ಡಿಸೆಂಬರ್ ಗುರಿ ತಲುಪಲು 66 ಕೋಟಿ ಡೋಸ್ ಲಸಿಕೆ ಪೂರೈಕೆಗೆ ಆರ್ಡರ್; ಕೇಂದ್ರದಿಂದ 1500 ಕೋಟಿ ರೂ ಮುಂಗಡ ಪಾವತಿ

ಜುಲೈ 16ರ ಬೆಳಿಗ್ಗೆಯವರೆಗಿನ ಮಾಹಿತಿ ಪ್ರಕಾರ, ಭಾರತದಲ್ಲಿ 39.53 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಜುಲೈ ತಿಂಗಳಲ್ಲಿ ಇನ್ನೂಳಿದಿರುವ 15 ದಿನಗಳಲ್ಲಿ 12 ಕೋಟಿ ಡೋಸ್ ಲಸಿಕೆ ನೀಡಿಕೆ ಅಸಾಧ್ಯ. ಹೆಚ್ಚೆಂದರೇ 6-7 ಕೋಟಿ ಡೋಸ್ ಲಸಿಕೆ ನೀಡಬಹುದು. ಹೀಗಾಗಿ ಗುರಿಗಿಂತ ಐದಾರು ಕೋಟಿ ಡೋಸ್ ಕಡಿಮೆ ಲಸಿಕೆಯನ್ನು ಜುಲೈ ಅಂತ್ಯಕ್ಕೆ ನೀಡಬೇಕಾಗಬಹುದು.

ಡಿಸೆಂಬರ್ ಗುರಿ ತಲುಪಲು 66 ಕೋಟಿ ಡೋಸ್ ಲಸಿಕೆ ಪೂರೈಕೆಗೆ ಆರ್ಡರ್; ಕೇಂದ್ರದಿಂದ 1500 ಕೋಟಿ ರೂ ಮುಂಗಡ ಪಾವತಿ
ಡಿಸೆಂಬರ್ ಗುರಿ ತಲುಪಲು 66 ಕೋಟಿ ಡೋಸ್ ಲಸಿಕೆ ಪೂರೈಕೆಗೆ ಆರ್ಡರ್; ಕೇಂದ್ರದಿಂದ 1500 ಕೋಟಿ ರೂ ಮುಂಗಡ ಪಾವತಿ
S Chandramohan

| Edited By: sadhu srinath

Jul 16, 2021 | 1:55 PM

ಭಾರತದಲ್ಲಿ ಕೊರೊನಾ ಲಸಿಕೆಯ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರ ಈಗ 66 ಕೋಟಿ ಡೋಸ್ ಲಸಿಕೆ ಖರೀದಿಗೆ ಆರ್ಡರ್ ನೀಡಿದೆ. ಆಗಸ್ಟ್ ತಿಂಗಳಿನಿಂದ ಡಿಸೆಂಬರ್ ಅವಧಿಯಲ್ಲಿ ಲಸಿಕೆಯ ಪೂರೈಕೆಗೆ ಈ ಆರ್ಡರ್ ನೀಡಲಾಗಿದೆ. ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯ ಕೊವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್ ಕಂಪನಿಯ ಕೊವ್ಯಾಕ್ಸಿನ್ ಲಸಿಕೆಯ ಖರೀದಿಗೆ ಆರ್ಡರ್ ನೀಡಲಾಗಿದೆ.

ಐದು ತಿಂಗಳ ಅವಧಿಯಲ್ಲಿ 66 ಕೋಟಿ ಡೋಸ್ ಲಸಿಕೆ ಪೂರೈಕೆಗೆ ಆರ್ಡರ್ ಭಾರತದಲ್ಲಿ ಈಗ ಜನರು ಕೊರೊನಾ ಲಸಿಕೆಯನ್ನು ಪಡೆಯಲು ಮುಗಿಬೀಳುತ್ತಿದ್ದಾರೆ. ಆದರೆ, ಲಸಿಕಾ ಕೇಂದ್ರಗಳಲ್ಲಿ ಕೊರೊನಾ ಲಸಿಕೆಯೇ ಇಲ್ಲ. ಲಸಿಕೆಯ ಸ್ಟಾಕ್ ಇಲ್ಲ ಎನ್ನುವ ಬೋರ್ಡ್ ಗಳು ಲಸಿಕಾ ಕೇಂದ್ರದ ಗೇಟ್ ಗಳಲ್ಲಿ ರಾರಾಜಿಸುತ್ತಿವೆ. ಆದರೆ, ಕೇಂದ್ರ ಸರ್ಕಾರವು ಈ ವರ್ಷದ ಡಿಸೆಂಬರ್ ನೊಳಗೆ ದೇಶದ ಎಲ್ಲ ವಯಸ್ಕರಿಗೂ ಕೊರೊನಾ ಲಸಿಕೆ ನೀಡುವ ಗುರಿ ಹಾಕಿಕೊಂಡಿದೆ. ಈ ಗುರಿ ಮುಟ್ಟಲು ಈಗ ಕೇಂದ್ರ ಸರ್ಕಾರವು ಆಗಸ್ಟ್ ತಿಂಗಳಿನಿಂದ ಡಿಸೆಂಬರ್ ತಿಂಗಳ ಅವಧಿಯಲ್ಲಿ 66 ಕೋಟಿ ಡೋಸ್ ಲಸಿಕೆ ಪೂರೈಸಲು ಲಸಿಕಾ ಉತ್ಪಾದನಾ ಕಂಪನಿಗಳಿಗೆ ಆರ್ಡರ್ ನೀಡಿದೆ.

ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಗೆ 37.5 ಕೋಟಿ ಡೋಸ್ ಕೊವಿಶೀಲ್ಡ್ ಲಸಿಕೆಯ ಪೂರೈಕೆಗೆ ಆರ್ಡರ್ ನೀಡಲಾಗಿದೆ. ಹೈದರಾಬಾದ್ ನ ಭಾರತ್ ಬಯೋಟೆಕ್ ಕಂಪನಿಗೆ 28.5 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆಯನ್ನು ಆಗಸ್ಟ್ ನಿಂದ ಡಿಸೆಂಬರ್ ಅವಧಿಯಲ್ಲಿ ಪೂರೈಸಲು ಕೇಂದ್ರ ಸರ್ಕಾರ ಆರ್ಡರ್ ನೀಡಿದೆ. ಆಗಸ್ಟ್ ನಿಂದ ಡಿಸೆಂಬರ್ ಅವಧಿಯಲ್ಲಿ ದೇಶದ ಖಾಸಗಿ ಆಸ್ಪತ್ರೆಗಳಿಗೆ 22 ಕೋಟಿ ಡೋಸ್ ಲಸಿಕೆ ಪೂರೈಕೆಯಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೊವಿಶೀಲ್ಡ್ ಲಸಿಕೆಗೆ ಜಿಎಸ್‌ಟಿ ಸೇರಿ 225.75 ರೂ; ಕೊವ್ಯಾಕ್ಸಿನ್ ಲಸಿಕೆಗೆ ಪ್ರತಿ ಡೋಸ್ ಲಸಿಕೆಗೆ ಜಿಎಸ್‌ಟಿ ಸೇರಿ 215.25 ರೂ ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಿಂದ ಪ್ರತಿ ಡೋಸ್ ಕೊವಿಶೀಲ್ಡ್ ಲಸಿಕೆಗೆ ಜಿಎಸ್‌ಟಿ ಸೇರಿ 225.75 ರೂಪಾಯಿ ನೀಡಲಾಗುತ್ತಿದೆ. ಭಾರತ್ ಬಯೋಟೆಕ್ ಕಂಪನಿ ಕೊವ್ಯಾಕ್ಸಿನ್ ಲಸಿಕೆಗೆ ಪ್ರತಿ ಡೋಸ್ ಲಸಿಕೆಗೆ ಜಿಎಸ್‌ಟಿ ಸೇರಿ 215.25 ರೂಪಾಯಿ ನೀಡಲಾಗುತ್ತಿದೆ. ಈ ಮೊದಲು ಈ ಎರಡು ಕಂಪನಿಗಳಿಂದಲೂ ಪ್ರತಿ ಡೋಸ್ ಲಸಿಕೆಗೆ 157.50 ರೂಪಾಯಿ ನೀಡಿ ಖರೀದಿಸಲಾಗಿತ್ತು. ಈಗ ಕೊರೊನಾ ಲಸಿಕೆಯ ಖರೀದಿಯ ಬೆಲೆ ಏರಿಕೆ ಆಗಿರುವುದು ವಿಶೇಷ. ಎರಡು ಕಂಪನಿಗಳಿಂದ 66 ಕೋಟಿ ಡೋಸ್ ಲಸಿಕೆ ಖರೀದಿಗೆ ಕೇಂದ್ರ ಸರ್ಕಾರವು 14,505 ಕೋಟಿ ರೂಪಾಯಿ ನೀಡುತ್ತಿದೆ.

ಕೇಂದ್ರ ಸರ್ಕಾರವು ಆಗಸ್ಟ್ ನಿಂದ ಡಿಸೆಂಬರ್ ಅವಧಿಯಲ್ಲಿ ದೇಶಕ್ಕೆ 135 ಕೋಟಿ ಡೋಸ್ ಲಸಿಕೆ ಪೂರೈಕೆಯಾಗುತ್ತೆ ಎಂದು ಜೂನ್ 26ರಂದು ಅಫಿಡವಿಟ್ ಸಲ್ಲಿಸಿದೆ. ಈ ಗುರಿ ತಲುಪಲು ಈಗ 66 ಕೋಟಿ ಡೋಸ್ ಲಸಿಕೆ ಪೂರೈಕೆಗೆ ಆರ್ಡರ್ ನೀಡಿದೆ. ಎಸ್‌ಐಐ ಮತ್ತು ಭಾರತ್ ಬಯೋಟೆಕ್ ಮಾತ್ರವಲ್ಲದೇ, ಹೈದರಾಬಾದ್ ನ ಬಯೋಲಾಜಿಕಲ್ ಇ ಕಂಪನಿಗೆ ಈಗಾಗಲೇ 30 ಕೋಟಿ ಡೋಸ್ ಕೋರ್ಬಿವಾಕ್ಸ್ ಲಸಿಕೆ ಪೂರೈಕೆಗೆ ಆರ್ಡರ್ ನೀಡಲಾಗಿದೆ. 1,500 ಕೋಟಿ ರೂಪಾಯಿ ಹಣವನ್ನು ಮುಂಗಡವಾಗಿ ಬಯೋಲಾಜಿಕಲ್ ಇ ಕಂಪನಿಗೆ ನೀಡಲಾಗಿದೆ.

ಇದರಿಂದಾಗಿ ಈ ಮೂರು ಕಂಪನಿಗಳಿಂದ ಆಗಸ್ಟ್ -ಡಿಸೆಂಬರ್ ಅವಧಿಯಲ್ಲಿ 96 ಕೋಟಿ ಡೋಸ್ ಲಸಿಕೆ ಪೂರೈಕೆಗೆ ಆರ್ಡರ್ ನೀಡಿದಂತಾಗಿದೆ. ಇದೇ ಅವಧಿಯಲ್ಲಿ ಅಹಮದಾಬಾದ್‌ ಜೈಡಸ್ ಕ್ಯಾಡಿಲಾ ಕಂಪನಿಯ ಜೈ ಕೋವ್ ಡಿ ಲಸಿಕೆಯು ಸುಮಾರು 5 ಕೋಟಿ ಡೋಸ್ ಲಸಿಕೆ ಪೂರೈಸುವ ನಿರೀಕ್ಷೆ ಇದೆ. ರಷ್ಯಾದ ಸ್ಪುಟ್ನಿಕ್ ಲಸಿಕೆಯ 10 ಕೋಟಿ ಡೋಸ್ ಲಸಿಕೆ ಪೂರೈಕೆಯಾಗುವ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಇಟ್ಟುಕೊಂಡಿದೆ.

ಇದರಿಂದಾಗಿ 96 ಕೋಟಿ ಡೋಸ್ ಲಸಿಕೆಯ ಜೊತೆಗೆ ಈ ಎರಡು ಕಂಪನಿಗಳ ಲಸಿಕೆಯ 15 ಕೋಟಿ ಡೋಸ್ ಲಸಿಕೆ ಸೇರಿದರೇ, 111 ಕೋಟಿ ಡೋಸ್ ಲಸಿಕೆಯಾಗಲಿದೆ. ಜೊತೆಗೆ 22 ಕೋಟಿ ಡೋಸ್ ಲಸಿಕೆಯು ಖಾಸಗಿ ವಲಯಕ್ಕೆ ಪೂರೈಕೆಯಾಗುವ ನಿರೀಕ್ಷೆ ಇದೆ. ಹೀಗಾಗಿ 133 ಕೋಟಿ ಡೋಸ್ ಲಸಿಕೆ ಡಿಸೆಂಬರ್ ನೊಳಗೆ ಸಿಗುವ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಇಟ್ಟುಕೊಂಡಿದೆ.

ಆಗಸ್ಟ್ -ಡಿಸೆಂಬರ್ ಲಸಿಕೆ ಪೂರೈಕೆ ಪ್ಲ್ಯಾನ್

ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್–37.5 ಕೋಟಿ ಡೋಸ್ ಭಾರತ್ ಬಯೋಟೆಕ್ ಕಂಪನಿಯ ಕೊವ್ಯಾಕ್ಸಿನ್——– 28.5 ಕೋಟಿ ಡೋಸ್ ಬಯೋಲಾಜಿಕಲ್ ಇ ಕಂಪನಿ ಕೋರ್ಬಿವ್ಯಾಕ್ಸ್ ಲಸಿಕೆ—–30 ಕೋಟಿ ಡೋಸ್ ಖಾಸಗಿ ವಲಯಕ್ಕೆ ಲಸಿಕೆ ಪೂರೈಕೆ—————-22 ಕೋಟಿ ಡೋಸ್ ಜೈಡಸ್ ಕ್ಯಾಡಿಲಾದ ಜೈ ಕೋವ್ ಡಿ ಲಸಿಕೆ———–05 ಕೋಟಿ ಡೋಸ್ ರಷ್ಯಾದ ಸ್ಪುಟ್ನಿಕ್ ಲಸಿಕೆ———————10 ಕೋಟಿ ಡೋಸ್ ಒಟ್ಟಾರೆ ———————133 ಕೋಟಿ ಡೋಸ್

ಆಗಸ್ಟ್ ನಿಂದ ಡಿಸೆಂಬರ್ ಅವಧಿಯಲ್ಲಿ ಕೊವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಯ ಉತ್ಪಾದನೆಯು 88 ಕೋಟಿ ಡೋಸ್ ಆಗಲಿದೆ. ಎಸ್ಐಐ, ಭಾರತ್ ಬಯೋಟೆಕ್ ಕಂಪನಿಗಳಿಂದ 22 ಕೋಟಿ ಡೋಸ್ ಲಸಿಕೆಯನ್ನು ಖಾಸಗಿ ವಲಯಕ್ಕೆ ಪೂರೈಸಲಾಗುತ್ತೆ. ಭಾರತ್ ಬಯೋಟೆಕ್ ಕಂಪನಿಯ ಕೊವ್ಯಾಕ್ಸಿನ್ ಲಸಿಕೆಯು ಆಗಸ್ಟ್- ಡಿಸೆಂಬರ್ ಅವಧಿಯಲ್ಲಿ 40 ಕೋಟಿ ಡೋಸ್ ಉತ್ಪಾದನೆಯಾಗಲಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದ ಅಫಿಡವಿಟ್ ನಲ್ಲಿ ಹೇಳಿತ್ತು. ಆದರೆ, ಕೊವ್ಯಾಕ್ಸಿನ್ ಲಸಿಕೆಯ ಉತ್ಪಾದನೆ 38 ಕೋಟಿ ಡೋಸ್ ಆಗಲಿದೆ ಎಂದು ಈಗ ಹೇಳುತ್ತಿದೆ.

ಅಹಮದಾಬಾದ್ ಜೈಡಸ್ ಕ್ಯಾಡಿಲಾ ಕಂಪನಿಯ ಜೈ ಕೋವ್ ಡಿ ಲಸಿಕೆಗೆ ಇನ್ನೂ ಡಿಸಿಜಿಐ ತುರ್ತು ಬಳಕೆಗೆ ಅನುಮತಿ ನೀಡಿಲ್ಲ. ಆದರೇ, ಜೈಡಸ್ ಕ್ಯಾಡಿಲಾ ಕಂಪನಿಯ ಲಸಿಕೆಯ 3ನೇ ಹಂತದ ಪ್ರಯೋಗ ಮುಕ್ತಾಯವಾಗಿದ್ದು, ಡಿಸಿಜಿಐಗೆ ತುರ್ತು ಬಳಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಯನ್ನು ಈಗ ವಿಷಯ ತಜ್ಞರ ಸಮಿತಿಯು ಪರಿಶೀಲನೆ ನಡೆಸಿ ಡಿಸಿಜಿಐಗೆ ತನ್ನ ಶಿಫಾರಸ್ಸು ಮಾಡಬೇಕಾಗಿದೆ. ಬಯೋಲಾಜಿಕಲ್ ಇ ಕಂಪನಿಯ ಕೋರ್ಬಿವ್ಯಾಕ್ಸ್ ಲಸಿಕೆಯ ಮೇಲೆ ಕೇಂದ್ರ ಸರ್ಕಾರ ಭರವಸೆ ಇಟ್ಟುಕೊಂಡಿದೆ. ಒಂದು ಮತ್ತು ಎರಡನೇ ಹಂತದ ಲಸಿಕೆಯ ಪ್ರಯೋಗದಲ್ಲಿ ಲಸಿಕೆಯು ಭರವಸೆ ಮೂಢಿಸಿದೆ ಎಂದು ಕೊರೊನಾ ಟಾಸ್ಕ್ ಪೋರ್ಸ್ ಮುಖ್ಯಸ್ಥ ಡಾಕ್ಟರ್ ವಿ.ಕೆ.ಪೌಲ್ ಹೇಳಿದ್ದಾರೆ.

ಭಾರತಕ್ಕೆ ಮಾಡೆರ್ನಾ ಕಂಪನಿಯ ಲಸಿಕೆಯು ಪೂರೈಕೆಯಾಗುವ ನಿರೀಕ್ಷೆ ಇದೆ. ಈಗಾಗಲೇ ಮಾಡೆರ್ನಾ ಕಂಪನಿಯ ಲಸಿಕೆಗೆ ಭಾರತದ ಡಿಸಿಜಿಐ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಸಿಪ್ಲಾ ಕಂಪನಿಯು ಮಾಡೆರ್ನಾ ಕಂಪನಿಯ ಲಸಿಕೆಯನ್ನು ಭಾರತಕ್ಕೆ ಅಮದು ಮಾಡಿಕೊಂಡು ಜನರಿಗೆ ಪೂರೈಸಲಿದೆ. ಜೊತೆಗೆ ಆಮೆರಿಕಾ ಭಾರತಕ್ಕೆ ದಾನವಾಗಿ ಮಾಡೆರ್ನಾ ಲಸಿಕೆಯನ್ನು ನೀಡುವ ನಿರೀಕ್ಷೆ ಇದೆ. ಆದರೆ, ಭಾರತದಲ್ಲಿ ವಿದೇಶಿ ಕಂಪನಿಗಳ ಲಸಿಕೆಯ ಸೈಡ್ ಎಫೆಕ್ಟ್ ನಿಂದ ಕೋರ್ಟ್ ಕೇಸ್ ನಿಂದ ಕಾನೂನು ರಕ್ಷಣೆ ನೀಡಿದರೇ, ಮಾಡೆರ್ನಾ ಕಂಪನಿಯ ಲಸಿಕೆ ಪೂರೈಕೆಯಾಗಲಿದೆ.

ಭಾರತವು ಈಗಾಗಲೇ ಲಸಿಕೆಯ ಸೈಡ್ ಎಫೆಕ್ಟ್ ವಿರುದ್ಧ ಲಸಿಕಾ ಕಂಪನಿಗಳಿಗೆ ಕಾನೂನು ರಕ್ಷಣೆ ನೀಡಲು ತಾತ್ವಿಕವಾಗಿ ಒಪ್ಪಿಗೆ ನೀಡಿದೆ. ಕೋರ್ಟ್ ಕೇಸ್ ವಿರುದ್ಧ ಕಾನೂನು ರಕ್ಷಣೆಯ ನಿಯಮ, ಷರತ್ತು ರೂಪಿಸಿ ಅದನ್ನು ಮಾಡೆರ್ನಾ ಕಂಪನಿಗೆ ಕೇಂದ್ರ ಸರ್ಕಾರ ನೀಡಿದೆ. ಈ ಬಗ್ಗೆ ಈಗ ಮಾಡೆರ್ನಾ ಕಂಪನಿಯ ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚೆಯಾಗಿ ಒಪ್ಪಿಗೆ ಸಿಗಬೇಕು. ಬಳಿಕ ಭಾರತಕ್ಕೆ ಮಾಡೆರ್ನಾ ಕಂಪನಿಯ ಲಸಿಕೆ ಪೂರೈಕೆಯಾಗಲಿದೆ. ಭಾರತದಲ್ಲಿ ಇನ್ನೂ ಫೈಜರ್ ಕಂಪನಿಯು ತನ್ನ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಡಿಸಿಜಿಐಗೆ ಅರ್ಜಿ ಸಲ್ಲಿಸಿಲ್ಲ.

ಎಲ್ಲವೂ ಕೇಂದ್ರ ಸರ್ಕಾರದ ನಿರೀಕ್ಷೆ, ಪ್ಲ್ಯಾನ್ ನಂತೆ ನಡೆದರೇ, ಆಗಸ್ಟ್ ನಿಂದ ಡಿಸೆಂಬರ್ ಅವಧಿಯಲ್ಲಿ 135 ಕೋಟಿ ಡೋಸ್ ಲಸಿಕೆ ಭಾರತಕ್ಕೆ ಪೂರೈಕೆಯಾಗಲಿದೆ. 135 ಕೋಟಿ ಡೋಸ್ ಲಸಿಕೆ ಸಿಕ್ಕರೆ, ಭಾರತದ 94 ಕೋಟಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಸಾಧ್ಯ. ಆದರೇ, ಜುಲೈ ಅಂತ್ಯದೊಳಗೆ 51.6 ಕೋಟಿ ಡೋಸ್ ಲಸಿಕೆಯನ್ನು ಭಾರತ ನೀಡುವ ಗುರಿಯನ್ನು ತಲುಪಬೇಕು.

ಜುಲೈ 16ರ ಬೆಳಗ್ಗೆಯವರೆಗಿನ ಮಾಹಿತಿ ಪ್ರಕಾರ, ಭಾರತದಲ್ಲಿ 39.53 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಜುಲೈ ತಿಂಗಳಲ್ಲಿ ಇನ್ನೂಳಿದಿರುವ 15 ದಿನಗಳಲ್ಲಿ 12 ಕೋಟಿ ಡೋಸ್ ಲಸಿಕೆ ನೀಡಿಕೆ ಅಸಾಧ್ಯ. ಹೆಚ್ಚೆಂದರೆ 6-7 ಕೋಟಿ ಡೋಸ್ ಲಸಿಕೆ ನೀಡಬಹುದು. ಹೀಗಾಗಿ ಜುಲೈ ತಿಂಗಳ ಅಂತ್ಯದ ವೇಳೆಗೆ ಭಾರತವು 45-47 ಕೋಟಿ ಡೋಸ್ ಲಸಿಕೆ ನೀಡಲು ಸಾಧ್ಯ. ಹೀಗಾಗಿ ಗುರಿಗಿಂತ ಐದಾರು ಕೋಟಿ ಡೋಸ್ ಕಡಿಮೆ ಲಸಿಕೆಯನ್ನು ಜುಲೈ ಅಂತ್ಯಕ್ಕೆ ನೀಡಬೇಕಾಗಬಹುದು.

(December corona vaccination target 66 crore doses india government advance payment 1500 crore rupees)

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada