ಯುದ್ಧದ ನಾಡಾಗಿರುವ ಉಕ್ರೇನ್ನಿಂದ (Ukraine Crisis) ಭಾರತೀಯರನ್ನು ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳನ್ನು ವಾಪಸ್ ದೇಶಕ್ಕೆ ಕರೆತರುವ ಕಾರ್ಯಾಚರಣೆ ಅವಿರತವಾಗಿ ನಡೆಯುತ್ತಿದೆ. ಈ ಕಾರ್ಯಾಚಾರಣೆಗೆ ಭಾರತ ಕೇಂದ್ರ ಸರ್ಕಾರ ಆಪರೇಶನ್ ಗಂಗಾ ಎಂದು ಹೆಸರು ಇಟ್ಟಿದ್ದು, ಅದರಡಿಯಲ್ಲಿ ಈಗಾಗಲೇ ಮೂರು ಬ್ಯಾಚ್ನಲ್ಲಿ ವಿದ್ಯಾರ್ಥಿಗಳು ಭಾರತಕ್ಕೆ ಮರಳಿದ್ದಾರೆ. ಇಂದು ಮುಂಜಾನೆ ಹಂಗೇರಿಯ ಬುಡಾಪೆಸ್ಟ್ನಿಂದ ಹೊರಟಿದ್ದ ವಿಮಾನವೂ ದೆಹಲಿಯಲ್ಲಿ ಲ್ಯಾಂಡ್ ಆಗಿದೆ. ಇನ್ನು ದೆಹಲಿ ಹಾಗೂ ಮುಂಬೈ ಏರ್ಪೋರ್ಟ್ಗೆ ಬಂದಿಳಿದು, ಅಲ್ಲಿಂದ ಬೆಂಗಳೂರಿಗೆ ಆಗಮಿಸಲಿರುವ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಬೆಂಗಳೂರು ಏರ್ಪೋರ್ಟ್ನಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಸಂಸದ ತೇಜಸ್ವಿ ಸೂರ್ಯ, ಸಚಿವ ಆರ್. ಅಶೋಕ್ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಈ ಮಧ್ಯೆ ನಿನ್ನೆ ಮಧ್ಯರಾತ್ರಿ ಉಕ್ರೇನ್ನಿಂದ ಭಾರತಕ್ಕೆ ಬಂದಿಳಿದ ವಿದ್ಯಾರ್ಥಿಗಳಲ್ಲಿ, ಕರ್ನಾಟಕದವರನ್ನು ತೇಜಸ್ವಿ ಸೂರ್ಯ ಇಂದು ಬೆಳಗ್ಗೆ ದೆಹಲಿಯ ಕರ್ನಾಟಕ ಭವನದಲ್ಲಿ ಭೇಟಿಯಾಗಿದ್ದಾರೆ. ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ವಿದ್ಯಾರ್ಥಿಗಳು ತಾವು ಉಕ್ರೇನ್ನಲ್ಲಿ ಪಟ್ಟ ಕಷ್ಟ, ಸರ್ಕಾರ ನಮ್ಮನ್ನು ಕರೆತರಲು ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಮಾತನಾಡಿದ್ದಾರೆ. ಉಕ್ರೇನ್ನಿಂದ ರೊಮೇನಿಯಾ/ಹಂಗೇರಿ ಗಡಿಗಳಿಗೆ ಬಂದು, ಗಡಿ ದಾಟಬೇಕಾದಾಗ ಅನುಸರಿಸಬೇಕಾದ ಕ್ರಮಗಳ ಕುರಿತೂ ವಿದ್ಯಾರ್ಥಿಗಳು ಅನುಭವ ಹಂಚಿಕೊಂಡಿದ್ದಾರೆ.
ಉಕ್ರೇನ್ನಿಂದ ಬಂದ ವಿದ್ಯಾರ್ಥಿಗಳನ್ನು ಭೇಟಿಯಾದ ಫೋಟೋ-ವಿಡಿಯೋಗಳನ್ನು ಶೇರ್ ಮಾಡಿಕೊಂಡಿರುವ ತೇಜಸ್ವಿ ಸೂರ್ಯ, ಉಕ್ರೇನ್ನಿಂದ ಬಂದ ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಅಲ್ಲಿ ಭಾರತೀಯರು ಮಾತ್ರವಲ್ಲ, ಬೇರೆ ಕೆಲವು ದೇಶಗಳ ವಿದ್ಯಾರ್ಥಿಗಳೂ ಇದ್ದಾರೆ. ಆದರೆ ಅವರೆಲ್ಲ ಇನ್ನೂ ತಮ್ಮ ದೇಶಗಳ ಸರ್ಕಾರಗಳೊಂದಿಗೆ ಸಂವಹನಕ್ಕೆ ಕಷ್ಟಪಡುತ್ತಿದ್ದಾರೆ. ಆದರೆ ನಮ್ಮ ದೇಶದ ಅನೇಕ ವಿದ್ಯಾರ್ಥಿಗಳು ಈಗಾಗಲೇ ಸ್ವದೇಶಕ್ಕೆ ಮರಳಿದ್ದಾರೆ ಎಂದು ಕ್ಯಾಪ್ಷನ್ ಬರೆದಿದ್ದಾರೆ. ಹಾಗೇ, ಇಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ 12 ವಿದ್ಯಾರ್ಥಿಗಳನ್ನು ಸಚಿವ ಆರ್. ಅಶೋಕ್ ಸ್ವಾಗತಿಸಿದರು.
Published On - 11:54 am, Sun, 27 February 22