ಖಲಿಸ್ತಾನ್ ಟೈಗರ್ ಫೋರ್ಸ್ ವಿರುದ್ಧದ ಪ್ರಕರಣ: ಪಂಜಾಬ್, ಹರ್ಯಾಣದಲ್ಲಿ ಎನ್ಐಎ ದಾಳಿ

|

Updated on: Jun 06, 2023 | 1:30 PM

ನಿಷೇಧಿತ ಭಯೋತ್ಪಾದಕ ಸಂಘಟನೆಗೆ ನಿಧಿ ಸಂಗ್ರಹಿಸಲು ಮತ್ತು ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ಗಡಿಯಾಚೆಗೆ ಕಳ್ಳಸಾಗಣೆ ಮಾಡಲು ಕ್ರಿಮಿನಲ್ ಸಂಚು ರೂಪಿಸಿದ್ದಕ್ಕೆ ಸಂಬಂಧಿಸಿದಂತೆ ಪಂಜಾಬ್‌ನ ಒಂಬತ್ತು ಮತ್ತು ಹರ್ಯಾಣದ ಒಂದು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.

ಖಲಿಸ್ತಾನ್ ಟೈಗರ್ ಫೋರ್ಸ್ ವಿರುದ್ಧದ ಪ್ರಕರಣ: ಪಂಜಾಬ್, ಹರ್ಯಾಣದಲ್ಲಿ ಎನ್ಐಎ ದಾಳಿ
ಎನ್ಐಎ
Follow us on

ನಿಷೇಧಿತ ಭಯೋತ್ಪಾದಕ ಸಂಘಟನೆ ಖಲಿಸ್ತಾನ್ ಟೈಗರ್ ಫೋರ್ಸ್ (KTF) ಗೆ ಸಂಬಂಧಿಸಿದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇಂದು(ಮಂಗಳವಾರ) ಪಂಜಾಬ್ ಮತ್ತು ಹರ್ಯಾಣದ 10 ಸ್ಥಳಗಳಲ್ಲಿ ಶೋಧ ನಡೆಸಿದೆ. ನಿಷೇಧಿತ ಭಯೋತ್ಪಾದಕ ಸಂಘಟನೆಗೆ ನಿಧಿ ಸಂಗ್ರಹಿಸಲು ಮತ್ತು ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ಗಡಿಯಾಚೆಗೆ ಕಳ್ಳಸಾಗಣೆ ಮಾಡಲು ಕ್ರಿಮಿನಲ್ ಸಂಚು ರೂಪಿಸಿದ್ದಕ್ಕೆ ಸಂಬಂಧಿಸಿದಂತೆ ಪಂಜಾಬ್‌ನ ಒಂಬತ್ತು ಮತ್ತು ಹರ್ಯಾಣದ ಒಂದು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.

ಭಾರತೀಯ ದಂಡ ಸಂಹಿತೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, 1967 ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎನ್‌ಐಎ ಕಳೆದ ವರ್ಷ ಆಗಸ್ಟ್ 20 ರಂದು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿತ್ತು. ಅದೇ ಪ್ರಕರಣದಲ್ಲಿ, ಎನ್‌ಐಎ ಈ ವರ್ಷ ಮೇ 19 ರಂದು ಕೆನಡಾ ಮೂಲದ ‘ಲಿಸ್ಟೆಡ್ ಭಯೋತ್ಪಾದಕ’ ಆರ್ಶ್ ಧಲ್ಲಾನ ಇಬ್ಬರು ‘ವಾಂಟೆಡ್’ ನಿಕಟ ಸಹಚರರು ಫಿಲಿಪೈನ್ಸ್‌ನ ಮನಿಲಾದಿಂದ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಕೂಡಲೇ ಬಂಧಿಸಿತು.

ಇವರಿಬ್ಬರನ್ನು ಅಮೃತಪಾಲ್ ಸಿಂಗ್ ಅಲಿಯಾಸ್ ಅಮ್ಮಿ ಮತ್ತು ಅಮೃತ್ ಸಿಂಗ್ ಎಂದು ಗುರುತಿಸಲಾಗಿದೆ. ಇಬ್ಬರೂ ಪಂಜಾಬ್ ಮೂಲದವರಾಗಿದ್ದು, ವಿಮಾನ ಇಳಿಯುತ್ತಿದ್ದಂತೆ ಎನ್‌ಐಎ ಮುಂಜಾನೆ ಕಾರ್ಯಾಚರಣೆಯಲ್ಲಿ ಬಂಧಿಸಿದೆ.


ಭಾರತದಲ್ಲಿ ನಿಷೇಧಿತ ಸಂಘಟನೆಗಳ ಕಾನೂನುಬಾಹಿರ ಮತ್ತು ಹಿಂಸಾತ್ಮಕ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಎನ್‌ಐಎ ದೆಹಲಿ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರಂಟ್‌ಗಳನ್ನು ಹೊರಡಿಸಿದೆ ಎಂದು ಎನ್‌ಐಎ ಈ ಹಿಂದೆ ತಿಳಿಸಿತ್ತು. ಆರೋಪಿಗಳ ವಿರುದ್ಧ ಪಂಜಾಬ್‌ನಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

ಆರೋಪಿಯು ಭಾರತದಲ್ಲಿ ಕೆಟಿಎಫ್‌ನ ಹಿಂಸಾತ್ಮಕ ಅಪರಾಧ ಚಟುವಟಿಕೆಗಳನ್ನು ಉತ್ತೇಜಿಸಲು ಗೊತ್ತುಪಡಿಸಿದ ಭಯೋತ್ಪಾದಕ ಆರ್ಷದೀಪ್ ಸಿಂಗ್ ಧಲ್ಲಾಗಾಗಿ ಕೆಲಸ ಮಾಡುತ್ತಿದ್ದ ಎಂದು ಎನ್‌ಐಎ ತನಿಖೆಗಳು ಬಹಿರಂಗಪಡಿಸಿವೆ. ಮತ್ತೋರ್ವ ಕುಖ್ಯಾತ ವಾಂಟೆಡ್ ಆರೋಪಿ ಮನ್‌ಪ್ರೀತ್ ಸಿಂಗ್ ಅಲಿಯಾಸ್ ಪೀಟಾ ಜತೆಗೂಡಿ, ಇಬ್ಬರು ಆರೋಪಿಗಳು ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡುವಲ್ಲಿ ತೊಡಗಿದ್ದರು. ಕೆಟಿಎಫ್‌ನ ಆಜ್ಞೆಯ ಮೇರೆಗೆ ದೇಶದಲ್ಲಿ ಹಿಂಸಾಚಾರ ಮತ್ತು ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಯುವಕರನ್ನು ನೇಮಿಸಿಕೊಳ್ಳುತ್ತಿದ್ದರು ಎಂದು ಎನ್‌ಐಎ ಹೇಳಿದೆ.

ಅವರು ನಿಷೇಧಿತ ಸಂಘಟನೆಗೆ ಹಣವನ್ನು ಸಂಗ್ರಹಿಸುವುದಕ್ಕಾಗಿ ಸುಲಿಗೆ ದಂಧೆಯ ಭಾಗವಾಗಿದ್ದರು. ಆರೋಪಿಗಳು ಉದ್ಯಮಿಗಳನ್ನು ಗುರುತಿಸಿ ಸುಲಿಗೆಗೆ ಬೆದರಿಕೆಯೊಡ್ಡುತ್ತಿದ್ದರು. ಅವರು ನಿರಾಕರಿಸಿದರೆ, ಅವರ ಮನೆಗಳು ಮತ್ತು ಇತರ ಆವರಣಗಳ ಮೇಲೆ ಆರೋಪಿಗಳ ಭಾರತ ಮೂಲದ ಸಹಚರರು ಗುಂಡು ಹಾರಿಸುತ್ತಿದ್ದರು ಎಂದು ಎನ್ಐಎ ಹೇಳಿದೆ.

ಇದನ್ನೂ ಓದಿ: ನಾಯಿ ಮಾಂಸ ಮಾರಾಟ ನಿಷೇಧಿಸಿದ ನಾಗಾಲ್ಯಾಂಡ್ ಸರ್ಕಾರದ ಆದೇಶವನ್ನು ರದ್ದು ಮಾಡಿದ ಗೌಹಾಟಿ ಹೈಕೋರ್ಟ್

ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳಂತಹ ಭಯೋತ್ಪಾದಕ ವಸ್ತುಗಳ ಕಳ್ಳಸಾಗಣೆ ಮಾಡಲು ಮತ್ತು ಭಾರತದ ನೆಲದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಹಣವನ್ನು ಸಂಗ್ರಹಿಸಲು ಕ್ರಿಮಿನಲ್ ಪಿತೂರಿಯಲ್ಲಿ ತೊಡಗಿರುವ ಭಯೋತ್ಪಾದಕ ಸಂಘಟನೆಗಳ ಮೇಲೆ NIA ಯ ನಿರಂತರ ನಿಗ್ರಹದ ಭಾಗವಾಗಿ ಈ ಬಂಧನಗಳು ನಡೆದಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:06 pm, Tue, 6 June 23