Mehul Choksi: ಭಾರತಕ್ಕೆ ವಾಪಾಸ್ ಹೋಗಬೇಕೆಂದುಕೊಂಡಿದ್ದೆ, ಇನ್ನೆಂದೂ ಅಲ್ಲಿಗೆ ಕಾಲಿಡುವುದಿಲ್ಲ; ಮೆಹುಲ್ ಚೋಕ್ಸಿ

PNB Scam: ಭಾರತೀಯ ತನಿಖಾ ಸಂಸ್ಥೆಗಳ ಅಧಿಕಾರಿಗಳು ನನ್ನನ್ನು ಅಪಹರಿಸಲು ಪ್ರಯತ್ನಿಸಿದ್ದರು. ಇಷ್ಟೆಲ್ಲ ಆದಮೇಲೆ ಭಾರತಕ್ಕೆ ಮರಳುವ ಮಾತೇ ಇಲ್ಲ ಎಂದು ಪಿಎನ್​ಬಿ ಹಗರಣದ ಆರೋಪಿ ಮೆಹುಲ್ ಚೋಕ್ಸಿ ಆರೋಪಿಸಿದ್ದಾರೆ.

Mehul Choksi: ಭಾರತಕ್ಕೆ ವಾಪಾಸ್ ಹೋಗಬೇಕೆಂದುಕೊಂಡಿದ್ದೆ, ಇನ್ನೆಂದೂ ಅಲ್ಲಿಗೆ ಕಾಲಿಡುವುದಿಲ್ಲ; ಮೆಹುಲ್ ಚೋಕ್ಸಿ
ಮೆಹುಲ್ ​ಚೋಕ್ಸಿ
Follow us
ಸುಷ್ಮಾ ಚಕ್ರೆ
|

Updated on: Jul 16, 2021 | 1:16 PM

ನವದೆಹಲಿ: ಪಿಎನ್​ಬಿ ಬ್ಯಾಂಕ್​ಗೆ ಕೋಟ್ಯಂತರ ರೂ. ವಂಚನೆ ಮಾಡಿ ಬೇರೆ ದೇಶದಲ್ಲಿ ತಲೆಮರೆಸಿಕೊಂಡಿದ್ದ ವಜ್ರದ ಉದ್ಯಮಿ ಮೆಹುಲ್ ಚೋಕ್ಸಿ ಅವರನ್ನು ಡೊಮಿನಿಕಾ ದ್ವೀಪದಲ್ಲಿ ಆ್ಯಂಟಿಗುವಾ ಪೊಲೀಸರು ಬಂಧಿಸಿದ್ದರು. ಚೋಕ್ಸಿಯನ್ನು ಇನ್ನೇನು ಭಾರತಕ್ಕೆ ಹಸ್ತಾಂತರ ಮಾಡಲಾಗುತ್ತದೆ ಎನ್ನುವಷ್ಟರಲ್ಲಿ ವೈದ್ಯಕೀಯ ಜಾಮೀನಿನ ಮೇಲೆ ಅವರು ಬಿಡುಗಡೆಯಾಗಿದ್ದರು. ಜಾಮೀನು ಸಿಕ್ಕಿದ ಬಳಿಕ ಆ್ಯಂಟಿಗುವಾ ಮತ್ತು ಬಾರ್ಬುಡಾ ದ್ವೀಪಕ್ಕೆ ಮರಳಿರುವ ಪಿಎನ್​ಬಿ ಹಗರಣದ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿ ಭಾರತೀಯ ತನಿಖಾ ಸಂಸ್ಥೆಗಳೇ ನನ್ನನ್ನು ಅಪಹರಣ ಮಾಡಲು ಪ್ರಯತ್ನಿಸಿದ್ದವು ಎಂ ಗಂಭೀರ ಆರೋಪ ಮಾಡಿದ್ದಾರೆ. ನಾನು ಭಾರತಕ್ಕೆ ವಾಪಾಸ್ ತೆರಳಬೇಕೆಂದುಕೊಂಡಿದ್ದೆ. ಆದರೆ, ಇಷ್ಟೆಲ್ಲ ಆದಮೇಲೆ ಭಾರತಕ್ಕೆ ಮರಳುವ ಮಾತೇ ಇಲ್ಲ ಎಂದು ಕೂಡ ಹೇಳಿದ್ದಾರೆ.

ಮೇ ಅಂತ್ಯದಲ್ಲಿ ಆಂಟಿಗುವಾ ದ್ವೀಪದಿಂದ ನಾಪತ್ತೆಯಾಗಿದ್ದ ಭಾರತದ ವಜ್ರದ ಉದ್ಯಮಿ ಮೆಹುಲ್ ಚೋಕ್ಸಿ ಕ್ಯೂಬಾಕ್ಕೆ ಪಲಾಯನ ಮಾಡುವ ಸಂದರ್ಭದಲ್ಲಿ ಡೊಮಿನಿಕಾ ದ್ವೀಪದಲ್ಲಿ ಬಂಧಿಸಲಾಗಿತ್ತು. ಪಿಎನ್​ಬಿ (ಪಂಜಾಬ್ ನ್ಯಾಷನಲ್ ಬ್ಯಾಂಕ್‌) ಹಗರಣದಲ್ಲಿ ಭಾರತಕ್ಕೆ ಬೇಕಾಗಿರುವ ಆರೋಪಿಗಳಲ್ಲಿ ಒಬ್ಬರಾಗಿರುವ ಮೆಹುಲ್ ಚೋಕ್ಸಿಯವರನ್ನು ಡೊಮಿನಿಕಾದಲ್ಲಿ ಜೈಲಿನಲ್ಲಿರಿಸಲಾಗಿತ್ತು. ಅವರನ್ನು ಭಾರತಕ್ಕೆ ಕರೆತರಲು ಭಾರತದ ಅಧಿಕಾರಿಗಳ ತಂಡ ಡೊಮಿನಿಕಾಗೆ ತೆರಳಿತ್ತು. ಆದರೆ, ಚೋಕ್ಸಿಗೆ ಜಾಮೀನು ಸಿಕ್ಕಿದ್ದು, ಆ್ಯಂಟಿಗುವಾಗೆ ಮರಳಿದ್ದಾರೆ.

ಡೊಮಿನಿಕಾದಲ್ಲಿ 52 ದಿನಗಳನ್ನು ಕಳೆದ ಮೆಹುಲ್ ಚೋಕ್ಸಿ ತನ್ನ ಈ ಪರಿಸ್ಥಿತಿಗೆ ಭಾರತವೇ ಕಾರಣ ಎಂದಿದ್ದಾರೆ. ನಾನು ನಿರಪರಾಧಿ ಎಂದು ಸಾಬೀತುಪಡಿಸಲು ಭಾರತಕ್ಕೆ ವಾಪಾಸ್ ಹೋಗಬೇಕೆಂದು ಗಂಭೀರವಾಗಿ ಯೋಚಿಸಿದ್ದೆ. ಆದರೆ, ಭಾರತೀಯ ಅಧಿಕಾರಿಗಳು ಅಮಾನವೀಯವಾಗಿ ವರ್ತಿಸಿ, ನನ್ನನ್ನು ಅಪಹರಣ ಮಾಡಿ ತಮ್ಮ ದೇಶಕ್ಕೆ ಕರೆದುಕೊಂಡು ಹೋಗಲು ಪ್ರಯತ್ನ ಮಾಡಿದ ನಂತರ ನನ್ನ ನಿರ್ಧಾರ ಬದಲಾಗಿದೆ. ನಾನಿನ್ನು ಭಾರತಕ್ಕೆ ಕಾಲಿಡುವ ಮಾತೇ ಇಲ್ಲ. ಬೇರೆ ದೇಶಕ್ಕೇ ಬಂದು ನನ್ನ ಜೊತೆ ಈ ರೀತಿ ವರ್ತಿಸಿರುವ ಭಾರತೀಯ ತನಿಖಾ ಸಂಸ್ಥೆಗಳ ಅಧಿಕಾರಿಗಳು ನಾನು ಭಾರತಕ್ಕೆ ಹೋದರೆ ಇನ್ನು ಯಾವ ರೀತಿ ನನ್ನನ್ನು ನಡೆಸಿಕೊಳ್ಳಬಹುದು ಎಂಬುದು ನನಗೆ ಗೊತ್ತಾಗಿದೆ. ಭಾರತದಲ್ಲಿ ನನಗೆ ಯಾವುದೇ ಸುರಕ್ಷತೆ ಇಲ್ಲದ ಕಾರಣ ನಾನು ಭಾರತಕ್ಕೆ ವಾಪಾಸ್ ಹೋಗುವುದಿಲ್ಲ ಎಂದು ಮೆಹುಲ್ ಚೋಕ್ಸಿ ಹೇಳಿಕೆ ನೀಡಿದ್ದಾರೆ.

ಭಾರತೀಯ ತನಿಖಾ ಸಂಸ್ಥೆಗಳ ಅಧಿಕಾರಿಗಳು ನನಗೆ ನೀಡಿರುವ ಚಿತ್ರಹಿಂಸೆ ನಾನು ಸಾಯುವವರೆಗೂ ನನ್ನ ಮನಸಿನಲ್ಲಿ ಉಳಿದಿರುತ್ತದೆ. ನನ್ನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವ ಭಾರತದ ತನಿಖಾ ಏಜೆನ್ಸಿಗಳು ನನ್ನನ್ನು ಕಿಡ್ನಾಪ್ ಮಾಡುವ ಮಟ್ಟಕ್ಕೆ ಇಳಿಯುತ್ತದೆ ಎಂದು ನಾನು ಊಹೆ ಕೂಡ ಮಾಡಿರಲಿಲ್ಲ. ನನ್ನ ಆರೋಗ್ಯ ಸರಿಯಿಲ್ಲದ ಕಾರಣ ಅಷ್ಟು ದೂರ ಪ್ರಯಾಣ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಭಾರತೀಯ ತನಿಖಾಧಿಕಾರಿಗಳಿಗೆ ಆ್ಯಂಟಿಗುವಾಗೆ ಬಂದು ನನ್ನನ್ನು ವಿಚಾರಣೆ ಮಾಡುವಂತೆ ಈ ಹಿಂದೆ ಕೇಳಿಕೊಂಡಿದ್ದೆ. ಆದರೂ ಅಮಾನವೀಯವಾಗಿ ನನ್ನನ್ನು ಕಿಡ್ನಾಪ್ ಮಾಡಿ ಕರೆದುಕೊಂಡು ಹೋಗಲು ಪ್ರಯತ್ನಪಟ್ಟರು. ಅವರಿಂದ ಇಂತಹ ವರ್ತನೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಈ 52 ದಿನಗಳ ಕಾಲ ನನಗೆ ಆಗಿರುವ ಮಾನಸಿಕ ಮತ್ತು ದೈಹಿಕ ಹಿಂಸೆಯಿಂದ ಹೊರಗೆ ಬರಲು ಎಷ್ಟು ಸಮಯ ಬೇಕಾಗುತ್ತದೋ ಗೊತ್ತಿಲ್ಲ ಎಂದು ಮೆಹುಲ್ ಚೋಕ್ಸಿ ಆರೋಪಿಸಿದ್ದಾರೆ.

62 ವರ್ಷದ ಮೆಹುಲ್ ಚೋಕ್ಸಿ ಕೆರಿಬಿಯನ್ ದ್ವೀಪ ರಾಷ್ಟ್ರವಾದ ಆಂಟಿಗುವಾ ಮತ್ತು ಬಾರ್ಬಡೋಸ್‌ನಲ್ಲಿ ನೆಲೆಸಿದ್ದರು. ಆಂಟಿಗುವಾದಿಂದ ಚೋಕ್ಸಿಯನ್ನು ಭಾರತಕ್ಕೆ ಗಡಿಪಾರು ಮಾಡಿಸುವ ಸಂಬಂಧ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಗಳು ಪ್ರಯತ್ನ ನಡೆಸಿರುವ ಸಂದರ್ಭದಲ್ಲಿಯೇ ಅವರು ಆಂಟಿಗುವಾದಿಂದಲೂ ಪಲಾಯನ ಮಾಡಲು ಪ್ಲಾನ್ ಮಾಡಿದ್ದರು. ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ಸಾವಿರಾರು ಕೋಟಿ ರೂ. ವಂಚಿಸಿ ಭಾರತದಿಂದ ಪರಾರಿಯಾಗಿದ್ದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಗಾಗಿ ಹಲವು ವರ್ಷಗಳಿಂದ ಪೊಲೀಸರು ಹುಡುಕಾಟ ನಡೆಸಿದ್ದರು. ಆಂಟಿಗುವಾ ಮತ್ತು ಬಾರ್ಬುಡಾದ ಪೌರತ್ವ ಪಡೆದಿರುವ ಚೋಕ್ಸಿ 2018ರಿಂದ ಅಲ್ಲಿಯೇ ವಾಸ್ತವ್ಯ ಹೂಡಿದ್ದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಪಿಎನ್ ಬಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಡೊಮಿನಿಕಾ ಮತ್ತು ಆಂಟಿಗುವಾ ಸರ್ಕಾರವನ್ನು ಕೇಳಿತ್ತು.

ಭಾರತದಿಂದ ಯೆಲ್ಲೋ ಕಾರ್ನರ್​ ನೊಟೀಸ್​ ಜಾರಿಯಾದ ನಂತರ, ದೇಶಬಿಟ್ಟು ಪರಾರಿಯಾಗಲು ಚೋಕ್ಸಿ ಯತ್ನಿಸಿದರೆ ಪೌರತ್ವ ಹಿಂಪಡೆಯುವುದಾಗಿ ಆಂಟಿಗುವಾ ಹೇಳಿತ್ತು. ಮೆಹುಲ್​ ಚೋಕ್ಸಿ ಮತ್ತು ನೀರವ್​ ಮೋದಿ ಇಬ್ಬರೂ ಪಂಜಾಬ್​ ನ್ಯಾಷನಲ್​ ಬ್ಯಾಂಕ್​ನಿಂದ (ಪಿಎನ್​ಬಿ) 13,500 ಕೋಟಿ ರೂ. ಸಾಲ ಪಡೆದು ವಂಚಿಸಿದ್ದರು.

ಇದನ್ನೂ ಓದಿ: Mehul Choksi: ಡೊಮಿನಿಕಾ ಸ್ಥಳೀಯ ಕೋರ್ಟ್​ನಿಂದ ಮೆಹುಲ್ ಚೋಕ್ಸಿಗೆ ವೈದ್ಯಕೀಯ ಜಾಮೀನು ಮಂಜೂರು

ಇದನ್ನೂ ಓದಿ: ಮಲ್ಯ, ಚೋಕ್ಸಿ, ನೀರವ್​ರಿಂದ ನಷ್ಟ ಅನುಭವಿಸಿದ ಸಾರ್ವಜನಿಕ ಬ್ಯಾಂಕ್​ಗಳಿಗೆ 8441 ಕೋಟಿ ರೂ. ಆಸ್ತಿ ವರ್ಗಾಯಿಸಿದ ಇ.ಡಿ.

(Mehul Choksi alleges Kidnapping by Indian Agencies and Wont Return to India any more PNB Scam)