ICC U-19 World Cup: ಕೊರೋನಾ ಗೆದ್ದು ಪಂದ್ಯ ಗೆಲ್ಲಿಸಿಕೊಟ್ಟ ಟೀಮ್ ಇಂಡಿಯಾ ನಾಯಕ-ಉಪನಾಯಕ
Yash Dhull - Shaik Rasheed: 3ನೇ ವಿಕೆಟ್ಗೆ 204 ರನ್ಗಳ ಜೊತೆಯಾಟವಾಡಿದ ಈ ಜೋಡಿ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಅದರಂತೆ ಯಶ್ ಧುಲ್ 110 ಎಸೆತಗಳಲ್ಲಿ 110 ಬಾರಿಸಿ ಮಿಂಚಿದರು.
ಅಂಡರ್ 19 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಫೈನಲ್ ಪ್ರವೇಶಿಸಿದೆ. ಫೆಬ್ರವರಿ 5 ರಂದು ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಯಶ್ ಧುಲ್ ನಾಯಕತ್ವದ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಸೆಣಸಲಿವೆ. ಸೆಮಿಫೈನಲ್ನಲ್ಲಿ ಬಲಿಷ್ಠ ಆಸ್ಟ್ರೇಲಿಯಾಗೆ ಸೋಲುಣಿಸಿರುವ ಟೀಮ್ ಇಂಡಿಯಾ 96 ರನ್ಗಳ ಭರ್ಜರಿ ಜಯ ಸಾಧಿಸಿತ್ತು. ಆದರೆ ಈ ಸೂಪರ್ ಗೆಲುವಿನ ಹಿಂದಿನ ಸೂಪರ್ ಮ್ಯಾನ್ಗಳೆಂದರೆ ಟೀಮ್ ಇಂಡಿಯಾ ನಾಯಕ ಯಶ್ ಧುಲ್ ಹಾಗೂ ಶೇಕ್ ರಶೀದ್. ಏಕೆಂದರೆ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಆರಂಭ ಉತ್ತಮವಾಗಿರಲಿಲ್ಲ. 6 ರನ್ಗಳಿಸಿ ರಘವಂಶಿ ಔಟಾದರೆ, ಹನೂರ್ ಸಿಂಗ್ 16 ರನ್ಗೆ ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು. ಈ ಹಂತದಲ್ಲಿ ಜೊತೆಗೂಡಿದ ಯಶ್ ಧುಲ್ ಹಾಗೂ ಶೇಖ್ ರಶೀದ್ ಅಧ್ಬುತ ಜೊತೆಯಾಟ ಪ್ರದರ್ಶಿಸಿದರು. ಆಸ್ಟ್ರೇಲಿಯಾ ಬೌಲರುಗಳನ್ನು ಅತ್ಯುತ್ತಮವಾಗಿ ಎದುರಿಸಿದ ಈ ಜೋಡಿ ರನ್ ಗತಿಯನ್ನು ಹೆಚ್ಚಿಸುತ್ತಾ ಸಾಗಿದರು. ಅಲ್ಲದೆ ಈ ಜೋಡಿಯ ಜೊತೆಯಾಟವನ್ನು ಮುರಿಯಲು ಆಸ್ಟ್ರೇಲಿಯಾ ಕಿರಿಯರು ಸಾಕಷ್ಟು ಬೆವರಿಸಬೇಕಾಯಿತು.
3ನೇ ವಿಕೆಟ್ಗೆ 204 ರನ್ಗಳ ಜೊತೆಯಾಟವಾಡಿದ ಈ ಜೋಡಿ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಅದರಂತೆ ಯಶ್ ಧುಲ್ 110 ಎಸೆತಗಳಲ್ಲಿ 110 ಬಾರಿಸಿ ಮಿಂಚಿದರು. ತಮ್ಮ ಸ್ಪೋಟಕ ಇನಿಂಗ್ಸ್ನಲ್ಲಿ 1 ಸಿಕ್ಸರ್ ಹಾಗೂ 10 ಬೌಂಡರಿಗಳನ್ನು ಬಾರಿಸಿದ್ದರು. ಮತ್ತೊಂದೆಡೆ ಶೇಖ್ ರಶೀದ್ 108 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 8 ಬೌಂಡರಿಗಳೊಂದಿಗೆ 94 ರನ್ ಬಾರಿಸಿದರೂ 6 ರನ್ಗಳಿಂದ ಶತಕ ವಂಚಿತರಾದರು. ಇದಾಗ್ಯೂ 3ನೇ ವಿಕೆಟ್ನಲ್ಲಿ ಮೂಡಿಬಂದ ಈ ಅದ್ಭುತ ಜೊತೆಯಾಟದ ಪರಿಣಾಮ ಟೀಮ್ ಇಂಡಿಯಾ 290 ರನ್ಗಳ ಬೃಹತ್ ಮೊತ್ತ ಪೇರಿಸುವಂತಾಯಿತು.
ಆದರೆ ಇದೇ ಯಶ್ ಧುಲ್ ಹಾಗೂ ಶೇಖ್ ರಶೀದ್ ವಾರಗಳ ಹಿಂದೆಯಷ್ಟೇ ಕೋವಿಡ್ ಕಾರಣ ಐಸೋಲೇಟ್ ಆಗಿದ್ದರು. ಟೂರ್ನಿಯ ಮಧ್ಯೆದಲ್ಲೇ ಕೊರೋನಾ ಸೋಂಕಿಗೆ ಒಳಗಾಗಿದ್ದ ಈ ಆಟಗಾರರನ್ನು ಪ್ರತ್ಯೇಕವಾಗಿ ಇರಿಸಲಾಗಿತ್ತು. ಇದರಿಂದಾಗಿ ನಾಯಕ ಮತ್ತು ಉಪನಾಯಕ ಸಂಪೂರ್ಣ ಅಭ್ಯಾಸದಿಂದ ದೂರವಾಗಿದ್ದರು. ಅಷ್ಟೇ ಅಲ್ಲದೆ ಲೀಗ್ ಹಂತದ ಎರಡು ಪಂದ್ಯಗಳನ್ನು (ಐರ್ಲೆಂಡ್ ಮತ್ತು ಉಗಾಂಡಾ ವಿರುದ್ಧ) ಆಡಲು ಸಾಧ್ಯವಾಗಿರಲಿಲ್ಲ. ಭಾರತ ತಂಡವು ಈ ಎರಡೂ ಪಂದ್ಯಗಳಲ್ಲಿ ಸುಲಭ ಜಯಗಳನ್ನು ದಾಖಲಿಸಿ ನಾಕ್-ಔಟ್ ಹಂತಕ್ಕೆ ತಲುಪಿತು. ಇತ್ತ ಈ ಪಂದ್ಯಕ್ಕೂ ಮುನ್ನ ಯಶ್ ಧುಲ್ ಹಾಗೂ ಶೇಖ್ ರಶೀದ್ ಕೊರೋನಾ ಸೋಂಕಿನಿಂದ ಗುಣಮುಖರಾಗಿ ತಂಡವನ್ನು ಸೇರಿಕೊಂಡಿದ್ದರು.
ಅತ್ತ ಕೊರೋನಾ ಸೋಂಕನ್ನು ಗೆದ್ದು ಬಂದ ತರುಣರು ನಿರ್ಣಾಯಕ ಪಂದ್ಯದಲ್ಲಿ ತಮ್ಮ ಆಗಮನವನ್ನು ಇಡೀ ವಿಶ್ವಕ್ಕೆ ಸಾರಿದರು. ಅತ್ಯಾಧ್ಭುತವಾಗಿ 204 ರನ್ಗಳ ಜೊತೆಯಾಟವಾಡುವ ಮೂಲಕ ಕೊರೋನಾ ಟೆಂಪ್ರವರಿ ಫಾರ್ಮ್ ಪರ್ಮನೆಂಟ್ ಎಂಬುದನ್ನು ತೋರಿಸಿಕೊಟ್ಟರು. ಅದರಂತೆ ಟೀಮ್ ಇಂಡಿಯಾ ಗೆಲುವಿನಲ್ಲಿ ನಾಯಕ ಹಾಗೂ ಉಪನಾಯಕ ಪ್ರಮುಖ ಪಾತ್ರವಹಿಸಿದರು.
ಅತ್ತ 291 ರನ್ಗಳ ಗುರಿ ಪಡೆದ ಆಸ್ಟ್ರೇಲಿಯಾ 194 ರನ್‌ಗಳಿಗೆ ಆಲೌಟ್ ಆಯಿತು. ಟೀಮ್ ಇಂಡಿಯಾ ಪರ ವಿಕಿ ಓಸ್ಟ್ವಾಲ್ 3 ವಿಕೆಟ್ ಪಡೆದು ಮಿಂಚಿದರು. ಇದರೊಂದಿಗೆ ಟೀಮ್ ಇಂಡಿಯಾ 6ನೇ ಬಾರಿ ಅಂಡರ್ 19 ವಿಶ್ವಕಪ್ ಫೈನಲ್ ಪ್ರವೇಶಿಸಿತು. ಇದರೊಂದಿಗೆ ಸತತ 4ನೇ ಬಾರಿ ಫೈನಲ್ ಪ್ರವೇಶಿಸಿದ ದಾಖಲೆಯನ್ನು ಟೀಮ್ ಇಂಡಿಯಾ ಮಾಡಿದೆ. 2018 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಫೈನಲ್‌ನಲ್ಲಿ ಟೀಮ್ ಇಂಡಿಯಾ ಗೆದ್ದಿತ್ತು. ಇದಕ್ಕೂ ಮುನ್ನ 2016 (ವೆಸ್ಟ್ ಇಂಡೀಸ್‌ಗೆ) ಮತ್ತು 2020 (ಬಾಂಗ್ಲಾದೇಶ) ರಲ್ಲಿ ಭಾರತ ಫೈನಲ್‌ನಲ್ಲಿ ಸೋಲನುಭವಿಸಿತ್ತು. ಇದೀಗ ಇಂಗ್ಲೆಂಡ್ ವಿರುದ್ದ ಫೈನಲ್ಗೆ ಸಜ್ಜಾಗಿರುವ ಭಾರತ ಚಾಂಪಿಯನ್ ಪಟ್ಟ ಅಲಂಕರಿಸುವ ವಿಶ್ವಾಸದಲ್ಲಿದೆ.
ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ
ಇದನ್ನೂ ಓದಿ: IPL 2022: ಮೆಗಾ ಹರಾಜಿನಲ್ಲಿ 590 ಆಟಗಾರರು: ಯಾವ ದೇಶದಿಂದ ಎಷ್ಟು ಆಟಗಾರರು? ಇಲ್ಲಿದೆ ಸಂಪೂರ್ಣ ಪಟ್ಟಿ
ಇದನ್ನೂ ಓದಿ: Jason Holder: ಡಬಲ್ ಹ್ಯಾಟ್ರಿಕ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ ಜೇಸನ್ ಹೋಲ್ಡರ್
(1 week ago, both were Covid positive’: Yash Dhull, Shaik Rasheed on splendid knocks in U19 WC SF)