ಇನ್ನು 6 ತಿಂಗಳಲ್ಲಿ ಮಾಧ್ಯಮಗಳನ್ನು ಬಿಜೆಪಿ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತೇವೆ, ಕಾರ್ಯಕರ್ತರಿಗೆ ಭಯಬೇಡ: ಕೆ.ಅಣ್ಣಾಮಲೈ ವಿವಾದಾಸ್ಪದ ಹೇಳಿಕೆ

ಮಾಧ್ಯಮಗಳನ್ನು ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳೋಣ, ಬಿಜೆಪಿ ವಿರುದ್ದ ಸುಳ್ಳು ಮಾಹಿತಿ ನೀಡಿದರೆ ಸುಮ್ಮನೆ ಬಿಡುವುದಿಲ್ಲ, ಬಿಜೆಪಿ ಕಾರ್ಯಕರ್ತರಿಗೆ ಮಾಧ್ಯಮಗಳ ಬಗ್ಗೆ ಭಯ ಬೇಡ ಎಂದು ಬಹಿರಂಗವಾಗಿಯೇ ಹೇಳಿರುವ ಅಣ್ಣಾಮಲೈ, ಮಾಧ್ಯಮಗಳನ್ನು ಅಡಿಯಾಳುಗಳಾಗಿ ಮಾಡಿಕೊಳ್ಳುವಂತೆ ಮಾತನಾಡಿದ್ದಾರೆ.

ಇನ್ನು 6 ತಿಂಗಳಲ್ಲಿ ಮಾಧ್ಯಮಗಳನ್ನು ಬಿಜೆಪಿ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತೇವೆ, ಕಾರ್ಯಕರ್ತರಿಗೆ ಭಯಬೇಡ: ಕೆ.ಅಣ್ಣಾಮಲೈ ವಿವಾದಾಸ್ಪದ ಹೇಳಿಕೆ
ಕೆ.ಅಣ್ಣಾಮಲೈ

ಚೆನ್ನೈ: ತಮಿಳುನಾಡು ಜಿಜೆಪಿಯ ನಿಯೋಜಿತ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ (K. Annamalai) ಅಧಿಕಾರ ಸ್ವೀಕಾರಕ್ಕೂ ಮುನ್ನವೇ ಮಾಧ್ಯಮಗಳನ್ನು (Media) ನಿಯಂತ್ರಿಸಬೇಕೆಂಬ ವಿವಾದಿತ ಹೇಳಿಕೆಯೊಂದನ್ನು ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಶುಕ್ರವಾರದಂದು ತಮಿಳುನಾಡು ರಾಜ್ಯ ಬಿಜೆಪಿ (Tamil Nadu BJP) ಘಟಕದ ಅಧ್ಯಕ್ಷರಾಗಿ (President) ಅಧಿಕಾರ ವಹಿಸಿಕೊಳ್ಳಲಿರುವ ಅವರು, ಮುಂದಿನ ಆರು ತಿಂಗಳಲ್ಲಿ ಮಾಧ್ಯಮಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಿದ್ದೇವೆ ಎನ್ನುವ ಮೂಲಕ ವಿವಾದಕ್ಕೆ ಆಸ್ಪದ ಮಾಡಿಕೊಟ್ಟಿದ್ದಾರೆ.

ಯಾವುದೇ ಮಾಧ್ಯಮ ಸಂಸ್ಥೆ ದೀರ್ಘಕಾಲ ಸುಳ್ಳು ಹರಡುವುದು ಸಾಧ್ಯವಿಲ್ಲ. ಸುಳ್ಳುಸುದ್ದಿ ಹರಡುವುದಕ್ಕೆ ಕಡಿವಾಣ ಹಾಕಲಾಗುವುದು. ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದ ಎಲ್‌.ಮುರುಗನ್‌ ಇದೀಗ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವರಾಗಿದ್ದಾರೆ. ಎಲ್ಲಾ ಮಾಧ್ಯಮಗಳೂ ಅವರ ಕೈಕೆಳಗೇ ಬರುತ್ತವೆ. ಸುಳ್ಳು ಸುದ್ದಿಯನ್ನೇ ಮುಂದಿಟ್ಟುಕೊಂಡು ದೀರ್ಘಕಾಲ ರಾಜಕಾರಣ ಮಾಡುವುದು ಸಾಧ್ಯವಿಲ್ಲ ಎಂದು ಅಣ್ಣಾಮಲೈ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ರೋಡ್​ ಶೋ ವೇಳೆ ಹೇಳಿಕೆ ನೀಡಿದ್ದಾರೆ.

ಮಾಧ್ಯಮಗಳನ್ನು ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳೋಣ, ಬಿಜೆಪಿ ವಿರುದ್ದ ಸುಳ್ಳು ಮಾಹಿತಿ ನೀಡಿದರೆ ಸುಮ್ಮನೆ ಬಿಡುವುದಿಲ್ಲ, ಬಿಜೆಪಿ ಕಾರ್ಯಕರ್ತರಿಗೆ ಮಾಧ್ಯಮಗಳ ಬಗ್ಗೆ ಭಯ ಬೇಡ ಎಂದು ಬಹಿರಂಗವಾಗಿಯೇ ಹೇಳಿರುವ ಅಣ್ಣಾಮಲೈ, ಮಾಧ್ಯಮಗಳನ್ನು ಅಡಿಯಾಳುಗಳಾಗಿ ಮಾಡಿಕೊಳ್ಳುವಂತೆ ಮಾತನಾಡಿದ್ದಾರೆ.

ಕರ್ನಾಟಕ ಕೇಡರ್‌ನ ಐಪಿಎಸ್‌ ಅಧಿಕಾರಿಯಾಗಿದ್ದ ಅಣ್ಣಾಮಲೈ ಈ ಹಿಂದೆಯೂ ಬೇರೆ ಬೇರೆ ಹೇಳಿಕೆಗಳ ಮೂಲಕ ಕೆಲ ವಿವಾದ ಸೃಷ್ಟಿಸಿದ್ದರು. ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅರವಕುರಿಚಿ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಅಣ್ಣಾಮಲೈ ಅವರು ಡಿಎಂಕೆ ಮುಖಂಡ ಸೆಂಥಿಲ್‌ ಬಾಲಾಜಿ ಅವರಿಗೆ ಬೆದರಿಕೆ ಒಡ್ಡಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು. ಇದೀಗ ಪತ್ರಿಕಾ ಸ್ವಾತಂತ್ರ್ಯ ಹರಣ ಮಾಡುವ ಧಾಟಿಯಲ್ಲಿ ಬಹಿರಂಗವಾಗಿಯೇ ಮಾತನಾಡಿರುವ ಅಣ್ಣಾಮಲೈ ಮತ್ತೆ ಪ್ರಜ್ಞಾವಂತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಅಣ್ಣಾಮಲೈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಇದು ಮಾಧ್ಯಮಕ್ಕೆ ಬಹಿರಂಗ ಬೆದರಿಕೆ ಎಂದು ಆಡಳಿತಾರೂಢ ಡಿಎಂಕೆ ಅಭಿಪ್ರಾಯಪಟ್ಟಿದೆ. ಇದು ಮಾಧ್ಯಮವನ್ನು ಹತ್ತಿಕ್ಕುವ, ಬಹಿರಂಗವಾಗಿ ಬೆದರಿಸುವ ಕ್ರಮವಾಗಿದ್ದು, ಅಣ್ಣಾಮಲೈ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ತಮಿಳುನಾಡಿನ ಮಾಹಿತಿ ತಂತ್ರಜ್ಞಾನ ಸಚಿವ ಮನೊ ತಂಗರಾಜ್‌ ಹೇಳಿದ್ದಾರೆ. ಅಣ್ಣಾಮಲೈ ಹೇಳಿಕೆಯನ್ನು ತಮಿಳುನಾಡು ಮಾಧ್ಯಮಗಳು ಸಹ ಖಂಡಿಸಿವೆ.

ಮೇಕೆದಾಟು ವಿಚಾರದಲ್ಲಿ ನಾವು ತಮಿಳುನಾಡು ಪರ: ಅಣ್ಣಾಮಲೈ
ಮೇಕೆದಾಟು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅಣ್ಣಾಮಲೈ, ತಮಿಳುನಾಡು ಬಿಜೆಪಿ ಘಟಕವು ಮೇಕೆದಾಟು ವಿಷಯದಲ್ಲಿ ತಮಿಳುನಾಡು ಸರ್ಕಾರದ ಪರ ಇರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ತಮಿಳುನಾಡಿನ ರೈತರು ಹಾಗೂ ಜನತೆಯ ಪರವಾಗಿ ತಮಿಳುನಾಡು ಬಿಜೆಪಿ ನಿಲ್ಲಲಿದೆ. ಇದರಲ್ಲಿ ಯಾವುದೇ ರಾಜಕೀಯ ಮಾಡುವ ಅಗತ್ಯವಿಲ್ಲ ಎಂದು ಅಣ್ಣಾಮಲೈ ತಮ್ಮ ನಿಲುವನ್ನು ತಿಳಿಸಿದ್ದಾರೆ.

(K Annamalai Tamil Nadu BJP New President Controversial statement on controlling Media houses within 6 months)

ಇದನ್ನೂ ಓದಿ:
K Annamalai: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ನೇಮಕ