ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸುವೇಂದು ಅಧಿಕಾರಿ ಗೆಲುವನ್ನು ಪ್ರಶ್ನಿಸಿ ಸಿಎಂ ಮಮತಾ ಬ್ಯಾನರ್ಜಿ ಕೋಲ್ಕತ್ತ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿರುವ ನ್ಯಾಯಮೂರ್ತಿ ಶಂಪಾ ಸರ್ಕಾರ್ ಇದೀಗ ಸುವೇಂದು ಅಧಿಕಾರಿಗೆ ನೋಟಿಸ್ ನೀಡಿದ್ದಾರೆ. ಮಮತಾ ಬ್ಯಾನರ್ಜಿ ಸಲ್ಲಿಸಿರುವ ಅರ್ಜಿ ವಿಚಾರಣೆ ಬಾಕಿ ಇರುವುದರಿಂದ, ಚುನಾವಣೆಗೆ ಸಂಬಂಧಪಟ್ಟ ಎಲ್ಲ ದಾಖಲೆಗಳು, ಪೇಪರ್ಗಳು, ಡಿವೈಸ್, ವಿಡಿಯೋ ರೆಕಾರ್ಡಿಂಗ್ಗಳನ್ನೆಲ್ಲ ಸಂಬಂಧಪಟ್ಟ ಆಡಳಿತ ಸಂರಕ್ಷಿಸಬೇಕು ಎಂದೂ ನಿರ್ದೇಶನ ನೀಡಿದ್ದಾರೆ.
ಜನರ ಪ್ರತಿನಿಧಿ ಕಾಯ್ದೆ, 1951 ರ ಸೆಕ್ಷನ್ 86 (1) ರಡಿ ಸಲ್ಲಿಸಲಾದ ಈ ಚುನಾವಣಾ ಅರ್ಜಿಯಲ್ಲಿ ದೋಷವಿಲ್ಲ. ಈ ಕೋರ್ಟ್ನಿಂದ ರಚಿತವಾದ ಚುನಾವಣಾ ಅರ್ಜಿ ನಿಯಮದ 24ನೇ ನಿಯಮದಡಿ ಒಂದು ನೋಟಿಸ್ ನೀಡೋಣ. ಮತ್ತೆ ಆಗಸ್ಟ್ 12ರಂದು ವಿಚಾರಣೆ ನಡೆಸಲಾಗವುದು ಎಂದು ಕೋರ್ಟ್ ಹೇಳಿದೆ. ಈ ಪ್ರಕರಣದಲ್ಲಿ ಮಮತಾ ಬ್ಯಾನರ್ಜಿಯವರ ಪರ ಹಿರಿಯ ನ್ಯಾಯವಾದಿ ಸೋಮೇಂದ್ರನಾಥ್ ಮುಖರ್ಜಿ ವಾದಮಂಡಿಸಿದ್ದಾರೆ.
ನಂದಿಗ್ರಾಮದಲ್ಲಿ ಬಿಜೆಪಿ ಗೆಲುವಿನ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಸುವೇಂದು ಅಧಿಕಾರಿ ವಿರುದ್ಧ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಮೊದಲು ಪ್ರಕರಣ ವಿಚಾರಣೆಯನ್ನು ನ್ಯಾಯಮೂರ್ತಿ ಕೌಶಿಕ್ ಚಂದಾ ಕೈಗೆತ್ತಿಕೊಂಡಿದ್ದರು. ಆದರೆ ಅವರು ಬಿಜೆಪಿ ನಾಯಕರೊಂದಿಗೆ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ನಂತರ ಪ್ರಕರಣದ ವಿಚಾರಣೆ ನಡೆಸುವ ನ್ಯಾಯಾಧೀಶರನ್ನು ಬದಲಿಸಬೇಕು ಎಂದು ಮಮತಾ ಬ್ಯಾನರ್ಜಿ ಮತ್ತೊಂದು ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಹಾಸನ: ಮೂಲ ಯೋಜನೆಗೆ ವಿರುದ್ಧವಾಗಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಯತ್ನ; ಹೆಚ್ ಡಿ ರೇವಣ್ಣ ಆಕ್ರೋಶ
Calcutta High Court Issues Notice To Suvendu Adhikari in the Mamata Banerjee’s Election Petition Case