Budget 2021 ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ.. ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳು ಸಜ್ಜು
ಸಂಸತ್ತಿನ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗುತ್ತಿದೆ. ಇಂದು ರಾಷ್ಟ್ರಪತಿ ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವರು. ಸೋಮವಾರ 2021ನೇ ಸಾಲಿನ ಕೇಂದ್ರದ ಸಾಮಾನ್ಯ ಬಜೆಟ್ ಅನ್ನು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುವರು. ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿಗೆ ಪ್ರತಿಪಕ್ಷಗಳು ಸಜ್ಜಾಗಿವೆ.
ಸಂಸತ್‌ನ ಬಜೆಟ್ ಅಧಿವೇಶನವು ಇಂದಿನಿಂದ ಆರಂಭವಾಗಲಿದೆ. ಬಜೆಟ್ ಅಧಿವೇಶನದ ಮೊದಲ ದಿನವಾದ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂಸತ್‌ನ ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಆದ್ರೆ ಕಾಂಗ್ರೆಸ್, ಎನ್‌ಸಿಪಿ, ನ್ಯಾಷನಲ್ ಕಾನ್ಪರೆನ್ಸ್, ಆಪ್ ಸೇರಿದಂತೆ 16 ಪ್ರತಿಪಕ್ಷಗಳು ರಾಷ್ಟ್ರಪತಿಗಳ ಭಾಷಣದ ಜಂಟಿ ಅಧಿವೇಶನವನ್ನು ಬಹಿಷ್ಕರಿಸಲು ನಿರ್ಧರಿಸಿವೆ. ಕೇಂದ್ರ ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸದೇ ಇರೋದನ್ನ ಖಂಡಿಸಿ ರಾಷ್ಟ್ರಪತಿ ಭಾಷಣವನ್ನು ಬಹಿಷ್ಕರಿಸಲು ನಿರ್ಧರಿಸಿವೆ.
ರಾಷ್ಟ್ರಪತಿ ಭಾಷಣದ ಬಳಿಕ ಆರ್ಥಿಕ ಸಮೀಕ್ಷಾ ವರದಿ ಮಂಡನೆ ರಾಷ್ಟ್ರಪತಿಗಳ ಭಾಷಣದ ಬಳಿಕ ಕೇಂದ್ರ ಸರ್ಕಾರದ ಪ್ರಧಾನ ಆರ್ಥಿಕ ಸಲಹೆಗಾರರು ಸಿದ್ದಪಡಿಸಿರುವ ಆರ್ಥಿಕ ಸಮೀಕ್ಷಾ ವರದಿಯನ್ನು ಸಂಸತ್ ನಲ್ಲಿ ಮಂಡಿಸಲಾಗುತ್ತೆ. ಫೆಬ್ರವರಿ 1ರ ಸೋಮವಾರ ಬೆಳಿಗ್ಗೆ 11 ಗಂಟೆಗೆ 2021ನೇ ಸಾಲಿನ ಕೇಂದ್ರದ ಸಾಮಾನ್ಯ ಬಜೆಟ್ ಅನ್ನು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುವರು. ಈ ಬಾರಿ ಬಜೆಟ್ ಪ್ರತಿಗಳನ್ನು ಮುದ್ರಿಸುತ್ತಿಲ್ಲ . ಎಲ್ಲ ಸಂಸದರಿಗೂ ಬಜೆಟ್‌ನ ಸಾಫ್ಟ್ ಕಾಪಿಗಳನ್ನು ನೀಡಲಾಗುತ್ತೆ. ಕೊರೊನಾದ ಕಾರಣದಿಂದ ಇದೇ ಮೊದಲ ಬಾರಿಗೆ ಬಜೆಟ್ ಪ್ರತಿಗಳನ್ನು ಮುದ್ರಿಸುತ್ತಿಲ್ಲ. ಇನ್ನು ಬಜೆಟ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳು ಸಜ್ಜಾಗಿವೆ.
ಅಧಿವೇಶನದಲ್ಲಿ ಪ್ರತಿಪಕ್ಷಗಳ ಅಸ್ತ್ರ ರೈತರ ಪ್ರತಿಭಟನೆ ವಿಚಾರದಲ್ಲಿ ಕೇಂದ್ರ ಸರ್ಕಾರವು ಹಠಮಾರಿ ಧೋರಣೆ ಅನುಸರಿಸುತ್ತಿದೆ. ಸಂಸತ್ ನಲ್ಲೂ ಕೃಷಿ ತಿದ್ದುಪಡಿ ಕಾಯಿದೆ ಬಗ್ಗೆ ಸರಿಯಾಗಿ ಚರ್ಚೆಗೆ ಅವಕಾಶ ಕೊಡಲಿಲ್ಲ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ಸಜ್ಜಾಗಿವೆ. ಇನ್ನೂ ಜನವರಿ 26ರಂದು ರೈತರ ಹೋರಾಟ ಹಿಂಸಾಚಾರಕ್ಕೆ ತಿರುಗಿದ ಬಗ್ಗೆಯೂ ಕೇಂದ್ರದ ವಿರುದ್ಧ ವಾಗ್ದಾಳಿಗೆ ಪ್ರತಿಪಕ್ಷಗಳು ನಿರ್ಧರಿಸಿವೆ .
ಕೇಂದ್ರ ಗೃಹ ಇಲಾಖೆಯು ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರಿಯಾಗಿಸಿಕೊಂಡು ವಿಪಕ್ಷಗಳು ವಾಗ್ದಾಳಿ ನಡೆಸಲಿವೆ. ದೇಶದ ಆರ್ಥಿಕ ಸ್ಥಿತಿಗತಿ, ಜಿಡಿಪಿ ಕುಸಿತ, ಕೊರೊನಾ ಲಸಿಕೆ ನೀಡಿಕೆಯಲ್ಲಿ ಆಗಿರುವ ಹಿನ್ನಡೆ, ಲಸಿಕೆ ಬಗೆಗಿನ ಜನರ ಆತಂಕ, ಭಯದ ಬಗ್ಗೆಯೂ ಸಂಸತ್ ಅಧಿವೇಶನದಲ್ಲಿ ಚರ್ಚೆಗೆ ವಿಪಕ್ಷಗಳು ನಿರ್ಧರಿಸಿವೆ . ನಿರುದ್ಯೋಗ ನಿವಾರಣೆಗೆ ಸರ್ಕಾರ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಕೇಂದ್ರದ ವಿರುದ್ಧ ಮುಗಿಬೀಳಲು ಪ್ರತಿಪಕ್ಷಗಳು ನಿರ್ಧರಿಸಿವೆ . ಇನ್ನೂ ಭಾರತ-ಚೀನಾ ನಡುವಿನ ಗಡಿ ಬಿಕ್ಕಟ್ಟು ಕಳೆದ 9 ತಿಂಗಳಿನಿಂದ ಬಗೆಹರಿದಿಲ್ಲ. ಈ ವಿಷಯವಾಗಿಯೂ ಪ್ರತಿಪಕ್ಷಗಳು ಸಂಸತ್‌ನಲ್ಲಿ ಮೋದಿ ಸರ್ಕಾರವನ್ನು ಪ್ರಶ್ನಿಸಲಿವೆ.
ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಕೇಂದ್ರ ಸರ್ಕಾರ ಸಜ್ಜು ವಿಪಕ್ಷಗಳ ಆರೋಪ, ಪ್ರಶ್ನೆಗಳಿಗೆ ತಕ್ಕ ತಿರುಗೇಟು ನೀಡಲು ಕೇಂದ್ರ ಸರ್ಕಾರ ಕೂಡ ಸಜ್ಜಾಗಿದೆ . ಮೋದಿ ಸರ್ಕಾರವು ಕೊರೊನಾ ವೈರಸ್ ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸಿದೆ. ಇದ್ರ ಪರಿಣಾಮವಾಗೇ ಈಗ ಶೇಕಡಾ 2 ಕ್ಕಿಂತ ಕಡಿಮೆ ಕೊರೊನಾ ಸಕ್ರಿಯ ಪ್ರಕರಣಗಳು ಇವೆ. ಸುಪ್ರೀಂಕೋರ್ಟ್ ಸಲಹೆಯಂತೆ ಕೇಂದ್ರ ಮೂರು ಕೃಷಿ ಕಾಯಿದೆಗಳನ್ನು ಒಂದೂವರೆ ವರ್ಷ ಅಮಾನತ್ತಿನಲ್ಲಿಡಲು ಕೂಡ ಸರ್ಕಾರ ಸಿದ್ದವಿದೆ. ಆದ್ರೆ, ರೈತರೇ ಈ ಆಫರ್ ಅನ್ನು ಒಪ್ಪಿಕೊಳ್ಳುತ್ತಿಲ್ಲ. ರೈತರನ್ನು ಪ್ರತಿಪಕ್ಷಗಳು ದಿಕ್ಕು ತಪ್ಪಿಸಿವೆ ಎಂದು ಪ್ರತಿಪಕ್ಷಗಳ ವಿರುದ್ಧವೇ ಆರೋಪ ಮಾಡಲು ಕೇಂದ್ರ ಸಚಿವರು, ಬಿಜೆಪಿ ಸಂಸದರು ಸಜ್ಜಾಗಿದ್ದಾರೆ.
ಇನ್ನು ಕೊರೊನಾ ವೈರಸ್ ನಂತರದ ಮೊದಲ ಬಜೆಟ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಯಾವ ಯಾವ ವಲಯಕ್ಕೆ ಹೆಚ್ಚು ಒತ್ತು ಕೊಡ್ತಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
Budget 2021 | ಬ್ರಿಟಿಷ್ ಭಾರತದ ಮೊದಲ ಬಜೆಟ್ 161 ವರ್ಷಗಳ ಹಿಂದೆ ಮಂಡನೆಯಾಗಿತ್ತು!
Published On - 7:16 am, Fri, 29 January 21