ಉತ್ತರ ಪ್ರದೇಶದಲ್ಲಿ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿರುವ ಬಿಎಸ್ಪಿ(BSP)ಗೆ ಹೊಸ ಉತ್ತರಾಧಿಕಾರಿಯನ್ನು ನೇಮಕ ಮಾಡಲಾಗಿದೆ. ತನ್ನ ಸೋದರಳಿಯ ಆಕಾಶ್ ಆನಂದ್ ಅವರನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸಲು ಮಾಯಾವತಿ(Mayawati) ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ್ದ ಆಕಾಶ್ ಆನಂದ್ ಮಾಯಾವತಿಯ ಬಹುತೇಕ ಎಲ್ಲಾ ರಾಜಕೀಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತಿದೆ.
ಪಕ್ಷದಲ್ಲಿ ಸಧ್ಯಕ್ಕೆ ರಾಷ್ಟ್ರೀಯ ಸಂಯೋಜಕ ಸ್ಥಾನದಲ್ಲಿರುವ ಆಕಾಶ್ ಅವರಿಗೆ ಪಕ್ಷದ ಪ್ರಮುಖ ಜವಾಬ್ದಾರಿಯನ್ನು ನೀಡಲು ಮಾಯಾವತಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೆ ಮಾಯಾವತಿ ಯಾವ ಹುದ್ದೆಯಲ್ಲಿರುತ್ತಾರೆ, ಮಾಯಾವತಿಯವರ ಮುಂದಿನ ರಾಜಕೀಯ ನಿರ್ಧಾರಗಳೇನು? ನಿವೃತ್ತಿ ಘೋಷಿಸುತ್ತಾರೋ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟ ನಿಲುವು ಇನ್ನೂ ಸಿಕ್ಕಿಲ್ಲ. ಪಕ್ಷವನ್ನು ಪುನರ್ ಸಂಘಟಿಸುವುದು ಅಥವಾ ಪಕ್ಷಕ್ಕೆ ಮರುಜೀವ ನೀಡುವ ಉದ್ದೇಶದಿಂದ ಈ ಬದಲಾವಣೆಗೆ ಮಾಯಾವತಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಒಂದು ದಶಕದ ಹಿಂದೆ ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸಿದ್ದಂತಹ ಬಿಎಸ್ಪಿ ಈಗ ಸಧ್ಯಕ್ಕೆ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯದಲ್ಲಿದೆ. ಯಾವುದೇ ಲೋಕಸಭಾ ಸದಸ್ಯರನ್ನು ಹೊಂದಿರದ ಬಿಎಸ್ಪಿ, ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬೆರಳೆಣಿಕೆ ಸದಸ್ಯರನ್ನು ಹೊಂದಿದೆ. ವರ್ಷದಿಂದ ವರ್ಷಕ್ಕೆ ಚುನಾವಣೆಯಿಂದ ಚುನಾವಣೆಗೆ ಬಿಎಸ್ಪಿಯ ಚುನಾಯಿತ ಪ್ರತಿನಿಧಿಗಳ ಸಂಖ್ಯೆ ಕಡಿಮೆಯಾಗುತ್ತಲೇ ಇದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:11 pm, Sun, 10 December 23