ಮೆಹುಲ್ ಚೋಕ್ಸಿ ವಿರುದ್ಧ ಸಲ್ಲಿಸಿರುವ ಹೊಸ ಚಾರ್ಜ್​ಶೀಟ್​ನಲ್ಲಿ ಸಿಬಿಐ ಸಾಕ್ಷ್ಯನಾಶದ ಅರೋಪ ಮಾಡಿದೆ

ಚೋಕ್ಸಿ ಇನ್ನೂ ಭಾರತದ ನಾಗರಿಕನಾಗಿದ್ದು ಅವನು ಇಲ್ಲಿ ಕಾನೂನಿನ ವಿಚಾರಣೆ ಎದುರಿಸಬೇಕಿರುವುದರಿಂದ ಭಾರತದ ವಶಕ್ಕೆ ಅವನನ್ನು ಒಪ್ಪಿಸುವುದು ಅತ್ಯವಶ್ಯಕವಾಗಿದೆ ಎಂದು ಭಾರತ ಸರ್ಕಾರವು ಡೊಮಿನಾಕಾ ಸರ್ಕಾರಕ್ಕೆ ತಿಳಿಸಿದೆ.

ಮೆಹುಲ್ ಚೋಕ್ಸಿ ವಿರುದ್ಧ ಸಲ್ಲಿಸಿರುವ ಹೊಸ ಚಾರ್ಜ್​ಶೀಟ್​ನಲ್ಲಿ ಸಿಬಿಐ ಸಾಕ್ಷ್ಯನಾಶದ ಅರೋಪ ಮಾಡಿದೆ
ಮೆಹುಲ್ ಚೋಕ್ಸಿ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Jun 17, 2021 | 1:00 AM

ಪಂಜಾಬ ನ್ಯಾಶನಲ್ ಬ್ಯಾಂಕ್ (ಪಿಎನ್​ಬಿ) ಹಗರಣಕ್ಕೆ ಸಂಬಂಧಿಸಿದಂತೆ ಜೂನ್​ 10ರಂದು ಕೇಂದ್ರೀಯ ತನಿಖಾ ದಳವು ಮೆಹುಲ್ ಚೋಕ್ಸಿ ಮತ್ತು ಇತರ 21 ಜನರ ವಿರುದ್ಧ ಹೊಸ ಚಾರ್ಜ್​ಶೀಟ್​ ದಾಖಲಿಸಿದ್ದು ಭಾರತದಿಂದ ಕಣ್ಮರೆಯಾಗಿರುವ ವಜ್ರ ವ್ಯಾಪಾರಿಯು ಸಾಕ್ಷ್ಯ ನಾಶಪಡಿಸಿರುವ ಅರೋಪನ್ನು ಚಾರ್ಜ್​ಶೀಟ್​ನಲ್ಲಿ ಮೊದಲ ಬಾರಿಗೆ ಸೇರಿಸಿದೆ. 2017ರಲ್ಲಿ ಪಿಎನ್​ಬಿ ಅಧಿಕಾರಿಗಳ ಸಹಾಯದಿಂದ ಚೊಕ್ಸಿಯು 165 ಲೆಟರ್ಸ್ ಆಫ್ ಅಂಡರ್​ಸ್ಟ್ಯಾಂಡಿಂಗ್ (ಎಲ್​ಒಯು) 58 ಎಫ್​ಎಲ್​ಸಿಗಳನ್ನು (ಫಾರಿನ್ ಲೆಟರ್ಸ್​ ಆಫ್​ ಕ್ರೆಡಿಟ್) ಮೋಸದಿಂದ ಪಡೆದು ಬ್ಯಾಂಕಿಗೆ ರೂ. 6,097 ಕೋಟಿ ವಂಚನೆ ಎಸಗಿದ ನಂತರ ಅದನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದನೆಂದು ತಾನು ಸಲ್ಲಿಸಿರುವ ಚಾರ್ಜ್​ಶೀಟ್​ನಲ್ಲಿ ಸಿಬಿಐ ಆರೋಪಿಸಿದೆ. ಪೂರಕ ಚಾರ್ಜ್​ಶೀಟ್​ಗಳಲ್ಲಿ ಚೋಕ್ಸಿಯ ವಿರುದ್ಧ ಸೆಕ್ಷನ್ 201 (ಸಾಕ್ಷ್ಯ ನಾಶ), ವಂಚನೆ, ಕ್ರಿಮಿನಲ್ ಪತೂರಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಅರೋಪಗಳನ್ನು ತನಿಖಾ ದಳ ಮಾಡಿದೆ.

ಈ ಎಲ್ಲ ಆರೋಪಗಳನ್ನು ಮಾಡಿರುವ ಚಾರ್ಜ್​ಶೀಟ್ ಪ್ರತಿಯನ್ನು ಡೊಮಿನಿಕಾದ ಅಧಿಕಾರಿಗಳು ಮತ್ತು ಕೊರ್ಟ್​ಗೆ ನೀಡಿದರೆ, ಚೋಕ್ಸಿಯನ್ನು ವಶಕ್ಕೆ ಪಡೆಯಲು ನೆರವಾಗುತ್ತದೆ ಎಂದು ವಿಷಯದ ಬಗ್ಗೆ ಮಾಹಿತಿ ಹೊಂದಿರುವ ಅಧಿಕಾರಿಗಳು ಹೇಳಿದ್ದಾರೆ.

ಚೋಕ್ಸಿಯನ್ನು ಹೊರತುಪಡಿಸಿ 21 ವ್ಯಕ್ತಿಗಳನ್ನು ಚಾರ್ಜ್​ಶೀಟ್​ನಲ್ಲಿ ಹೆಸರಿಸಲಾಗಿದೆ, ಅವರಲ್ಲಿ ಪಿಎನ್​ಬಿಯ ನಿವೃತ್ತ ಡೆಪ್ಯುಟಿ ಮ್ಯಾನೇಜರ್ ಗೋಕುಲ್​ನಾಥ ಶೆಟ್ಟಿ, ಏಕ ಗವಾಕ್ಷಿ ನಿರ್ವಾಹಕ ಹನುಮಂತ್ ಕಾರಟ್, ಅಲಹಾಬಾದ್​ ಬ್ಯಾಂಕಿನ ಮಾಜಿ ಮ್ಯಾನೇಜಿಂಗ್ ಡೈರೆಕ್ಟರ್ ಉಷಾ ಅನಂತಸುಬ್ರಮಣಿಯಮ್, ಪಿಎನ್​ಜಿ ಮಾಜಿ ಕಾರ್ಯ ನಿರ್ವಾಹಕ ನಿರ್ದೇಶಕರಾದ ಬ್ರಹ್ಮಾಜಿ ರಾವ್ ಮತ್ತು ಸಂಜೀವ್ ಶರಣ್, ಬ್ಯಾಂಕಿನ ಮಾಜಿ ಉಪಾಧ್ಯಕ್ಷ ನೆಹಲ್ ಅಹದ್ ಮತ್ತು ಚೋಕ್ಸಿ ಗೀತಾಂಜಲಿ ಗುಂಪಿನ ಮಾಜಿ ವೈಸ್ ಪ್ರೆಸಿಡೆಂಟ್ ವಿಪುಲ್ ಚಿತಾಲಿಯ ಮತ್ತು ಇನ್ನಿತರರು ಸೇರಿದ್ದಾರೆ.

‘ಡಿಸೆಂಬರ್ 2017ರಲ್ಲಿ ಚೋಕ್ಸಿಯು ಹಾಂಗ್​ ಕಾಂಗ್​ಗೆ ಪ್ರಯಾಣ ಬೆಳಸಿ ಅದೇ ದೇಶದಲ್ಲಿ ನೆಲೆಗೊಂಡಿದ್ದ ಡಮ್ಮಿ ಸರಬರಾಜು ಸಂಸ್ಥೆಗಳ (ಇವು ಅವನಿಂದಲೇ ನಿಯಂತ್ರಿಸಲ್ಪಟ್ಟಿದ್ದವು ) ನಿರ್ದೇಶಕರನ್ನು ಭೇಟಿಯಾಗಿ ತನ್ನ ಗೀತಾಂಜಲಿ ಗ್ರೂಪ್ ಕಂಪನಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಶುರುವಾಗಿವೆ ಮತ್ತು ಅವರೆಲ್ಲ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಎದುರಿಸಬೇಕಾಗಬಹುದೆಂದು ತಿಳಿಸುತ್ತಾನೆ,’ ಎಂದು ಚಾರ್ಜ್​ಶೀಟ್​ನಲ್ಲಿ ಹೇಳಲಾಗಿದೆ.

‘ಇದರರ್ಥ ತನ್ನ ವಿರುದ್ಧ ಕ್ರಿಮಿನಲ್​ ಪ್ರೊಸೀಡಿಂಗ್ಸ್ ನಡೆಯುತ್ತಿದ್ದ ಬಗ್ಗೆ ಚೋಕ್ಸಿಗೆ ಪೂರ್ವ ಮಾಹಿತಿಯಿತ್ತು. ಹಾಗಾಗೇ, ಅವನು ವಂಚನೆಯ ಉದ್ದೇಶ ಮತ್ತು ಕಾನೂನು ಪ್ರಕ್ರಿಯೆಗಳಿಂದ ಬಚಾವಾಗಲು ಜನೆವರಿ 4, 2018ರಂದು ಭಾರತದಿಂದ ಪರಾರಿಯಾದ,’ ಎಂದು ಚಾರ್ಜ್​ಶೀಟ್​ನಲ್ಲಿ ಸಿಬಿಐ ಆರೋಪಿಸಿದೆ 2018ರಲ್ಲಿ ವಂಚನೆ ಬಯಲಿಗೆ ಬಿದ್ದಾಗ ಅವರು ತನ್ನ ಕಂಪನಿಯ ಡಮ್ಮಿ ನಿರ್ದೇಶಕರನ್ನು ಬ್ಯಾಂಕಾಗ್​ಗೆ ರವಾನಿಸಿ ತನಿಖಾಧಿಕಾರಿಗಳ ಎದುರು ಹಾಜರಾಗಲು ಭಾರತಕ್ಕೆ ಮರಳಬಾರದೆಂದು ಅವರಿಗೆ ತಿಳಿಸಿದ ಎಂದು ಸಿಬಿಐ ಹೇಳಿದೆ. ಚೋಕ್ಸಿ ಇನ್ನೂ ಭಾರತದ ನಾಗರಿಕನಾಗಿದ್ದು ಅವನು ಇಲ್ಲಿ ಕಾನೂನಿನ ವಿಚಾರಣೆ ಎದುರಿಸಬೇಕಿರುವದರಿಂದ ಭಾರತದ ವಶಕ್ಕೆ ಅವನನ್ನು ಒಪ್ಪಿಸುವುದು ಅತ್ಯವಶ್ಯಕವಾಗಿದೆ ಎಂದು ಭಾರತ ಸರ್ಕಾರವು ಡೊಮಿನಾಕಾ ಸರ್ಕಾರಕ್ಕೆ ತಿಳಿಸಿದೆ.

ಚೋಕ್ಸಿ ಆಂಟಿಗುವಾ ಮತ್ತು ಬರ್ಬುಡಾದ ನಾಗರಿಕನಾಗಿದ್ದು ಮೇ 2 ರಂದು ಅಲ್ಲಿಂದ ಕಣ್ಮರೆಯಾಗಿದ್ದ. ಮರುದಿನವೇ ಡೊಮಿನಕಾದಲ್ಲಿ ಪತ್ತೆಯಾಗಿದ್ದ ಅವನ ವಿರುದ್ಧ ಆಕ್ರಮ ಪ್ರವೇಶದ ದೂರು ದಾಖಲಿಸಲಾಗಿತ್ತು, ಅವನನ್ನು ಅಪಹರಿಸಿ ಡೊಮಿನಿಕಾಗೆ ಒಯ್ಯಲಾಗಿತ್ತು ಎಂದು ಅವನ ಲಾಯರ್​ಗಳಾದ ವಿಜಯ್ ಅಗರ್​ವಾಲ್, ವೇಯ್ನ್ ಮಾರ್ಷ್​, ಪತ್ನಿ ಪ್ರೀಟಿ ಚೋಕ್ಸಿ ಹೇಳಿದ್ದರು.

ಸಿಬಿಐ ದಾಖಲಿಸಿರುವ ಚಾರ್ಜ್​ಶೀಟ್​ಗೆ ಬುಧವಾರದಂದು ಪ್ರತಿಕ್ರಿಯಿಸಿದ ವಿಜಯ ಅಗರ್​ವಾಲ್, ಮೂರು ವರ್ಷಗಳ ಹಿಂದೆ ಡಿಫೆನ್ಸ್ ಸಲ್ಲಿಸಿದ್ದ ಚಾರ್ಜ್​ಶೀಟ್​ನಲ್ಲಿನ ಲೋಪಗಳನ್ನು ಮುಚ್ಚಿಹಾಕಲು ಸಿಬಿಐ ಪೂರಕ ಚಾರ್ಜ್​ಶೀಟ್​ ಸಲ್ಲಸಿದೆ. ಅಲ್ಲದೆ ಐಪಿಸಿ ಸೆಕ್ಷನ್ 201 ಸೇರಿಸಿರುವುದು ಕಾನೂನು ಪ್ರಕಾರ ಮಾನ್ಯವಾಗುವುದಿಲ್ಲ. ಯಾಕೆಂದರೆ ಡಾಕ್ಯುಮೆಂಟ್​ ಕೋರ್ಟ್​ನಲ್ಲಿ ಸಲ್ಲಿಕೆಯಾದ ನಂತರವೇ ಅದು ಸಾಕ್ಷ್ಯ ಎನಿಸಿಕೊಳ್ಳುತ್ತದೆ. ಹಾಗೆಯೇ ಚಾರ್ಜ್​ಶೀಟ್​ನಲ್ಲಿ ಮಾಡಿರುವ ಆರೋಪಗಳು ಏಫ್ ಐ ಆರ್ ದಾಖಲಾಗುವದಕ್ಕಿಂತ ಮೊದಲಿನ ಅವಧಿಯವಾಗಿವೆ,’ಎಂದು ಹೇಳಿದ್ದಾರೆ.

ಇದನ್ನೂ ಓದಿ: Mehul Choksi: ಉದ್ಯಮಿ ಮೆಹುಲ್ ​ಚೋಕ್ಸಿ ಪರಾರಿಯಾಗುವ ಸಾಧ್ಯತೆಯಿದೆ, ಜಾಮೀನು ನೀಡೊಲ್ಲ ಎಂದ ಡೊಮಿನಿಕಾ ಕೋರ್ಟ್​!

Published On - 8:19 pm, Wed, 16 June 21