ನವದೆಹಲಿ, ಅಕ್ಟೋಬರ್ 31: ತಮ್ಮ ಮೊಬೈಲ್ ಅನ್ನು ಸರ್ಕಾರ ಹ್ಯಾಕ್ ಮಾಡಿಸಲು ಯತ್ನಿಸುತ್ತಿದೆ ಎಂದು ವಿಪಕ್ಷ ಸದಸ್ಯರು (opposition leaders) ಮಾಡಿರುವ ಆರೋಪ ಸಾಕಷ್ಟು ಸದ್ದು ಮಾಡುತ್ತಿದೆ. ಸರ್ಕಾರಿ ಪ್ರಾಯೋಜಿತ ಹ್ಯಾಕರ್ಗಳು ನಿಮ್ಮ ಐಫೋನ್ ಅನ್ನು ಗುರಿ ಮಾಡಿ ದಾಳಿ ಮಾಡುತ್ತಿರಬಹುದು ಎಂದು ಆ್ಯಪಲ್ನಿಂದ ಬಂದ ಅಲರ್ಟ್ ನೋಟಿಫಿಕೇಶನ್ (threat alert notification) ಅನ್ನು ತೋರಿಸಿ ವಿಪಕ್ಷ ಸದಸ್ಯರು ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. ಈ ಬಗ್ಗೆ ಆ್ಯಪಲ್ ಸಂಸ್ಥೆ ಇಂದು ಮಂಗಳವಾರ (ಅ. 31) ಹೇಳಿಕೆ ನೀಡಿದ್ದು, ತಮ್ಮ ಥ್ರೆಟ್ ನೋಟಿಫಿಕೇಶನ್ಗಳು ಯಾವ ದಾಳಿಕೋರನೆಂದು ನಿರ್ದಿಷ್ಟಪಡಿಸುವುದಿಲ್ಲ (“Can’t attribute threat notifications to any specific state-sponsored attacker”) ಎಂದು ಸ್ಪಷ್ಟಪಡಿಸಿದೆ.
ಎಚ್ಚರಿಕೆ ಸಂದೇಶಗಳು ಯಾವ ಸರ್ಕಾರಿ ಪ್ರಾಯೋಜಿತ ದಾಳಿಕೋರರೆಂದು ನಿರ್ದಿಷ್ಟಪಡಿಸಲಾಗುವುದಿಲ್ಲ ಎಂದು ಆ್ಯಪಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಹಾಗೆಯೇ, ಅದಕ್ಕೆ ಸ್ಪಷ್ಟನೆಯನ್ನೂ ಕೊಟ್ಟಿದೆ. ಯಾವ ಕಾರ್ಯದಿಂದ ಥ್ರೆಟ್ ನೋಟಿಫಿಕೇಶನ್ ಕೊಡಲಾಗಿದೆ ಎಂಬ ಮಾಹಿತಿಯನ್ನು ಕೊಡಲಾಗುವುದಿಲ್ಲ. ಯಾಕೆಂದರೆ, ಆ ಮಾಹಿತಿ ಬಹಿರಂಗಪಡಿಸಿಬಿಟ್ಟರೆ ಸರ್ಕಾರಿ ಪ್ರಾಯೋಜಿತ ದಾಳಿಕೋರರು ಎಚ್ಚೆತ್ತುಕೊಂಡು, ಕಣ್ತಪ್ಪಿಸಿಕೊಳ್ಳಲು ನೆರವಾಗಬಹುದು ಎಂದು ಆ್ಯಪಲ್ ಹೇಳಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.
Can’t attribute threat notifications to any specific state-sponsored attacker: Apple on Opposition MP’s claims of receiving hacking warnings
— Press Trust of India (@PTI_News) October 31, 2023
ಆ್ಯಪಲ್ನ ಥ್ರೆಟ್ ನೋಟಿಫಿಕೇಶನ್ಗಳು ಅಪೂರ್ಣವಾದ ಅಥವಾ ಅಸ್ಪಷ್ಟ ಮಾಹಿತಿ ಅಧರಿಸಿ ಬಂದಿರಬಹುದು. ಈ ಅಲರ್ಟ್ಗಳು ಕೆಲವೊಮ್ಮೆ ತಪ್ಪಾಗಿ ಬಂದಿರಬಹುದು. ಕೆಲ ದಾಳಿಗಳು ಗಮನಕ್ಕೆ ಬರದೇ ಹೋಗಿರಬಹುದು ಎಂದೂ ಆ್ಯಪಲ್ ಹೇಳಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಇದನ್ನೂ ಓದಿ: ಸರ್ಕಾರ ನನ್ನ ಫೋನ್, ಇಮೇಲ್ ಅನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದೆ: ಮಹುವಾ ಮೊಯಿತ್ರಾ
ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ, ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ, ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಶಶಿ ತರೂರ್, ಪವನ್ ಖೇರಾ, ಕೆಸಿ ವೇಣುಗೋಪಾಲ್, ಸುಪ್ರಿಯಾ ಶಿಣಾತ್ರೆ, ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ ಮೊದಲಾದವರು ಆ್ಯಪಲ್ನ ಥ್ರೆಟ್ ನೋಟಿಫಿಕೇಶನ್ ಪಡೆದಿರುವುದಾಗಿ ಹೇಳಿದವರು.
Received text & email from Apple warning me Govt trying to hack into my phone & email. @HMOIndia – get a life. Adani & PMO bullies – your fear makes me pity you. @priyankac19 – you, I , & 3 other INDIAns have got it so far . pic.twitter.com/2dPgv14xC0
— Mahua Moitra (@MahuaMoitra) October 31, 2023
ಸರ್ಕಾರಿ ಪ್ರಾಯೋಜಿತ ದಾಳಿಕೋರರು ನಿಮ್ಮ ಐಫೋನ್ ಗುರಿ ಮಾಡುತ್ತಿರಬಹುದು ಎಂದು ಹೆಡ್ಲೈನ್ ಹಾಕಿ ಆ್ಯಪಲ್ ಈ ಕೆಳಗಿನ ಸಂದೇಶ ಕಳುಹಿಸಿದೆ.
‘ಸರ್ಕಾರಿ ಪ್ರಾಯೋಜಿತ ದಾಳಿಕೋರರು ನಿಮ್ಮನ್ನು ಗುರಿ ಮಾಡುತ್ತಿರುವಂತೆ ಅನಿಸುತ್ತಿದೆ. ನಿಮ್ಮ ಆ್ಯಪಲ್ ಐಡಿಯೊಂದಿಗೆ ಜೋಡಿತವಾಗಿರುವ ಐಫೋನ್ ಅನ್ನು ದೂರದಿಂದಲೇ ನಿಯಂತ್ರಿಸಲು ಇವರು ಪ್ರಯತ್ನಿಸುತ್ತಿದ್ದಾರೆ. ನಿಮ್ಮ ವ್ಯಕ್ತಿತ್ವದ ಕಾರಣಕ್ಕೆ ಈ ದಾಳಿಕೋರರು ವೈಯಕ್ತಿಕವಾಗಿ ನಿಮ್ಮನ್ನು ಟಾರ್ಗೆಟ್ ಮಾಡುತ್ತಿರಬಹುದು. ಸರ್ಕಾರಿ ಪ್ರಾಯೋಜಿತ ದಾಳಿಕೋರರಿಂದ ನಿಮ್ಮ ಸಾಧನವು ಅಪಾಯಕ್ಕೊಳಗಾಗಿದ್ದರೆ ನಿಮ್ಮ ಸೂಕ್ಷ್ಮ ಮಾಹಿತಿ, ಸಂವಹನ, ಕ್ಯಾಮರಾ, ಮೈಕ್ರೋಫೋನ್ ಅನ್ನು ಅವರು ದೂರದಿಂದಲೇ ನಿಯಂತ್ರಿಸಬಲ್ಲವರಾಗಿರುತ್ತಾರೆ. ಇದು ತಪ್ಪಾಗಿ ಬಂದಿರುವ ಎಚ್ಚರಿಕೆಯೂ ಆಗಿದ್ದಿರಬಹುದು. ಆದರೂ ಕೂಡ ಈ ಎಚ್ಚರಿಕೆಯನ್ನು ನೀವು ಗಂಭೀರವಾಗಿ ತೆಗೆದುಕೊಳ್ಳಿ’ ಎಂದು ಥ್ರೆಟ್ ನೋಟಿಫಿಕೇಶನ್ನಲ್ಲಿ ಆ್ಯಪಲ್ ತಿಳಿಸಿದೆ.
ಇದನ್ನೂ ಓದಿ: Mukesh Ambani: ಉದ್ಯಮಿ ಮುಕೇಶ್ ಅಂಬಾನಿಗೆ ಮತ್ತೆ ಜೀವ ಬೆದರಿಕೆ, 400 ಕೋಟಿ ರೂ.ಗೆ ಬೇಡಿಕೆ
ಆ್ಯಪಲ್ ಕಂಪನಿ ತನ್ನ ವೆಬ್ಸೈಟ್ನಲ್ಲಿ ಈ ರೀತಿಯ ಥ್ರೆಟ್ ಅಲರ್ಟ್ ಸಂದೇಶಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದೆ. ಮಾಮೂಲಿಯ ಸೈಬರ್ ಅಪರಾಧಿಗಳಿಗಿಂತ ಸರ್ಕಾರಿ ಪ್ರಾಯೋಜಿತ ದಾಳಿಕೋರರು ವಿಶೇಷ ಸಂಪನ್ಮೂಲಗಳನ್ನು ಬಳಕೆ ಮಾಡುತ್ತಾರೆ. ಬಹಳ ನಿರ್ದಿಷ್ಟ ವ್ಯಕ್ತಿ ಮತ್ತು ಸಾಧನಗಳನ್ನು ಗುರಿ ಮಾಡುತ್ತಾರೆ. ಹೀಗಾಗಿ, ಇವುಗಳನ್ನು ಪತ್ತೆ ಮಾಡುವುದು ಕಷ್ಟವಾಗುತ್ತದೆ ಎಂದು ತನ್ನ ಸಪೋರ್ಟ್ ಪೇಜ್ನಲ್ಲಿ ಆ್ಯಪಲ್ ತಿಳಿಸಿದೆ.
ವಿಪಕ್ಷ ನಾಯಕರ ಐಫೋನ್ಗಳ ಮೇಲೆ ಸರ್ಕಾರಿ ಪ್ರಾಯೋಜಿತ ದಾಳಿಯಾಗಿವೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತನಿಖೆಗೆ ಆದೇಶಿಸಿರುವುದು ವರದಿಯಾಗಿದೆ. ಕೇಂದ್ರ ಸಚಿವ ಎ ವೈಷ್ಣವ್ ಕೂಡ ಈ ವಿಚಾರವನ್ನು ಪುನರುಚ್ಚರಿಸಿದ್ದಾರೆ.
In light of such information and widespread speculation, we have also asked Apple to join the investigation with real, accurate information on the alleged state sponsored attacks. (5/5)
— Ashwini Vaishnaw (@AshwiniVaishnaw) October 31, 2023
‘ಆ್ಯಪಲ್ನಿಂದ ನೋಟಿಫಿಕೇಶನ್ ಬಂದಿರುವ ಬಗ್ಗೆ ಕೆಲ ಸಂಸದರು ನೀಡಿರುವ ಹೇಳಿಕೆಗಳು ಆತಂಕ ಮೂಡಿಸುತ್ತವೆ. ಈ ಅಲರ್ಟ್ಗಳು ತಪ್ಪಾಗಿ ಬಂದಿರಬಹುದು ಎಂದು ಆ್ಯಪಲ್ ಹೇಳುತ್ತಿದೆ. ಆ್ಯಪಲ್ ಐಡಿಗಳನ್ನು ಬಹಳ ಸುರಕ್ಷಿತವಾಗಿ ಎನ್ಕ್ರಿಪ್ಟ್ ಮಾಡಲಾಗಿದ್ದು ಅದನ್ನು ಬಳಕೆದಾರರ ಅನುಮತಿ ಇಲ್ಲದೇ ಗುರುತಿಸಲು ಆಗುವುದಿಲ್ಲ. ಎಲ್ಲಾ ಪ್ರಜೆಗಳ ಸುರಕ್ಷತೆ ಮತ್ತು ಖಾಸಗಿತನ ಕಾಪಾಡುವ ಕೆಲಸವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಈ ನೋಟಿಫಿಕೇಶನ್ಗಳ ಬುಡ ಹುಡುಕಲು ತನಿಖೆ ನಡೆಸುತ್ತದೆ. ಆ್ಯಪಲ್ ಕೂಡ ಈ ತನಿಖೆಯಲ್ಲಿ ಕೈಜೋಡಿಸಬೇಕೆಂದು ಕೇಳಿಕೊಂಡಿದ್ದೇವೆ’ ಎಂದು ಅಶ್ವಿನಿ ವೈಷ್ಣವ್ ತಮ್ಮ ಸರಣಿ ಟ್ವೀಟ್ಗಳಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ