Jagdeep Dhankhar: ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧಂಖರ್ ರಾಜೀನಾಮೆ
ಭಾರತದ ಉಪರಾಷ್ಟ್ರಪತಿ ಹುದ್ದೆಗೆ ಜಗದೀಪ್ ಧಂಖರ್ ಇಂದು ಸಂಜೆ ರಾಜೀನಾಮೆ ನೀಡಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವ ಸಂಪುಟಕ್ಕೆ ಜಗದೀಪ್ ಧಂಖರ್ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಪ್ರಧಾನಿಯವರ ಸಹಕಾರ ಮತ್ತು ಬೆಂಬಲ ಅಮೂಲ್ಯವಾದುದು. ನಾನು ಅಧಿಕಾರದಲ್ಲಿದ್ದ ಅವಧಿಯಲ್ಲಿ ಅವರಿಂದ ಬಹಳಷ್ಟು ಕಲಿತಿದ್ದೇನೆ ಎಂದು ತಿಳಿಸಿದ್ದಾರೆ.

ನವದೆಹಲಿ, ಜುಲೈ 21: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ದಿಢೀರನೆ ಭಾರತದ ಉಪರಾಷ್ಟ್ರಪತಿ ಜಗದೀಪ್ ಧಂಖರ್ (Jagdeep Dhankhar) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆರೋಗ್ಯ ಸಮಸ್ಯೆ ಮತ್ತು ವೈದ್ಯಕೀಯ ಸಲಹೆಯನ್ನು ಪಾಲಿಸುವ ಅಗತ್ಯವನ್ನು ಉಲ್ಲೇಖಿಸಿರುವ ಜಗದೀಪ್ ಧಂಖರ್ ಅವರು ಭಾರತದ ಉಪರಾಷ್ಟ್ರಪತಿ (Vice President of India) ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದ ಪತ್ರದಲ್ಲಿ ತಮ್ಮ ರಾಜೀನಾಮೆ ಭಾರತದ ಸಂವಿಧಾನದ 67(ಎ) ವಿಧಿಗೆ ಅನುಗುಣವಾಗಿದೆ ಎಂದು ಜಗದೀಪ್ ಧಂಖರ್ ಹೇಳಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದ ಪತ್ರದಲ್ಲಿ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಜಗದೀಪ್ ಧಂಖರ್, ರಾಷ್ಟ್ರಪತಿಗಳ ಬೆಂಬಲ ಮತ್ತು ತಮ್ಮ ಅಧಿಕಾರಾವಧಿಯಲ್ಲಿ ಅವರು ಹಂಚಿಕೊಂಡ ಸೌಹಾರ್ದಯುತ ಕಾರ್ಯ ಸಂಬಂಧಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವ ಸಂಪುಟಕ್ಕೆ ಅವರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಪ್ರಧಾನಿಯವರ ಸಹಕಾರ ಮತ್ತು ಬೆಂಬಲ ಅಮೂಲ್ಯವಾದುದು. ನನ್ನ ಅಧಿಕಾರದ ಅವಧಿಯಲ್ಲಿ ಬಹಳಷ್ಟು ಕಲಿತಿದ್ದೇನೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸುಪ್ರೀಂ ಕೋರ್ಟ್ ರಾಷ್ಟ್ರಪತಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ; ಉಪರಾಷ್ಟ್ರಪತಿ ಜಗದೀಪ್ ಧಂಖರ್ ಆಕ್ಷೇಪ
“ಎಲ್ಲಾ ಸಂಸದರಿಂದ ನಾನು ಪಡೆದ ಗೌರವ, ವಿಶ್ವಾಸವನ್ನು ಸದಾ ನೆನಪಿಸಿಕೊಳ್ಳುತ್ತೇನೆ. ನಮ್ಮ ಪ್ರಜಾಪ್ರಭುತ್ವದಲ್ಲಿ ಉಪರಾಷ್ಟ್ರಪತಿಯಾಗಿ ನಾನು ಪಡೆದ ಅನುಭವಗಳು ಮತ್ತು ಒಳನೋಟಗಳಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ” ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
Vice President Jagdeep Dhankhar resigns from his post “to prioritise health care and abide by medical advice.” pic.twitter.com/IoHiN7VGAR
— ANI (@ANI) July 21, 2025
ರಾಷ್ಟ್ರದ ಇತಿಹಾಸದಲ್ಲಿ ಮಹತ್ವದ ಅವಧಿಯಲ್ಲಿ ಭಾರತದ ಗಮನಾರ್ಹ ಆರ್ಥಿಕ ಪ್ರಗತಿ ಮತ್ತು ಅಭೂತಪೂರ್ವ ಅಭಿವೃದ್ಧಿಗೆ ಸಾಕ್ಷಿಯಾಗುವ ಮತ್ತು ಕೊಡುಗೆ ನೀಡುವ ತೃಪ್ತಿಯನ್ನು ಅವರು ಉಲ್ಲೇಖಿಸಿದ್ದಾರೆ. ಮುಂದೆಯೂ ದೇಶದ ಉಜ್ವಲ ಭವಿಷ್ಯದ ಬಗ್ಗೆ ಅವರು ತಮ್ಮ ವಿಶ್ವಾಸವನ್ನು ದೃಢಪಡಿಸಿದರು.
ಈ ಮಹತ್ವದ ಅವಧಿಯಲ್ಲಿ ಭಾರತದ ಗಮನಾರ್ಹ ಆರ್ಥಿಕ ಪ್ರಗತಿ ಮತ್ತು ಅಭೂತಪೂರ್ವ ಘಾತೀಯ ಅಭಿವೃದ್ಧಿಯನ್ನು ವೀಕ್ಷಿಸಲು ಮತ್ತು ಅದರಲ್ಲಿ ಭಾಗವಹಿಸಲು ನನಗೆ ಒಂದು ಅವಕಾಶ ಸಿಕ್ಕಿದ್ದರಿಂದ ತೃಪ್ತಿ ಸಿಕ್ಕಿದೆ ಎಂದು 74 ವರ್ಷದ ಜಗದೀಪ್ ಧಂಖರ್ ಹೇಳಿದ್ದಾರೆ. ನಮ್ಮ ರಾಷ್ಟ್ರದ ಇತಿಹಾಸದ ಈ ಪರಿವರ್ತನಾ ಯುಗದಲ್ಲಿ ಸೇವೆ ಸಲ್ಲಿಸುವುದು ನಿಜವಾದ ಗೌರವ ಎಂದು ಭಾವಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾಯಮೂರ್ತಿ ಯಶವಂತ್ ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಕಟು ಟೀಕೆ
ಜಗದೀಪ್ ಧಂಖರ್ 2022ರ ಆಗಸ್ಟ್ ತಿಂಗಳಲ್ಲಿ ಭಾರತದ ಉಪರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡರು. ಹೃದಯ ಸಂಬಂಧಿ ಕಾಯಿಲೆಗಳ ನಂತರ ಅವರನ್ನು ಈ ವರ್ಷದ ಮಾರ್ಚ್‌ನಲ್ಲಿ 4 ದಿನಗಳ ಕಾಲ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಭಾರತದ ಉಪರಾಷ್ಟ್ರಪತಿ ರಾಜೀನಾಮೆ ನೀಡಿದ್ದರಿಂದ ಖಾಲಿಯಾದ ಆ ಹುದ್ದೆಯನ್ನು ಭರ್ತಿ ಮಾಡಲು ಈ ರಾಜೀನಾಮೆ ನೀಡಿದ 60 ದಿನಗಳ ಒಳಗೆ ಔಪಚಾರಿಕ ಚುನಾವಣೆಯನ್ನು ನಡೆಸಬೇಕು. ಸಂಸತ್ತಿನ ಎರಡೂ ಸದನಗಳ ಎಲ್ಲಾ ಸದಸ್ಯರು ಮತದಾರರಾಗಿರುತ್ತಾರೆ. ಸಂವಿಧಾನದ ಪ್ರಕಾರ, ಉಪರಾಷ್ಟ್ರಪತಿಗಳ ಹುದ್ದೆ ಖಾಲಿಯಾದರೆ ರಾಜ್ಯಸಭೆಯ ಉಪಸಭಾಪತಿಗಳು ಮೇಲ್ಮನೆಯ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ. ಪ್ರಸ್ತುತ, ಆ ಸ್ಥಾನವನ್ನು ಹರಿವಂಶ್ ನಾರಾಯಣ್ ಸಿಂಗ್ ಹೊಂದಿದ್ದಾರೆ. ಅವರು ತಾತ್ಕಾಲಿಕವಾಗಿ ಮೇಲ್ಮನೆಯ ಅಧ್ಯಕ್ಷರಾಗಿ ಅಧಿಕಾರ ನಿರ್ವಹಿಸುತ್ತಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:55 pm, Mon, 21 July 25




