‘ಮೆಹಬೂಬಾ ಮುಫ್ತಿಗೆ ತಾಲಿಬಾನ್ ಉಗ್ರರೊಂದಿಗೆ ಸಂಪರ್ಕವಿದೆಯಾ ಎಂಬುದು ತನಿಖೆಯಾಗಲಿ’-ಬಿಜೆಪಿ ಆಗ್ರಹ
ಮುಫ್ತಿ ಮತ್ತಿತರರ ಬೂಟಾಟಿಕೆ ಮತ್ತು ವಂಚನೆಯ ರಾಜಕಾರಣಕ್ಕೆ ಕಾಶ್ಮೀರವನ್ನು ಬಳಸಿಕೊಳ್ಳಲು ಬಿಡುವುದಿಲ್ಲ. ಇಲ್ಲಿನ ಜನರು ಧ್ರುವೀಕೃತ ರಾಜಕೀಯವನ್ನು ಸಾರಾಸಗಾಟವಾಗಿ ತಿರಸ್ಕರಿಸಿದ್ದಾರೆ ಎಂದು ಬಿಜೆಪಿ ಹೇಳಿದೆ.
ಶ್ರೀನಗರ: ತಾಲಿಬಾನ್ ಉಗ್ರರ (Taliban Terrorists) ನ್ನು ನೋಡಿ ಪ್ರಧಾನಿ ನರೇಂದ್ರ ಮೋದಿ (Narendra Modi)ಸರ್ಕಾರ ಪಾಠಕಲಿಯಬೇಕು ಎಂದು ಹೇಳುವ ಮೂಲಕ ತಾಲಿಬಾನಿಗಳ ಪರಾಕ್ರಮ ಹೊಗಳಿದ್ದ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ. ಮೆಹಬೂಬಾ ಮುಫ್ತಿ ಕೂಡಲೇ ಕ್ಷಮೆ ಕೇಳಬೇಕು ಮತ್ತು ಅವರಿಗೆ ತಾಲಿಬಾನ್ ಜೊತೆಗೆ ಏನಾದರೂ ಸಂಪರ್ಕ ಇದೆಯಾ ಎಂಬುದರ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ. 2019ರಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದುಹಾಕಿದಾಗಿನಿಂದಲೂ ಮೆಹಬೂಬ ಮುಫ್ತಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ. ಅದರಲ್ಲೂ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದನ್ನು ಕಾಶ್ಮೀರಕ್ಕೆ ಹೋಲಿಸಿದ್ದರು.
ಅಫ್ಘಾನಿಸ್ತಾನದಲ್ಲಿದ್ದ ಬಲಿಷ್ಠ ಅಮೆರಿಕ ಸೈನ್ಯವನ್ನೇ ತಾಲಿಬಾನ್ ಉಗ್ರರು ಉಚ್ಚಾಟಿಸಿದ್ದಾರೆ. ಅದನ್ನು ನೋಡಿಯಾದರೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪಾಠ ಕಲಿಯಬೇಕು. ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸಬೇಕು. ಯಾಕೆಂದರೆ ಇಲ್ಲಿ ನಮ್ಮ ತಾಳ್ಮೆಗೂ ಮಿತಿ ಇದೆ ಎಂದು ಹೇಳಿದ್ದರು. ಆದರೆ ಮುಫ್ತಿ ತಾಲಿಬಾನ್ ಪರ ಮಾತನಾಡಿದ್ದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಮುಫ್ತಿ ತಾಲಿಬಾನ್ ಬಗ್ಗೆ ಮಾತನಾಡುವ ಮೂಲಕ ಕಾಶ್ಮೀರದ ಯುವಕರನ್ನು ತಾಲಿಬಾನ್ ಉಗ್ರರಿಗೆ ಹೋಲಿಸಿದ್ದಾರೆ ಎಂದು ಜಮ್ಮು-ಕಾಶ್ಮೀರ ಘಟಕದ ಬಿಜೆಪಿ ಕಾರ್ಯದರ್ಶಿ, ಮಾಜಿ ಎಂಎಲ್ಸಿ ವಿಬೋಧ್ ಗುಪ್ತಾ ಆರೋಪಿಸಿದ್ದಾರೆ.
ಮುಫ್ತಿ ಮತ್ತಿತರರ ಬೂಟಾಟಿಕೆ ಮತ್ತು ವಂಚನೆಯ ರಾಜಕಾರಣಕ್ಕೆ ಕಾಶ್ಮೀರವನ್ನು ಬಳಸಿಕೊಳ್ಳಲು ಬಿಡುವುದಿಲ್ಲ. ಇಲ್ಲಿನ ಜನರು ಧ್ರುವೀಕೃತ ರಾಜಕೀಯವನ್ನು ಸಾರಾಸಗಾಟವಾಗಿ ತಿರಸ್ಕರಿಸಿದ್ದಾರೆ. ಸದಾ ಪಾಕಿಸ್ತಾನ ಪರ ನಿಲುವು ಪ್ರದರ್ಶಿಸುವ ಮೆಹಬೂಬಾ ಮುಫ್ತಿ, ಪದೇಪದೆ ಜಮ್ಮು-ಕಾಶ್ಮೀರದ ಶಾಂತಿ ಕದಡುವ ಮಾತುಗಳನ್ನಾಡುತ್ತಾರೆ. ಅವರಿಗೆ ಐಸಿಸ್ ಅಥವಾ ತಾಲಿಬಾನ್ ಜತೆ ಸಂಪರ್ಕ ಇದೆಯಾ ಎಂಬ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಐಪಾಡ್; ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ಕ್ರಾಂತಿ: ಬಸವರಾಜ ಬೊಮ್ಮಾಯಿ
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ: ಸರ್ಕಾರವನ್ನು ಎಚ್ಚರಿಸಲು ಬೃಹತ್ ಅಭಿಯಾನ: ಬಸವ ಜಯಮೃತ್ಯುಂಜಯಶ್ರೀ