IND vs WI: ಟೀಮ್ ಇಂಡಿಯಾದಲ್ಲಿ ಕೊರೊನಾ: ಹೊಸ ಅಪ್ಡೇಟ್ ಏನು?, ಪಂದ್ಯ ನಡೆಯುತ್ತಾ, ಇಲ್ವಾ?: ಇಲ್ಲಿದೆ ಮಾಹಿತಿ
India vs West Indies: ಕೋವಿಡ್ ಸೋಂಕು ಕಾಣಿಸಿಕೊಂಡ ಆಟಗಾರರಾದ ಶಿಖರ್ ಧವನ್, ರುತುರಾಜ್ ಗಾಯಕ್ವಾಡ್ ಮತ್ತು ಶ್ರೇಯಸ್ ಅಯ್ಯರ್ ಅವರ ಆರ್‌ಟಿ-ಪಿಸಿಆರ್ ವರದಿ ಕೂಡ ನೆಗೆಟಿವ್ ಬಂದಿದೆ. ಆದರೆ, ಬೇಸರದ ಸಂಗತಿ ಎಂದರೆ ಇವರು ಏಕದಿನ ಸರಣಿಗೆ ಲಭ್ಯ ಇರುವುದಿಲ್ಲ.
ಭಾರತೀಯ ಕ್ರಿಕೆಟ್ ರಂಗದಲ್ಲಿ ಎಬ್ಬಿದ್ದ ಕೊರೊನಾ (Corona virus) ಆತಂಕ ಇದೀಗ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ವೆಸ್ಟ್ ಇಂಡೀಸ್ (India vs West Indies) ವಿರುದ್ಧ ಫೆಬ್ರವರಿ 6 ರಂದು ಅಹ್ಮದಾಬಾದ್ನಲ್ಲಿ ನಡೆಯಬೇಕಿರುವ ಮೊದಲ ಏಕದಿನ ಪಂದ್ಯ ನಿಗದಿ ಮಾಡಿದ ಸಮಯದಂದೇ ಜರುಗಲಿದೆ. ಸ್ಥಗಿತಗೊಂಡಿದ್ದ ಪ್ಯಾಕ್ರೀಸ್ ಸೆಷನ್ ಮತ್ತೆ ಶುರುವಾಗಿದ್ದು ರೋಹಿತ್ ಪಡೆ ಮೈದಾನದಲ್ಲಿ ಬೆವರಿಳಿಸುತ್ತಿದೆ. ಕೋವಿಡ್ ಸೋಂಕು ಕಾಣಿಸಿಕೊಂಡ ಆಟಗಾರರಾದ ಶಿಖರ್ ಧವನ್ (Shikhar Dhwan), ರುತುರಾಜ್ ಗಾಯಕ್ವಾಡ್ ಮತ್ತು ಶ್ರೇಯಸ್ ಅಯ್ಯರ್ ಅವರ ಆರ್‌ಟಿ-ಪಿಸಿಆರ್ ವರದಿ ಕೂಡ ನೆಗೆಟಿವ್ ಬಂದಿದೆ. ಆದರೆ, ಬೇಸರದ ಸಂಗತಿ ಎಂದರೆ ಇವರು ಏಕದಿನ ಸರಣಿಗೆ ಲಭ್ಯ ಇರುವುದಿಲ್ಲ. ಒಂದು ವಾರ ಪ್ರತ್ಯೇಕವಾಸದಲ್ಲಿ ಇರಬೇಕಾದ ಅವರ ಆರ್‌ಟಿ-ಪಿಸಿಆರ್ ವರದಿ ನೆಗೆಟಿವ್ ಆದರೆ ಮಾತ್ರ ವಿಂಡೀಸ್ ವಿರುದ್ಧದ ಟಿ20 ಸರಣಿಗೆ ಲಭ್ಯರಿರುತ್ತಾರೆ ಎಂದು ವರದಿಯಾಗಿದೆ. ಟೀಮ್ ಇಂಡಿಯಾ ಕ್ಯಾಂಪ್ನಲ್ಲಿಲ್ಲದ ಅಕ್ಷರ್ ಪಟೇಲ್ಗೆ ಕೂಡ ಕೋವಿಡ್ ಪಾಸಿಟಿವ್ ಕಂಡುಬಂದಿತ್ತು. ಇವರುಕೂಡ ಗುಣಮುಖರಾಗುತ್ತಿದ್ದಾರೆ. ಅಂತೆಯೆ ಭಾರತ ಏಕದಿನ ತಂಡಕ್ಕೆ ಮಯಾಂಕ್ ಅಗರ್ವಾಲ್ ಮತ್ತು ವಿಕೆಟ್ ಕೀಪರ್, ಬ್ಯಾಟರ್ ಇಶಾನ್ ಕಿಶನ್ ಸೇರ್ಪಡೆಯಾಗಿದ್ದಾರೆ.
ಮಯಾಂಕ್ ಗುರುವಾರ ತಂಡವನ್ನು ಸೇರಿಕೊಂಡಿದ್ದಾರೆ. ನಿಯಮದ ಪ್ರಕಾರ ಅವರು ಮೂರು ದಿನಗಳ ಕಾಲ ಕಡ್ಡಾಯ ಕ್ವಾರಂಟೈನ್‌ನಲ್ಲಿ ಇರಬೇಕಾಗಿದೆ. ಹೀಗಾಗಿ ನೇರವಾಗಿ ಪಂದ್ಯಕ್ಕೆ ಲಭ್ಯ ಇರುತ್ತಾರೆ. ಇಶಾನ್ ಕಿಶನ್ ಕೂಡ ಇದೇ ನಿಯಮ ಅನುಸರಿಸಲಿದ್ದಾರೆ. ಕೆಎಲ್ ರಾಹುಲ್ ಅವರಿಗೆ ಸಹೋದರಿಯ ವಿವಾಹದ ಕಾರಣ ಮೊದಲ ಏಕದಿನ ದಿನದಿಂದ ಹೊರಗುಳಿದಿದ್ದು, ಎರಡನೇ ಪಂದ್ಯಕ್ಕೆ ತಂಡ ಸೇರಿಕೊಳ್ಳಲಿದ್ದಾರೆ. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಹಿಂದೆ ನಿಗದಿ ಪಡಿಸಿದಂತೆ ಪಂದ್ಯ ನಡೆಯಲಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗಾಗಿ ಅಹ್ಮದಾಬಾದ್ಗೆ ತೆರಳುವ ಮುನ್ನ ಮನೆಯಲ್ಲಿ ಭಾರತದ ಎಲ್ಲ ಆಟಗಾರರಿಗೆ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸುವಂತೆ ಸೂಚಿಸಲಾಗಿತ್ತು. ಅದರಲ್ಲಿ ಎಲ್ಲರಿಗೂ ನೆಗೆಟಿವ್ ಬಂದಿತ್ತು. ನಂತರ ಜ. 31 ಸೋಮವಾರ ನಡೆಸಿದ ಆರ್ಟಿಪಿಸಿಆರ್ ಟೆಸ್ಟ್ನಲ್ಲಿ ಮೊದಲು ಧವನ್ ಮತ್ತು ನವ್ದೀಪ್ ಸೈನಿಗೆ ಪಾಸಿಟಿವ್ ಬಂದಿದೆ. ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಮತ್ತು ಮತ್ತೊಬ್ಬರಿಗೆ ಕೊರೊನಾ ದೃಢಪಟ್ಟಿದೆ. ಫೆ. 1 ರಂದು ರುತುರಾಜ್ ಗಾಯಕ್ವಾಡ್ಗೆ ಫೆ. 2 ರಂದು ಶ್ರೇಯಸ್ ಅಯ್ಯರ್ ಮತ್ತು ಸ್ಫೋಟರ್ಸ್ ಮಸಾಜ್ ಥೆರಪಿಯವರಾದ ರಾಜೀವ್ ಕುಮಾರ್ಗೆ ಪಾಸಿಟಿವ್ ಕಂಡುಬಂದಿತ್ತು.
ಚೇತರಿಸಿಕೊಳ್ಳುತ್ತಿರುವ ಧವನ್:
ಕೊರೊನಾ ಪಾಸಿಟಿವ್ ಕಂಡುಬಂದ ನಂತರ ಶಿಖರ್ ಧವನ್ ಅವರು ತಮ್ಮ ಆರೋಗ್ಯದ ಕುರಿತ ಅಪ್ಡೇಟ್ ನೀಡಿದ್ದಾರೆ. ‘ನಿಮ್ಮ ಶುಭಾಶಯಗಳಿಗಾಗಿ ಎಲ್ಲರಿಗೂ ಧನ್ಯವಾದಗಳು. ನಾನು ಚೆನ್ನಾಗಿಯೇ ಇದ್ದೇನೆ ಮತ್ತು ಎಲ್ಲರ ಪ್ರೀತಿಯಿಂದ ವಿನಮ್ರನಾಗಿದ್ದೇನೆ’ ಎಂದು ಭಾರತದ ಓಪನರ್ ಧವನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಭಾರತ-ವೆಸ್ಟ್ ಇಂಡೀಸ್ ಏಕದಿನ ಸರಣಿ ವೇಳಾಪಟ್ಟಿ:
ಫೆಬ್ರವರಿ 6 – 1 ನೇ ODI, ಅಹ್ಮದಾಬಾದ್
ಫೆಬ್ರವರಿ 9 – 2 ನೇ ODI, ಅಹ್ಮದಾಬಾದ್
ಫೆಬ್ರವರಿ 11 – 3 ನೇ ODI, ಅಹ್ಮದಾಬಾದ್
IND vs WI ODI: ಟೀಮ್ ಇಂಡಿಯಾದಲ್ಲಿ ಕೊರೋನಾತಂಕ: ತಂಡಕ್ಕೆ ಮತ್ತಿಬ್ಬರು ಆಟಗಾರರ ಆಯ್ಕೆ