ಬೆಂಗಳೂರು, ಜನವರಿ 06: ಶುಕ್ರವಾರ ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂಗೆ (Visvesvaraya Museum) ಬಾಂಬ್ ಬೆದರಿಕೆ ಇಮೇಲ್ (Bomb Threat Mail) ಬಂದಿತ್ತು. ಈ ಬಾಂಬ್ ಬೆದರಿಕೆ ಮೇಲ್ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಮಾತ್ರವಲ್ಲದೇ ದೇಶದ 20 ಕ್ಕೂ ಹೆಚ್ಚು ಮ್ಯೂಸಿಯಂಗಳಿಗೂ ಬಂದಿದೆ. ವಿಶ್ವೇಶ್ವರಯ್ಯ ಮ್ಯೂಸಿಯಂ, ನೆಹರು ತಾರಾಲಯ ಸೇರಿ ರಾಜ್ಯ ರಾಜಧಾನಿಯ ಮೂರು ಮ್ಯೂಸಿಯಂಗಳಿಗೂ ಕೂಡ ಬಾಂಬ್ ಬೆದರಿಕೆ ಇಮೇಲ್ ಬಂದಿದೆ.
ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿರುವ ವಸ್ತುಸಂಗ್ರಹಾಲಯಗಳಿಗೂ ಬಾಂಬ್ ಬೆದರಿಕೆ ಇಮೇಲ್ ಗಳು ಬಂದಿವೆ. ಮ್ಯೂಸಿಯಂಗಳಿಗೆ ಬಾಂಬ್ ಬೆದರಿಕ ಇಮೇಲ್ ಕಳುಹಿಸಿದ ಆರೋಪಿಗಳ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಲಾಬಾದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯಂ ಮತ್ತು ವರ್ಲಿಯಲ್ಲಿರುವ ನೆಹರು ವಿಜ್ಞಾನ ಕೇಂದ್ರ ಸೇರಿದಂತೆ ಪ್ರಮುಖ ವಸ್ತುಸಂಗ್ರಹಾಲಯಗಳಿಗೆ ಬೆದರಿಕೆ ಇಮೇಲ್ ಬಂದಿದೆ. ಶುಕ್ರವಾರ ಮುಂಜಾನೆ ವಸ್ತುಸಂಗ್ರಹಾಲಯದ ಆಡಳಿತ ಮಂಡಳಿಗೆ ಇಮೇಲ್ ಬಂದಿತ್ತು. ಕೂಡಲೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು.
ಇದನ್ನೂ ಓದಿ: ರಾಜಭವನಕ್ಕೆ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿದ್ಯಾರು? ಅಷ್ಟಕ್ಕೂ ಬಾಂಬ್ ಬೆದರಿಕೆ ಹಾಕಿದ್ಯಾಕೆ? ಇಲ್ಲಿದೆ ಕಾರಣ
ಮ್ಯೂಸಿಯಂ, ವಿಜ್ಞಾನ ಕೇಂದ್ರ ಮತ್ತು ಬೈಕುಲ್ಲಾ ಮೃಗಾಲಯ ಸೇರಿದಂತೆ ಮುಂಬೈನ ಎಂಟಕ್ಕೂ ಹೆಚ್ಚು ಸ್ಥಳಗಳಲ್ಲಿ ಬಾಂಬ್‌ಗಳನ್ನು ಇರಿಸಲಾಗಿದೆ ಎಂದು ಇಮೇಲ್ನಲ್ಲಿ ಬರೆಯಲಾಗಿದೆ. ಮತ್ತು ಪ್ರತಿಯೊಂದು ಕಚೇರಿಗೂ ಪ್ರತ್ಯೇಕ ಇಮೇಲ್‌ಗಳನ್ನು ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮ್ಯೂಸಿಯಂ ಆಡಳಿತವು ನೀಡಿದ ದೂರಿನ ಆಧಾರದ ಮೇಲೆ, ಕೊಲಾಬಾ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 505 (1) (ಬಿ), 506 (2), 182 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಕೋಲ್ಕತ್ತಾದ ಇಂಡಿಯನ್ ಮ್ಯೂಸಿಯಂಗೂ ಬಾಂಬ್ ಬೆದರಿಕೆ ಮೇಲ್ ಬಂದಿತ್ತು. ಮ್ಯೂಸಿಯಂ ಸಿಬ್ಬಂದಿ ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮ್ಯೂಸಿಯಂ ಒಳಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿದರು.
“ಭಾರತೀಯ ವಸ್ತುಸಂಗ್ರಹಾಲಯದಲ್ಲಿ ಹಲವಾರು ಬಾಂಬ್‌ಗಳನ್ನು ಇರಿಸಲಾಗಿದೆ ಮತ್ತು ಅವು ಯಾವುದೇ ಕ್ಷಣದಲ್ಲಿ ಸ್ಫೋಟಗೊಳ್ಳುತ್ತವೆ” ಎಂದು ಬೆದರಿಕೆ ಮೇಲ್‌ನಲ್ಲಿ ಬರೆಯಲಾಗಿತ್ತು. ಕೂಡಲೆ ಶ್ವಾನ ದಳ, ಬಾಂಬ್ ಸ್ಕ್ವಾಡ್ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಸ್ಪೋಟಕ ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾವು ಕಟ್ಟಡದಲ್ಲಿ ಸಂಪೂರ್ಣವಾಗಿ ಹುಡುಕಾಟ ನಡೆಸಿದೆವು. ಆದರೆ ಯಾವುದೇ ಬಾಂಬ್ ಪತ್ತೆಯಾಗಿಲ್ಲಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪೊಲೀಸರ ಸೈಬರ್ ವಿಭಾಗವು ಇಮೇಲ್‌ನ ಮೂಲವನ್ನು ಪತ್ತೆಹಚ್ಚಲು ತನಿಖೆಯನ್ನು ಪ್ರಾರಂಭಿಸಿದೆ.
ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಮ್ಯೂಸಿಯಂನಲ್ಲಿ ಹಲವು ಸ್ಪೋಟಕಗಳನ್ನ ಬಚ್ಚಿಡಲಾಗಿದೆ, ಬೆಳಗ್ಗೆ ಎಲ್ಲವೂ ಸ್ಪೋಟಗೊಳ್ಳುತ್ತವೆ ಎಂದು‘Morgue999lol’ ಎಂಬ ಐಡಿ ಮೂಲಕ ಮೇಲ್ ಮಾಡಿ, ಜೊತೆಗೆ ಉಗ್ರ ಸಂಘಟೆನಯೊಂದರ (Terrorizers 111) ಹೆಸರನ್ನು ದುಷ್ಕರ್ಮಿಗಳು ಉಲ್ಲೇಖಿಸಿ ಬೆದರಿಕೆ ಹಾಕಿದ್ದರು.
ವಿಜಯಪುರದ ಗೋಳಗುಮ್ಮಟ ಆವರಣದಲ್ಲಿರುವ ಭಾರತೀಯ ಪುರಾತತ್ವ ಇಲಾಖೆಯ ಮ್ಯೂಸಿಯಂಗೂ ಬಾಂಬ್ ಬೆದರಿಕೆ ಕರೆ ಬಂದಿದೆ. morgue999lol ನಿಂದ ಇಮೇಲ್ ಬಂದಿದೆ. ಮ್ಯೂಸಿಯಂಗಳಲ್ಲಿ ಬಹು ಸ್ಪೋಟಕಗಳನ್ನು ಕಾಣದಂತೆ ಇಟ್ಟಿದ್ದೇವೆ. ಮುಂಜಾನೆ ವೇಳೆ ಅವು ಸ್ಟೋಟಗೊಂಡು ಒಳಗಿದ್ದವರೆಲ್ಲಾ ಮೃತರಾಗುತ್ತಾರೆ. ನಾವು Terrozers111 ಗ್ರೂಪ್ನವರು. ನಮ್ಮ ಗ್ರೂಪ್ನ ಹೆಸರನ್ನು ಮಾದ್ಯಮಕ್ಕೆ ನೀಡಿದರೂ ನನ್ನ ಕೃತ್ಯ ನಿಲ್ಲದು ಎಂದು ಮೇಲ್‌ನಲ್ಲಿ ದುಷ್ಕರ್ಮಿಗಳು ಉಲ್ಲೇಖಿಸಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಬಾಂಬ್ ನಿಷ್ಕ್ರೀಯ ದಳ ತಪಾಸಣೆ ನಡೆಸಿದರು. ಈ ವೇಳೆ ಯಾವುದೇ ಸ್ಪೋಟಕ ಪತ್ತೆಯಾಗಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:42 am, Sat, 6 January 24