Maharashtra: ಪುಣೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿತ; ಆರು ಮಂದಿ ಕಾರ್ಮಿಕರು ಸಾವು

| Updated By: Lakshmi Hegde

Updated on: Feb 04, 2022 | 8:17 AM

ಇದುವರೆಗೆ ಒಟ್ಟು ಆರು ಮಂದಿಯ ದೇಹ ಸಿಕ್ಕಿದ್ದು, ಮೃತದೇಹಗಳನ್ನು ನಗರದ ಸ್ಯಾಸೋನ್​ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

Maharashtra: ಪುಣೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿತ; ಆರು ಮಂದಿ ಕಾರ್ಮಿಕರು ಸಾವು
ಸಾಂಕೇತಿಕ ಚಿತ್ರ
Follow us on

ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದು ಕುಸಿದುಬಿದ್ದ ಪರಿಣಾಮ 6 ಮಂದಿ ಮೃತಪಟ್ಟ ಘಟನೆ ಪುಣೆಯ ಯರವಾಡ ಪ್ರದೇಶದಲ್ಲಿ ನಡೆದಿದೆ. ಈ ದುರ್ಘಟನೆ ಫೆ.3ರಂದು ರಾತ್ರಿ 11ಗಂಟೆ ಹೊತ್ತಿಗೆ ಘಟನೆ ನಡೆದಿದೆ. ಯರವಾಡದ ಶಾಸ್ತ್ರನಗರದಲ್ಲಿ, ಮಾಲ್​​ವೊಂದಕ್ಕೆ ಸ್ಲ್ಯಾಬ್​ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಆದರೆ ಇದು ಕುಸಿದುಬಿದ್ದಿದೆ. ಅಡಿಯಲ್ಲಿ ಸಿಲುಕಿದ 5-6 ಕಾರ್ಮಿಕರು ದುರ್ಮರಣಕ್ಕೀಡಾಗಿದ್ದಾರೆ. 

ಇದುವರೆಗೆ ಒಟ್ಟು ಆರು ಮಂದಿಯ ದೇಹ ಸಿಕ್ಕಿದ್ದು, ಮೃತದೇಹಗಳನ್ನು ನಗರದ ಸ್ಯಾಸೋನ್​ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಮುಖವೆಲ್ಲ ಜಜ್ಜಿ ಹೋಗಿರುವ ಕಾರಣ ಮೃತರ ಗುರುತು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಯರವಾಡ ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಪ್ರಧಾನಿ ಮೋದಿ ಸಂತಾಪ
ಮಹಾರಾಷ್ಟ್ರದಲ್ಲಿ ನಡೆದ ದುರ್ಘಟನೆ ಬಗ್ಗೆ ಪ್ರಧಾನಿ ಕಾರ್ಯಾಲಯ ಟ್ವೀಟ್​ ಮಾಡಿ, ಸಂತಾಪ ಸೂಚಿಸಿದೆ.  ನಿರ್ಮಾಣ ಹಂತದಲ್ಲಿರುವ ಕಟ್ಟಡ ಕುಸಿದು ಉಂಟಾಗಿರುವ ದುರ್ಘಟನೆಯಿಂದ ನೋವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಾಂತ್ವನಗಳು. ಈ ದುರ್ಘಟನೆಯಲ್ಲಿ ಗಾಯಗೊಂಡವರು ಬೇಗನೇ ಚೇತರಿಸಿಕೊಳ್ಳಲಿ ಎಂದು ಆಶಿಸುತ್ತೇನೆ ಎಂದು ಹೇಳಿದೆ.

ಪುಣೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಇಂಥ ಅವಘಡಗಳು ಪದೇಪದೆ ನಡೆಯುತ್ತಿರುತ್ತವೆ. ಅವ್ಯವಸ್ಥಿತವಾದ ನಿರ್ಮಾಣ ಕಾಮಗಾರಿಯಿಂದಾಗಿ ಹಲವು ದುರಂತಗಳು ನಡೆದಿವೆ.  2019ರ ಜೂನ್​ನಲ್ಲಿ ಕೊಂಧ್ವಾ ಪ್ರದೇಶದಲ್ಲಿ ಇಂಥದ್ದೇ ಒಂದು ದೊಡ್ಡ ದುರಂತ ನಡೆದು, 15 ಕಾರ್ಮಿಕರು ದುರ್ಮರಣಕ್ಕೀಡಾಗಿದ್ದರು. ನಾಲ್ವರು ಮಕ್ಕಳೂ ಸಹ ಮೃತಪಟ್ಟಿದ್ದರು. 2017ರಲ್ಲಿ ಹೀಗೆ ನಿರ್ಮಾಣಹಂತದಲ್ಲಿದ್ದ ಸ್ಲ್ಯಾಬ್​ ಕುಸಿದ ಕಾರಣ ಮೂವರು ಕಾರ್ಮಿಕರು ಮೃತರಾಗಿದ್ದರು. 2016ರ ಜುಲೈನಲ್ಲಿಯೂ ಕೂಡ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಸ್ಲ್ಯಾಬ್​​ವೊಂದು ಕುಸಿದು ಬಿದ್ದ ಪರಿಣಾಮ ಬಾಲೇವಾಡಿ ಪ್ರದೇಶದಲ್ಲಿ 9 ಮಂದಿ ಬಲಿಯಾಗಿದ್ದರು. 2012ರಲ್ಲಿ ವಾಘೋಲಿಯಲ್ಲಿ 13 ಮಂದಿ ಜೀವ ಕಳೆದುಕೊಂಡಿದ್ದರು. ಹೀಗೆ ನಗರೀಕರಣ ನಡೆಯುತ್ತಿರುವ ಪುಣೆಯಲ್ಲಿ, ಅದೇ ಕೆಲಸಕ್ಕೆ ಜೀವ ಕಳೆದುಕೊಳ್ಳುವವರ ಸಂಖ್ಯೆಯೂ ಹೆಚ್ಚುತ್ತಿದೆ.

ಇದನ್ನೂ ಓದಿ: IND vs WI: ಟೀಮ್ ಇಂಡಿಯಾದಲ್ಲಿ ಕೊರೊನಾ: ಹೊಸ ಅಪ್ಡೇಟ್ ಏನು?, ಪಂದ್ಯ ನಡೆಯುತ್ತಾ, ಇಲ್ವಾ?: ಇಲ್ಲಿದೆ ಮಾಹಿತಿ

Published On - 8:10 am, Fri, 4 February 22