ಖಾಸಗಿ ಆಸ್ಪತ್ರೆಗಳಿಗೆ ಹೊಸ ರೂಲ್ಸ್: ಔಷಧ, MRP ಬೆಲೆ ನಮೂದು ಕಡ್ಡಾಯ; ನ.1ರಿಂದ ಜಾರಿ
ಕರ್ನಾಟಕದ ಖಾಸಗಿ ಆಸ್ಪತ್ರೆಗಳಲ್ಲಿ ನವೆಂಬರ್ 1ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ಚಿಕಿತ್ಸಾ ದರಪಟ್ಟಿ ಪ್ರದರ್ಶನ ಹಾಗೂ ಔಷಧಗಳ ಖರೀದಿ ಬೆಲೆ ಮತ್ತು MRP ಎರಡನ್ನೂ ಬಿಲ್‌ನಲ್ಲಿ ನಮೂದಿಸುವುದು ಕಡ್ಡಾಯವಾಗಿದೆ. ಆರೋಗ್ಯ ಇಲಾಖೆಯ ಈ ಕ್ರಮದಿಂದ ರೋಗಿಗಳಿಗೆ ಆಸ್ಪತ್ರೆ ವೆಚ್ಚ, ಔಷಧಗಳ ದರಗಳ ಬಗ್ಗೆ ಪಾರದರ್ಶಕ ಮಾಹಿತಿ ಲಭ್ಯವಾಗಲಿದೆ.

ಬೆಂಗಳೂರು, ಅಕ್ಟೋಬರ್ 21: ರೋಗಿಗಳಿಗೆ ಆಸ್ಪತ್ರೆ ಬಿಲ್ ಕಂಡರೆ ಒಂದು ರೀತಿ ನಡುಕ. ಹೀಗಿರುವಾಗ ಚಿಕಿತ್ಸೆ ವೆಚ್ಚದ ಜೊತೆಗೆ ಔಷಧ, ವೈದ್ಯಕೀಯ ಉಪಕರಣಗಳ ಹೆಸರಿನಲ್ಲಿ ಎಷ್ಟು ಹಣ ವಸೂಲಿ ಮಾಡಲಾಗುತ್ತಿದೆ ಎನ್ನುವುದು ಅನೇಕರಿಗೆ ಗೊತ್ತಾಗುವುದಿಲ್ಲ. ಔಷಧಗಳನ್ನ ಆಸ್ಪತ್ರೆಗಳು ಎಷ್ಟು ಬೆಲೆಗೆ ಖರೀದಿಸುತ್ತವೆ, ಅದನ್ನ ರೋಗಿಗಳಿಗೆ ಎಷ್ಟು ಬೆಲೆಗೆ ಮಾರಾಟ ಮಾಡಲಾಗುತ್ತದೆ ಎಂಬ ಮಾಹಿತಿ ಇನ್ಮುಂದೆ ಬಿಲ್‌ನಲ್ಲೇ ಮಾಹಿತಿ ಸಿಗಲಿದೆ. ಆರೋಗ್ಯ ಇಲಾಖೆ ಈ ಮಹತ್ವದ ಕ್ರಮಕ್ಕೆ ಮುಂದಾಗಿದೆ. ನವೆಂಬರ್ 1ರಿಂದ ಕರ್ನಾಟಕದ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಈ ನಿಯಮ ಜಾರಿಗೆ ಬರಲಿದೆ. ಆ ಮೂಲಕ ಆಸ್ಪತ್ರೆಗಳ ಕಳ್ಳಾಟಕ್ಕೂ ಬ್ರೇಕ್ ಬೀಳಲಿದೆ.
ಆಸ್ಪತ್ರೆ ಬಿಲ್‌ನಲ್ಲೇ ಔಷಧದ ಖರೀದಿ ಬೆಲೆ: ನವೆಂಬರ್ 1ರಿಂದಲೇ ಜಾರಿ
ಔಷಧದ ಖರೀದಿ ಬೆಲೆಯಲ್ಲಿ ಗೊಂದಲಕ್ಕೆ ತೆರೆ ಎಳೆಯಲು ಆರೋಗ್ಯ ಇಲಾಖೆ ಮಹತ್ವದ ಕ್ರಮಕ್ಕೆ ಮುಂದಾಗಿದೆ. ನವೆಂಬರ್ 1ರಿಂದ ಆಸ್ಪತ್ರೆಗಳಲ್ಲಿ ಲಭ್ಯವಿರುವ ಚಿಕಿತ್ಸೆಗಳ ಅಧಿಕೃತ ದರಪಟ್ಟಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಲು ಸೂಚನೆ ನೀಡಲಾಗಿದೆ. ಯಾವೆಲ್ಲಾ ಚಿಕಿತ್ಸೆ ಲಭ್ಯವಿದೆ, ಪ್ರತಿಯೊಂದು ಚಿಕಿತ್ಸೆಗೆ ನಿಗದಿಪಡಿಸಿರುವ ದರ ಎಷ್ಟು ಎನ್ನುವ ಮಾಹಿತಿ ರೋಗಿಗಳಿಗೆ ಸುಲಭವಾಗಿ ಲಭ್ಯವಾಗಬೇಕು. ಆಸ್ಪತ್ರೆಗಳ ನೋಂದಣಿ ಕೌಂಟರ್ ಮುಂದೆ ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುವಂತೆ ದರಪಟ್ಟಿ ಅಳವಡಿಸುವಂತೆ ಸೂಚನೆ ನೀಡಿದೆ.
ಚಿಕಿತ್ಸಾ ದರಪಟ್ಟಿ ಪ್ರದರ್ಶನ ಕಡ್ಡಾಯ: ಸಾರ್ವಜನಿಕ ಸ್ಥಳದಲ್ಲಿ ಅಳವಡಿಕೆ
ಇನ್ನು ಔಷಧಗಳ ಬಿಲ್ಲಿಂಗ್ ವಿಚಾರದಲ್ಲೂ ಆರೋಗ್ಯ ಇಲಾಖೆ ಮಹತ್ವದ ಸೂಚನೆ ನೀಡಿದೆ. ಆಸ್ಪತ್ರೆಗಳು ಔಷಧಗಳನ್ನು ಎಷ್ಟು ರೂ.ಗೆ ಖರೀದಿ ಮಾಡುತ್ತವೆ, ರೋಗಿಗಳಿಗೆ ಎಷ್ಟು ಬೆಲೆಗೆ ಬಿಲ್ ಮಾಡುತ್ತವೆ ಎನ್ನುವ ಮಾಹಿತಿ ಇನ್ಮುಂದೆ ಬಿಲ್‌ನಲ್ಲಿ ನಮೂದಿಸಬೇಕು. ಔಷಧಗಳ ಖರೀದಿ ಬೆಲೆ ಹಾಗೂ ಗರಿಷ್ಠ ಚಿಲ್ಲರೆ ಬೆಲೆ ಅಂದರೆ ಎಂಆರ್‌ಪಿ ಎರಡನ್ನೂ ಬಿಲ್‌ನಲ್ಲಿ ನಮೂದಿಸುವಂತೆ ಸೂಚಿಸಲಾಗಿದೆ. ರೋಗಿಗಳಿಗೆ ನೀಡುವ ಬಿಲ್‌ನಲ್ಲಿ ಪ್ರತಿಯೊಂದು ಔಷಧದ ವಿವರ ಪ್ರತ್ಯೇಕವಾಗಿ ಇರಬೇಕು. ಔಷಧದ ಹೆಸರು, ಬ್ರ್ಯಾಂಡ್, ಬ್ಯಾಚ್ ನಂಬರ್, ತಯಾರಿಕಾ ಮತ್ತು ಎಕ್ಸ್‌ಪೈರಿ ದಿನಾಂಕದಂತಹ ವಿವರಗಳನ್ನೂ ದಾಖಲಿಸಬೇಕು.
ವೈದ್ಯಕೀಯ ಸಾಮಗ್ರಿಗಳ ಬಿಲ್ಲಿಂಗ್‌ನಲ್ಲೂ ಪಾರದರ್ಶಕತೆ ತರಲು ಕ್ರಮ
ಕೇವಲ ಔಷಧಗಳಷ್ಟೇ ಅಲ್ಲ, ವೈದ್ಯಕೀಯ ಉಪಕರಣಗಳು, ಸ್ಟೆಂಟ್‌ಗಳು ಹಾಗೂ ಬಳಸಿ ಬಿಸಾಡುವ ವೈದ್ಯಕೀಯ ಸಾಮಗ್ರಿಗಳ ಬಿಲ್ಲಿಂಗ್‌ನಲ್ಲೂ ಪಾರದರ್ಶಕತೆ ಕಾಪಾಡುವಂತೆ ಸೂಚಿಸಲಾಗಿದೆ. ಔಷಧದ ನೈಜ ಖರೀದಿ ಬೆಲೆ ಎಷ್ಟು, ರೋಗಿಗೆ ವಿಧಿಸುತ್ತಿರುವ ಬೆಲೆ ಎಷ್ಟು ಅನ್ನೋದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು. ಆ ಮೂಲಕ ಬಿಲ್‌ನಲ್ಲಿ ನಮೂದಿಸಿರುವ ದರವನ್ನು ಪರಿಶೀಲಿಸಲು ರೋಗಿಗಳಿಗೆ ಅನುಕೂಲವಾಗಲಿದೆ.
ನಿಯಮ ಉಲ್ಲಂಘಿಸಿದರೆ ಕ್ರಮ
ಇನ್ನು ಆಸ್ಪತ್ರೆಗಳಲ್ಲಿ ಔಷಧಗಳ ಖರೀದಿ ಮತ್ತು ಬಿಲ್ಲಿಂಗ್‌ಗೆ ಸಂಬಂಧಿಸಿದ ದಾಖಲೆಗಳ ಸಂರಕ್ಷಣೆಗೂ ಸೂಚನೆ ನೀಡಲಾಗಿದೆ. ಔಷಧಗಳ ಖರೀದಿ ಇನ್‌ವಾಯ್ಸ್ ಖರೀದಿ ದರ ಹಾಗೂ ಬಿಲ್ಲಿಂಗ್ ದಾಖಲೆಗಳನ್ನು ಕನಿಷ್ಟ ಮೂರು ವರ್ಷಗಳ ಕಾಲ ಸಂರಕ್ಷಿಸಬೇಕಾಗುತ್ತದೆ. ಅಗತ್ಯವಿದ್ದಾಗ ಔಷಧ ನಿಯಂತ್ರಣ ಪ್ರಾಧಿಕಾರ ಅಧಿಕಾರಿಗಳು ಈ ದಾಖಲೆಗಳನ್ನು ಪರಿಶೀಲಿಸಲು ಅವಕಾಶವಿರಲಿದೆ. ನಿಯಮಗಳ ಉಲ್ಲಂಘನೆ ಕಂಡುಬಂದರೆ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಕ್ರಮ ಕೈಗೊಳ್ಳುವ ಬಗ್ಗೆಯೂ ಸೂಚನೆ ನೀಡಲಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳು, ಮುಖ್ಯ ವೈದ್ಯಾಧಿಕಾರಿಗಳು ಹಾಗೂ ಔಷಧ ನಿಯಂತ್ರಣ ಪ್ರಾಧಿಕಾರದ ಅಧಿಕಾರಿಗಳ ಮೇಲ್ವಿಚಾರಣೆಯೂ ಮಹತ್ವ ಪಡೆದುಕೊಂಡಿದೆ. ಈ ಸೂಚನೆಗಳು ಕರ್ನಾಟಕದ ಸರ್ಕಾರಿ, ಖಾಸಗಿ ಮತ್ತು ಟ್ರಸ್ಟ್ ಆಸ್ಪತ್ರೆಗಳಿಗೆ ಅನ್ವಯವಾಗಲಿದೆ.
ಇದನ್ನೂ ಓದಿ: ಇನ್ಮುಂದೆ ಆಸ್ಪತ್ರೆ ಬಿಲ್ಗಳಲ್ಲಿ ಔಷಧಗಳ ಖರೀದಿ ಬೆಲೆ, ಎಂಆರ್‌ಪಿ ಎರಡೂ ನಮೂದು ಕಡ್ಡಾಯ
ಒಟ್ಟಿನಲ್ಲಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರಪಟ್ಟಿ ಪ್ರದರ್ಶನದಿಂದ ಹಿಡಿದು ಔಷಧಗಳ ಖರೀದಿ ಬೆಲೆ ಮತ್ತು ಎಂಆರ್‌ಪಿ ನಮೂದಿಸುವವರೆಗೆ ಬಿಲ್ಲಿಂಗ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಆರೋಗ್ಯ ಇಲಾಖೆ ಮುಂದಾಗಿದೆ. ರೋಗಿಗಳಿಗೆ ಚಿಕಿತ್ಸೆ ವೆಚ್ಚ ಬಗ್ಗೆ ಮೊದಲೇ ಮಾಹಿತಿ ಸಿಗಬೇಕು. ಆದರೆ ಇದಕ್ಕೆ ಖಾಸಗಿ ಆಸ್ಪತ್ರೆಗಳಿಂದ ಆರಂಭದಲ್ಲಿಯೇ ವಿರೋಧ ಶುರುವಾಗಿದ್ದು, ನಿಯಮ ಉಲ್ಲಂಘಿಸುವ ಆಸ್ಪತ್ರೆಗಳ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಅಂತ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
