IPL 2022: ಪಂಜಾಬ್ ಕಿಂಗ್ಸ್ ತಂಡದಲ್ಲಿ ಕನ್ನಡಿಗನಿಗೆ ನಾಯಕತ್ವ ಸಿಗೋದು ಡೌಟ್..!
IPL 2022 Punjab Kings: ಮಯಾಂಕ್ ಕಳೆದ 3 ಸೀಸನ್‌ಗಳಲ್ಲಿ ಪಂಜಾಬ್ ತಂಡದ ಪ್ರಮುಖ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಅವರು ಬ್ಯಾಟಿಂಗ್ ಮೂಲಕ ಅತ್ಯುತ್ತಮ ಕೊಡುಗೆಗಳನ್ನು ನೀಡಿದ್ದಾರೆ.
ಈ ಬಾರಿ ಐಪಿಎಲ್ ಮೆಗಾ ಹರಾಜಿಗಾಗಿ ಎಲ್ಲಾ ತಂಡಗಳು ಸಿದ್ದತೆಯಲ್ಲಿದೆ. ಅದರಲ್ಲೂ ಐಪಿಎಲ್ 15 ಗಾಗಿ ಮೂರು ತಂಡಗಳು ಇನ್ನೂ ಕೂಡ ನಾಯಕನನ್ನು ಘೋಷಿಸಿಲ್ಲ. ಅದರಂತೆ ಆರ್ಸಿಬಿ, ಕೆಕೆಆರ್ ಹಾಗೂ ಪಂಜಾಬ್ ಕಿಂಗ್ಸ್ ಹೊಸ ನಾಯಕನ ಆಯ್ಕೆ ಮಾಡಬೇಕಿದೆ. ಇದಾಗ್ಯೂ ಪಂಜಾಬ್ ಕಿಂಗ್ಸ್ ತಂಡವು ರಿಟೈನ್ ಮಾಡಿಕೊಂಡಿರುವ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರಿಗೆ ನಾಯಕತ್ವ ನೀಡಲಿದೆ ಎನ್ನಲಾಗಿತ್ತು. ಆದರೀಗ ಪಂಜಾಬ್ ಕಿಂಗ್ಸ್ ಕೂಡ ಮೆಗಾ ಹರಾಜಿನ ಮೂಲಕ ಹೊಸ ನಾಯಕನ ಆಯ್ಕೆ ಮಾಡಲು ಬಯಸಿದೆ ಎಂದು ಬಹಿರಂಗವಾಗಿದೆ. ಪಂಜಾಬ್ ಕಿಂಗ್ಸ್ ತಂಡವು ನಾಯಕತ್ವದ ಜವಾಬ್ದಾರಿಯನ್ನು ಮಾಯಂಕ್ ಅಗರ್ವಾಲ್ಗೆ ಹಸ್ತಾಂತರಿಸುವ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಫ್ರಾಂಚೈಸಿ ಮೂಲಗಳು ತಿಳಿಸಿವೆ.
ಕಳೆದ ಕೆಲವು ಸೀಸನ್‌ಗಳಿಂದ ಸತತವಾಗಿ ಪ್ಲೇಆಫ್ ಪ್ರವೇಶಿಸಲು ವಿಫಲವಾಗಿರುವ ಪಂಜಾಬ್ ಕಿಂಗ್ಸ್, ಈ ಬಾರಿ ತನ್ನ ಪ್ರದರ್ಶನವನ್ನು ಸುಧಾರಿಸುವ ಭರವಸೆಯಲ್ಲಿದೆ. ಇದಕ್ಕಾಗಿ ತಂಡಕ್ಕೆ ಅತ್ಯುತ್ತಮ ನಾಯಕನ ಅಗತ್ಯವಿದೆ. ಕಳೆದ ಎರಡು ಸೀಸನ್‌ಗಳಲ್ಲಿ ತಂಡಕ್ಕೆ ನಾಯಕರಾಗಿದ್ದ ಕೆಎಲ್ ರಾಹುಲ್ ಈಗ ಹೊಸ ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್‌ನ ನಾಯಕರಾಗಿದ್ದಾರೆ. ಹೀಗಾಗಿ ಪಂಜಾಬ್ ತಂಡವು ರಾಹುಲ್ ಅವರ ಸ್ಥಾನ ತುಂಬುವ ಬಲಿಷ್ಠ ಆಟಗಾರನನ್ನೇ ಆಯ್ಕೆ ಮಾಡಬೇಕಿದೆ. ಅದರಂತೆ ನಾಯಕತ್ವದ ಗುಣಗಳಿರುವ ಆಟಗಾರನ ಮೇಲೆ ಪಂಜಾಬ್ ಫ್ರಾಂಚೈಸಿ ಕಣ್ಣಿಟ್ಟಿದೆ.
ಹರಾಜಿನ ನಂತರ ನಾಯಕತ್ವದ ನಿರ್ಧಾರ: ಪಂಜಾಬ್ ಕಿಂಗ್ಸ್ ತಂಡವು ಮೆಗಾ ಹರಾಜಿಗೂ ಮುನ್ನ ಮಯಾಂಕ್ ಅಗರ್ವಾಲ್ ಮತ್ತು ಅರ್ಷದೀಪ್ ಸಿಂಗ್ ಅವರನ್ನು ಮಾತ್ರ ಉಳಿಸಿಕೊಂಡಿದೆ. ಹೀಗಾಗಿ ಮಯಾಂಕ್ ಅವರನ್ನು ನಾಯಕನನ್ನಾಗಿ ಮಾಡಬಹುದು ಎನ್ನಲಾಗಿತ್ತು. ಆದರೆ ಫ್ರಾಂಚೈಸಿ ಈ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಹರಾಜು ಮುಗಿಯುವವರೆಗೆ ಯಾವುದೇ ಘೋಷಣೆ ಮಾಡುವುದಿಲ್ಲ ಎಂದು ಪಂಜಾಬ್ ಕಿಂಗ್ ಫ್ರಾಂಚೈಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ನಮಗೆ ಸಾಕಷ್ಟು ಸಮಯವಿದೆ. ಸದ್ಯ, ನಾಯಕನ ಘೋಷಣೆಗೆ ಆತುರವಿಲ್ಲ. ಹರಾಜು ಹೇಗೆ ನಡೆಯುತ್ತದೆ ಎಂಬುದನ್ನು ನೋಡೋಣ. ನಂತರ ನಾವು ನಾಯಕತ್ವವನ್ನು ನಿರ್ಧರಿಸುತ್ತೇವೆ. ಹೀಗಾಗಿ ಹರಾಜಿನ ಬಳಿಕವಷ್ಟೇ ಪಂಜಾಬ್ ಕಿಂಗ್ಸ್ ತಂಡವು ನಾಯಕನನ್ನು ಆಯ್ಕೆ ಮಾಡಲಿದೆ ಎಂದು ಪಿಬಿಕೆಎಸ್ ಅಧಿಕಾರಿ ಹೇಳಿದ್ದಾರೆ.
ಮಯಾಂಕ್‌ಗೆ ನಾಯಕತ್ವದ ಅನುಭವವಿಲ್ಲ: ಮಯಾಂಕ್ ಕಳೆದ 3 ಸೀಸನ್‌ಗಳಲ್ಲಿ ಪಂಜಾಬ್ ತಂಡದ ಪ್ರಮುಖ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಅವರು ಬ್ಯಾಟಿಂಗ್ ಮೂಲಕ ಅತ್ಯುತ್ತಮ ಕೊಡುಗೆಗಳನ್ನು ನೀಡಿದ್ದಾರೆ. ವಿಶೇಷವಾಗಿ ರಾಹುಲ್ ಅವರೊಂದಿಗೆ ಅಗ್ರ ಕ್ರಮಾಂಕದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ನಾಯಕತ್ವದ ವಿಷಯದಲ್ಲಿ ಅನನುಭವಿ. ಮಯಾಂಕ್ ಅಗರ್ವಾಲ್ ಇದುವರೆಗೆ ಯಾವುದೇ ಫ್ರಾಂಚೈಸಿ ನಾಯಕತ್ವ ವಹಿಸಿಲ್ಲ. ಆದರೆ, ಕಳೆದ ಸೀಸನ್ನಲ್ಲಿ ರಾಹುಲ್ ಅನುಪಸ್ಥಿತಿಯಲ್ಲಿ ಪಂಜಾಬ್ ತಂಡಕ್ಕೆ ನಾಯಕತ್ವ ವಹಿಸಿದ್ದರು. ಇದರ ಹೊರತಾಗಿ ಅವರು ರಾಜ್ಯ ತಂಡಕ್ಕಾಗಿ ಅಥವಾ ಇನ್ನಿತರ ತಂಡಗಳ ನಾಯಕರಾಗಿ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿಲ್ಲ. ಹೀಗಾಗಿಯೇ ಪಂಜಾಬ್ ಕಿಂಗ್ಸ್ ಹೊಸ ನಾಯಕನ ಹುಡುಕಾಟದಲ್ಲಿದೆ.
ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ
ಇದನ್ನೂ ಓದಿ: IPL 2022: ಮೆಗಾ ಹರಾಜಿನಲ್ಲಿ 590 ಆಟಗಾರರು: ಯಾವ ದೇಶದಿಂದ ಎಷ್ಟು ಆಟಗಾರರು? ಇಲ್ಲಿದೆ ಸಂಪೂರ್ಣ ಪಟ್ಟಿ
ಇದನ್ನೂ ಓದಿ: Jason Holder: ಡಬಲ್ ಹ್ಯಾಟ್ರಿಕ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ ಜೇಸನ್ ಹೋಲ್ಡರ್
(IPL 2022: Punjab Kings not sure of Mayank Agarwal’s captaincy)