ಹೈದರಾಬಾದ್​ನಲ್ಲಿ ತಿಂಡಿ ತಿಂದು ವಿಮಾನ ಹತ್ತಿದ್ದ ಬ್ರಿಟಿಷ್ ಏರ್​ವೇಸ್​ನ ಮೂವರು ಪೈಲಟ್​ಗಳು ಅಸ್ವಸ್ಥ

ಹೈದರಾಬಾದ್‌ನಿಂದ ಲಂಡನ್‌ಗೆ ಹೊರಟ ಬ್ರಿಟಿಷ್ ಏರ್‌ವೇಸ್ ವಿಮಾನದ ಮೂವರು ಪೈಲಟ್‌ಗಳು ಫುಡ್ ಪಾಯ್ಸನ್‌ನಿಂದ ಅಸ್ವಸ್ಥರಾಗಿದ್ದಾರೆ. ಹೈದರಾಬಾದ್‌ನಲ್ಲಿ ತಂಗಿದ್ದಾಗ ಸೇವಿಸಿದ ಆಹಾರ ಅಥವಾ ನೀರಿನಿಂದ ಈ ಘಟನೆ ಸಂಭವಿಸಿದೆ. ಒಬ್ಬ ಪೈಲಟ್ ವಿಮಾನದಲ್ಲಿ ಗಂಭೀರ ಅಸ್ವಸ್ಥಗೊಂಡಿದ್ದು, ಬ್ರಿಟಿಷ್ ಏರ್‌ವೇಸ್ ಘಟನೆಯ ತನಿಖೆಗೆ ಆದೇಶಿಸಿದೆ. ಸಿಬ್ಬಂದಿಯ ವಸತಿ ಮತ್ತು ಆಹಾರ ವ್ಯವಸ್ಥೆಗಳನ್ನು ಪರಿಶೀಲಿಸಲಾಗುತ್ತಿದೆ, ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ.

ಹೈದರಾಬಾದ್​ನಲ್ಲಿ ತಿಂಡಿ ತಿಂದು ವಿಮಾನ ಹತ್ತಿದ್ದ ಬ್ರಿಟಿಷ್ ಏರ್​ವೇಸ್​ನ ಮೂವರು ಪೈಲಟ್​ಗಳು ಅಸ್ವಸ್ಥ
ವಿಮಾನ

Updated on: Jul 23, 2026 | 2:16 PM

ಹೈದರಾಬಾದ್, ಜುಲೈ 23: ಹೈದರಾಬಾದ್‌ನಿಂದ ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ಬ್ರಿಟಿಷ್ ಏರ್‌ವೇಸ್ (BA276) ವಿಮಾನದ ಮೂವರು ಪೈಲಟ್‌ಗಳು ಅಸ್ವಸ್ಥಗೊಂಡ ಭೀಕರ ಘಟನೆಯೊಂದು  ನಡೆದಿದೆ. ಹೈದರಾಬಾದ್‌ನಲ್ಲಿ ರಾತ್ರಿ ತಂಗಿದ್ದ ವೇಳೆ ಸೇವಿಸಿದ ಆಹಾರದಿಂದಾಗಿ ಪೈಲಟ್‌(Pilot)ಗಳಿಗೆ ಫುಡ್ ಪಾಯ್ಸನ್ ಆಗಿತ್ತು ಎನ್ನಲಾಗಿದೆ, ಈ ಕುರಿತು ಬ್ರಿಟಿಷ್ ಏರ್‌ವೇಸ್ ಸಂಸ್ಥೆ ತನಿಖೆಗೆ ಆದೇಶಿಸಿದೆ.

ವರದಿಗಳ ಪ್ರಕಾರ, ವಿಮಾನವು ಆಕಾಶದಲ್ಲಿ ಸುಮಾರು 30,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ, ಮುಖ್ಯ ಪೈಲಟ್‌ಗಳಲ್ಲಿ ಒಬ್ಬರು ತೀವ್ರ ಹೊಟ್ಟೆನೋವು ಹಾಗೂ ಅನಾರೋಗ್ಯದಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದೆ ಅಸಹಾಯಕರಾಗಿದ್ದರು. ವಿಮಾನವು ಲಂಡನ್‌ಗೆ ತಲುಪಿ ಸುರಕ್ಷಿತವಾಗಿ ಲ್ಯಾಂಡ್ ಆದ ತಕ್ಷಣವೇ ಆ ಪೈಲಟ್‌ಗೆ ಆಮ್ಲಜನಕ ನೀಡಿ, ತುರ್ತು ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಯಿತು.

ಉಳಿದ ಇಬ್ಬರು ಪೈಲಟ್‌ಗಳಿಗೂ ಅಲ್ಪಪ್ರಮಾಣದ ಅನಾರೋಗ್ಯ ಉಂಟಾಗಿದ್ದರೂ, ಸಮಯಪ್ರಜ್ಞೆಯಿಂದ ವಿಮಾನವನ್ನು ನಿಯಂತ್ರಿಸಿ ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾದರು. ಯಾವುದೇ ಹಂತದಲ್ಲೂ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆಯಾಗಿಲ್ಲ ಎಂದು ವಿಮಾನಯಾನ ಸಂಸ್ಥೆ ಸ್ಪಷ್ಟಪಡಿಸಿದೆ.

ಅಸ್ವಸ್ಥತೆಗೆ ಕಾರಣವೇನು?

ಹೈದರಾಬಾದ್‌ನಿಂದ ವಿಮಾನವೇರುವ ಮುನ್ನ ಮೂವರೂ ಪೈಲಟ್‌ಗಳು ತಂಗಿದ್ದ ಪಂಚತಾರಾ ಹೋಟೆಲ್‌ನಲ್ಲಿ ಒಟ್ಟಿಗೆ ಉಪಹಾರ (Breakfast) ಸೇವಿಸಿದ್ದರು. ಇದರ ಜೊತೆಗೆ ಸ್ಥಳೀಯ ಖಾಸಗಿ ಕಂಪನಿಯೊಂದರ ಬಾಟಲ್ ನೀರನ್ನು ಕುಡಿದಿದ್ದರು. ಇದೇ ಆಹಾರ ಅಥವಾ ನೀರಿನಿಂದಲೇ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ.

ಮತ್ತಷ್ಟು ಓದಿ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಲಗೇಜ್ ಬ್ಯಾಗ್‌ನಲ್ಲಿ ಅಡಗಿಸಿಟ್ಟಿದ್ದ 12 ಕೆಜಿ ಗಾಂಜಾ ಜಪ್ತಿ; ಆರೋಪಿ ಬಂಧನ

ಹೋಟೆಲ್ ವಸತಿ ವ್ಯವಸ್ಥೆ ಮರುಪರಿಶೀಲನೆ

ಸಂಸ್ಥೆಯ ಸಹೋದ್ಯೋಗಿಗಳ ಆರೋಗ್ಯವೇ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿರುವ ಬ್ರಿಟಿಷ್ ಏರ್‌ವೇಸ್, ಹೈದರಾಬಾದ್‌ನಲ್ಲಿ ಸಿಬ್ಬಂದಿಗೆ ನೀಡಲಾಗುವ ಹೋಟೆಲ್ ವಸತಿ ಹಾಗೂ ಆಹಾರ ಪೂರೈಕೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮರುಪರಿಶೀಲಿಸುತ್ತಿರುವುದಾಗಿ ತಿಳಿಸಿದೆ. ಬ್ರಿಟಿಷ್ ಏರ್‌ವೇಸ್ ಯುನೈಟೆಡ್ ಕಿಂಗ್‌ಡಮ್‌ನ (UK) ಅತಿದೊಡ್ಡ ಹಾಗೂ ಪ್ರಮುಖ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾಗಿದೆ.

ಲಂಡನ್‌ನ ‘ಹೀಥ್ರೂ’ ಮತ್ತು ‘ಗ್ಯಾಟ್ವಿಕ್’ ವಿಮಾನ ನಿಲ್ದಾಣಗಳನ್ನು ಕೇಂದ್ರವಾಗಿಸಿಕೊಂಡು, ಏಷ್ಯಾ, ಯುರೋಪ್, ಅಮೆರಿಕ ಸೇರಿದಂತೆ ಪ್ರಪಂಚದ 200 ಕ್ಕೂ ಹೆಚ್ಚು ನಗರಗಳಿಗೆ ನಿರಂತರ ವಿಮಾನ ಸೇವೆ ಒದಗಿಸುತ್ತದೆ. ಈ ಸಂಸ್ಥೆಯು ಬೋಯಿಂಗ್ 777, ಬೋಯಿಂಗ್ 787 ಡ್ರೀಮ್‌ಲೈನರ್ ಮತ್ತು ಭಾರಿ ಗಾತ್ರದ ಏರ್‌ಬಸ್ A380 ಸೇರಿದಂತೆ ಅತ್ಯಾಧುನಿಕ ವಿಮಾನಗಳನ್ನು ಹೊಂದಿದ್ದು, ಪ್ರತಿವರ್ಷ ಕೋಟ್ಯಂತರ ಪ್ರಯಾಣಿಕರನ್ನು ಹೊತ್ತೊಯ್ಯುತ್ತದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us