ದೆಹಲಿ: ಇತ್ತೀಚೆಗೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ನಡೆದ ಘಟನೆಯೊಂದು ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ಚರ್ಚೆಯಾಗುತ್ತಿದೆ. ಜೊಮ್ಯಾಟೋ ಫುಡ್ ಡೆಲಿವರಿ ಬಾಯ್ ಕಾಮರಾಜು ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಹಿತೇಶಾ ಚಂದ್ರಾಣಿ ಮಾಡಿದ ಆರೋಪದಡಿ ಆತನನ್ನು ಪೊಲೀಸರು ಅರೆಸ್ಟ್ ಕೂಡ ಮಾಡಿದ್ದರು. ಇದೀಗ ಅವರು ಜಾಮೀನು ಪಡೆದು ಹೊರಬಂದಿದ್ದಾರೆ. ನಂತರ ವಿಡಿಯೋ ಒಂದನ್ನು ಮಾಡಿ, ಘಟನೆಯಲ್ಲಿ ನನ್ನ ತಪ್ಪೇನೂ ಇಲ್ಲ. ಟ್ರಾಫಿಕ್ ಇದ್ದ ಕಾರಣ ತಡವಾಯಿತು. ನಾನು ಹೋಗುವಷ್ಟರಲ್ಲಿ ಬಾಗಿಲಲ್ಲಿ ನಿಂತಿದ್ದ ಯುವತಿ ನನಗೆ ಅವಾಚ್ಯವಾಗಿ ಬೈದಿದ್ದಲ್ಲದೆ, ಹೊಡೆಯಲೂ ಬಂದರು. ನಾನು ಪಾರಾದೆ. ಈ ವೇಳೆ ಅವರು ಧರಿಸಿದ್ದ ಉಂಗುರದಿಂದಲೇ ಆಕೆಯ ಮೂಗಿಗೆ ಗಾಯವಾಯಿತು ಎಂದೂ ವಿವರಿಸಿದ್ದಾರೆ.
ಕಾಮರಾಜು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಇನ್ನಷ್ಟು ಚರ್ಚೆಯಾಗುತ್ತಿದೆ. ಇಲ್ಲಿ ಯಾರದ್ದು ತಪ್ಪು ಎಂಬ ಬಗ್ಗೆ ಸ್ಪಷ್ಟನೆ ಸಿಗುತ್ತಿಲ್ಲ. ಈ ಮಧ್ಯೆ ಕಾಮರಾಜು ತಾತ್ಕಾಲಿಕವಾಗಿ ಅಮಾನತು ಕೂಡ ಆಗಿದ್ದಾರೆ. ಇದೀಗ ಕಾಮರಾಜು ಪರ ವಹಿಸಿಕೊಂಡು ಮಾತನಾಡುವವರು, ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕುವವರ ಸಂಖ್ಯೆಯೂ ಹೆಚ್ಚುತ್ತಿದ್ದು, ಆತ ಏನೂ ತಪ್ಪು ಮಾಡದೆ ಇದ್ದರೆ ಶಿಕ್ಷೆ ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನು ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಕೂಡ ಈ ಘಟನೆ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಸ್ಟೋರಿ, ಟ್ವಿಟರ್ನಲ್ಲಿ ಪೋಸ್ಟ್ ಹಾಕಿಕೊಂಡಿದ್ದು, ಜೊಮ್ಯಾಟೋ ಡೆಲಿವರಿ ಬಾಯ್ ಕಾಮರಾಜು ಅವರ ಪರ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಅಂದು ವಾಸ್ತವವಾಗಿ ಏನು ನಡೆಯಿತು? ಘಟನೆ ಹಿಂದಿರುವ ಸತ್ಯವೇನು ಎಂಬುದನ್ನು ಮೊದಲು ಕಂಡು ಹಿಡಿದು, ಸಾರ್ವಜನಿಕವಾಗಿ ಸ್ಪಷ್ಟಪಡಿಸಿ ಎಂದು ಜೊಮ್ಯಾಟೊ ಇಂಡಿಯಾಕ್ಕೆ ಮನವಿ ಮಾಡಿದ್ದಾರೆ.
ಈ ಫುಡ್ ಡೆಲಿವರಿ ಬಾಯ್ ಮುಗ್ಧ ಎಂದು ನಾನು ನಂಬುತ್ತೇನೆ. ಆದರೆ ನೀವು ಸತ್ಯವನ್ನು ಕಂಡುಹಿಡಿದರೆ ನಾವೂ ಆ ಮಹಿಳೆಯನ್ನು ಪ್ರಶ್ನೆ ಮಾಡಬಹುದು. ನಿಜಕ್ಕೂ ಇದೊಂದು ಅಮಾನವೀಯ, ನಾಚಿಕೆಗೇಡು ಮತ್ತು ದುಃಖ ತರುವ ಘಟನೆ ಎನ್ನಿಸುತ್ತಿದೆ. ನನ್ನಿಂದ ಏನು ಸಹಾಯಬೇಕೋ ಅದನ್ನು ಮಾಡುತ್ತೇನೆ. ದಯವಿಟ್ಟು ಸತ್ಯವನ್ನು ಆದಷ್ಟು ಬೇಗ ಅನ್ವೇಷಿಸಿ ಎಂದು ಟ್ವಿಟರ್ನಲ್ಲಿ ಪರಿಣಿತಿ ಚೋಪ್ರಾ ಜೊಮ್ಯಾಟೊ ಇಂಡಿಯಾಕ್ಕೆ ಒತ್ತಾಯಿಸಿದ್ದಾರೆ. ಹಾಗೇ, ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಡೆಲಿವರಿ ಬಾಯ್ ಕಾಮರಾಜು ಫೋಟೋವನ್ನೂ ಅಪ್ಲೋಡ್ ಮಾಡಿಕೊಂಡಿರುವ ಪರಿಣಿತಿ, ದಯವಿಟ್ಟು ಆದಷ್ಟು ಬೇಗ ಸತ್ಯ ತಿಳಿಸಿ, ಈ ವ್ಯಕ್ತಿ ಯಾವುದೇ ಕಾರಣವಿಲ್ಲದೆ ಶಿಕ್ಷೆ ಅನುಭವಿಸಿದ್ದರೆ, ಅದೇ ನೋವನ್ನು ಆ ಮಹಿಳೆಯೂ ಅನುಭವಿಸಬೇಕು ಎಂದು ಸ್ವಲ್ಪ ಕಠಿಣವಾಗಿಯೇ ಬರೆದುಕೊಂಡಿದ್ದಾರೆ.
Zomato India – PLEASE find and publicly report the truth.. If the gentleman is innocent (and I believe he is), PLEASE help us penalise the woman in question. This is inhuman, shameful and heartbreaking .. Please let me know how I can help.. #ZomatoDeliveryGuy @zomato @zomatoin
— Parineeti Chopra (@ParineetiChopra) March 14, 2021
ಹಿತೇಶಾ ಚಂದ್ರಾಣಿ ವಿಡಿಯೋ ಮೂಲಕ ತಮ್ಮ ಮೂಗಿನ ಮೇಲೆ ಆದ ಗಾಯವನ್ನು ತೋರಿಸಿ, ಇದನ್ನು ಜೊಮ್ಯಾಟೊ ಫುಡ್ ಡೆಲಿವರಿ ಬಾಯ್ ಮಾಡಿದ್ದು ಎಂದು ಹೇಳುತ್ತಿದ್ದಂತೆ ಆತನನ್ನು ತಾತ್ಕಾಲಿಕವಾಗಿ ಅಮಾನತು ಮಾಡಿರುವ ಜೊಮ್ಯಾಟೊ, ಕಾಮರಾಜು ಅವರ ಕಾನೂನು ಹೋರಾಟದ ವೆಚ್ಚವನ್ನು ನಾವೇ ನೋಡಿಕೊಳ್ಳುತ್ತೇವೆ ಎಂದೂ ತಿಳಿಸಿದೆ. ಅಲ್ಲದೆ, ಹಿತೇಶಾ ಮೆಡಿಕಲ್ ಖರ್ಚು ಕೂಡ ನಮ್ಮ ಹೊಣೆ ಎಂದಿದೆ. ಆದರೆ ನಿಜಕ್ಕೂ ಅಂದು ನಡೆದಿದ್ದು ಏನು ಎಂಬುದು ಮಾತ್ರ ಇನ್ನೂ ಸ್ಪಷ್ಟವಾಗುತ್ತಿಲ್ಲ.
ಇದನ್ನೂ ಓದಿ: ಮಹಿಳೆ ಮೇಲೆ ಹಲ್ಲೆಗೈದಿದ್ದ ಜೊಮ್ಯಾಟೊ ಫುಡ್ ಡೆಲಿವರಿ ಬಾಯ್ ಕಾಮರಾಜು ಅರೆಸ್ಟ್
Published On - 12:45 pm, Sun, 14 March 21