Ratan Tata Birthday: ದೇಶದ ಖ್ಯಾತ ಉದ್ಯಮಿ ರತನ್​ ಟಾಟಾರಿಗೆ 84ನೇ ಹುಟ್ಟುಹಬ್ಬದ ಸಂಭ್ರಮ; ಇವರ ಬಗೆಗಿನ ಕುತೂಹಲಕಾರಿ ವಿಷಯಗಳು ಇಲ್ಲಿವೆ

Ratan Tata: ರತನ್​ ಟಾಟಾ ತರಬೇತಿ ಪಡೆದ ಪೈಲಟ್ ಆಗಿದ್ದಾರೆ. ಅಷ್ಟೇ ಅಲ್ಲ, ಅವರ ಬಳಿ ಅದಕ್ಕಾಗಿ ಲೈಸೆನ್ಸ್ ಕೂಡ ಇದೆ. 2007ರಲ್ಲಿ ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ ಶೋದಲ್ಲಿ F-16 (ಯುಎಸ್​ ಏರ್​​ಫೋರ್ಸ್​ನ ಫೈಟಿಂಗ್​ ಫ್ಯಾಲ್ಕನ್​) ಹಾರಿಸಿದ್ದಾರೆ.

Ratan Tata Birthday: ದೇಶದ ಖ್ಯಾತ ಉದ್ಯಮಿ ರತನ್​ ಟಾಟಾರಿಗೆ 84ನೇ ಹುಟ್ಟುಹಬ್ಬದ ಸಂಭ್ರಮ; ಇವರ ಬಗೆಗಿನ ಕುತೂಹಲಕಾರಿ ವಿಷಯಗಳು ಇಲ್ಲಿವೆ
ರತನ್ ಟಾಟಾ
Follow us
TV9 Web
| Updated By: Lakshmi Hegde

Updated on: Dec 28, 2021 | 3:03 PM

ದೇಶದ ಖ್ಯಾತ, ಉದಾರ ಉದ್ಯಮಿ ರತನ್​ ಟಾಟಾರಿಗೆ ಇಂದು 84ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ(Ratan Tata Birthday).  ಟಾಟಾ ಗ್ರೂಪ್ (Tata Group)​ ಅಧ್ಯಕ್ಷರಾಗಿ ಯಶಸ್ವಿಯಾಗಿ ಉದ್ಯಮ ನಡೆಸಿ, 75ನೇ ವಯಸ್ಸಿನಲ್ಲಿ ಅಧಿಕಾರಿ ಬಿಟ್ಟುಕೊಟ್ಟ ಅವರು ಭಾರತಕ್ಕೆ ನೀಡಿದ ಕೊಡುಗೆ ಅಪಾರ. ಇವರು ಕೇವಲ ಉದ್ಯಮಿಯಷ್ಟೇ ಅಲ್ಲ, ತತ್ವಜ್ಞಾನಿಯೂ ಹೌದು. ದೇಶ ಕೊವಿಡ್​ 19 ಸಂಕಷ್ಟಕ್ಕೀಡಾಗಿರುವ ಸಮಯದಲ್ಲಿ ಕೂಡ ಅವರು ಕೋಟಿ ರೂಪಾಯಿಗಳಷ್ಟು ದೇಣಿಗೆ ಕೊಟ್ಟಿದ್ದಾರೆ. ಭಾರತದ ಬಿಕ್ಕಟ್ಟಿನ ಸಮಯದಲ್ಲಿ ತಮ್ಮ ಕೈಲಾದ ನೆರವು ನೀಡಿದ್ದಾರೆ. ರತನ್​ ಟಾಟಾ 2000ನೇ ಇಸ್ವಿಯಲ್ಲಿ ಪದ್ಮಭೂಷಣ ಮತ್ತು 2008ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಇಂದು 84ನೇ ವರ್ಷದ ಬರ್ತ್​ ಡೇ ಸಂಭ್ರಮದಲ್ಲಿರುವ ರತನ್​ ಟಾಟಾರಿಗೆ ಅನೇಕ ಗಣ್ಯರು ಶುಭ ಕೋರಿದ್ದಾರೆ. ದೇಶಕ್ಕೆ ಅವರ ಸೇವೆಯನ್ನು ಸ್ಮರಿಸಿದ್ದಾರೆ. ಈ ಹೊತ್ತಲ್ಲಿ ರತನ್​ ಟಾಟಾ ಬಗ್ಗೆ ಒಂದಷ್ಟು ಕುತೂಹಲಕಾರಿ ಮಾಹಿತಿ ಇಲ್ಲಿದೆ..

1937ರ ಡಿಸೆಂಬರ್​ 28ರಂದು ಹುಟ್ಟಿದ ರತನ್​ ಟಾಟಾ ಈ ದೇಶದ ಅತ್ಯಂತ ಯಶಸ್ವಿ ಉದ್ಯಮಿಯಾಗಿ ಬೆಳೆದರು. ವ್ಯಾಪಾರ ನೀತಿಯಲ್ಲಿ ಹೆಸರು ಮಾಡಿದಂತೆ, ತಮ್ಮ ಪರೋಪಕಾರ ನಡೆಯಿಂದಲೂ ಸಿಕ್ಕಾಪಟೆ ಖ್ಯಾತಿ ಗಳಿಸಿದ್ದಾರೆ. ಮುಂಬೈನಲ್ಲಿ ಜನಿಸಿದ ಇವರ ತಂದೆ ಹೆಸರು ನೇವಲ್​ ಟಾಟಾ, ತಾಯಿ ಸೂನಿ ಟಾಟಾ. ಇವರ ಕುಟುಂಬ ಮೂಲತಃ ಗುಜರಾತ್​ನ ಸೂರತ್​​ನಲ್ಲಿದೆ. ಇದರಲ್ಲಿ ಅತ್ಯಂತ ಮುಖ್ಯ ವಿಷಯವೆಂದರೆ, ಟಾಟಾ ಗ್ರೂಪ್​ನ ಸಂಸ್ಥಾಪಕರಾದ ಜೆಮ್ ಸೆಟ್ ಜಿ ಟಾಟಾ (ಜೆಆರ್​ಡಿ ಟಾಟಾ) ಅವರ ದತ್ತುಪುತ್ರ ಈ ನೇವಲ್​ ಟಾಟಾ. ಅಂದರೆ ರತನ್​ ಟಾಟಾ ಅವರು ಜೆಆರ್​ಡಿ ಟಾಟಾರ ದತ್ತುಪುತ್ರನ ಮಗ.

ಅಜ್ಜಿ ಬೆಳೆಸಿದ ಮೊಮ್ಮಗ ಇವರು ! ರತನ್​ ಟಾಟಾ ಹುಟ್ಟಿ, ಅವರಿಗೆ 10ವರ್ಷವಾಗಿದ್ದಾಗ ಅಂದರೆ 1948ರಲ್ಲಿ ಅವರ ತಂದೆ ನೇವಲ್​ ಟಾಟಾ ಮತ್ತು ತಾಯಿ ಸೂನಿ ಟಾಟಾ ಬೇರೆಯಾಗುತ್ತಾರೆ. ಆಗಿನಿಂದಲೂ ರತನ್​ ಟಾಟಾರನ್ನು ಅವರ ಅಜ್ಜಿಯೇ ಬೆಳೆಸುತ್ತಾರೆ. ಇವರು ಮೊಟ್ಟ ಮೊದಲು ಕೆಲಸ ಶುರು ಮಾಡುವುದು 1961ರಲ್ಲಿ, ಟಾಟಾ ಸ್ಟೀಲ್​​ನಲ್ಲಿ.  ಅದಾದ ಬಳಿಕ 1991ರಲ್ಲಿ ಟಾಟಾ ಗ್ರೂಪ್​ನ ಅಧ್ಯಕ್ಷರಾದರು. ಬರೋಬ್ಬರಿ 21 ವರ್ಷ ಅಂದರೆ 2012ರವರೆಗೆ ಟಾಟಾ ಗ್ರೂಪ್​ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಈ 21ವರ್ಷಗಳಲ್ಲಿ ಆದಾಯ, ಲಾಭವನ್ನು ಅಧಿಕಗೊಳಿಸಿದ ಖ್ಯಾತಿ ಅವರಿಗೆ ಸೇರುತ್ತದೆ.

ಅದಕ್ಕೂ ಮೊದಲು ರತನ್​ ಟಾಟಾ ಅವರ ಶಿಕ್ಷಣದ ಬಗ್ಗೆ ನೋಡುವುದಾದರೆ, 1962ರಲ್ಲಿ ಕಾರ್ನೆಲ್​ ಯೂನಿವರ್ಸಿಟಿಯಿಂದ ಬಿ.ಆರ್ಚ್​ ಪದವಿ ಪಡೆದರು. ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಸುಧಾರಿತ ನಿರ್ವಹಣಾ ಪ್ರೋಗ್ರಾಂನ್ನು 1975ರಲ್ಲಿ ಪೂರ್ಣಗೊಳಿಸಿದರು. ಅದಾದ ಬಳಿಕ 1981ರಲ್ಲಿ ಟಾಟಾ ಇಂಡಸ್ಟ್ರೀಸ್​​ನ ಚೇರ್​ಮನ್​ ಆಗಿ ನೇಮಕಗೊಂಡರು. ಈ ಅವಧಿಯಲ್ಲಿ ಟಾಟಾ ಕಂಪನಿಯ ವ್ಯವಹಾರವನ್ನು ಜಾಗತಿಕವಾಗಿ ವಿಸ್ತರಿಸುವ ಪ್ರಯತ್ನದಲ್ಲಿ ರತನ್​ ಟಾಟಾ ತೊಡಗಿಕೊಂಡರು. ಅದರ ಭಾಗವಾಗಿ ಟಾಟಾ ಟೀ ಕಂಪನಿ ಯುಕೆಯ ಟೇಟ್ಲಿ ಟೀ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿತು. ಹಾಗೇ, ಟಾಟಾ ಮೋಟಾರ್ಸ್​, ಜಾಗ್ವಾರ್​ ಲ್ಯಾಂಡ್​ ರೋವರ್​ ಮಾಲೀಕತ್ವ ಪಡೆಯಿತು ಮತ್ತು ಲಂಡನ್​ನ ಕೊರಸ್​ ಸ್ಟೀಲ್​ ಕಂಪನಿಯನ್ನು ಟಾಟಾ ಸ್ಟೀಲ್​ ಸಂಸ್ಥೆ ಸ್ವಾಧೀನಕ್ಕೆ ತೆಗೆದುಕೊಂಡಿತು.

ತರಬೇತಿ ಪಡೆದ ಪೈಲಟ್ ರತನ್​ ಟಾಟಾ ತರಬೇತಿ ಪಡೆದ ಪೈಲಟ್ ಆಗಿದ್ದಾರೆ. ಅಷ್ಟೇ ಅಲ್ಲ, ಅವರ ಬಳಿ ಅದಕ್ಕಾಗಿ ಲೈಸೆನ್ಸ್ ಕೂಡ ಇದೆ. 2007ರಲ್ಲಿ ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ ಶೋದಲ್ಲಿ F-16 (ಯುಎಸ್​ ಏರ್​​ಫೋರ್ಸ್​ನ ಫೈಟಿಂಗ್​ ಫ್ಯಾಲ್ಕನ್​) ಹಾರಿಸಿದ್ದಾರೆ. ಸುಮಾರು 40-50 ನಿಮಿಷ ಹಾರಾಡಿದ ಈ ಯುದ್ಧವಿಮಾನದಲ್ಲಿ ಇವರು ಸಹ ಪೈಲಟ್​ ಆಗಿದ್ದರು. ಆಗ ಅವರಿಗೆ 69ವರ್ಷ.  ಇನ್ನು ರತನ್ ಟಾಟಾರಿಗೆ ಕಾರುಗಳೆಂದರೆ ಭಯಂಕರ ಪ್ರೀತಿ. ಅವರ ಬಳಿ, ಫೆರಾರಿ ಕ್ಯಾಲಿಫೋರ್ನಿಯಾ, ಕ್ಯಾಡಿಲಾಕ್ ಎಕ್ಸ್‌ಎಲ್‌ಆರ್, ಲ್ಯಾಂಡ್ ರೋವರ್ ಫ್ರೀಲ್ಯಾಂಡರ್, ಕ್ರಿಸ್ಲರ್ ಸೆಬ್ರಿಂಗ್, ಹೊಂಡಾ ಸಿವಿಕ್, ಮರ್ಸಿಡಿಸ್ ಬೆಂಜ್ ಎಸ್-ಕ್ಲಾಸ್, ಮಾಸೆರಾಟಿ ಕ್ವಾಟ್ರೊಪೋರ್ಟ್, ಮರ್ಸಿಡಿಸ್ ಬೆಂಜ್ 500 ಎಸ್‌ಎಲ್, ಜಾಗ್ವಾರ್ ಎಫ್-ಟೈಪ್, ಜಾಗ್ವಾರ್ ಎಕ್ಸ್‌ಎಫ್-ಆರ್ ಮತ್ತಿತರ ಕಾರುಗಳ ದೊಡ್ಡ ಸಂಗ್ರಹವೇ ಇದೆ. ಹಾಗೇ, ಅವರಿಗೆ ನಾಯಿಗಳೆಂದರೂ ತುಂಬ ಅಚ್ಚುಮೆಚ್ಚು.

ಇದನ್ನೂ ಓದಿ: England: ಶೂನ್ಯ, ಸೊನ್ನೆ, ಶೂನ್ಯ: ಕ್ರಿಕೆಟ್​ ಇತಿಹಾಸದಲ್ಲಿ 2ನೇ ಬಾರಿ ಕಳಪೆ ದಾಖಲೆ ಬರೆದ ಇಂಗ್ಲೆಂಡ್