ನವದೆಹಲಿ: ದೇಶೀಯ ವಿಮಾನ ಯಾನದ ಪ್ರಯಾಣ ದರಕ್ಕೆ ಇದ್ದ ಕನಿಷ್ಠ ಮಿತಿಯನ್ನು ನಾಗರಿಕ ವಿಮಾನ ಯಾನ ಸಚಿವಾಲಯವು ಶೇಕಡಾ 5ರಷ್ಟು ತಕ್ಷಣದಿಂದಲೇ ಜಾರಿಗೆ ಬರುವಂತೆ ಹೆಚ್ಚಳ ಮಾಡಿದೆ. ಇದರ ಪರಿಣಾಮವಾಗಿ ಅತ್ಯಂತ ಅಗ್ಗದ ದರಕ್ಕೆ ಸಿಗುತ್ತಿದ್ದ ವಿಮಾನದ ಟಿಕೆಟ್ಗಳು ದುಬಾರಿ ಆಗಲಿವೆ. ಶುಕ್ರವಾರದಂದು ಈ ಬಗ್ಗೆ ಟ್ವೀಟ್ ಮಾಡಿರುವ ನಾಗರಿಕ ವಿಮಾನಯಾನ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ, ಏವಿಯೇಷನ್ ಟರ್ಬೈನ್ ಫ್ಯುಯೆಲ್ (ATF) ದರದಲ್ಲಿ ನಿರಂತರವಾಗಿ ಏರಿಕೆ ಕಂಡಿದ್ದರಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಅಂದ ಹಾಗೆ ಕೊರೊನಾ ಬಿಕ್ಕಟ್ಟಿನ ನಂತರ ಮತ್ತೆ ವಿಮಾನ ಸಂಚಾರವು ಶುರುವಾಯಿತಲ್ಲಾ, ಆಗ ಏಳು ಬ್ಯಾಂಡ್ಗಳ ಮೇಲೆ ವಿಮಾನ ದರಗಳಿಗೆ ಮಿತಿ ಹಾಕಲಾಯಿತು. ಯಾವಾಗ ದೇಶೀಯ ಹಾಗೂ ಅಂತರರಾಷ್ಟ್ರೀಯ ವಿಮಾನಗಳು ಅಮಾನತು ಆದವೋ ಆಗಲೇ ವಿಮಾನಗಳ ಸಂಚಾರ ಕಾಲಾವಧಿಯ ಆಧಾರದ ಮೇಲೆ ಬ್ಯಾಂಡ್ಗಳನ್ನು ನಿರ್ಧರಿಸಲಾಯಿತು.
ದರದ ಮಿತಿಯು ತಾತ್ಕಾಲಿಕ ಮಾತ್ರ. ಒಂದು ಸಲ ವಿಮಾನಗಳ ಕಾರ್ಯಾಚರಣೆ ಸಹಜ ಸ್ಥಿತಿಗೆ ಮರಳಿದ ಮೇಲೆ ಈ ಮಿತಿಗೆ ತಡೆಯನ್ನು ನಿಲ್ಲಿಸಲಾಗುತ್ತದೆ ಎಂದು ಸಚಿವಾಲಯದಿಂದ ತಿಳಿಸಲಾಗಿದೆ. ವಿಮಾನ ಯಾನ ಸಂಸ್ಥೆಗಳು ಶೇಕಡಾ 80ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಣೆ ಮಾಡಲಿದೆ.
ಇದನ್ನೂ ಓದಿ: ಮಾಸ್ಕ್ ಸರಿಯಾಗಿ ಧರಿಸದಿದ್ದಲ್ಲಿ ನಿಲ್ದಾಣ ಮಾತ್ರವಲ್ಲ, ವಿಮಾನದಿಂದಲೂ ಹೊರಗೆ ಹಾಕ್ತಾರೆ