ್ಲಿ ಬುಡಕಟ್ಟು ಜನಾಂಗದ ಯುವಕನ ಮೇಲೆ ಮೂತ್ರ ವಿಸರ್ಜನೆಯ ಘಟನೆ ನಡೆದ ಸ್ವಲ್ಪ ಸಮಯದ ನಂತರ, , ಬಿಜೆಪಿ ಶಾಸಕ ರಾಮ್ ಲಲ್ಲು ವೈಶ್ಯ ಪುತ್ರ ವಿವೇಕಾನಂದ ವೈಶ್ಯ ಸಿಂಗ್ರೌಲಿಯಲ್ಲಿ ಬುಡಕಟ್ಟು ಯುವಕನ ಮೇಲೆ ಗುಂಡು ಹಾರಿಸಿದ್ದಾರೆ, ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ, ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ.
मध्य प्रदेश के भाजपा नेताओं में आदिवासी समुदाय पर अत्याचार करने की होड़ मची है। सीधी में आदिवासी युवक पर पेशाब करने की घटना को अभी ज्यादा समय नहीं हुआ है कि सिंगरौली में भाजपा विधायक रामलल्लू वैश्य के बेटे विवेकानंद वैश्य ने एक आदिवासी युवक को गोली मार दी। युवक गंभीर रूप से घायल…
— Kamal Nath (@OfficeOfKNath) August 4, 2023
ಆದಿವಾಸಿಗಳು, ದಲಿತರು, ಮಹಿಳೆಯರು ಮತ್ತು ಎಲ್ಲಾ ಸಮುದಾಯದ ಜನರಿಗೆ ಕಿರುಕುಳ ನೀಡುವುದೊಂದೇ ಬಿಜೆಪಿ ನಾಯಕರಿಗೆ ಉಳಿದಿರುವ ಕೆಲಸವೇ ಎಂಬುದನ್ನು ನಾನು ಮುಖ್ಯಮಂತ್ರಿಯಿಂದ ತಿಳಿದುಕೊಳ್ಳಲು ಬಯಸುತ್ತೇನೆ. ಅಪರಾಧಗಳನ್ನು ನಿಗ್ರಹಿಸುವ ಬದಲು, ನೀವು ಅಪರಾಧಿಗಳನ್ನು ಪ್ರೋತ್ಸಾಹಿಸುವುದನ್ನು ನೋಡುತ್ತೀರಿ.
ಇದನ್ನೂ ಓದಿ: ಆರ್ಜೆಡಿ ನಾಯಕರನ್ನು ಭೇಟಿ ಮಾಡಿ ಲಾಲು ಪ್ರಸಾದ್ ಯಾದವ್ ತಯಾರಿಸಿದ ಮಟನ್ ಊಟ ಸವಿದ ರಾಹುಲ್ ಗಾಂಧಿ
ಇತ್ತೀಚೆಗೆ, ಹರ್ದಾದಿಂದ ಲೈಂಗಿಕ ದಂಧೆ ನಡೆಸುತ್ತಿದ್ದ ಆರೋಪಿಯನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಕ್ರಿಮಿನಲ್ ಬಿಜೆಪಿಯನ್ನು ರಚಿಸುವ ಅಭಿಯಾನದಲ್ಲಿ ನೀವು ಎಷ್ಟು ವೇಗವಾಗಿ ಮುನ್ನಡೆಯುತ್ತಿದ್ದೀರಿ ಎಂಬುದನ್ನು ಸ್ಪಷ್ಟಪಡಿಸಿದ್ದೀರಿ. ರಾಜ್ಯ ಬೆಂಬಲಿತ ಅಪರಾಧಗಳು ಮಧ್ಯಪ್ರದೇಶಕ್ಕೆ ಅವಮಾನ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:51 pm, Sat, 5 August 23