‘ಚಂದ್ರಲೋಕಕ್ಕೆ ಪ್ರವಾಸ.. ಮನೆಗೊಂದು ಸಣ್ಣ ಹೆಲಿಕಾಪ್ಟರ್​’ -ತಮಿಳುನಾಡಿನ ಅಭ್ಯರ್ಥಿಯ ಚುನಾವಣಾ ಪ್ರಣಾಳಿಕೆಗಳಿವು ; ಇದರಲ್ಲಿದೆ ಒಂದು ​ಟ್ವಿಸ್ಟ್

|

Updated on: Mar 25, 2021 | 4:30 PM

Tamil Nadu Assembly Election 2021: ಶರವಣ ಅವರದ್ದು ಬಡ ಕುಟುಂಬ. 33 ವರ್ಷವಾಗಿದ್ದು ಇನ್ನೂ ಮದುವೆಯಾಗಿಲ್ಲ. ವೃದ್ಧ ತಂದೆ-ತಾಯಿಯೊಂದಿಗೆ ವಾಸಿಸುತ್ತಿದ್ದಾರೆ. ನಾಮಿನೇಶನ್​ ಸಲ್ಲಿಸಲು ಕೂಡ ಸಾಲ ಮಾಡಿಯೇ ಹಣ ಡಿಪೋಸಿಟ್​ ಇಟ್ಟಿದ್ದಾರೆ.

‘ಚಂದ್ರಲೋಕಕ್ಕೆ ಪ್ರವಾಸ.. ಮನೆಗೊಂದು ಸಣ್ಣ ಹೆಲಿಕಾಪ್ಟರ್​’ -ತಮಿಳುನಾಡಿನ ಅಭ್ಯರ್ಥಿಯ ಚುನಾವಣಾ ಪ್ರಣಾಳಿಕೆಗಳಿವು ; ಇದರಲ್ಲಿದೆ ಒಂದು ​ಟ್ವಿಸ್ಟ್
ತುಲಂ ಶರವಣ
Follow us on

​ಚೆನ್ನೈ: ನಾನು ಗೆದ್ದರೆ ಅದನ್ನು ಮಾಡಿಸುತ್ತೇನೆ.. ಈ ಯೋಜನೆ ಜಾರಿಗೆ ತರುತ್ತೇನೆ ಎಂದು ಚುನಾವಣೆಗೂ ಪೂರ್ವ ಅಭ್ಯರ್ಥಿಗಳು ಮತದಾರರಿಗೆ ಭರವಸೆ ಕೊಡುವುದು ಸಾಮಾನ್ಯ. ಹಾಗೇ, ತಮಿಳುನಾಡಿನ ವಿಧಾನಸಭಾ ಚುನಾವಣೆಯ ಅಭ್ಯರ್ಥಿಯೊಬ್ಬರು ಸಿಕ್ಕಾಪಟೆ ದುಬಾರಿ ಹಾಗೂ ವಿಲಕ್ಷಣ ಎನಿಸುವ ಭರವಸೆಗಳನ್ನು ನೀಡಿದ್ದಾರೆ. ಇದೇ ಕಾರಣಕ್ಕೆ ಈಗ ದೇಶದ ಗಮನವನ್ನೂ ಸೆಳೆದಿದ್ದಾರೆ.

ಈ ಅಭ್ಯರ್ಥಿಯ ಹೆಸರು ತುಲಂ ಶರವಣನ್​. ದಕ್ಷಿಣ ಮಧುರೈ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಇಂದು ತಮ್ಮ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ನಾನು ಗೆದ್ದರೆ ಕ್ಷೇತ್ರದ ಪ್ರತಿ ಮನೆಗೂ ಒಂದು ಐಫೋನ್​, ಒಂದು ಕಾರು, ಒಂದು ಪುಟ್ಟ ಹೆಲಿಕಾಪ್ಟರ್​, ಬೋಟ್​, ರೊಬೊಟ್​ ನೀಡುತ್ತೇನೆ. ಅಲ್ಲದೆ, ಪ್ರತಿ ಕುಟುಂಬಕ್ಕೂ ಮೂರು ಅಂತಸ್ತಿನ ಮನೆ ನಿರ್ಮಿಸಿಕೊಡುತ್ತೇನೆ. ಅದರಲ್ಲಿ ಸ್ವಿಮ್ಮಿಂಗ್ ಫೂಲ್​ ಇರಲಿದೆ ಎಂದು ಭರವಸೆ ನೀಡಿದ್ದಾರೆ. ಇಷ್ಟೇ ಅಲ್ಲ, ಪ್ರತಿ ಮನೆಯ ಯುವಕರಿಗೂ 1 ಕೋಟಿ ರೂ ನೀಡಲಾಗುವುದು.. ಅಷ್ಟೇ ಅಲ್ಲ, ಚಂದ್ರನಲ್ಲಿಗೆ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದೂ ಪ್ರಾಮಿಸ್ ಮಾಡಿದ್ದಾರೆ.

ಇದರೊಂದಿಗೆ ದಕ್ಷಿಣ ಮಧುರೈನಲ್ಲಿ ಬಾಹ್ಯಾಕಾಶ ಸಂಶೋಧನಾ ಕೇಂದ್ರ, ರಾಕೆಟ್​ ಉಡಾವಣಾ ಸ್ಥಳ, ಬಿಸಲಿನಿಂದ ರಕ್ಷಣೆ ಮಾಡುವ ಕೃತಕ ಮಂಜುಗಡ್ಡೆ ನಿರ್ಮಾಣದ ವಿಚಾರಗಳನ್ನೂ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದಾರೆ. ರಾಜಕಾರಣದಲ್ಲಿ ಯುವಕರನ್ನು ಹೆಚ್ಚು ಸಕ್ರಿಯಗೊಳಿಸಿಕೊಳ್ಳುವ ಆಶಯವನ್ನು ಹೊಂದಿದ್ದಾಗಿ ಹೇಳಿಕೊಂಡಿದ್ದಾರೆ. ಈ ಕ್ಷೇತ್ರದಿಂದ ಒಟ್ಟು 13 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಅವರಲ್ಲಿ ಶರವಣ ಅವರ ಭರವಸೆಗಳು ಭರ್ಜರಿ ವೈರಲ್ ಆಗುತ್ತಿವೆ.

ನಿಜಕ್ಕೂ ಈ ಪ್ರಣಾಳಿಕೆಗಳನ್ನು ಪೂರೈಸ್ತಾರಾ?
ಅಷ್ಟಕ್ಕೂ ಶರವಣ ಇಂಥ ಭರವಸೆಗಳನ್ನು ನೀಡುವುದರ ಹಿಂದೆ ಒಂದು ಬಲವಾದ ಕಾರಣವಿದೆ. ಪ್ರತಿ ಚುನಾವಣೆಗಳೂ ಬಂದಾಗ ರಾಜಕೀಯ ಪಕ್ಷಗಳು ಜನರಿಗೆ ಅನೇಕ ಉಚಿತ ಯೋಜನೆಗಳ ಭರವಸೆ ನೀಡುತ್ತಾರೆ. ಆದರೆ ಚುನಾವಣೆ ಮುಗಿಯುತ್ತಿದ್ದಂತೆ ಎಲ್ಲವನ್ನೂ ಮರೆಯುತ್ತಾರೆ. ಚುನಾವಣೆಯಲ್ಲಿ ಗೆದ್ದರೂ ತಾವು ನೀಡಿದ ಭರವಸೆಗಳನ್ನು ಈಡೇರಿಸುವುದಿಲ್ಲ. ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಉತ್ತಮ ಅಭ್ಯರ್ಥಿಗೆ ಮತ ಹಾಕಿ ಎಂಬ ಸಂದೇಶ ಸಾರಲು ನಾನು ಹೀಗೆ ಮಾಡಿದ್ದೇನೆ ಎಂದು ಶರವಣ ಹೇಳಿಕೊಂಡಿದ್ದಾರೆ.

ಶರವಣ ಮೂಲತಃ ಒಬ್ಬ ಪತ್ರಕರ್ತ ಆಗಿದ್ದು, ಇದೀಗ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಡಸ್ಟ್​​ಬಿನ್​ (ಕಸದತೊಟ್ಟಿ)ಯನ್ನು ಗುರುತಾಗಿಟ್ಟುಕೊಂಡಿದ್ದಾರೆ. ಮತದಾರರು ಯಾವತ್ತೂ ರಾಜಕಾರಣಿಗಳು ನೀಡುವ ಭರವಸೆಗಳನ್ನು ನಂಬಬಾರದು. ಕೇವಲ ಪ್ರಣಾಳಿಕೆಯಲ್ಲಿರುವ ಭರವಸೆಗಳನ್ನು ನಂಬಿ ಅಸಮರ್ಥ ಅಭ್ಯರ್ಥಿಗಳಿಗೆ ಮತ ಹಾಕಿದರೆ, ನಿಮಗೊಬ್ಬ ಸಮರ್ಥ ಜನನಾಯಕ ಸಿಗುವುದಿಲ್ಲ ಎಂಬ ಸಂದೇಶವನ್ನು ಸಾರಿದ್ದಾರೆ.

ಶರವಣ ಅವರದ್ದು ಬಡ ಕುಟುಂಬ. 33 ವರ್ಷವಾಗಿದ್ದು ಇನ್ನೂ ಮದುವೆಯಾಗಿಲ್ಲ. ವೃದ್ಧ ತಂದೆ-ತಾಯಿಯೊಂದಿಗೆ ವಾಸಿಸುತ್ತಿದ್ದಾರೆ. ನಾಮಿನೇಶನ್​ ಸಲ್ಲಿಸಲು ಕೂಡ ಸಾಲ ಮಾಡಿಯೇ ಹಣ ಡಿಪೋಸಿಟ್​ ಇಟ್ಟಿದ್ದಾರೆ. ರಾಜಕಾರಣಿಗಳು ರಾಜಕಾರಣವನ್ನು ಹಣ ಮಾಡುವ ಒಂದು ಉದ್ಯಮವನ್ನಾಗಿಸಿಕೊಂಡಿದ್ದಾರೆ. ಅಧಿಕಾರಕ್ಕೆ ಬಂದ ಕೂಡಲೇ ಜನರ ಅಭಿವೃದ್ಧಿಯನ್ನು ಮರೆಯುತ್ತಾರೆ. ಜನರಿಗೆ ಉದ್ಯೋಗ ಒದಗಿಸುವುದಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಮಾಡುವುದಿಲ್ಲ. ಕೃಷಿ ಅಭಿವೃದ್ಧಿಗಾಗಿ ಯಾವುದೇ ಯೋಜನೆ ರೂಪಿಸುವುದಿಲ್ಲ. ಇಡೀ ರಾಜಕೀಯ ವ್ಯವಸ್ಥೆಯನ್ನು ಮಲಿನ ಮಾಡಿದ್ದಲ್ಲದೆ, ತಾವು ಮಾತ್ರ ಶ್ರೀಮಂತರಾಗಲು ಯೋಚಿಸುತ್ತಿದ್ದಾರೆ ಎಂದು ಶರವಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನನಗೆ ಚುನಾವಣಾ ಪ್ರಚಾರಕ್ಕೂ ಹಣ ಇಲ್ಲ. ಸ್ನೇಹಿತರು, ಸಂಬಂಧಿಗಳಿಂದ ಹಣ ಪಡೆದಿದ್ದೇನೆ. ಆದರೆ ನನ್ನ ಈ ಅಪಹಾಸ್ಯಯುಕ್ತ ಪ್ರಣಾಳಿಕೆಗಳು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್​ ಆಗುತ್ತಿವೆ. ನನ್ನ ಭರವಸೆಗಳ ಹಿಂದಿನ ಉದ್ದೇಶವೇನು ಜನರು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ನಾನು ಚುನಾವಣೆಯಲ್ಲಿ ಗೆಲ್ಲದೆ ಇದ್ದರೂ ಪರವಾಗಿಲ್ಲ, ಈ ಮೂಲಕ ಗೆಲ್ಲುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ಫಲಾನುಭವಿಗಳ ನಿಖರ ಪತ್ತೆಗೆ ಹೊಸ ಉಪಾಯ; ಧಾರವಾಡದಲ್ಲಿ ಹೊಸ ದಾರಿ ಕಂಡುಕೊಂಡ ಗ್ರಾಮ ಲೆಕ್ಕಾಧಿಕಾರಿ