ತಮಿಳುನಾಡು ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಕೆ.ಅಣ್ಣಾಮಲೈ ರಾಜ್ಯದಲ್ಲಿ ವಲಸೆ ಕಾರ್ಮಿಕರ ಮೇಲೆ ನಡೆಯುತ್ತಿರುವ ಆಪಾದಿತ ದಾಳಿಗೆ ಆಡಳಿತಾರೂಢ ಡಿಎಂಕೆ ಪಕ್ಷವನ್ನು ಹೊಣೆಗಾರರನ್ನಾಗಿ ಮಾಡಿದ ಹಿನ್ನೆಲೆಯಲ್ಲಿ ತಮಿಳುನಾಡು ಪೊಲೀಸರು ಅವರ ವಿರುದ್ಧ ಗುಂಪುಗಳ ನಡುವೆ ಹಿಂಸಾಚಾರ ಪ್ರಚೋದನೆ ಹಾಗೂ ದ್ವೇಷವನ್ನು ಉತ್ತೇಜಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಸೈಬರ್ ಕ್ರೈಂ ವಿಭಾಗವು ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಮತ್ತು ಇತರ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಸೆಕ್ಷನ್‌ಗಳಲ್ಲಿ ಪ್ರಕರಣ ದಾಖಲಿಸಿದೆ. ಅಧಿಕಾರಿಗಳ ಪ್ರಕಾರ, ಘಟನೆಯ ಬಗ್ಗೆ ಬಿಜೆಪಿ ಬಿಹಾರ ಟ್ವಿಟರ್ ಖಾತೆದಾರರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ವಲಸೆ ಕಾರ್ಮಿಕರ ಸಮಸ್ಯೆಯ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿದ್ದ ಅಣ್ಣಾಮಲೈ, ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಆದರೆ ಮುಖ್ಯಮಂತ್ರಿ ಸ್ಟಾಲಿನ್ ನೇತೃತ್ವದ ಡಿಎಂಕೆ ಹಾಗೂ ಅದರ ಮೈತ್ರಿ ಪಕ್ಷದ ನಾಯಕರು ಅವರ ಮೇಲಿನ ದ್ವೇಷಕ್ಕೆ ಕಾರಣವಾಗುತ್ತಿದ್ದಾರೆ ಎಂದು ಆರೋಪಿಸಿದ್ದರು.
ಅಣ್ಣಾಮಲೈ ಸರಣಿ ಟ್ವೀಟ್ ಮಾಡಿ, ಸರ್ಕಾರದ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದರು, ಉತ್ತರ ಭಾರತೀಯರ ಬಗ್ಗೆ ಡಿಎಂಕೆ ಸಂಸದರ ನೀಚ ಕಾಮೆಂಟ್ಗಳು, ಡಿಎಂಕೆ ಸಚಿವರು ಅವರನ್ನು ಪಾನಿಪೂರಿವಾಲಾ ಎಂದು ಕರೆಯುವುದು ಮತ್ತು ಅವರ ಮೈತ್ರಿಕೂಟದ ಸದಸ್ಯರು ಅವರ ವಲಸೆಗೆ ಒತ್ತಾಯಿಸುತ್ತಿರುವುದರ ಪರಿಣಾಮವನ್ನು ನಾವು ನೋಡುತ್ತಿದ್ದೇವೆ ಎಂದಿದ್ದಾರೆ.
ನಾವು ತಮಿಳರು ಜಗತ್ತು ಒಂದೇ ಎನ್ನುವ ಪರಿಕಲ್ಪನೆಯನ್ನು ನಂಬುತ್ತೇವೆ, ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲಿನ ದಾಳಿಗಳ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿರುವ ನಕಲಿ ಸುದ್ದಿಗಳನ್ನು ನೋಡುವುದು ನಿರಾಶಾದಾಯಕವಾಗಿದೆ. ನಾವು ಉತ್ತರದ ವಿರುದ್ಧ ಪ್ರತ್ಯೇಕತೆ ಮನೋಭಾವ ಅಥವಾ ದ್ವೇಷವನ್ನು ಯಾವತ್ತೂ ಹರಡುವುದಿಲ್ಲ ಎಂದಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:13 pm, Sun, 5 March 23