ಕ್ಯಾನ್ಸರ್ ಬಳಿಕ ಹಾರ್ಟ್, ಕಿಡ್ನಿ ಔಷಧಗಳ ದರ ನಿಯಂತ್ರಣಕ್ಕೆ ಚಿಂತನೆ: ರಾಜ್ಯದಿಂದ ಕೇಂದ್ರಕ್ಕೆ ಮನವಿ
ಕ್ಯಾನ್ಸರ್ ಔಷಧಗಳ ಬೆಲೆ ನಿಯಂತ್ರಣದ ನಂತರ, ರಾಜ್ಯದ ಔಷಧ ಆಡಳಿತ ಇಲಾಖೆ ಈಗ ಹೃದಯ ಮತ್ತು ಮೂತ್ರಪಿಂಡ ಕಾಯಿಲೆಗಳ ದುಬಾರಿ ಔಷಧಗಳ ದರ ನಿಯಂತ್ರಣಕ್ಕೆ ಕೇಂದ್ರಕ್ಕೆ ಒತ್ತಾಯಿಸುತ್ತಿದೆ. ದೀರ್ಘಕಾಲದ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಔಷಧಗಳ ವೆಚ್ಚ ದೊಡ್ಡ ಹೊರೆಯಾಗಿದ್ದು, ಇದನ್ನು ತಗ್ಗಿಸಲು ಅಗತ್ಯ ಔಷಧಗಳ ಪಟ್ಟಿ ತಯಾರಿಸಿ, ರಾಷ್ಟ್ರೀಯ ಔಷಧ ಬೆಲೆ ನಿಗಾ ಪ್ರಾಧಿಕಾರ ಮೂಲಕ ದರ ನಿಗದಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಬೆಂಗಳೂರು, ಅಕ್ಟೋಬರ್ 26: ದುಬಾರಿ ಔಷಧಗಳ ಹೊರೆ ಹೊತ್ತಿರುವ ರೋಗಿಗಳಿಗೆ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ನೀಡಲು ಮುಂದಾಗಿದೆ. ಕ್ಯಾನ್ಸರ್ ಔಷಧಗಳ ಬೆಲೆ ನಿಯಂತ್ರಣದ ಬಳಿಕ, ಇದೀಗ ಹೃದಯ ಮತ್ತು ಕಿಡ್ನಿ ಕಾಯಿಲೆಗಳ ಔಷಧಗಳ ದರ ನಿಯಂತ್ರಣಕ್ಕೂ ರಾಜ್ಯ ಔಷಧ ಆಡಳಿತ ಇಲಾಖೆ ಕೇಂದ್ರಕ್ಕೆ ಒತ್ತಾಯಿಸುತ್ತಿದೆ.
ಹೃದಯ ಕಾಯಿಲೆಗಳ ಔಷಧಗಳ ಬೆಲೆ ನಿಯಂತ್ರಣಕ್ಕೆ ಚಿಂತನೆ
ದೀರ್ಘಕಾಲ ಔಷಧ ಸೇವಿಸಬೇಕಾದ ಹೃದಯ ಮತ್ತು ಮೂತ್ರಪಿಂಡದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ದುಬಾರಿ ಔಷಧಗಳ ಖರ್ಚು ದೊಡ್ಡ ಹೊರೆಯಾಗಿದೆ. ಈ ಹೊರೆ ತಗ್ಗಿಸಲು ರಾಜ್ಯದ ಔಷಧ ಆಡಳಿತ ಇಲಾಖೆ ಮಹತ್ವದ ಹೆಜ್ಜೆ ಇಡಲು ಮುಂದಾಗಿದೆ. ಹೃದಯ ಮತ್ತು ಕಿಡ್ನಿ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ದುಬಾರಿ ಔಷಧಗಳ ಪಟ್ಟಿ ಸಿದ್ಧಪಡಿಸಿ, ಅವುಗಳ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ಮುಂದಾಗಿದೆ.
ಇದನ್ನೂ ಓದಿ: ಖಾಸಗಿ ಆಸ್ಪತ್ರೆಗಳಿಗೆ ಹೊಸ ರೂಲ್ಸ್: ಔಷಧ, MRP ಬೆಲೆ ನಮೂದು ಕಡ್ಡಾಯ; ನ.1ರಿಂದ ಜಾರಿ
ಹೃದಯದ ಆರೋಗ್ಯ ಕಾಪಾಡಲು ಪ್ರತಿನಿತ್ಯ ಸೇವಿಸುವ ಹಲವು ಔಷಧಗಳ ಬೆಲೆ ನಿಯಂತ್ರಣಕ್ಕೆ ತರಲು ಚಿಂತನೆ ನಡೆದಿದೆ. ರಕ್ತದೊತ್ತಡ ನಿಯಂತ್ರಣಕ್ಕೆ ಬಳಸುವ ಔಷಧಗಳು, ಹೃದಯ ವೈಫಲ್ಯದ ಚಿಕಿತ್ಸೆಗೆ ನೀಡುವ ಔಷಧಗಳು, ಹೃದಯ ಬಡಿತ ನಿಯಂತ್ರಿಸುವ, ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ, ಹೃದಯಾಘಾತ, ಮೂತ್ರಪಿಂಡ ಸಮಸ್ಯೆಗೆ ಬಳಕೆಯಾಗುವ ಔಷಧ ಸೇರಿದ್ದಂತೆ ದೀರ್ಘಕಾಲ ಬಳಕೆಯಾಗುವ ಔಷಧಗಳ ಬೆಲೆ, ಔಷಧಗಳ ಖರೀದಿ ವೆಚ್ಚ ಹಾಗೂ ಮಾರುಕಟ್ಟೆ ಮಾರಾಟ ದರಗಳ ನಡುವಿನ ವ್ಯತ್ಯಾಸದ ಬಗ್ಗೆ ಮಾಹಿತಿ ಸಂಗ್ರಹಿಸಲು ಇಲಾಖೆ ಮುಂದಾಗಿದೆ. ಯಾವ ಔಷಧಗಳ ಬೆಲೆ ನಿಯಂತ್ರಣ ಅಗತ್ಯ ಎಂಬುದನ್ನು ಗುರುತಿಸಿ, ಸಮಗ್ರ ಪಟ್ಟಿಯನ್ನು ಕೇಂದ್ರದ ಗಮನಕ್ಕೆ ತಂದು ದರ ನಿಗದಿ ಮಾಡಿ ಇಳಿಕೆಗೆ ಒತ್ತಾಯಿಸಲಾಗಿದೆ.
ಕಿಡ್ನಿ ರೋಗಿಗಳು, ಡಯಾಲಿಸಿಸ್ ಮಾಡಿಸಿಕೊಳ್ಳುವವರಿಗೂ ಪರಿಹಾರದ ನಿರೀಕ್ಷೆ
ಹೃದಯದ ಕಾಯಿಲೆಗಳ ಜೊತೆಗೆ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗಳಿಂದ ಬಳಲುತ್ತಿರುವವರಿಗೂ ಔಷಧಗಳ ಖರ್ಚು ದೊಡ್ಡ ಸವಾಲಾಗಿದೆ. ಅದರಲ್ಲೂ ನಿರಂತರ ಚಿಕಿತ್ಸೆ ಪಡೆಯುವವರು ಹಾಗೂ ಡಯಾಲಿಸಿಸ್ ಮಾಡಿಸಿಕೊಳ್ಳುವ ರೋಗಿಗಳಿಗೆ ಔಷಧಗಳ ವೆಚ್ಚ ಆರ್ಥಿಕ ಒತ್ತಡ ಉಂಟುಮಾಡುತ್ತಿದೆ. ಹೀಗಾಗಿ ಕಿಡ್ನಿ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಅಗತ್ಯ ಔಷಧಗಳು ಮತ್ತು ಡಯಾಲಿಸಿಸ್ ರೋಗಿಗಳಿಗೆ ಬೇಕಾಗುವ ಕೆಲವು ಔಷಧಗಳ ಬೆಲೆಗಳ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ. ಈ ಪಟ್ಟಿ ಸಿದ್ಧವಾದ ಬಳಿಕ ಕೇಂದ್ರದ ರಾಷ್ಟ್ರೀಯ ಔಷಧ ಬೆಲೆ ನಿಗಾ ಪ್ರಾಧಿಕಾರವಾದ ರಾಷ್ಟ್ರೀಯ ಔಷಧ ಬೆಲೆ ನಿಗಾ ಪ್ರಾಧಿಕಾರ (NPPA)ಗೆ ಪತ್ರ ಬರೆದು, ಅಗತ್ಯ ಔಷಧಗಳನ್ನು ಬೆಲೆ ನಿಯಂತ್ರಣದ ವ್ಯಾಪ್ತಿಗೆ ತರಲು ಮನವಿ ಮಾಡಲು ಮುಂದಾಗಿದೆ.
ಕೇಂದ್ರದ ನಿರ್ಧಾರದತ್ತ ರೋಗಿಗಳ ಚಿತ್ತ
ಒಟ್ಟಿನಲ್ಲಿ ಕ್ಯಾನ್ಸರ್ ಔಷಧಗಳ ಬೆಲೆ ನಿಯಂತ್ರಣದ ಬಳಿಕ ಹೃದಯ ಮತ್ತು ಕಿಡ್ನಿ ಔಷಧಗಳ ದರ ನಿಯಂತ್ರಣಕ್ಕೂ ಸಿದ್ಧತೆ ನಡೆಯುತ್ತಿದೆ. ದುಬಾರಿ ಔಷಧಗಳ ಖರ್ಚಿನಿಂದ ಕಂಗೆಟ್ಟಿರುವ ರೋಗಿಗಳಿಗೆ ಇದರಿಂದ ನಿಜವಾಗಿಯೂ ರಿಲೀಫ್ ಸಿಗುತ್ತಾ? ಯಾವ ಔಷಧಗಳು ಬೆಲೆ ನಿಯಂತ್ರಣದ ವ್ಯಾಪ್ತಿಗೆ ಬರಲಿವೆ? ಕೇಂದ್ರದ NPPA ತೆಗೆದುಕೊಳ್ಳುವ ಮುಂದಿನ ನಿರ್ಧಾರದ ಮೇಲೆ ರೋಗಿಗಳ ನಿರೀಕ್ಷೆ ನೆಟ್ಟಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




