ದೆಹಲಿ: ಮುಂಬೈ (Mumbai) ಮಹಾರಾಷ್ಟ್ರಕ್ಕೆ ಸೇರಿದ್ದು, ಯಾರ ಅಪ್ಪನದ್ದು ಅಲ್ಲ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis) ಅವರು ಎಂದು ಬುಧವಾರ ಹೇಳಿದ್ದಾರೆ ಕರ್ನಾಟಕದ ಕಾನೂನು ಸಚಿವ ಜೆಸಿ ಮಾಧುಸ್ವಾಮಿ (JC Madhuswamy) ಅವರು ಮುಂಬೈಯನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂದು ಹೇಳಿದ್ದನ್ನು ಖಂಡಿಸಿ ಫಡ್ನವೀಸ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಾತನಾಡಿದ ಫಡ್ನವೀಸ್ ‘ಮುಂಬೈ ಮಹಾರಾಷ್ಟ್ರಕ್ಕೆ ಸೇರಿದ್ದು, ಯಾರ ಅಪ್ಪನದ್ದು ಅಲ್ಲ. ಮುಂಬೈ ಮೇಲೆ ಯಾರಾದರೂ ಹಕ್ಕು ಸಾಧಿಸುವುದನ್ನು ನಾವು ಸಹಿಸುವುದಿಲ್ಲ. ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಗೃಹ ಸಚಿವರ ಮುಂದೆ ನಮ್ಮ ಭಾವನೆಗಳನ್ನು ಹೇಳುತ್ತೇವೆ ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಇಂತಹ ಬಾಯಿಬಡುಕರಿಗೆ ಛೀಮಾರಿ ಹಾಕುವಂತೆ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು. ರಾಜ್ಯದ ಭಾವನೆಗಳನ್ನು ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತಿಳಿಸಲಾಗುವುದು ಎಂದು ಫಡ್ನವೀಸ್ ಹೇಳಿದ್ದಾರೆ.
ಕರ್ನಾಟಕದ ಸಿಎಂ ಮತ್ತು ಸಚಿವರು ತಮ್ಮ ಹೇಳಿಕೆಗಳಿಂದ ಮಹಾರಾಷ್ಟ್ರದ ಹೆಮ್ಮೆಗೆ ಧಕ್ಕೆ ತಂದಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಪ್ರತಿಕ್ರಿಯೆ ಅದೇ ರೀತಿಯಲ್ಲಿ ಇರುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ ಹೇಳಿದ್ದಾರೆ. ಕರ್ನಾಟಕದ ಕಾನೂನು ಸಚಿವ ಮಾಧು ಸ್ವಾಮಿ ಅವರು ಮುಂಬೈಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಬಿಜೆಪಿ ಶಾಸಕ ಲಕ್ಷ್ಮಣ್ ಸವದಿ ಅವರು ಮುಂಬೈ ಕರ್ನಾಟಕಕ್ಕೆ ಸೇರಿದ್ದು ಎನ್ನುವ ಮೂಲಕ ಮರಾಠಿ ಜನರ ಗಾಯದ ಮೇಲೆ ಉಪ್ಪು ಸವರಿದ್ದಾರೆ ಎಂದು ಪವಾರ್ ಹೇಳಿದ್ದಾರೆ.
ಮುಖ್ಯಮಂತ್ರಿಗಳು ಇದನ್ನು ತೀವ್ರವಾಗಿ ಖಂಡಿಸಬೇಕು ಎಂದು ಎನ್‌ಸಿಪಿ ನಾಯಕ ಆಗ್ರಹಿಸಿದ್ದಾರೆ.
ಅಮಿತ್ ಶಾ ಅವರೊಂದಿಗೆ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ನಡುವಿನ ಸಭೆಯಲ್ಲಿ, ಎರಡು ರಾಜ್ಯಗಳು ಯಾವುದೇ ಹೊಸ ಹಕ್ಕುಗಳನ್ನು ಮಾಡುವುದಿಲ್ಲ ಎಂದು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು. ಕೇಂದ್ರ ಗೃಹ ಸಚಿವರ ಸಭೆಯಲ್ಲಿ ಹೇಳಿದ ಮಾತುಗಳನ್ನು ಕರ್ನಾಟಕದ ಸಚಿವರು ಪಾಲಿಸಿಲ್ಲ. ಇದನ್ನು ನಾವು ಗೃಹ ಸಚಿವರ ಗಮನಕ್ಕೆ ತರುತ್ತೇವೆ ಎಂದು ಫಡ್ನವೀಸ್ ಹೇಳಿದ್ದಾರೆ.
ಇದನ್ನೂ ಓದಿ:Mysore News: ಹೀರಾಬೆನ್ ಮೋದಿ ಆರೋಗ್ಯದಲ್ಲಿ ಏರುಪೇರು: ವಿಶೇಷ ವಿಮಾನದ ಮೂಲಕ ಅಹಮದಾಬಾದ್ಗೆ ಪುತ್ರ ಪ್ರಹ್ಲಾದ್ ಮೋದಿ
ಕರ್ನಾಟಕದಲ್ಲಿರುವ 865 ಮರಾಠಿ ಭಾಷಿಕ ಗ್ರಾಮಗಳನ್ನು ಪಶ್ಚಿಮ ರಾಜ್ಯಕ್ಕೆ ಸೇರಿಸುವುದನ್ನು “ಕಾನೂನುಬದ್ಧವಾಗಿ ಮುಂದುವರಿಸುವ” ನಿರ್ಣಯವನ್ನು ಮಹಾರಾಷ್ಟ್ರ ವಿಧಾನಮಂಡಲದ ಉಭಯ ಸದನಗಳು ಮಂಗಳವಾರ ಸರ್ವಾನುಮತದಿಂದ ಅಂಗೀಕರಿಸಿದವು. ಬೆಳಗಾವಿ, ಕಾರವಾರ ಬೀದರ್, ನಿಪ್ಪಾಣಿ, ಭಾಲ್ಕಿ ನಗರಗಳು ಮತ್ತು ಕರ್ನಾಟಕದ 865 ಮರಾಠಿ ಭಾಷಿಕ ಹಳ್ಳಿಗಳ ಪ್ರತಿ ಇಂಚಿನ ಭೂಮಿಯನ್ನು ಸೇರಿಸಲು ಮಹಾರಾಷ್ಟ್ರ ಸರ್ಕಾರವು ಸುಪ್ರೀಂಕೋರ್ಟ್ ಮೊರೆ ಹೋಗಲಿದೆ ಎಂದು ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಬಗ್ಗೆ ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು 865 ಮರಾಠಿ ಭಾಷಿಕ ಹಳ್ಳಿಗಳ ಒಂದು ಇಂಚು ಭೂಮಿಯನ್ನು ರಾಜ್ಯವು ಬಿಟ್ಟುಕೊಡುವುದಿಲ್ಲ ಎಂದು ಹೇಳಿದರು. “ಕರ್ನಾಟಕ ನಮಗೆ ಸವಾಲು ಹಾಕಬಾರದು, ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ್, ಭಾಲ್ಕಿ ಸೇರಿದಂತೆ 865 ಹಳ್ಳಿಗಳ ಒಂದು ಇಂಚು ಭೂಮಿಯನ್ನು ನಾವು ಬಿಟ್ಟುಕೊಡುವುದಿಲ್ಲ” ಎಂದು ಅವರು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಹೇಳಿದ್ದಾರೆ. ಮರಾಠಿ ಮಾತನಾಡುವ ಜನರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ತಮ್ಮ ಸರ್ಕಾರ ಎಲ್ಲವನ್ನೂ ಮಾಡಲಿದೆ ಎಂದಿದ್ದಾರೆ ಶಿಂಧೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:40 pm, Wed, 28 December 22