
ಬಾಲಿವುಡ್ನ ಹಿರಿಯ ನಟ ಅನುಪಮ್ ಖೇರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, ಒಂದು ರುದ್ರಾಕ್ಷಿ ಹಾರವನ್ನು ನೀಡಿದ್ದಾರೆ. ಈ ರುದ್ರಾಕ್ಷಿ ಹಾರವನ್ನು ಅನುಪಮ್ ಖೇರ್ ತಾಯಿ ಪ್ರಧಾನಿ ಮೋದಿಯವರಿಗಾಗಿ ಕಳಿಸಿಕೊಟ್ಟಿದ್ದಾರೆ. ಅನುಪಮ್ ಖೇರ್ ಶನಿವಾರ ಸಂಜೆಯ ಹೊತ್ತಿಗೆ ಪ್ರಧಾನಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬಳಿಕ ಟ್ವೀಟ್ ಮಾಡಿ ಫೋಟೋ ಹಂಚಿಕೊಂಡ ಅವರು, ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ತುಂಬ ಸಂತೋಷವಾಯಿತು. ಈ ದೇಶಕ್ಕಾಗಿ, ದೇಶದ ಜನರಿಗಾಗಿ ನೀವು ಹಗಲಿರುಳು ಶ್ರಮಿಸುತ್ತಿದ್ದೀರಿ. ನಿಮ್ಮ ರಕ್ಷಣೆಗೆ ಇರಲಿ ಎಂದು ನನ್ನ ತಾಯಿ ಈ ರುದ್ರಾಕ್ಷಿ ಹಾರವನ್ನು ಕಳಿಸಿಕೊಟ್ಟಿದ್ದರು. ಅದನ್ನು ನೀವು ಸ್ವೀಕರಿಸಿದ ಕ್ಷಣವನ್ನು ಎಂದಿಗೂ ಮರೆಯುವುದಿಲ್ಲ. ಜೈ ಹೋ, ಜೈ ಹಿಂದ್ ಎಂದು ಬರೆದಿದ್ದಾರೆ.
ಅನುಪಮ್ ಖೇರ್ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ ಪ್ರಧಾನಮಂತ್ರಿ ಮೋದಿ, ಧನ್ಯವಾದಗಳು ಅನುಪಮ್ ಖೇರ್. ನನಗೆ ಮಾತಾಜಿಯವರ ಆಶೀರ್ವಾದ ಸಿಕ್ಕಂತಾಯಿತು. ಈ ದೇಶಕ್ಕೆ ನಿರಂತರವಾಗಿ ಸೇವೆ ಸಲ್ಲಿಸಲು ಶಕ್ತಿ, ಸ್ಫೂರ್ತಿ ನೀಡುತ್ತಿರುವುದೇ ಈ ದೇಶದ ಜನರು ಎಂದು ಹೇಳಿದ್ದಾರೆ. ಇತ್ತೀಚೆಗೆ ತೆರೆಕಂಡು, ದೇಶಾದ್ಯಂತ ಸಂಚಲನ ಮೂಡಿಸಿದ್ದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ಶ್ಲಾಘಿಸಿದ್ದರು. ಅದರಲ್ಲಿ ಅನುಪಮ್ ಖೇರ್ ತುಂಬ ಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Published On - 1:04 pm, Sun, 24 April 22