ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಭಾರೀ ಬದಲಾವಣೆ: ನ.9 ರಿಂದ ಹೊಸ ದರ ಜಾರಿ, 543 ಬ್ರ್ಯಾಂಡ್ಗಳ ಹೊಸ ದರ ಪಟ್ಟಿ ಬಿಡುಗಡೆ
ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರ (NPPA) 543 ಕ್ಯಾನ್ಸರ್ ಔಷಧಗಳ ಪರಿಷ್ಕೃತ ದರ ಪಟ್ಟಿಯನ್ನು ಬಿಡುಗಡೆ ಮಾಡಿದೆ. 2026 ನವೆಂಬರ್ 9ರಿಂದ ಜಾರಿ. ಎಲ್ಲ ಔಷಧಗಳ ಬೆಲೆಯೂ ಇಳಿದಿಲ್ಲ. 137 ಔಷಧಗಳಿಗೆ ಶೇ. 30ರ ವ್ಯಾಪಾರ ಲಾಭಾಂಶ ಮಿತಿ ಹೇರಿದ್ದು, ಕೆಲವು ಬೆಲೆಗಳು ಶೇ. 70ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ರೋಗಿಗಳು NPPA ವೆಬ್ಸೈಟ್ನಲ್ಲಿ ಪರಿಶೀಲಿಸಬಹುದು. ಸುಪ್ರೀಂ ಕೋರ್ಟ್ ಹಸ್ತಕ್ಷೇಪವೂ ಇದಕ್ಕೆ ಕಾರಣ.

ನವದೆಹಲಿ, ಅಕ್ಟೋಬರ್ 29: ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಔಷಧಗಳ ಬೆಲೆ ಕುರಿತು ಮಹತ್ವದ ಮಾಹಿತಿ ಹೊರಬಿದ್ದಿದೆ. ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರ (NPPA) 543 ಬ್ರ್ಯಾಂಡ್ಗಳ ಕ್ಯಾನ್ಸರ್ ಸಂಬಂಧಿತ ಔಷಧಗಳ ಪರಿಷ್ಕೃತ ಗರಿಷ್ಠ ಚಿಲ್ಲರೆ ಬೆಲೆ (MRP) ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಹೊಸ ದರಗಳು 2026ರ ನವೆಂಬರ್ 9ರಿಂದ ಜಾರಿಗೆ ಬರಲಿವೆ ಎಂದು ನೀಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ. ಆದರೆ ಎಲ್ಲ 543 ಔಷಧಗಳ ಬೆಲೆಯೂ ಕಡಿಮೆಯಾಗಿದೆ ಎಂದು ಅರ್ಥವಲ್ಲ. ಪ್ರತಿ ಔಷಧದ ಹಳೆಯ ಮತ್ತು ಪರಿಷ್ಕೃತ ದರಗಳನ್ನು ಹೋಲಿಸಿದಾಗ ಮಾತ್ರ ಯಾವ ಔಷಧದ ಬೆಲೆ ಎಷ್ಟು ಬದಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ.
NPPA ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಏನಿದೆ? ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಔಷಧ ಇಲಾಖೆಯು ಈ ಪಟ್ಟಿಯನ್ನು ಪ್ರಕಟಿಸಿದೆ. ಅಕ್ಟೋಬರ್ 27, 2026ರವರೆಗೆ ಔಷಧ ಕಂಪನಿಗಳು ನೀಡಿದ ಮಾಹಿತಿಯನ್ನು ಇದರಲ್ಲಿ ಸೇರಿಸಲಾಗಿದೆ. ಪಟ್ಟಿಯಲ್ಲಿ ಔಷಧ ತಯಾರಕರ ಹೆಸರು, ಔಷಧದ ಹೆಸರು, ಬ್ರ್ಯಾಂಡ್, ಔಷಧದ ಪ್ರಮಾಣ, ಅದರ ರೂಪ, ಪ್ಯಾಕ್ ಗಾತ್ರ, ಹಳೆಯ ಎಂಆರ್ಪಿ ಮತ್ತು ಪರಿಷ್ಕೃತ ಎಂಆರ್ಪಿ ಮುಂತಾದ ವಿವರಗಳಿವೆ. ಕಂಪನಿಗಳಿಂದ ಹೊಸ ಮಾಹಿತಿ ಬಂದಂತೆ ಪಟ್ಟಿಯನ್ನು ನವೀಕರಿಸಲಾಗುತ್ತದೆ.
137 ಕ್ಯಾನ್ಸರ್ ಔಷಧಗಳ ವ್ಯಾಪಾರ ಲಾಭಕ್ಕೆ ಶೇ. 30ರ ಮಿತಿ
543 ಬ್ರ್ಯಾಂಡ್ಗಳ ದರ ಪರಿಷ್ಕರಣೆಯ ಹಿಂದೆ 137 ಆಯ್ದ ಕ್ಯಾನ್ಸರ್ ವಿರೋಧಿ ಔಷಧಗಳ ಮೇಲಿನ ವ್ಯಾಪಾರ ಲಾಭವನ್ನು ನಿಯಂತ್ರಿಸುವ ಸರ್ಕಾರದ ಕ್ರಮವಿದೆ. ಔಷಧ ತಯಾರಕರಿಂದ ಔಷಧ ವಿತರಕರು, ಔಷಧ ಅಂಗಡಿಗಳು ಮತ್ತು ಆಸ್ಪತ್ರೆಗಳ ಮೂಲಕ ರೋಗಿಗಳಿಗೆ ತಲುಪುವವರೆಗೆ ಬೆಲೆಯಲ್ಲಿ ಅನಗತ್ಯ ಹೆಚ್ಚಳವಾಗುವುದನ್ನು ತಡೆಯುವುದು ಇದರ ಉದ್ದೇಶ.
ಈ 137 ಔಷಧಗಳ ವ್ಯಾಪಾರ ಅಂಚನ್ನು MRPಯಲ್ಲಿ ಜಿಎಸ್ಟಿ ಹೊರತುಪಡಿಸಿ ಶೇ. 30ಕ್ಕೆ ಮಿತಿಗೊಳಿಸಲಾಗಿದೆ. ಸರ್ಕಾರದ ಅಂದಾಜಿನ ಪ್ರಕಾರ, ಔಷಧವನ್ನು ಅವಲಂಬಿಸಿ ಕೆಲವು ದರಗಳು ಶೇ. 70ರವರೆಗೆ ಇಳಿಯುವ ಸಾಧ್ಯತೆಯಿದೆ.
ಇದನ್ನೂ ಓದಿ: ಭಾರತದಲ್ಲಿ 137 ಕ್ಯಾನ್ಸರ್ ಔಷಧಿಗಳ ಬೆಲೆ ಶೇ. 70ರಷ್ಟು ಇಳಿಕೆ; ನವೆಂಬರ್ 9ರಿಂದಲೇ ಹೊಸ ದರ ಜಾರಿ
ಸುಪ್ರೀಂ ಕೋರ್ಟ್ ತರಾಟೆ
ಕ್ಯಾನ್ಸರ್ ಔಷಧಗಳು ಸೇರಿದಂತೆ ಅಗತ್ಯ ಔಷಧಗಳ ಬೆಲೆಗಳಲ್ಲಿ ಭಾರಿ ವ್ಯತ್ಯಾಸವಿರುವ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಔಷಧವನ್ನು ವಿತರಕರು ಖರೀದಿಸುವ ಬೆಲೆ ಮತ್ತು ಆಸ್ಪತ್ರೆಗಳು ರೋಗಿಗಳಿಗೆ ವಿಧಿಸುವ ಬೆಲೆಯ ನಡುವೆ ದೊಡ್ಡ ಅಂತರ ಏಕೆ ಇದೆ ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಅಕ್ಟೋಬರ್ 27ರಂದು ನಡೆದ ವಿಚಾರಣೆಯಲ್ಲಿ, ಔಷಧಗಳ ಬೆಲೆ ನಿಯಂತ್ರಣಕ್ಕೆ ಸರ್ಕಾರ ಇಷ್ಟು ವರ್ಷ ಏಕೆ ಕ್ರಮ ಕೈಗೊಂಡಿರಲಿಲ್ಲ ಎಂಬ ಪ್ರಶ್ನೆಯನ್ನೂ ನ್ಯಾಯಪೀಠ ಎತ್ತಿತು. ಔಷಧಗಳ ಬೆಲೆ ನಿಗದಿ, ಜೆನೆರಿಕ್ ಔಷಧಗಳ ಬಳಕೆ ಮತ್ತು ವೈದ್ಯಕೀಯ ಸಾಧನಗಳ ನಿಯಂತ್ರಣಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ, ತನ್ನ ತೀರ್ಪನ್ನು ಕಾಯ್ದಿರಿಸಿದೆ.
The National Pharmaceutical Pricing Authority has released a list of brands of anti-cancer medicines with their revised Maximum Retail Price (MRP). The revised price list reflects the information submitted by companies up to October 27, 2026. https://t.co/YgFvaowMwQ
— ANI (@ANI) October 28, 2026
ಖಾಸಗಿ ಆಸ್ಪತ್ರೆಗಳು ಮತ್ತು ಕೇಂದ್ರ ಸರ್ಕಾರವು ಕ್ಯಾನ್ಸರ್ ಔಷಧಗಳು ಹಾಗೂ ವೈದ್ಯಕೀಯ ಉಪಕರಣಗಳ ಮೇಲೆ ಅತಿಯಾದ ಬೆಲೆ ವಿಧಿಸುತ್ತಿರುವುದನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಈ ಕೃತ್ಯವನ್ನು ಲೂಟಿ ಮತ್ತು ಹಗಲು ದರೋಡೆ ಎಂದು ಕರೆದಿತ್ತು. ಕೇವಲ 11 ಸಾವಿರ ರೂ. ಬೆಲೆಯ ಕೀಮೋಥೆರಪಿ ಇಂಜೆಕ್ಷನ್ಗೆ ಖಾಸಗಿ ಆಸ್ಪತ್ರೆಗಳು 1.3 ಲಕ್ಷ ರೂ.ವರೆಗೆ ಬಿಲ್ ಮಾಡಿರುವುದನ್ನು ಸುಪ್ರೀಂ ಕೋರ್ಟ್ ಉದಾಹರಣೆ ಸಹಿತ ವಿವರಿಸಿತ್ತು.
ಎಲ್ಲ ಕ್ಯಾನ್ಸರ್ ಔಷಧಗಳ ಬೆಲೆಯೂ ಕಡಿಮೆಯಾಗುತ್ತದೆಯೇ?
ಇಲ್ಲ. 543 ಬ್ರ್ಯಾಂಡ್ಗಳ ಪರಿಷ್ಕೃತ ಪಟ್ಟಿಯಲ್ಲಿರುವ ಪ್ರತಿಯೊಂದು ಔಷಧದ ಬೆಲೆಯೂ ಕಡಿಮೆಯಾಗಿಲ್ಲ. ಇತ್ತೀಚಿನ ವರದಿಯ ಪ್ರಕಾರ, 146 ಔಷಧಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕೆಲವು ಔಷಧಗಳ ಬೆಲೆಯಲ್ಲಿ ಮಾತ್ರ ಇಳಿಕೆಯಾಗಿದೆ. ಆದ್ದರಿಂದ, ಎಲ್ಲ ಕ್ಯಾನ್ಸರ್ ಔಷಧಗಳ ಬೆಲೆ ಶೇ. 70ರಿಂದ 90ರವರೆಗೆ ಕಡಿಮೆಯಾಗುತ್ತದೆ ಎಂದು ಹೇಳಲಾಗದು.
ರೋಗಿಗಳು ಹೊಸ ಬೆಲೆಯನ್ನು ಹೇಗೆ ಪರಿಶೀಲಿಸಬಹುದು? – ಜಾರಿಗೆ ಬರುವ ದಿನಾಂಕ: 2026ರ ನವೆಂಬರ್ 9. – ಹೊಸ ದರ ಪಟ್ಟಿ: ಎನ್ಪಿಪಿಎಯ ಅಧಿಕೃತ ವೆಬ್ಸೈಟ್ನಲ್ಲಿರುವ ಪರಿಷ್ಕೃತ ಎಂಆರ್ಪಿ ಪಟ್ಟಿಯನ್ನು ಪರಿಶೀಲಿಸಬಹುದು. – ಔಷಧದ ಬೆಲೆ ಪರಿಶೀಲನೆ: ಎನ್ಪಿಪಿಎಯ Pharma Sahi Daam ಮೂಲಕ ಔಷಧದ ದರವನ್ನು ಹುಡುಕಬಹುದು. – ಆಸ್ಪತ್ರೆ ಮತ್ತು ಔಷಧ ಅಂಗಡಿಗಳು: ಹೊಸ ದರ ಜಾರಿಗೆ ಬಂದ ಬಳಿಕ ಪರಿಷ್ಕೃತ ಬೆಲೆಯನ್ನೇ ವಿಧಿಸಬೇಕು ಎಂದು ಸರ್ಕಾರ ಸೂಚಿಸಿದೆ.
543 ಬ್ರ್ಯಾಂಡ್ಗಳ ಪರಿಷ್ಕೃತ ಬೆಲೆ ಪಟ್ಟಿ ಮತ್ತು 137 ಕ್ಯಾನ್ಸರ್ ಔಷಧಗಳ ವ್ಯಾಪಾರ ಲಾಭದ ಮೇಲಿನ ಮಿತಿ ರೋಗಿಗಳಿಗೆ ನೆರವಾಗುವ ನಿರೀಕ್ಷೆಯಿದೆ. ಆದರೆ ನಿಜವಾದ ಉಳಿತಾಯವು ಅವರು ಬಳಸುವ ನಿರ್ದಿಷ್ಟ ಔಷಧದ ಹೊಸ ಎಂಆರ್ಪಿ ಮೇಲೆ ಅವಲಂಬಿತವಾಗಿರುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:00 am, Thu, 29 October 26




