ಒಂದು ಪಿಜ್ಜಾದಿಂದ ದೊಡ್ಡ ಎಡವಟ್ಟು ಮಾಡಿಕೊಂಡ ಅಮೆರಿಕನ್​ ರೆಸ್ಟೋರೆಂಟ್​; 1 ಕೋಟಿ ರೂ.ಪರಿಹಾರ ಬೇಕೆಂದು ಕೋರ್ಟ್ ಮೆಟ್ಟಿಲೇರಿದ ಮಹಿಳೆ

ಇನ್ನು ದೀಪಾಲಿಯವರು, ಅಮೆರಿಕ್​ ರೆಸ್ಟೋರೆಂಟ್​ ತಮಗೆ ಪ್ರತಿಕ್ರಿಯಿಸಿದ ವಿಧಾನದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೊಂದು ದೊಡ್ಡ ವಿಷಯವೇ ಅಲ್ಲ ಎಂಬಂತೆ ಮಾತನಾಡಿದ್ದಾರೆ ಎಂದೂ ದೀಪಾಲಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಒಂದು ಪಿಜ್ಜಾದಿಂದ ದೊಡ್ಡ ಎಡವಟ್ಟು ಮಾಡಿಕೊಂಡ ಅಮೆರಿಕನ್​ ರೆಸ್ಟೋರೆಂಟ್​; 1 ಕೋಟಿ ರೂ.ಪರಿಹಾರ ಬೇಕೆಂದು ಕೋರ್ಟ್ ಮೆಟ್ಟಿಲೇರಿದ ಮಹಿಳೆ
ಪಿಜ್ಜಾ
Follow us
Lakshmi Hegde
|

Updated on:Mar 14, 2021 | 11:48 AM

ದೆಹಲಿ: ಉತ್ತರಪ್ರದೇಶದ ಘಾಜಿಯಾಬಾದ್​ನ ಮಹಿಳೆಯೊಬ್ಬರು ಅಮೆರಿಕನ್ ಪಿಜ್ಜಾ​ ರೆಸ್ಟೋರೆಂಟ್ ವಿರುದ್ಧ ಗ್ರಾಹಕರ ಕೋರ್ಟ್​ ಮೆಟ್ಟಿಲೇರಿದ್ದು, 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ಅಮೆರಿಕನ್​ ರೆಸ್ಟೋರೆಂಟ್​ ನನ್ನ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. ಅದರ ತಪ್ಪಿನಿಂದಾಗಿ ನಾನು ಪಾಪ ಮಾಡಿದಂತಾಯ್ತು. ಇದೀಗ ನನ್ನ ಪಾಪ ತೊಳೆದುಕೊಳ್ಳಲು ಕಠಿಣ ಪೂಜೆ ಮಾಡಬೇಕು.. ಅದು ದುಬಾರಿಯೂ ಹೌದು ಎಂದು ಮಹಿಳೆ ಕೋರ್ಟ್​ಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಮಹಿಳೆಯ ಹೆಸರು ದೀಪಾಲಿ ತ್ಯಾಗಿ. ನಾನು ಸಸ್ಯಾಹಾರಿ.. ಅಮೆರಿಕನ್​ ರೆಸ್ಟೋರೆಂಟ್​ನಿಂದ ಪಿಜ್ಜಾ ಆರ್ಡರ್​ ಮಾಡಿದ್ದೆ. ಆದರೆ ಅವರು ನಾನ್​ವೆಜ್​ ಪಿಜ್ಜಾ ಕಳಿಸಿದ್ದರು. ನಾನು ಗೊತ್ತಾಗದೆ ಒಂದು ಚೂರು ತಿಂದುಬಿಟ್ಟೆ. ನನಗೆ ಮಾಂಸ ತಿನ್ನಲು ಯಾವತ್ತೂ ಮನಸು ಒಪ್ಪುವುದಿಲ್ಲ. ನಮ್ಮ ಧಾರ್ಮಿಕ ನಂಬಿಕೆಗಳು, ಕುಟುಂಬ ಸಂಪ್ರದಾಯದಂತೆ ಯಾವ ಕಾರಣಕ್ಕೂ ಮಾಂಸಾಹಾರ ಮುಟ್ಟುವುದಿಲ್ಲ. ನನ್ನ ಆಯ್ಕೆ ಯಾವತ್ತೂ ನಾನ್​ವೆಜ್​ ಅಲ್ಲವೇ ಅಲ್ಲ ಎಂದೂ ಗ್ರಾಹಕರ ಕೋರ್ಟ್​ಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದಾರೆ.

ಘಟನೆಯ ವಿವರ 2019ರ ಮಾರ್ಚ್​ 21ರಂದು ಹೋಳಿ ಹಬ್ಬವಿತ್ತು. ಅಂದು ಹಬ್ಬದ ಆಚರಣೆಯ ಬಳಿಕ ನನಗೆ, ನನ್ನ ಮಕ್ಕಳಿಗೆ ತುಂಬ ಹಸಿವಾಯಿತು. ಹಾಗಾಗಿ ಈ ಅಮೆರಿಕನ್​ ರೆಸ್ಟೋರೆಂಟ್​​ನಿಂದ ವೆಜ್​ ಪಿಜ್ಜಾ ತರಿಸಲು ನಿಶ್ಚಯಮಾಡಿದೆವು. ಅದರಂತೆ ಆರ್ಡರ್​ ಕೂಡ ಮಾಡಿದ್ದೇವೆ. ಅಂದು ಪಿಜ್ಜಾ ಡೆಲಿವರಿ ಆಗಬೇಕಾದ ನಿಗದಿತ ಸಮಯಕ್ಕಿಂತ ಅರ್ಧಗಂಟೆ ತಡವಾಗಿಯೇ ಮನೆಗೆ ಬಂತು. ಕಂಪನಿ ಕೊಟ್ಟ ಸಮಯಕ್ಕಿಂತ ಅರ್ಧಗಂಟೆ ನಂತರ ಡೆಲಿವರಿ ಬಾಯ್​ ಬಂದರೂ ನಾನು ಅದನ್ನು ದೊಡ್ಡ ವಿಷಯ ಮಾಡಲಿಲ್ಲ. ಆದರೆ ಪಿಜ್ಜಾ ಒಂದು ಚೂರು ತಿನ್ನುತ್ತಿದ್ದಂತೆ ಅದು ನಾನ್​ವೆಜ್​ ಎಂಬುದು ಗೊತ್ತಾಯಿತು. ನಾವು ಮಶ್ರೂಮ್​ ಪಿಜ್ಜಾ ಆರ್ಡರ್ ಮಾಡಿದ್ದರೆ, ಅದರ ಬದಲು ಮಾಂಸವನ್ನು ಹಾಕಲಾಗಿತ್ತು ಎಂದು ಕೋರ್ಟ್​ಗೆ ನೀಡಿದ ದೂರಿನಲ್ಲಿ ದೀಪಾಲಿ ವಿವರಿಸಿದ್ದಾರೆ.

ಗ್ರಾಹಕರ ಕೋರ್ಟ್​​ನಲ್ಲಿ ದೀಪಾಲಿ ಪರ ವಕೀಲರಾದ ಪರ್ಹತ್​ ವಾರ್ಸಿ ವಾದಿಸುತ್ತಿದ್ದಾರೆ. ದೀಪಾಲಿಯವರು ಪಿಜ್ಜಾ ತಿನ್ನುತ್ತಿದ್ದಂತೆ ಅದು ನಾನ್​ವೆಜ್​ ಎಂಬುದು ಅವರ ಅರಿವಿಗೆ ಬಂತು. ಕೂಡಲೇ ಅವರು ಕಸ್ಟಮರ್​ ಕೇರ್​​ಗೆ ಕರೆ ಮಾಡಿ, ದೂರು ನೀಡಿದರು. ಸಸ್ಯಾಹಾರ ಮಾತ್ರ ತಿನ್ನುವ ನಾವು, ಅದನ್ನೇ ಆರ್ಡರ್​ ಮಾಡಿದಾಗ್ಯೂ.. ನಮಗೆ ನಾನ್​ವೆಜ್​ ಪಿಜ್ಜಾ ನೀಡಿದ್ದಾರೆ ಎಂದು ಕಸ್ಟಮರ್​ ಕೇರ್​ಗೆ ತಿಳಿಸಿದರು. ಅದಾದ ಬಳಿಕ ಮಾರ್ಚ್​ 29ರಂದು, ಅಮೆರಿಕನ್​ ರೆಸ್ಟೋರೆಂಟ್​ನ ಜಿಲ್ಲಾ ಮ್ಯಾನೇಜರ್​ ಎಂದು ಹೇಳಿಕೊಂಡು ಒಬ್ಬರು ದೀಪಾಲಿಯವರಿಗೆ ಕರೆ ಮಾಡಿದ್ದರು. ಅಲ್ಲದೆ, ತಮ್ಮಿಂದಾದ ತಪ್ಪನ್ನು ನಿಮಗೆ ಉಚಿತವಾಗಿ ಪಿಜ್ಜಾ ನೀಡುವ ಮೂಲಕ ಸರಿಪಡಿಸಿಕೊಳ್ಳುತ್ತೇವೆ ಎಂದೂ ಆಫರ್​ ನೀಡಿದರು. ಆದರೆ ದೀಪಾಲಿ ಒಪ್ಪಲಿಲ್ಲ. ಇದು ನೀವಂದುಕೊಂಡಷ್ಟು ಸರಳವಲ್ಲ ಎಂದೂ ಆ ಮ್ಯಾನೇಜರ್​ಗೆ ಹೇಳಿದರು ಎಂದು ಪರ್ಹತ್​ ವಾರ್ಸಿ ಕೋರ್ಟ್​ಗೆ ತಿಳಿಸಿದ್ದಾರೆ.

ಅಷ್ಟೇ ಅಲ್ಲ, ಇದು ಧಾರ್ಮಿಕ ಭಾವನೆಗೆ ಧಕ್ಕೆ ತಂದ ವಿಚಾರ. ನಾನ್​ವೆಜ್​ ಪಿಜ್ಜಾ ತಿಂದಿದ್ದರಿಂದ ನನ್ನ ಮನಸಲ್ಲಿ ಪಾಪ ಪ್ರಜ್ಞೆ ಕಾಡತೊಡಗಿದೆ. ಇದರಿಂದ ಹೊರಬರುವುದು ಅಷ್ಟು ಸುಲಭವಲ್ಲ. ನಾವು ಆಚರಿಸಿಕೊಂಡು ಬಂದ ಸಂಪ್ರದಾಯ ಹಾಳಾಯಿತು. ನಾನಿದನ್ನು ಸರಿಪಡಿಸಿಕೊಳ್ಳಲು ಕೆಲವು ಕಠಿಣ, ದುಬಾರಿ ವೆಚ್ಚದ ಧಾರ್ಮಿಕ ಆಚರಣೆಗಳನ್ನು ಮಾಡಬೇಕಾಗುತ್ತದೆ. ಲಕ್ಷಾಂತರ ರೂಪಾಯಿ ಬೇಕಾಗುತ್ತದೆ. ನೀವು ಆ ವೆಚ್ಚವನ್ನೂ ಕೊಡಬೇಕಾಗುತ್ತದೆ ಎಂದು ಅಮೆರಿಕನ್​ ರೆಸ್ಟೋರೆಂಟ್​ ಜಿಲ್ಲಾ ಮ್ಯಾನೇಜರ್​ಗೆ ದೀಪಾಲಿ ತಿಳಿಸಿದ್ದಾರೆ. ಅದಕ್ಕೆ ಪ್ರತ್ಯುತ್ತರ ನೀಡಿದ ಅವರು, ನನಗೆ ಹಣಕಾಸಿನ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಅಧಿಕಾರವಿಲ್ಲ. ನಾನು ಈ ಪ್ರಕರಣವನ್ನು ನಮ್ಮ ಲೀಗಲ್​ ತಂಡಕ್ಕೆ ವರ್ಗಾಯಿಸುತ್ತೇನೆ ಎಂದು ಹೇಳಿದ್ದಾರೆ ಎಂದೂ ವಕೀಲರು ತಿಳಿಸಿದ್ದಾರೆ.

ಇನ್ನು ದೀಪಾಲಿಯವರೂ ಸಹ ಅಮೆರಿಕ್​ ರೆಸ್ಟೋರೆಂಟ್​ ತಮಗೆ ಪ್ರತಿಕ್ರಿಯಿಸಿದ ವಿಧಾನದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೊಂದು ದೊಡ್ಡ ವಿಷಯವೇ ಅಲ್ಲ ಎಂಬಂತೆ ಮಾತನಾಡಿದ್ದಾರೆ ಎಂದೂ ದೀಪಾಲಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ತಮ್ಮ ಮಾನಸಿಕ ಹಿಂಸೆಗೆ ಕಾರಣವಾದ ಅಮೆರಿಕ್​ ರೆಸ್ಟೋರೆಂಟ್​ ವಿರುದ್ಧ ಕ್ರಮ ಕೈಗೊಳ್ಳಬೇಕು. ತಮಗೆ 1 ಕೋಟಿ ರೂ.ಪರಿಹಾರ ಕೊಡಿಸಬೇಕು ಎಂದು ಗ್ರಾಹಕರ ನ್ಯಾಯಾಲಯಕ್ಕೆ ದೀಪಾಲಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ದೆಹಲಿ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗ ಪಿಜ್ಜಾ ರೆಸ್ಟೋರೆಂಟ್​ಗೆ ಸೂಚನೆ ನೀಡಿದ್ದು, ಮುಂದಿನ ವಿಚಾರಣೆಯನ್ನು ಮಾರ್ಚ್​ 17ರಂದು ನಡೆಸುವುದಾಗಿ ತಿಳಿಸಿದೆ.

ಇದನ್ನೂ ಓದಿ: ಮಹಿಳೆ ಮೇಲೆ ಹಲ್ಲೆಗೈದಿದ್ದ ಜೊಮ್ಯಾಟೊ ಫುಡ್ ಡೆಲಿವರಿ ಬಾಯ್ ಕಾಮರಾಜು ಅರೆಸ್ಟ್​

Viral Video: ಅಡ್ಡಾದಿಡ್ಡಿ ಸ್ಕೂಟರ್​​ ಓಡಿಸಿದ ಯುವತಿ.. ಪ್ರಶ್ನಿಸಿದವನಿಗೆ ಧಮ್ಕಿ ಹಾಕಿ, ಮಧ್ಯ ಬೆರಳು ತೋರಿಸಿ ಪರಾರಿ!

Published On - 11:46 am, Sun, 14 March 21