Maharashtra: ಪುಣೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿತ; ಆರು ಮಂದಿ ಕಾರ್ಮಿಕರು ಸಾವು
ಇದುವರೆಗೆ ಒಟ್ಟು ಆರು ಮಂದಿಯ ದೇಹ ಸಿಕ್ಕಿದ್ದು, ಮೃತದೇಹಗಳನ್ನು ನಗರದ ಸ್ಯಾಸೋನ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದು ಕುಸಿದುಬಿದ್ದ ಪರಿಣಾಮ 6 ಮಂದಿ ಮೃತಪಟ್ಟ ಘಟನೆ ಪುಣೆಯ ಯರವಾಡ ಪ್ರದೇಶದಲ್ಲಿ ನಡೆದಿದೆ. ಈ ದುರ್ಘಟನೆ ಫೆ.3ರಂದು ರಾತ್ರಿ 11ಗಂಟೆ ಹೊತ್ತಿಗೆ ಘಟನೆ ನಡೆದಿದೆ. ಯರವಾಡದ ಶಾಸ್ತ್ರನಗರದಲ್ಲಿ, ಮಾಲ್ವೊಂದಕ್ಕೆ ಸ್ಲ್ಯಾಬ್ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಆದರೆ ಇದು ಕುಸಿದುಬಿದ್ದಿದೆ. ಅಡಿಯಲ್ಲಿ ಸಿಲುಕಿದ 5-6 ಕಾರ್ಮಿಕರು ದುರ್ಮರಣಕ್ಕೀಡಾಗಿದ್ದಾರೆ.
ಇದುವರೆಗೆ ಒಟ್ಟು ಆರು ಮಂದಿಯ ದೇಹ ಸಿಕ್ಕಿದ್ದು, ಮೃತದೇಹಗಳನ್ನು ನಗರದ ಸ್ಯಾಸೋನ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಮುಖವೆಲ್ಲ ಜಜ್ಜಿ ಹೋಗಿರುವ ಕಾರಣ ಮೃತರ ಗುರುತು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಯರವಾಡ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಪ್ರಧಾನಿ ಮೋದಿ ಸಂತಾಪ ಮಹಾರಾಷ್ಟ್ರದಲ್ಲಿ ನಡೆದ ದುರ್ಘಟನೆ ಬಗ್ಗೆ ಪ್ರಧಾನಿ ಕಾರ್ಯಾಲಯ ಟ್ವೀಟ್ ಮಾಡಿ, ಸಂತಾಪ ಸೂಚಿಸಿದೆ. ನಿರ್ಮಾಣ ಹಂತದಲ್ಲಿರುವ ಕಟ್ಟಡ ಕುಸಿದು ಉಂಟಾಗಿರುವ ದುರ್ಘಟನೆಯಿಂದ ನೋವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಾಂತ್ವನಗಳು. ಈ ದುರ್ಘಟನೆಯಲ್ಲಿ ಗಾಯಗೊಂಡವರು ಬೇಗನೇ ಚೇತರಿಸಿಕೊಳ್ಳಲಿ ಎಂದು ಆಶಿಸುತ್ತೇನೆ ಎಂದು ಹೇಳಿದೆ.
ಪುಣೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಇಂಥ ಅವಘಡಗಳು ಪದೇಪದೆ ನಡೆಯುತ್ತಿರುತ್ತವೆ. ಅವ್ಯವಸ್ಥಿತವಾದ ನಿರ್ಮಾಣ ಕಾಮಗಾರಿಯಿಂದಾಗಿ ಹಲವು ದುರಂತಗಳು ನಡೆದಿವೆ. 2019ರ ಜೂನ್ನಲ್ಲಿ ಕೊಂಧ್ವಾ ಪ್ರದೇಶದಲ್ಲಿ ಇಂಥದ್ದೇ ಒಂದು ದೊಡ್ಡ ದುರಂತ ನಡೆದು, 15 ಕಾರ್ಮಿಕರು ದುರ್ಮರಣಕ್ಕೀಡಾಗಿದ್ದರು. ನಾಲ್ವರು ಮಕ್ಕಳೂ ಸಹ ಮೃತಪಟ್ಟಿದ್ದರು. 2017ರಲ್ಲಿ ಹೀಗೆ ನಿರ್ಮಾಣಹಂತದಲ್ಲಿದ್ದ ಸ್ಲ್ಯಾಬ್ ಕುಸಿದ ಕಾರಣ ಮೂವರು ಕಾರ್ಮಿಕರು ಮೃತರಾಗಿದ್ದರು. 2016ರ ಜುಲೈನಲ್ಲಿಯೂ ಕೂಡ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಸ್ಲ್ಯಾಬ್ವೊಂದು ಕುಸಿದು ಬಿದ್ದ ಪರಿಣಾಮ ಬಾಲೇವಾಡಿ ಪ್ರದೇಶದಲ್ಲಿ 9 ಮಂದಿ ಬಲಿಯಾಗಿದ್ದರು. 2012ರಲ್ಲಿ ವಾಘೋಲಿಯಲ್ಲಿ 13 ಮಂದಿ ಜೀವ ಕಳೆದುಕೊಂಡಿದ್ದರು. ಹೀಗೆ ನಗರೀಕರಣ ನಡೆಯುತ್ತಿರುವ ಪುಣೆಯಲ್ಲಿ, ಅದೇ ಕೆಲಸಕ್ಕೆ ಜೀವ ಕಳೆದುಕೊಳ್ಳುವವರ ಸಂಖ್ಯೆಯೂ ಹೆಚ್ಚುತ್ತಿದೆ.
ಇದನ್ನೂ ಓದಿ: IND vs WI: ಟೀಮ್ ಇಂಡಿಯಾದಲ್ಲಿ ಕೊರೊನಾ: ಹೊಸ ಅಪ್ಡೇಟ್ ಏನು?, ಪಂದ್ಯ ನಡೆಯುತ್ತಾ, ಇಲ್ವಾ?: ಇಲ್ಲಿದೆ ಮಾಹಿತಿ
Published On - 8:10 am, Fri, 4 February 22