ಮುಂಬೈ: ಹನ್ಸ್ ಗ್ರೂಪ್ ನೌಕರರನ್ನು ಪ್ರತಿದಿನ ಕೋರ್ಟ್ಗೆ ಕರೆದು ಕಿರುಕುಳ ನೀಡಬೇಡಿ. ಅವರು ದೂರುದಾರರು, ಅಪರಾಧಿಗಳಲ್ಲ ಎಂದು ಮುಂಬೈ ಅಪರಾಧ ವಿಭಾಗದ ಪೊಲೀಸರಿಗೆ ಬಾಂಬೆ ಹೈಕೋರ್ಟ್ ಸೂಚನೆ ನೀಡಿದೆ. ಟೆಲಿವಿಷನ್ ರೇಟಿಂಗ್ ಪಾಯಿಂಟ್ (ಟಿ.ಆರ್.ಪಿ) ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಅಪರಾಧ ವಿಭಾಗದ ಪೊಲೀಸರು ರಿಪಬ್ಲಿಕ್ ಟಿವಿ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡುವಂತೆ ಹನ್ಸ್ ರಿಸರ್ಚ್ ಗ್ರೂಪ್ ನೌಕರರನ್ನು ಒತ್ತಾಯಿಸಿದ್ದಾರೆ ಎಂದು ಸಂಸ್ಥೆ ಆರೋಪಿಸಿ ಬಾಂಬೆ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿತ್ತು.
ಪ್ರತಿನಿತ್ಯ ತನ್ನ ನೌಕರರನ್ನು ಕರೆದು ತಾಸುಗಟ್ಟಲೇ ಅಪರಾಧ ವಿಭಾಗದಲ್ಲಿ ಕಾಯಿಸಲಾಗುತ್ತಿದೆ. ತಪ್ಪು ಹೇಳಿಕೆ ನೀಡುವಂತೆ ಒತ್ತಾಯಿಸಲಾಗುತ್ತಿದೆ ಮತ್ತು ಬಂಧನದ ಬೆದರಿಕೆ ಸಹ ಒಡ್ಡಲಾಗುತ್ತಿದೆ ಎಂದು ಹನ್ಸ್ ಗ್ರೂಪ್ ತಾನು ಸಲ್ಲಿಸಿರುವ ಮನವಿಯಲ್ಲಿ ಹೇಳಿತ್ತು. ಸಹಾಯಕ ಪೊಲೀಸ್ ಅಧಿಕಾರಿ ಸಚಿನ್ ವಾಜೆ, ಪೊಲೀಸ್ ಆಯುಕ್ತ ಪರಂ ಬೀರ್ ಸಿಂಗ್ ಮತ್ತು ಮುಖ್ಯ ತನಿಖಾಧಿಕಾರಿ ಪ್ರಶಾಂತ್ ಸಂಡ್ಭೋರ್ ಅವರನ್ನು ಹನ್ಸ್ ಸಂಸ್ಥೆ ತನ್ನ ಅರ್ಜಿಯಲ್ಲಿ ಉತ್ತರದಾಯಿಗಳನ್ನಾಗಿಸಿತ್ತು.
ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಬಾಂಬೆ ಹೈಕೋರ್ಟ್ನ ನ್ಯಾಯಪೀಠ, ಮುಂಬೈ ಅಪರಾಧ ವಿಭಾಗದ ಪೋಲೀಸರಿಗೆ ನೋಟಿಸ್ ಜಾರಿಗೊಳಿಸಿದೆ. ಜೊತೆಗೆ ಮುಂದಿನ ವಿಚಾರಣೆಯವರೆಗೂ ಹನ್ಸ್ ಗ್ರೂಪ್ ನೌಕರರನ್ನು ವಾರಕ್ಕೆ ಎರಡು ಬಾರಿ ಮಾತ್ರ ಕರೆಸಿಕೊಳ್ಳುವುದಾಗಿ ಪೊಲೀಸರಿಂದ ಹೇಳಿಕೆ ಬರೆಸಿಕೊಂಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಹನ್ಸ್ ಗ್ರೂಪ್ ಪರ ವಕೀಲ ಎಸ್. ವೈದ್ಯನಾಥನ್, ಹನ್ಸ್ ಗ್ರೂಪ್ ತನಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಅಪರಾಧ ವಿಭಾಗದ ತನಿಖಾಧಿಕಾರಿಗಳಿಗೆ ನೀಡಲು ಸಿದ್ಧವಿದೆ. ಆದರೆ ನೌಕರರನ್ನು ಪ್ರತಿದಿನ ವಿಚಾರಣೆಗೆ ಕರೆಸುವುದು ಸರಿಯಲ್ಲ ಎಂದು ಮನವಿ ಮಾಡಿದೆ. ಮುಂಬೈ ಪೊಲೀಸ್ ಪರವಹಿಸಿರುವ ಹಿರಿಯ ನ್ಯಾಯವಾದಿ ದೇವದತ್ ಕಾಮತ್, ನ್ಯಾಯಾಲಯವು ತನಿಖಾ ವರದಿ ಮತ್ತು ರಿಟ್ ಅರ್ಜಿಯನ್ನು ಗಮನಿಸಬೇಕು. ಹನ್ಸ್ ರಿಸರ್ಚ್ ಗ್ರೂಪ್ ವಿರುದ್ಧದ ಸಾಕ್ಷ್ಯಗಳನ್ನು ಪರಿಶೀಲಿಸಬೇಕು ಎಂದು ಹೇಳಿದ್ದಾರೆ.