ರಷ್ಯಾ ಸೇನೆಗೆ ದಾರಿ ತಪ್ಪಿಸುತ್ತಿರುವ ಉಕ್ರೇನ್ ಸರ್ಕಾರಿ ಕಂಪನಿ; ನರಕಕ್ಕೆ ಹೋಗಲು ಸಹಾಯ ಮಾಡುತ್ತಿರುವುದಾಗಿ ಫೇಸ್ಬುಕ್ ಪೋಸ್ಟ್, ಅಶ್ಲೀಲ ಬೈಗುಳ
ರಷ್ಯಾ ಸೇನೆ ಸೀದಾ ನರಕಕ್ಕೆ ಹೋಗಲು ನಾವು ಸಹಾಯ ಮಾಡುತ್ತಿದ್ದೇವೆ. ನಾವು ಒಂದು ಕಡೆಯಿಂದ ಈ ಮಾರ್ಗಸೂಚಿಗಳನ್ನು ತೆಗೆದುಹಾಕುತ್ತಿದ್ದೇವೆ. ಹಾಗೇ ಈ ಕೆಲಸಕ್ಕೆ ನಮ್ಮೊಂದಿಗೆ ಸಾರ್ವಜನಿಕರು, ಸ್ಥಳೀಯ ಆಡಳಿತಗಳೂ ಕೈಜೋಡಿಸಬೇಕು ಎಂದು ಕಂಪನಿ ಹೇಳಿದೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ (Russia-Ukraine War) ಸಾರಿ ನಾಲ್ಕು ದಿನಗಳಾಯಿತು. ರಷ್ಯಾಕ್ಕೆ ಹೋಲಿಸಿದರೆ ಉಕ್ರೇನ್ ಸಾಮರ್ಥ್ಯ ಎಲ್ಲದರಲ್ಲೂ ಕಡಿಮೆ. ಹಾಗಿದ್ದಾಗ್ಯೂ ಉಕ್ರೇನ್ (Ukraine) ರಷ್ಯಾ ಸೇನೆಯನ್ನು ಹಿಮ್ಮೆಟ್ಟಿಸಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದೆ. ಬರೀ ಸೇನೆಯಷ್ಟೇ ಅಲ್ಲ, ನಾಗರಿಕರೂ ಕೈಯಲ್ಲಿ ಬಂದೂಕು ಹಿಡಿದು ಯುದ್ಧಭೂಮಿಗೆ ಇಳಿದಿದ್ದಾರೆ. ಹಲವು ದೇಶಗಳು ಉಕ್ರೇನ್ಗೆ ಮಿಲಿಟರಿ ಉಪಕರಣಗಳನ್ನು ಒದಗಿಸುತ್ತಿವೆ. ಈ ಮಧ್ಯೆ ಉಕ್ರೇನ್ನ ಕಟ್ಟಡಗಳು ಮತ್ತು ರಸ್ತೆ ನಿರ್ವಹಣೆ ಉಸ್ತುವಾರಿ ಕಂಪನಿಯೊಂದು ವಿಭಿನ್ನವಾಗಿ ರಷ್ಯಾ ವಿರುದ್ಧ ಹೋರಾಡುತ್ತಿದೆ.
ಉಕ್ರಾವ್ಟೋಡರ್ ಎಂಬ ಸರ್ಕಾರಿ ಕಂಪನಿಯೊಂದು ಎಲ್ಲ ಕಡೆಗಳಲ್ಲಿರುವ ರಸ್ತೆ ಮಾರ್ಗ ತೋರುವ ಬೋರ್ಡ್ಗಳು, ಸಂಕೇತಗಳನ್ನು ತೆಗೆದುಹಾಕುತ್ತಿದೆ. ಜನರಿಗೆ ಅನುಕೂಲವಾಗುವಂತೆ ರಸ್ತೆ ಬದಿಯಲ್ಲಿ ರಸ್ತೆ ಮಾರ್ಗ ಸಂಕೇತಗಳ ಬೋರ್ಡ್ಗಳನ್ನು ಹಾಕುವುದು ಸಾಮಾನ್ಯ. ಹೊಸದಾಗಿ ಆ ಪ್ರದೇಶಗಳಿಗೆ ಬರುವವರು ಚಿಹ್ನೆ (Signs) ಗಳನ್ನು ನೋಡಿಯೇ ದಾರಿ ಅರಿಯುತ್ತಾರೆ. ಹಾಗೇ, ಉಕ್ರೇನ್ನಲ್ಲೂ ಹಾಕಲಾಗಿದ್ದ ಮಾರ್ಗಸೂಚಿ ಸೈನ್ ಬೋರ್ಡ್ಗಳನ್ನು ಈ ಕಂಪನಿ ತೆಗೆದುಹಾಕುತ್ತಿದೆ. ರಷ್ಯಾದ ಸೈನಿಕರಿಗೆ ಉಕ್ರೇನ್ನ ದಾರಿಗಳು ಸರಿಯಾಗಿ ಗೊತ್ತಿಲ್ಲ. ಅಲ್ಲದೆ ಅವರು ಅತ್ಯಂತ ಕಳಪೆ ಸಂವಹನ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಇಲ್ಲಿನ ಭೂಪ್ರದೇಶಗಳನ್ನು ಸಂಕೇತಗಳ ಸಹಾಯವಿಲ್ಲದೆ ಪ್ರವೇಶಿಸಲಾರರು. ನಾವು ಶತ್ರುಗಳ ದಾರಿ ತಪ್ಪಿಸಲು ಆ ಬೋರ್ಡ್ಗಳನ್ನೆಲ್ಲ ತೆಗೆದುಹಾಕುತ್ತಿದ್ದೇವೆ ಎಂದು ಫೇಸ್ಬುಕ್ ಪೋಸ್ಟ್ನಲ್ಲಿ ಹೇಳಿಕೊಂಡಿದೆ.
ಅಷ್ಟೇ ಅಲ್ಲ, ರಷ್ಯಾ ಸೇನೆ ಸೀದಾ ನರಕಕ್ಕೆ ಹೋಗಲು ನಾವು ಸಹಾಯ ಮಾಡುತ್ತಿದ್ದೇವೆ. ನಾವು ಒಂದು ಕಡೆಯಿಂದ ಈ ಮಾರ್ಗಸೂಚಿಗಳನ್ನು ತೆಗೆದುಹಾಕುತ್ತಿದ್ದೇವೆ. ಹಾಗೇ ಈ ಕೆಲಸಕ್ಕೆ ನಮ್ಮೊಂದಿಗೆ ಸಾರ್ವಜನಿಕರು, ಸ್ಥಳೀಯ ಆಡಳಿತಗಳೂ ಕೈಜೋಡಿಸಬೇಕು ಎಂದು ಕಂಪನಿ ಹೇಳಿದೆ. ಕೆಲವು ಕಡೆಗಳಲ್ಲಂತೂ ರಸ್ತೆ ತೋರುವ ಸಂಕೇತವನ್ನು ತಪ್ಪು ನಿರ್ದೇಶನದಲ್ಲಿ ಇಡುವ ಕೆಲಸವನ್ನೂ ಕಂಪನಿ ಮಾಡಿದೆ. ಮತ್ತು ಅಶ್ಲೀಲ ಭಾಷೆಯಲ್ಲಿ ರಷ್ಯಾಕ್ಕೆ ಬೈದು ಫೇಸ್ಬುಕ್ ಪೋಸ್ಟ್ ಹಾಕಿಕೊಂಡಿದೆ. ಪ್ರತಿರಸ್ತೆಯನ್ನೂ ಜನರು ಟೈಯರ್ಗಳನ್ನು ಸುಡಬೇಕು. ಒಣಮರಗಳಿಗೆ ಬೆಂಕಿ ಹಾಕಬೇಕು. ಬ್ಯಾರಿಕೇಡ್ಗಳನ್ನು ಹಾಕಬೇಕು. ಈ ಮೂಲಕ ಶತ್ರುಗಳ ಪ್ರವೇಶವನ್ನು ನಿರ್ಬಂಧಿಸಬೇಕು. ಎಲ್ಲೇ ಹೋದರೂ ಅವರಿಗೆ ತಾವಿಲ್ಲ ತಪ್ಪಾಗಿ ಬಂದಿದ್ದೇವೆ ಎನ್ನಿಸುವಷ್ಟು ಕಷ್ಟ ಕೊಡಬೇಕು ಎಂದೂ ಈ ಸರ್ಕಾರಿ ಕಂಪನಿ ಹೇಳಿದೆ.
ಉಕ್ರೇನ್ ಯಾವ ಕಾರಣಕ್ಕೂ ರಷ್ಯಾಕ್ಕೆ ಮಣಿಯುವುದಿಲ್ಲ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿಕೊಂಡಿದ್ದಾರೆ. ತಮಗೆ ಶಸ್ತ್ರಾಸ್ತ್ರಗಳನ್ನು ನೀಡಿ ಎಂದು ವಿಶ್ವನಾಯಕರನ್ನು ಕೇಳಿಕೊಳ್ಳುತ್ತಿದ್ದಾರೆ. ಅದರಂತೆ ಹಲವು ದೇಶಗಳು ಉಕ್ರೇನ್ಗೆ ಮಿಲಿಟರಿ ಉಪಕರಣಗಳ ನೆರವು ನೀಡುತ್ತಿದ್ದಾರೆ. ಇನ್ನೊಂದೆಡೆ ರಷ್ಯಾ ತಾವು ಜನರನ್ನು ಕೊಲ್ಲುವುದಿಲ್ಲ, ಪ್ರದೇಶಗಳನ್ನು ಅತಿಕ್ರಮಣ ಮಾಡುವುದಿಲ್ಲ ಎಂದು ಹೇಳುತ್ತಲೇ ಈ ಎರಡೂ ಕೆಲಸಗಳನ್ನೂ ಮಾಡುತ್ತಿದೆ.
ಇದನ್ನೂ ಓದಿ: Russia-Ukraine War: ರಷ್ಯಾದ ದಾಳಿಯ ನಡುವೆ ಶೆಲ್ಟರ್ನಲ್ಲೇ ಮಗುವಿಗೆ ಜನ್ಮ ನೀಡಿದ ಉಕ್ರೇನ್ ಮಹಿಳೆ
Published On - 10:40 am, Sun, 27 February 22