Viral Video: ಅಡ್ಡಾದಿಡ್ಡಿ ಸ್ಕೂಟರ್ ಓಡಿಸಿದ ಯುವತಿ.. ಪ್ರಶ್ನಿಸಿದವನಿಗೆ ಧಮ್ಕಿ ಹಾಕಿ, ಮಧ್ಯ ಬೆರಳು ತೋರಿಸಿ ಪರಾರಿ!
ಯುವಕ-ಯುವತಿಯರ ಗಲಾಟೆಯಲ್ಲಿ ಮಹಿಳೆಯರ ತಪ್ಪಿದ್ದರೂ ಅದರಿಂದ ಪುರುಷರೇ ಅವಮಾನ, ಶಿಕ್ಷೆ ಅನುಭವಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಮಹಿಳೆಯರ ಮೇಲೆ ಪುರುಷರು ಬಲ ಪ್ರಯೋಗ ಮಾಡುತ್ತಾರೆ ಎಂಬ ಅಭಿಪ್ರಾಯಗಳೂ ಇದೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗುತ್ತಿರುವ ಈ ರೀತಿಯ ವಿಡಿಯೋ ಮತ್ತು ವಾದಗಳಿಗೆ ಹೊಸ ಸೇರ್ಪಡೆ ಇಲ್ಲಿದೆ.
ಜೊಮ್ಯಾಟೊ ಡೆಲಿವರಿ ಬಾಯ್ ಹಾಗೂ ಓರ್ವ ಯುವತಿಯ ನಡುವೆ ನಡೆದ ವಾಗ್ವಾದ, ಜಗಳ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಈ ಪ್ರಕರಣದಲ್ಲಿ ಜೊಮ್ಯಾಟೊ ಡೆಲಿವರಿ ಬಾಯ್ನದ್ದೇ ತಪ್ಪು ಎಂದು ಆರಂಭದಲ್ಲಿ ಬಿಂಬಿಸಲಾಗಿತ್ತು. ನಂತರ ಈ ಪ್ರಕರಣದ ಅಸಲಿ ವಿಚಾರ ಬಯಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಇಂಥದ್ದೇ ಮತ್ತೊಂದು ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯುವಕ-ಯುವತಿ ನಡುವೆ ಗಲಾಟೆ ನಡೆದರೆ ಅದರಲ್ಲಿ ಪುರುಷರದ್ದೇ ತಪ್ಪಿದೆ ಎಂದು ಬಿಂಬಿಸುವ ಕೆಲಸ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಇತ್ತೀಚೆಗೆ ನಡೆದ ಘಟನೆ ಹೊಸ ಸಾಕ್ಷಿ.
ನಡೆದ ಘಟನೆ ಏನು? ಯುವಕನೋರ್ವ ಬೈಕ್ನಲ್ಲಿ ಮುಖ್ಯ ಮಾರ್ಗದಲ್ಲಿ ಚಲಿಸುತ್ತಿದ್ದ. ಈ ವೇಳೆ ಯುವತಿಯೊಬ್ಬಳು ಅಡ್ಡ ಮಾರ್ಗದಲ್ಲಿ ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಾ ಬೈಕ್ನಲ್ಲಿ ಅಡ್ಡಾದಿಡ್ಡಿ ಬಂದಿದ್ದಳು. ಆಕೆಯ ಸ್ಕೂಟರ್ ಚಲಾಯಿಸುವ ರೀತಿಯನ್ನು ನೋಡಿ ಬೈಕ್ ಸವಾರ ಅವಳನ್ನು ಪ್ರಶ್ನೆ ಮಾಡಿದ್ದ. ಮೊಬೈಲ್ ಮಾತನಾಡುತ್ತಾ ಹೀಗೆ ಅಡ್ಡಾದಿಡ್ಡಿ ಬಂದರೆ ಹೇಗೆ ಎಂದು ಕೇಳಿದ್ದ. ಅದಕ್ಕೆ ಆಕೆ ಮಧ್ಯ ಬೆರಳು ತೋರಿಸಿ ಧಿಮಾಕು ತೋರಿದ್ದಳು. ಆಕೆಯ ನಡೆಯನ್ನು ನೋಡಿ ಯುವಕ ಸಿಟ್ಟಾಗಿದ್ದಾನೆ. ಏನ್ ಮೇಡಂ ಹೆಲ್ಮೆಟ್ ಧರಿಸಿಲ್ಲ. ಮೊಬೈಲ್ನಲ್ಲಿ ಮಾತನಾಡುತ್ತಾ ಬಂದಿದ್ದೀರಿ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಮಧ್ಯ ಬೆರಳು ತೋರಿಸಿ ನನಗೇ ಅವಮಾನ ಮಾಡಿದ್ದೀರಿ ಎಂದು ಕೇಳಿದ್ದಾನೆ. ಈ ವಾಗ್ವಾದ ಸ್ವಲ್ಪ ಜೋರಾದಾಗ ಸುತ್ತಮುತ್ತಲಿನ ಜನರು ಅಲ್ಲಿ ಬಂದು ಸೇರಿದ್ದಾರೆ. ನಿನ್ನ ಬಳಿ ಲೈಸೆನ್ಸ್ ಇದೆಯಾ ಹುಡುಗಿಯನ್ನು ಕೇಳಿದ್ದಕ್ಕೆ ಅದನ್ನು ತೋರಿಸೋದಿಲ್ಲ ಎಂದು ಅವಳು ಉತ್ತರಿಸಿದ್ದಾಳೆ.
ನಂತರ ಯುವಕ ಬೈಕ್ನಲ್ಲಿ ಮುಂದೆ ಹೋಗಿದ್ದಾನೆ. ಆಗ ಮತ್ತೆ ವಾಗ್ವಾದಕ್ಕೆ ಬಂದ ಆ ಯುವತಿ ಪೊಲೀಸ್ ಸ್ಟೇಷನ್ಗೆ ನಿಮ್ಮ ಮೇಲೆ ದೂರು ನೀಡುತ್ತೇನೆ. ನನಗೆ ನೀವು ಅವಮಾನ ಮಾಡಿದ್ದೀರಿ ಎಂದಿದ್ದಾಳೆ. ಆಯ್ತು ಬನ್ನಿ ಹೋಗೋಣ ನನ್ನ ಬಳಿ ಪ್ರೂಪ್ ಇದೆ ಎಂದಾಗ ಆಕೆಗೆ ಭಯವಾಗಿದೆ. ನಂತರ ನನಗೆ ಸಮಯವಿಲ್ಲ ಎಂದು ಸ್ಥಳದಿಂದ ಕಾಲ್ಕಿತ್ತಿದ್ದಾಳೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಘಟನೆ ನಡೆದಿದ್ದು ಎಲ್ಲಿ ಎನ್ನುವ ವಿಚಾರ ಇನ್ನೂ ತಿಳಿದು ಬಂದಿಲ್ಲ.
View this post on Instagram
ಜೊಮ್ಯಾಟೊ ಪ್ರಕರಣದಲ್ಲಿ ನಡೆದಿದ್ದೇನು? ಹಿತೇಶಾ ಚಂದ್ರಾಣಿ ಎಂಬ ಯುವತಿ ಒಂಟಿಯಾಗಿ ಮನೆಯಲ್ಲಿ ನೆಲೆಸಿದ್ದು, ಮಧ್ಯಾಹ್ನ ಹಸಿವಾದಾಗ 3.30ರ ಸುಮಾರಿಗೆ ಜೊಮ್ಯಾಟೋ ಆ್ಯಪ್ ಮೂಲಕ ಊಟ ತರಿಸಿಕೊಳ್ಳಲು ಬುಕ್ಕಿಂಗ್ ಮಾಡಿದ್ದಾರೆ. ಆ್ಯಪ್ ಲೆಕ್ಕಾಚಾರದ ಪ್ರಕಾರ 4.30ರ ಒಳಗಾಗಿ ಊಟ ತಲುಪಬೇಕಿತ್ತು. ಆದರೆ, ನಿಗದಿತ ಸಮಯಕ್ಕೆ ಆಹಾರ ಬಾರದಿದ್ದಾಗ ಯುವತಿ ಗ್ರಾಹಕ ಸೇವಾ ಕೇಂದ್ರದ ಸಿಬ್ಬಂದಿಗೆ ಕರೆ ಮಾಡಿ ಸಮಸ್ಯೆಯ ಬಗ್ಗೆ ಹೇಳಿಕೊಂಡು, ತಡವಾಗುತ್ತಿರುವ ಕಾರಣ ಆರ್ಡರ್ ಕ್ಯಾನ್ಸಲ್ ಮಾಡಬಹುದಾ ಎಂದು ಕೇಳಿದ್ದಾರೆ. ಇದೆಲ್ಲಾ ಆಗುವಾಗ ಡೆಲಿವರಿ ಬಾಯ್ ಮನೆಗೆ ಆಗಮಿಸಿದ್ದಾನೆ. ಮೊದಲೇ ತಡವಾಗಿದ್ದ ಕಾರಣ ಅಸಮಾಧಾನಗೊಂಡ ಯುವತಿ, ಜೊಮ್ಯಾಟೋ ಟೀಂ ಜೊತೆ ಮಾತಾಡಿದ್ದೇನೆ. ಈಗ ನನಗೆ ಯಾವುದೇ ಖರ್ಚಿಲ್ಲದೇ ಊಟ ಕೊಡ್ತೀರಾ? ನಿಮ್ಮ ಕಡೆಯವರಿಂದ ಉತ್ತರ ಬರುವ ತನಕ ಕಾದು ನಿಲ್ಲಲು ಸೂಚಿಸಿದ್ದಾರೆ. ಆದರೆ, ಯುವತಿ ಹೇಳುವ ಪ್ರಕಾರ ಮೊದಲೇ ಸಿಡಿಮಿಡಿ ಎನ್ನುತ್ತಿದ್ದ ಡೆಲಿವರಿ ಬಾಯ್, ಕಾಯಲು ಹೇಳಿದಾಕ್ಷಣ ಬಾಯಿಗೆ ಬಂದಂತೆ ಮಾತನಾಡಿ ನಾನೇನು ನಿಮ್ಮ ಆಳಾ? ಎಂದು ಕೂಗಾಡಿದ್ದಾನೆ. ಭಯಗೊಂಡ ಯುವತಿ ಬಾಗಿಲು ಹಾಕಿಕೊಳ್ಳಲು ಮುಂದಾದಾಗ ಜೋರಾಗಿ ಬಾಗಿಲು ತಳ್ಳಿದಾತ ಸೀದಾ ಒಳನುಗ್ಗಿ ಟೇಬಲ್ಲಿನ ಮೇಲಿಟ್ಟಿದ್ದ ಪೊಟ್ಟಣವನ್ನು ಕಿತ್ತುಕೊಂಡಿದ್ದಲ್ಲದೇ, ಮುಷ್ಠಿಯಿಂದ ಯುವತಿಯ ಮುಖಕ್ಕೆ ಬಲವಾಗಿ ಗುದ್ದಿ ಓಡಿ ಹೋಗಿದ್ದಾನೆ.
ಆದರೆ, ಈ ಬಗ್ಗೆ ಜೊಮ್ಯಾಟೊ ಡೆಲಿವರಿ ಬಾಯ್ ಕಾಮರಾಜ್ ಹುಡುಗಿಯೇ ತನ್ನ ಮೂಗಿಗೆ ತಾಗಿಸಿಕೊಂಡಿದ್ದಾಳೆ. ಅವಳ ಕೈಯ ಉಂಗುರ ತಾಗಿ ರಕ್ತ ಬಂದಿದೆ. ಅವಳೂ ತನ್ನ ಮೇಲೆ ಹೊಡೆಯಲು ಬಂದಿದ್ದಾಳೆ ಎಂದು ಹೇಳಿದ್ದಾನೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಬ್ಬರ ವಿವರಣೆಗಳನ್ನೂ ಕೇಳಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಆಕೆಯ ಉಂಗುರವೇ ಮೂಗಿಗೆ ತಾಗಿ ಗಾಯವಾಗಿದೆ; ನಾನೀಗ ಬಂಧನದಿಂದ ಪಾರಾಗಲು 25 ಸಾವಿರ ರೂ ಖರ್ಚು ಮಾಡಬೇಕು
Published On - 3:52 pm, Sat, 13 March 21