
ನವದೆಹಲಿ: ಆಮ್ ಆದ್ಮಿ ಪಕ್ಷ (Aam Addmi Party) ಬಿಟ್ಟು ಬಿಜೆಪಿಗೆ ಬಂದರೆ ನಿಮ್ಮ ಮೇಲಿರುವ ಎಲ್ಲ ಕೇಸುಗಳನ್ನೂ ಖುಲಾಸೆಗೊಳಿಸುವುದಾಗಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ (Manish Sisodia) ಬಿಜೆಪಿ ಆಫರ್ ನೀಡಿತ್ತು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಕೆಲವು ದಿನಗಳ ಹಿಂದೆ ಹೇಳಿದ್ದರು. ಬಿಜೆಪಿ ಆ ರೀತಿ ಮನೀಶ್ ಸಿಸೋಡಿಯಾಗೆ ಆಫರ್ ನೀಡಿರುವ ಆಡಿಯೋ ರೆಕಾರ್ಡ್ ಕೂಡ ಇದೆ ಎನ್ನಲಾಗಿತ್ತು. ಡಿಸಿಎಂ ಮನೀಶ್ ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿ ನಡೆದ ಬೆನ್ನಲ್ಲೇ ಈ ಬಗ್ಗೆ ಚರ್ಚೆಗಳು ಶುರುವಾಗಿದ್ದವು. ಅದಾದ ಬಳಿಕ ಮತ್ತೆ ಈ ಕುರಿತು ಮಾತನಾಡಿರುವ ಸಿಎಂ ಅರವಿಂದ್ ಕೇಜ್ರಿವಾಲ್, ಬಿಜೆಪಿ ದೆಹಲಿಯ ಡಿಸಿಎಂ ಮನೀಶ್ ಸಿಸೋಡಿಯಾ ಅವರಿಗೆ ದೆಹಲಿ ಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಆಮಿಷವೊಡ್ಡಿದೆ ಎಂದು ಹೇಳಿದ್ದಾರೆ. ಈ ಮೂಲಕ ದೆಹಲಿಯಲ್ಲಿ ರಾಜಕೀಯ ಗದ್ದಲ ಗುರುವಾರ ಮತ್ತಷ್ಟು ತೀವ್ರಗೊಂಡಿದೆ. ಪ್ರಸ್ತುತ ಸನ್ನಿವೇಶ ಮತ್ತು ಆಪ್ ನಾಯಕರ ಮೇಲೆ ಸಿಬಿಐ ಮತ್ತು ಇಡಿ ದಾಳಿಗಳ ಕುರಿತು ಚರ್ಚಿಸಲು ಕರೆದಿದ್ದ ತುರ್ತು ಸಭೆಯ ನಂತರ ಅರವಿಂದ್ ಕೇಜ್ರಿವಾಲ್ ತಮ್ಮ ನಿವಾಸದಲ್ಲಿ ಈ ವಿಷಯ ತಿಳಿಸಿದ್ದಾರೆ.
ನಿನ್ನೆಯಷ್ಟೇ ಆಮ್ ಆದ್ಮಿ ಪಕ್ಷದಿಂದ ಹೊರಬರಲು ಮತ್ತು ದೆಹಲಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಪಕ್ಷವು ತನ್ನ 12 ಶಾಸಕರನ್ನು ಸಂಪರ್ಕಿಸಿದೆ ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದರು. ಬಿಜೆಪಿ ನಮ್ಮ 12 ಶಾಸಕರನ್ನು ಸಂಪರ್ಕಿಸಿ ಆಪ್ ಒಡೆಯುವಂತೆ ಹೇಳಿದೆ. ಅವರು 40 ಶಾಸಕರನ್ನು ತಮ್ಮತ್ತ ಸೆಳೆಯಲು ಸಂಚು ಮಾಡಿದ್ದು, ತಲಾ 20 ಕೋಟಿ ರೂ.ಗಳನ್ನು ನೀಡಲು ಸಿದ್ಧರಿದ್ದಾರೆ. ಆದರೆ, ದೆಹಲಿಯಲ್ಲಿ ‘ಆಪರೇಷನ್ ಕಮಲ’ ವಿಫಲವಾಗಿದೆ ಎಂದು ಆಮ್ ಆದ್ಮಿ ಪಕ್ಷದ ನಾಯಕರು ಹೇಳಿದ್ದರು.
Published On - 2:59 pm, Thu, 25 August 22