Bomb Threat: ಗೋವಾಗೆ ಬರುತ್ತಿದ್ದ ವಿಮಾನಕ್ಕೆ ಬಾಂಬ್ ದಾಳಿ ಬೆದರಿಕೆ; ತಿಂಗಳಲ್ಲಿ ಎರಡನೇ ಪ್ರಕರಣ

|

Updated on: Jan 21, 2023 | 11:50 AM

ಗೋವಾ ವಿಮಾನ ನಿಲ್ದಾಣ ನಿರ್ದೇಶಕರಿಗೆ ಇ-ಮೇಲ್ ಮೂಲಕ ಬಾಂಬ್ ದಾಳಿ ಬೆದರಿಕೆ ಸಂದೇಶ ಬಂದಿತ್ತು. ತಕ್ಷಣವೇ 247 ಪ್ರಯಾಣಿಕರನ್ನು ಒಳಗೊಂಡ ‘ದಿ ಅಜುರ್ ಆರ್’ ವಿಮಾನವನ್ನು ಉಜ್ಬೇಕಿಸ್ತಾನ ವಿಮಾನ ನಿಲ್ದಾಣದತ್ತ ಕಳುಹಿಸಲಾಯಿತು ಎಂದು ಮೂಲಗಳು ತಿಳಿಸಿವೆ.

Bomb Threat: ಗೋವಾಗೆ ಬರುತ್ತಿದ್ದ ವಿಮಾನಕ್ಕೆ ಬಾಂಬ್ ದಾಳಿ ಬೆದರಿಕೆ; ತಿಂಗಳಲ್ಲಿ ಎರಡನೇ ಪ್ರಕರಣ
ಸಾಂದರ್ಭಿಕ ಚಿತ್ರ
Follow us on

ಪಣಜಿ: ರಷ್ಯಾದ ಮಾಸ್ಕೋದಿಂದ (Mascow) ಗೋವಾಗೆ (Goa) ಬರುತ್ತಿದ್ದ ವಿಮಾನಕ್ಕೆ ಬಾಂಬ್ ದಾಳಿ ಬೆದರಿಕೆಯೊಡ್ಡಲಾಗಿದ್ದು (Bomb Threat), ಉಜ್ಬೇಕಿಸ್ತಾನ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲು ಸೂಚಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವಿವಿಧ ಮಾಧ್ಯಮಗಳು ವರದಿ ಮಾಡಿವೆ. ಗೋವಾ ವಿಮಾನ ನಿಲ್ದಾಣ ನಿರ್ದೇಶಕರಿಗೆ ಇ-ಮೇಲ್ ಮೂಲಕ ಬಾಂಬ್ ದಾಳಿ ಬೆದರಿಕೆ ಸಂದೇಶ ಬಂದಿತ್ತು. ತಕ್ಷಣವೇ 247 ಪ್ರಯಾಣಿಕರನ್ನು ಒಳಗೊಂಡ ‘ದಿ ಅಜುರ್ ಏರ್’ ವಿಮಾನವನ್ನು ಉಜ್ಬೇಕಿಸ್ತಾನ ವಿಮಾನ ನಿಲ್ದಾಣದತ್ತ ಕಳುಹಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಮಾಸ್ಕೋದಿಂದ ಗೋವಾಗೆ ಆಗಮಿಸುವ ವಿಮಾನಗಳಿಗೆ ಬಾಂಬ್ ದಾಳಿ ಬೆದರಿಕೆ ಬರುತ್ತಿರುವುದು ಇದು ತಿಂಗಳಲ್ಲಿ ಎರಡನೇ ಪ್ರಕರಣವಾಗಿದೆ. ‘ದಿ ಅಜುರ್ ಏರ್’ ವಿಮಾನ ನಿಗದಿಯಂತೆ ಮುಂಜಾವ 4.15ಕ್ಕೆ ಗೋವಾದ ದಾಬೋಲಿಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಬೇಕಿತ್ತು. ಆದರೆ, ಭಾರತದ ವಾಯು ಗಡಿ ಪ್ರವೇಶಿಸುವುದಕ್ಕೂ ಮುನ್ನ ಬಾಂಬ್ ಬೆದರಿಕೆ ಸಂದೇಶ ಬಂದಿರುವುದು ಗೊತ್ತಾಯಿತು. ಹೀಗಾಗಿ ಉಜ್ಬೇಕಿಸ್ತಾನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಯಿತು.

ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂಬ ಸಂದೇಶವುಳ್ಳ ಇ-ಮೇಲ್ ದಾಬೋಲಿಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕರಿಗೆ ತಡರಾತ್ರಿ ಸುಮಾರು 12.30ಕ್ಕೆ ಬಂದಿದೆ. ತಕ್ಷಣವೇ ವಿಮಾನದ ತುರ್ತು ಲ್ಯಾಂಡಿಂಗ್​ಗೆ ಸೂಚನೆ ಕಳುಹಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Moscow-Goa flight: ಬಾಂಬ್ ಬೆದರಿಕೆ ಕರೆ ಹಿನ್ನೆಲೆ ತುರ್ತು ಭೂಸ್ಪರ್ಶ ಮಾಡಿದ ಮಾಸ್ಕೋ-ಗೋವಾ ಅಂತಾರಾಷ್ಟ್ರೀಯ ವಿಮಾನ

236 ಪ್ರಯಾಣಿಕರೊಂದಿಗೆ ಮಾಸ್ಕೊದಿಂದ ಗೋವಾಕ್ಕೆ ಬರುತ್ತಿದ್ದ ‘ದಿ ಅಜುರ್ ಏರ್’ ವಿಮಾನಕ್ಕೆ ಜನವರಿ 10ರಂದು ಬಾಂಬ್ ಬೆದರಿಕೆ ಕರೆ ಬಂದಿತ್ತು. ಗೋವಾ ಎಟಿಸಿಗೆ ಕರೆ ಮಾಡಿದ್ದ ದುಷ್ಕರ್ಮಿಗಳು ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಹೇಳಿದ್ದರು. ವಿಮಾನವನ್ನು ಜಾಮ್‌ನಗರದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿತ್ತು. ಮಾಸ್ಕೋದಿಂದ ಗೋವಾಕ್ಕೆ ತೆರಳುತ್ತಿದ್ದ ‘ದಿ ಅಜುರ್ ಏರ್’ ವಿಮಾನಕ್ಕೆ ಬಾಂಬ್ ದಾಳಿ ಭೀತಿಯ ಬಗ್ಗೆ ಭಾರತೀಯ ಅಧಿಕಾರಿಗಳು ರಾಯಭಾರ ಕಚೇರಿಯನ್ನು ಎಚ್ಚರಿಸಿದ್ದಾರೆ ಎಂದು ದೆಹಲಿಯಲ್ಲಿರುವ ರಷ್ಯಾದ ರಾಯಭಾರಿ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದರು. ಇದರ ಬೆನ್ನಲ್ಲೇ, ಗೋವಾ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ದಾಬೋಲಿಮ್ ವಿಮಾನ ನಿಲ್ದಾಣ ಮತ್ತು ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಿದ್ದರು. ವಿಮಾನ ನಿಲ್ದಾಣದಲ್ಲಿ ಎಲ್ಲಾ ತುರ್ತು ಸೇವೆಗಳನ್ನು ಸ್ಟ್ಯಾಂಡ್‌ಬೈನಲ್ಲಿ ಇರಿಸಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಈ ಎಲ್ಲ ಘಟನೆಗಳ ಬೆನ್ನಲ್ಲೇ ಮತ್ತೊಂದು ವಿಮಾನಕ್ಕೆ ಬಾಂಬ್ ಬೆದರಿಕೆ ಒಡ್ಡಲಾಗಿದೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:34 am, Sat, 21 January 23