ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಛನ್ನಿ ಸೋದರಳಿಯನ ಅರೆಸ್ಟ್ ಮಾಡಿದ ಇ.ಡಿ.; ಇಂದು ಸಿಬಿಐ ಕೋರ್ಟ್ನಲ್ಲಿ ವಿಚಾರಣೆ
ಪಂಜಾಬ್ನಲ್ಲಿ ವಿಧಾನಸಭೆ ಚುನಾವಣೆ ಫೆ.20ರಂದು ನಡೆಯಲಿದ್ದು, 117 ವಿಧಾನಸಭಾ ಕ್ಷೇತ್ರಗಳಿಗೆ ಅಂದು ಮತದಾನ ನಡೆಯಲಿದೆ. ಹೀಗೆ ಚುನಾವಣೆ ಕೆಲವೇ ದಿನಗಳ ಬಾಕಿ ಇರುವಾಗ ಇ.ಡಿ.ದಾಳಿ ನಡೆದಿದ್ದರ ಬಗ್ಗೆ ಛನ್ನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಛನ್ನಿ(Punjab Chief Minister Charanjit Singh Channi) ಸೋದರಳಿಯ ಭೂಪೇಂದ್ರ ಸಿಂಗ್ರನ್ನು ಇ.ಡಿ. (ED)ಬಂಧಿಸಿದೆ. ಅಕ್ರಮ ಮರಳು ಗಣಿಗಾರಿಕೆ ಸಂಬಂಧಿತ ಕೇಸ್ನಲ್ಲಿ ಭೂಪೇಂದ್ರ ಸಿಂಗ್ ಮನೆ, ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. ನಿನ್ನೆ ಸಂಜೆ ಅವರನ್ನು ಬಂಧಿಸಿದ್ದು, ಇಂದು ಸಿಬಿಐ ಕೋರ್ಟ್ಗೆ ಹಾಜರುಪಡಿಸಲಿದೆ. ಪಂಜಾಬ್ ವಿಧಾನಸಭೆ ಚುನಾವಣೆ ಕೆಲವೇ ದಿನಗಳು ಬಾಕಿ ಇರುವಾಗ ಇಂಥದ್ದೊಂದು ಬೆಳವಣಿಗೆ ತುಂಬ ಮಹತ್ವದ್ದೆನಿಸಿದೆ. ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಡಿ ಇ.ಡಿ. ಕಳೆದ ತಿಂಗಳು ಪಂಜಾಬ್ನ ವಿವಿಧೆಡೆ ರೇಡ್ ಮಾಡಿ, ಸುಮಾರು 10 ಕೋಟಿ ರೂಪಾಯಿಗಳನ್ನು ಜಪ್ತಿ ಮಾಡಿದ್ದು, ಅದರಲ್ಲಿ 8 ಕೋಟಿ ರೂಪಾಯಿ ಭೂಪಿಂದರ್ ಸಿಂಗ್ರಿಗೆ ಸೇರಿದ್ದಾಗಿದೆ.
ಪಂಜಾಬ್ನಲ್ಲಿ ಅಕ್ರಮ ಮರಳು ಗಣಿಗಾರಿಕೆ ಸಂಬಂಧಪಟ್ಟು 2018ರ ಮಾರ್ಚ್ 7ರಂದು ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಆ ಎಫ್ಐಆರ್ ಆಧಾರದ ಮೇಲೆ ಜನವರಿಯಲ್ಲಿ ಛನ್ನಿ ಸೋದರಳಿಯ ಭೂಪಿಂದರ್ ಸಿಂಗ್ ಹನಿಯವರಿಗೆ ಸೇರಿದ 10 ಸ್ಥಳಗಳ ಮೇಲೆ ಇ.ಡಿ.ದಾಳಿ ನಡೆದಿತ್ತು. ಈ ಕೇಸ್ನಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿರುವ ಬಗ್ಗೆಯೂ ಕೇಸ್ ದಾಖಲಿಸಿಕೊಂಡಿರುವ ಇ.ಡಿ. ಇದೀಗ ಭೂಪಿಂದರ್ ಸಿಂಗ್ರನ್ನು ಬಂಧಿಸಿದೆ. ದಾಳಿ ನಡೆಸಿದ ಸಂದರ್ಭದಲ್ಲಿ ಸಿಕ್ಕ ದಾಖಲೆಗಳು ದೋಷಪೂರಿತವಾಗಿವೆ. ಅಕ್ರಮವಾಗಿ ಆಸ್ತಿ ವರ್ಗಾವಣೆಯಾಗಿದ್ದು ಬೆಳಕಿಗೆ ಬಂದಿದೆ. ಈ ಆಸ್ತಿ ವಹಿವಾಟಿಗೆ ಸಂಬಂಧಪಟ್ಟಂತೆ ಮೊಬೈಲ್ ಫೋನ್, 21 ಲಕ್ಷ ರೂ.ಗೂ ಅಧಿಕ ಮೌಲ್ಯದ ಚಿನ್ನ, 12 ಲಕ್ಷ ರೂ.ಮೌಲ್ಯದ ರೊಲೆಕ್ಸ್ ವಾಚ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇ.ಡಿ. ಅಧಿಕಾರಿಗಳು ತಿಳಿಸಿದ್ದಾರೆ.
ಭೂಪಿಂದರ್ ಸಿಂಗ್, ಕುಮಾರ್ ಮತ್ತು ಕುದ್ರಾತ್ ದೀಪ್ ಸಿಂಗ್ ಎಂಬುವರು ಸೇರಿ 2018ರಲ್ಲಿ ಪ್ರೊವೈಡರ್ ಓವರ್ಸೀಸ್ ಕನ್ಸಲ್ಟನ್ಸಿ ಲಿಮಿಟೆಡ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಅದರಲ್ಲಿ ತಲಾ ಶೇ.33.33 ಶೇರು ಹೊಂದಿದ್ದರೆ. 2019-20ರ ಸಾಲಿನಲ್ಲಿ ಈ ಸಂಸ್ಥೆ 18.77 ಲಕ್ಷ ರೂಪಾಯಿ ವಹಿವಾಟು ನಡೆಸಿದೆ ಎಂದೂ ಇ.ಡಿ. ಮಾಹಿತಿ ನೀಡಿದೆ. ಜನವರಿ 18ರಂದು ನಡೆಸಿದ ರೈಡ್ನಲ್ಲಿ ಭೂಪಿಂದರ್ ಸಿಂಗ್ ಮತ್ತು ಅವರ ಪಾರ್ಟ್ನರ್ ಸಂದೀಪ್ ಕುಮಾರ್ರಿಂದ ಒಟ್ಟು 10 ಕೋಟಿ ರೂಪಾಯಿ ಜಪ್ತಿ ಮಾಡಿದ್ದರೂ ಅದರಲ್ಲಿ 8 ಕೋಟಿ ರೂಪಾಯಿ ಭೂಪಿಂದರ್ ಸಿಂಗ್ರಿಗೆ ಸೇರಿದ್ದೇ ಆಗಿದೆ.
ಪಂಜಾಬ್ನಲ್ಲಿ ವಿಧಾನಸಭೆ ಚುನಾವಣೆ ಫೆ.20ರಂದು ನಡೆಯಲಿದ್ದು, 117 ವಿಧಾನಸಭಾ ಕ್ಷೇತ್ರಗಳಿಗೆ ಅಂದು ಮತದಾನ ನಡೆಯಲಿದೆ. ಹೀಗೆ ಚುನಾವಣೆ ಕೆಲವೇ ದಿನಗಳ ಬಾಕಿ ಇರುವಾಗ ಇ.ಡಿ.ದಾಳಿ ನಡೆದಿದ್ದರ ಬಗ್ಗೆ ಛನ್ನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಂಜಾಬ್ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ನನ್ನನ್ನು ಟ್ರ್ಯಾಪ್ ಮಾಡಲು ಕೇಂದ್ರಸರ್ಕಾರ ಪಿತೂರಿ ನಡೆಸುತ್ತಿದೆ ಎಂದು ಈ ಹಿಂದೆಯೇ ಆರೋಪಿಸಿದ್ದಾರೆ. ಜನವರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪಂಜಾಬ್ಗೆ ಬಂದಿದ್ದಾಗ ಅವರಿಗೆ ಫಿರೋಜ್ಪುರಕ್ಕೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಆ ಬಗ್ಗೆ ಸೇಡು ತೀರಿಸಿಕೊಳ್ಳಲು ಕೇಂದ್ರ ಸರ್ಕಾರ ಇ.ಡಿ.ದಾಳಿ ನಡೆಸಿದೆ. ಈ ಮೂಲಕ ಬಿಜೆಪಿ ದ್ವೇಷದ ರಾಜಕಾರಣ ನಡೆಸುತ್ತಿದೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಚಲಿಸುವ ಬಸ್ ಹತ್ತಲು ಹೋಗಿ ಕೆಳಗೆ ಬಿದ್ದ ವಿದ್ಯಾರ್ಥಿ; ಮುಂದೆ ಆಗಿದ್ದೇನು? ನೀವೇ ನೋಡಿ
Published On - 8:49 am, Fri, 4 February 22