Corona third Wave: ಆಗಸ್ಟ್ ಅಂತ್ಯಕ್ಕೆ ಕೊರೊನಾ ಮೂರನೇ ಅಲೆ ನಿಶ್ಚಿತ: ಐಸಿಎಂಆರ್ ಹಿರಿಯ ವೈದ್ಯ
ಆಗಸ್ಟ್ ಅಂತ್ಯದ ವೇಳೆಗೆ ಭಾರತದಾದ್ಯಂತ ಮೂರನೇ ಅಲೆ ವ್ಯಾಪಿಸಲಿದೆ. ಆದರೆ, ಅದರ ಪರಿಣಾಮ ಎರಡನೇ ಅಲೆಯಂತೆಯೇ ಇರುವುದು ಅನುಮಾನ ಎಂದು ಹೇಳಿರುವ ಡಾ.ಸಮೀರನ್ ಪಾಂಡಾ, ಜನರ ದೇಹದಲ್ಲಿ ಕಡಿಮೆಯಾಗುತ್ತಿರುವ ರೋಗ ನಿರೋಧಕ ಶಕ್ತಿಯೂ ಮೂರನೇ ಅಲೆಗೆ ಹಾದಿಯಾಗಬಹುದು ಎಂದಿದ್ದಾರೆ.
ದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆ ಹತೋಟಿಗೆ ಬಂದಂತೆ ತೋರುತ್ತಿದ್ದರೂ ಮೈಮರೆತರೆ ದೊಡ್ಡ ಗಂಡಾಂತರ ನಿಶ್ಚಿತ ಎಂದು ತಜ್ಞರು ಈಗಾಗಲೇ ಅನೇಕ ಬಾರಿ ಎಚ್ಚರಿಸಿದ್ದಾರೆ. ಡೆಲ್ಟಾ ರೂಪಾಂತರಿ (Delta Variant) ಹಾಗೂ ಮೂರನೇ ಅಲೆ (Corona Third Wave) ಯಾವ ಕ್ಷಣದಲ್ಲಿ ಬೇಕಾದರೂ ಪರಿಸ್ಥಿತಿಯನ್ನು ಬದಲಾಯಿಸಬಹುದು ಎಂದು ಎಚ್ಚರಿಸುತ್ತಿದ್ದ ತಜ್ಞರು ಇದೀಗ ಮೂರನೇ ಅಲೆ ಯಾವಾಗ ಬರಬಹುದು ಎನ್ನುವ ಅಂದಾಜು ಮಾಡಿ ಅದರ ಬಗ್ಗೆ ಮಾಹಿತಿ ನೀಡಿದ್ದಾರೆ. ಕೊರೊನಾ ಮೂರನೇ ಅಲೆ ಆಗಸ್ಟ್ ತಿಂಗಳಾಂತ್ಯಕ್ಕೆ (August) ಭಾರತದಲ್ಲಿ ತೀವ್ರಗೊಳ್ಳಲಿದೆ. ಆದರೆ, ಸದ್ಯದ ಲೆಕ್ಕಾಚಾರಗಳ ಪ್ರಕಾರ ಎರಡನೇ ಅಲೆಯಂತೆ ಮೂರನೆ ಅಲೆ ಗಂಭೀರ ಸ್ವರೂಪ ಪಡೆಯುವ ಸಾಧ್ಯತೆಗಳು ಕಡಿಮೆ ಇವೆ ಎಂದು ಐಸಿಎಂಆರ್ನ (ICMR) ಹಿರಿಯ ವೈದ್ಯ ಡಾ.ಸಮೀರನ್ ಪಾಂಡಾ ಎನ್ಡಿಟಿವಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
ಆಗಸ್ಟ್ ತಿಂಗಳಾಂತ್ಯಕ್ಕೆ ಕೊರೊನಾ ಮೂರನೇ ಅಲೆ ಭಾರತವನ್ನು ಅಪ್ಪಳಿಸಲಿದೆಯಾದರೂ ಸಾವು, ನೋವಿನ ಪ್ರಮಾಣ ಎರಡನೇ ಅಲೆಗೆ ಹೋಲಿಸಿದಲ್ಲಿ ಸಾಕಷ್ಟು ಕಡಿಮೆ ಪ್ರಮಾಣದಲ್ಲಿ ಇರಲಿದೆ. ಡೆಲ್ಟಾ ವೈರಾಣುವಿನಿಂದ ಮತ್ತೊಮ್ಮೆ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ಎರಡನೇ ಅಲೆ ವೇಳೆ ವೈದ್ಯಕೀಯ ಕ್ಷೇತ್ರದ ಮೇಲೆ ಉಂಟಾದ ಒತ್ತಡ ಮೂರನೇ ಅಲೆ ಸಂದರ್ಭದಲ್ಲಿ ತಲೆದೋರುವುದಿಲ್ಲ ಎನ್ನಿಸುತ್ತದೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ ಅಂತ್ಯದ ವೇಳೆಗೆ ಭಾರತದಾದ್ಯಂತ ಮೂರನೇ ಅಲೆ ವ್ಯಾಪಿಸಲಿದೆ. ಆದರೆ, ಅದರ ಪರಿಣಾಮ ಎರಡನೇ ಅಲೆಯಂತೆಯೇ ಇರುವುದು ಅನುಮಾನ ಎಂದು ಹೇಳಿರುವ ಡಾ.ಸಮೀರನ್ ಪಾಂಡಾ, ಜನರ ದೇಹದಲ್ಲಿ ಕಡಿಮೆಯಾಗುತ್ತಿರುವ ರೋಗ ನಿರೋಧಕ ಶಕ್ತಿಯೂ ಮೂರನೇ ಅಲೆಗೆ ಹಾದಿಯಾಗಬಹುದು. ಮೊದಲ ಮತ್ತು ಎರಡನೇ ಅಲೆ ವೇಳೆ ದೇಹದಲ್ಲಿದ್ದ ರೋಗ ನಿರೋಧಕ ಶಕ್ತಿ ಈಗ ಕ್ಷೀಣಿಸಿರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಕೊರೊನಾ ನಿಯಂತ್ರಣಕ್ಕಾಗಿ ಹೇರಲಾಗಿದ್ದ ನಿಯಮಾವಳಿಗಳನ್ನು ಬಲುಬೇಗನೇ ಸಡಿಲಿಸುತ್ತಿರುವುದು ಕೂಡಾ ಮೂರನೇ ಅಲೆಗೆ ನಾಂದಿಯಾಗುತ್ತಿದೆ ಎಂದು ಡಾ.ಸಮೀರನ್ ಪಾಂಡಾ ಹೇಳಿದ್ದು, ಏಮ್ಸ್ ನಿರ್ದೇಶಕ ಡಾ.ರಣ್ದೀಪ್ ಗುಲೇರಿಯಾ ಮೂರನೇ ಅಲೆ ಬಗ್ಗೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಇದೇ ವಿಚಾರವಾಗಿ ಕಳವಳ ವ್ಯಕ್ತಪಡಿಸಿರುವ ಐಎಂಎ, ಬೇಸರದ ಸಂಗತಿ ಎಂದರೆ ರಾಜ್ಯ ಸರ್ಕಾರಗಳು ಕೂಡಾ ಕೊರೊನಾ ನಿಯಮಾವಳಿಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದು, ಸಾರ್ವಜನಿಕವಾಗಿ ಜನರು ಗುಂಪುಗೂಡಲಾರಂಭಿಸಿದ್ದಾರೆ. ಇದು ಮತ್ತೆ ಅಪಾಯಕ್ಕೆ ಆಹ್ವಾನ ನೀಡಲಿದೆ ಎಂದು ಹೇಳಿದೆ.
(Corona Third Wave likely to hit India by August end will be less severe than second wave says ICMR doctor)
ಇದನ್ನೂ ಓದಿ: ಕೊವಿಡ್ 3ನೇ ಅಲೆ ಆತಂಕ: ಕೊರೊನಾ ಮಾರ್ಗಸೂಚಿ ಪಾಲಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರದಿಂದ ಸಲಹೆ