ಶಹಜಾನ್ಪುರ: ಉತ್ತರಪ್ರದೇಶದ ವಿಧಾನಸಭೆ ಚುನಾವಣೆ (Uttar Pradesh Assembly Elction) ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಹಾಗೇ, ಉತ್ತರಪ್ರದೇಶದ ಶಹಜಾನ್ಪುರ ವಿಧಾನಸಭಾ ಕ್ಷೇತ್ರದ, ಸಂಯುಕ್ತ ವಿಕಾಸ್ ಪಾರ್ಟಿ ಅಭ್ಯರ್ಥಿ ವೈಧರಾಜ್ ಕಿಶನ್ ಕೂಡ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಅವರು ನಾಮಪತ್ರ ಸಲ್ಲಿಸಿದ್ದು ಸಖತ್ ಸುದ್ದಿಯಾಗಿದೆ. ವೈಧರಾಜ್ ಕಿಶನ್ ಅವರು ಪಿಪಿಇ ಕಿಟ್ ಧರಿಸಿ, ಕೈಯಲ್ಲಿ ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ಯಾನರ್ ಹಿಡಿದು ನಾಮಪತ್ರ ಸಲ್ಲಿಸಿದ್ದೇ ಹೀಗೆ ಸುದ್ದಿಯಾಗಲು ಕಾರಣ. ಇದುವರೆಗೆ 18 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಇವರೀಗ 19ನೇ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ವೈಧರಾಜ್ ಕೇವಲ ಶಹಜಾನ್ಪುರದಿಂದ ಮಾತ್ರವಲ್ಲ, ಯೋಗಿ ಆದಿತ್ಯನಾಥ್ ಸ್ಪರ್ಧಿಸುತ್ತಿರುವ ಗೋರಖ್ಪುರ ವಿಧಾನಸಭಾ ಕ್ಷೇತ್ರದಿಂದಲೂ ಕಣಕ್ಕಿಳಿಯಲಿದ್ದಾರೆ. ಅಲ್ಲಿ ಕೂಡ ಶೀಘ್ರದಲ್ಲೇ ನಾಮಪತ್ರ ಸಲ್ಲಿಸಲಿದ್ದಾರೆ.
ನೀವ್ಯಾಕೆ ಪಿಪಿಇ ಕಿಟ್ ಧರಿಸಿ ನಾಮಪತ್ರ ಸಲ್ಲಿಸಲು ಬಂದಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಎದುರು ಮೊದಲು ಯಾರು ಬರುತ್ತಾರೋ ಮೊದಲು ಅವರ ದೇಹದ ತಾಪಮಾನ ಚೆಕ್ ಮಾಡುತ್ತೇನೆ. ಅದಕ್ಕಾಗಿಯೇ ಥರ್ಮಲ್ ಸ್ಕ್ಯಾನರ್ ಹಿಡಿದಿದ್ದೇನೆ. ಇನ್ನು ನನ್ನನ್ನು ನಾನು ಕೊರೊನಾದಿಂದ ರಕ್ಷಿಸಿಕೊಳ್ಳುವ ಸಲುವಾಗಿ ಪಿಪಿಇ ಕಿಟ್ ಧರಿಸಿದ್ದೇನೆ. ಸ್ಯಾನಿಟೈಸರ್ ಕೈ ಸ್ವಚ್ಛಗೊಳಿಸಿಕೊಳ್ಳಲು ಬೇಕಾಗುತ್ತದೆ ಎಂದು ಹೇಳಿದರು.
ನಂತರ ತಮ್ಮ ಚುನಾವಣೆ ದಾರಿಯ ಬಗ್ಗೆ ವಿವರಿಸಿದ ಅವರು, ನಾನು ಮೊದಲು 1994ರಲ್ಲಿ ನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿದೆ. 1995ರಲ್ಲಿ ನಂತರ ಚೇರ್ಮನ್ ಪೋಸ್ಟ್ಗಾಗಿ ಹೋರಾಟ ಮಾಡಿದೆ. ಆಗ ನನ್ನ ಕೈಯಲ್ಲಿ ದುಡ್ಡು ಇರಲಿಲ್ಲ. ಹೀಗಾಗಿ ಮತ ಕೇಳುವ ಜತೆ, ಹಣವನ್ನೂ ಕೇಳುತ್ತಿದ್ದೆ. ನಂತರ ಚುನಾವಣೆಯಲ್ಲಿ 8 ಸಾವಿರ ಮತಗಳು ಬಂದವು. 1.5 ಲಕ್ಷ ರೂಪಾಯಿ ನಗದು ಸಂಗ್ರಹವಾಯಿತು. ಇದು ನನ್ನ 19ನೇ ಚುನಾವಣೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೇಡವೆಂದರೂ ತಲೆಗೆ ಸುತ್ತಿದ ರುಮಾಲನ್ನು ಕಿತ್ತು ಬಿಸಾಡಿದ ಸಿದ್ದರಾಮಯ್ಯ ಆಮೇಲೆ ತಮ್ಮ ಕ್ರಾಪು ಸರಿಮಾಡಿಕೊಂಡರು!!