ಉಪರಾಷ್ಟ್ರಪತಿ ಚುನಾವಣೆಗೆ ಸಿಪಿ ರಾಧಾಕೃಷ್ಣನ್​​ ಎನ್​ಡಿಎ ಅಭ್ಯರ್ಥಿ

ಭಾರತೀಯ ಜನತಾ ಪಕ್ಷ (ಬಿಜೆಪಿ)ವು ಮುಂಬರುವ ಉಪರಾಷ್ಟ್ರಪತಿ ಚುನಾವಣೆಗೆ ಸಿ.ಪಿ. ರಾಧಾಕೃಷ್ಣನ್ ಅವರನ್ನು ಎನ್‌ಡಿಎ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಿಸಿದೆ. ಪ್ರಸ್ತುತ ಮಹಾರಾಷ್ಟ್ರ ರಾಜ್ಯಪಾಲರಾಗಿರುವ ರಾಧಾಕೃಷ್ಣನ್ ಅವರನ್ನು ಸೆಪ್ಟೆಂಬರ್ 9 ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಆಯ್ಕೆ ಮಾಡಲಾಗಿದೆ. ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸಂಸದೀಯ ಮಂಡಳಿ ಸಭೆಯಲ್ಲಿ ರಾಧಾಕೃಷ್ಣನ್​ ಅವರ ಹೆಸರನ್ನು ಅಂತಿಮಗೊಳಿಸಲಾಯಿತು.

ಉಪರಾಷ್ಟ್ರಪತಿ ಚುನಾವಣೆಗೆ ಸಿಪಿ ರಾಧಾಕೃಷ್ಣನ್​​ ಎನ್​ಡಿಎ ಅಭ್ಯರ್ಥಿ
ಸಿಪಿ ರಾಧಾಕೃಷ್ಣನ್

Updated on: Aug 17, 2025 | 9:19 PM

ನವದೆಹಲಿ, ಆಗಸ್ಟ್​ 17: ಮುಂಬರುವ ಉಪರಾಷ್ಟ್ರಪತಿ ಚುನಾವಣೆಗೆ (Vice President Election) ಸಿಪಿ ರಾಧಾಕೃಷ್ಣನ್​​ (C. P. Radhakrishnan) ಅವರನ್ನು ಎನ್​ಡಿಎ ಅಭ್ಯರ್ಥಿಯಾಗಿ ಬಿಜೆಪಿ (BJP) ಅಧಿಕೃತವಾಗಿ ಘೋಷಿಸಿದೆ. ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮುಂಬರುವ ಉಪರಾಷ್ಟ್ರಪತಿ ಚುನಾವಣೆಗೆ ಎನ್​ಡಿಎ ಮೈತ್ರಿಕೂಟವು ತನ್ನ ಅಭ್ಯರ್ಥಿಯನ್ನಾಗಿ ಪ್ರಸ್ತುತ ಮಹಾರಾಷ್ಟ್ರದ ರಾಜ್ಯಪಾಲರಾಗಿರುವ ಸಿ.ಪಿ.ರಾಧಾಕೃಷ್ಣನ್ ಅವರನ್ನು ಆಯ್ಕೆ ಮಾಡಿದೆ ಎಂದು ಹೇಳಿದರು. ರವಿವಾರ (ಆ.17) ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸಂಸದೀಯ ಮಂಡಳಿ ಸಭೆಯಲ್ಲಿ ರಾಧಾಕೃಷ್ಣನ್​ ಅವರ ಹೆಸರನ್ನು ಅಂತಿಮಗೊಳಿಸಲಾಯಿತು.

ಈ ಹಿಂದೆ ಉಪರಾಷ್ಟ್ರಪತಿಯಾಗಿದ್ದ ಜಗದೀಪ್​ ಧನ್ಕರ್​ ಅವರು ಜುಲೈ 21 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಉಪರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಜಗದೀಪ್​ ಧನ್ಕರ್​ ಅವರು ಅನಾರೋಗ್ಯದ ಕಾರಣ ಹೇಳಿ, ಜುಲೈ 21 ರಂದು ಪದತ್ಯಾಗ ಮಾಡಿದ್ದಾರೆ. ಇದೇ ಸೆಪ್ಟೆಂಬರ್​ 9 ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ.

2 ಬಾರಿ ಲೋಕಸಭಾ ಸದಸ್ಯರಾಗಿದ್ದ ಸಿ.ಪಿ.ರಾಧಾಕೃಷ್ಣನ್

ಚಂದ್ರಾಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್ (ಸಿ.ಪಿ.ರಾಧಾಕೃಷ್ಣನ್) ಅವರು ತಮಿಳುನಾಡಿನ ತಿರುಪ್ಪೂರಿನಲ್ಲಿ ಅಕ್ಟೋಬರ್​ 20, 1957 ರಂದು ಜನಿಸಿದರು. ಸಿಪಿ ರಾಧಾಕೃಷ್ಣನ್ ಅವರು 16ನೇ ವಯಸ್ಸಿನಿಂದಲೇ ಆರ್‌ಎಸ್‌ಎಸ್ ಮತ್ತು ಜನಸಂಘದಂತಹ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಸಿಪಿ ರಾಧಾಕೃಷ್ಣನ್​ ಅವರು ಕೊಯಮತ್ತೂರಿನಿಂದ ಎರಡು ಬಾರಿ ಲೋಕಸಭಾ ಸದಸ್ಯರಾಗಿದ್ದರು.

1998 ಮತ್ತು 1999 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಅವರು ಬಿಜೆಪಿಯಿಂದ ಕಣಕ್ಕೆ ಇಳಿದರು. 1998 ರ ಚುನಾವಣೆಯಲ್ಲಿ 150,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಮತ್ತು 1999 ರ ಚುನಾವಣೆಯಲ್ಲಿ 55,000 ಮತಗಳ ಅಂತರದಿಂದ ಗೆದ್ದರು.  ಸಿಪಿ ರಾಧಾಕೃಷ್ಣನ್​ ಅವರು 2024ರಿಂದ ಮಹಾರಾಷ್ಟ್ರದ 24ನೇ ರಾಜ್ಯಪಾಲರಾಗಿದ್ದಾರೆ. 2003 ರಿಂದ 2006ರವರೆಗೆ ತಮಿಳುನಾಡಿನ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷರೂ ಆಗಿದ್ದರು.

ಸಂತಸ ವ್ಯಕ್ತಪಡಿಸಿದ ಪ್ರಧಾನಿ ಮೋದಿ


“ತಮ್ಮ ಸುದೀರ್ಘ ಸಾರ್ವಜನಿಕ ಜೀವನದಲ್ಲಿ, ತಿರು ಸಿಪಿ ರಾಧಾಕೃಷ್ಣನ್ ಜಿ ಅವರು ತಮ್ಮ ಸಮರ್ಪಣಾ ಭಾವ, ಮಾನವೀಯತೆ ಮತ್ತು ಬುದ್ಧಿಶಕ್ತಿಯಿಂದ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಅವರು ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರೂ, ಅವರು ಯಾವಾಗಲೂ ಸಮುದಾಯದ ಸೇವೆ ಮತ್ತು ಅಂಚಿನಲ್ಲಿರುವವರ ಸಬಲೀಕರಣದತ್ತ ಗಮನಹರಿಸಿದ್ದಾರೆ. ಅವರು ತಮಿಳುನಾಡಿನಲ್ಲಿ ತಳಮಟ್ಟದಲ್ಲಿ ಕೆಲಸ ಮಾಡಿದ್ದಾರೆ. ಎನ್‌ಡಿಎ ಕುಟುಂಬವು ಅವರನ್ನು ನಮ್ಮ ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಲು ನಿರ್ಧರಿಸಿದ್ದು ನನಗೆ ಸಂತೋಷವಾಗಿದೆ” ಎಂದು ಪ್ರಧಾನಿ ಮೋದಿ ಟ್ವೀಟ್​ ಮಾಡಿದ್ದಾರೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 8:54 pm, Sun, 17 August 25