ಮಲ್ಯ, ಚೋಕ್ಸಿ, ನೀರವ್​ರಿಂದ ನಷ್ಟ ಅನುಭವಿಸಿದ ಸಾರ್ವಜನಿಕ ಬ್ಯಾಂಕ್​ಗಳಿಗೆ 8441 ಕೋಟಿ ರೂ. ಆಸ್ತಿ ವರ್ಗಾಯಿಸಿದ ಇ.ಡಿ.

ಭಾರತದ ಮಟ್ಟಿಗೆ ಅಪರೂಪದ ಪ್ರಕರಣ ಇದು. ತನಿಖಾ ಸಂಸ್ಥೆಗಳು ವಿಜಯ್ ಮಲ್ಯ, ಮೆಹುಲ್ ಚೋಕ್ಸಿ ಹಾಗೂ ನೀರವ್​ ಮೋದಿಯಿಂದ ವಶಪಡಿಸಿಕೊಂಡಿದ್ದ 8441.5 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಈ ಆರೋಪಿಗಳಿಂದ ನಷ್ಟಕ್ಕೀಡಾದ ಸಾರ್ವಜನಿಕ ಬ್ಯಾಂಕ್​ಗಳಿಗೆ ವರ್ಗಾವಣೆ ಮಾಡಿವೆ.

ಮಲ್ಯ, ಚೋಕ್ಸಿ, ನೀರವ್​ರಿಂದ ನಷ್ಟ ಅನುಭವಿಸಿದ ಸಾರ್ವಜನಿಕ ಬ್ಯಾಂಕ್​ಗಳಿಗೆ 8441 ಕೋಟಿ ರೂ. ಆಸ್ತಿ ವರ್ಗಾಯಿಸಿದ ಇ.ಡಿ.
ನೀರವ್ ಮೋದಿ (ಎಡಕ್ಕೆ), ಮೆಹುಲ್ ಚೋಕ್ಸಿ (ಬಲಭಾಗದಲ್ಲಿ) ಸಂಗ್ರಹ ಚಿತ್ರ

ಜಾರಿ ನಿರ್ದೇಶನಾಲಯದಿಂದ (ಇ.ಡಿ.) ವಿಜಯ್​ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಗೆ ಸೇರಿದ 8441.5 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳಿಗೆ ವರ್ಗಾವಣೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ತನಿಖಾ ಸಂಸ್ಥೆಗಳು ಆರೋಪಿಗಳಿಗೆ ಸೇರಿದ ಆಸ್ತಿಗಳನ್ನು ಬ್ಯಾಂಕ್​ಗಳಿಗೆ ವರ್ಗಾವಣೆ ಮಾಡಿವೆ. ಈ ಆರೋಪಿಗಳು ತಮ್ಮ ಕಂಪೆನಿಗಳ ಮೂಲಕವಾಗಿ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳಿಗೆ ವಂಚನೆ ಮಾಡಿದ್ದರಿಂದ ಒಟ್ಟಾರೆ 22,585.83 ಕೋಟಿ ರೂಪಾಯಿ ನಷ್ಟವಾಗಿದೆ. ಆ ನಂತರ ಸಿಬಿಐನಿಂದ ಎಫ್​ಐಆರ್ ಆಗಿ, ಜಾರಿ ನಿರ್ದೇಶನಾಲಯದಿಂದ ಆರೋಪಿಗಳ ದೇಶೀಯ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಹಾಗೂ ವಿದೇಶಗಳಲ್ಲಿ ಇರುವ ಆಸ್ತಿಗಳನ್ನು ಪತ್ತೆ ಹಚ್ಚಿ, ವಶಕ್ಕೆ ಪಡೆದಿದ್ದವು. ಈ ಮೂವರು ಆರೋಪಿಗಳು ತಮ್ಮ ಡಮ್ಮಿ ಸಂಸ್ಥೆಗಳನ್ನು ಬ್ಯಾಂಕ್​ಗಳಿಂದ ನೀಡುವ ಹಣವನ್ನು ಕೈ ಬದಲಾವಣೆಗೆ ಮತ್ತು ವಂಚಿಸುವುದಕ್ಕೆ ಬಳಸಿಕೊಂಡಿದ್ದಾರೆ ಎಂದು ತನಿಖೆಯಿಂದ ಗೊತ್ತಾಗಿತ್ತು.

ತಕ್ಷಣವೇ ಕ್ರಮ ಕೈಗೊಂಡ ಇ.ಡಿ., ವಿದೇಶಗಳಲ್ಲಿ ಇರುವ 969 ಕೋಟಿ ರೂಪಾಯಿ ಆಸ್ತಿಯನ್ನೂ ಸೇರಿಸಿ, 18,170.02 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು/ಜಪ್ತಿ ಮಾಡಿಕೊಂಡವು. ಅಲ್ಲಿಗೆ ಒಟ್ಟಾರೆಯಾಗಿ ಬ್ಯಾಂಕ್​ಗಳಿಗೆ ಆದ 22,585.83 ಕೋಟಿ ರೂಪಾಯಿಯಲ್ಲಿ ಶೇ 80.45ರಷ್ಟು ಮೊತ್ತವನ್ನು ವಶಪಡಿಸಿಕೊಂಡಂತೆ ಆಯಿತು. ಅಂದಹಾಗೆ ಈ ಆಸ್ತಿಯಲ್ಲಿ ಬಹುಪಾಲು ಡಮ್ಮಿ ಸಂಸ್ಥೆಗಳು/ಟ್ರಸ್ಟ್​ಗಳು/ಮೂರನೇ ವ್ಯಕ್ತಿಗಳು/ಸಂಬಂಧಿಕರ ಹೆಸರಲ್ಲಿದ್ದವವು. ಈ ಎಲ್ಲ ಸಂಸ್ಥೆಗಳನ್ನು ಬಳಸಿಕೊಂಡು, ಆರೋಪಿಗಳು ಆ ಆಸ್ತಿಯನ್ನು ಇರಿಸಲು ಬಳಸಿದ್ದರು. ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ವಿಚಾರಣೆ ಪೂರ್ತಿಯಾದ ಮೇಲೆ ಮೂವರೂ ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಾಯಿತು.

ಈ ಮೂವರ ಹಸ್ತಾಂತರಕ್ಕೆ ಕೋರಿ, ಯು.ಕೆ., ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ಮನವಿ ಮಾಡಲಾಯಿತು. ಆ ನಂತರ ವಿಜಯ್ ಮಲ್ಯ ಹಸ್ತಾಂತರದ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ಯು.ಕೆ. ಕೋರ್ಟ್​ನಲ್ಲಿ ತಿರಸ್ಕೃತಗೊಂಡಿದೆ. ಇನ್ನು ನೀರವ್ ಮೋದಿ ಹಸ್ತಾಂತರಕ್ಕೆ ವೆಸ್ಟ್​ಮಿನಿಸ್ಟರ್​ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ನೀಡಿದೆ. ಕಳೆದ ಎರಡು ವರ್ಷ ಹಾಗೂ ಮೂರು ತಿಂಗಳಿಂದ ನೀರವ್ ಮೋದಿ ಲಂಡನ್​ ಜೈಲಿನಲ್ಲಿದ್ದು, ವಿಜಯ್ ಮಲ್ಯರನ್ನು ಸಹ ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಮುಂಬೈನ ಪಿಎಂಎಲ್​ಎ ಕೋರ್ಟ್ ಘೋಷಿಸಿದೆ.

ಈಚೆಗೆ ಜಾರಿ ನಿರ್ದೇಶನಾಲಯದಿಂದ ಅಂದಾಜು 6600 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಎಸ್​ಬಿಐ ನೇತೃತ್ವದ ಬ್ಯಾಂಕ್​ಗಳ ಒಕ್ಕೂಟಕ್ಕೆ ವರ್ಗಾವಣೆ ಮಾಡಲಾಯಿತು. ಎಸ್​ಬಿಐ ನೇತೃತ್ವದ ಒಕ್ಕೂಟದ ಪರವಾಗಿ ಯುನೈಟೆಡ್ ಬ್ರಿವರೀಸ್​ನ 5824.50 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಡಿಆರ್​ಟಿ ಮಾರಾಟ ಮಾಡಿದೆ. ಜೂನ್ 25ನೇ ತಾರೀಕಿನಂದು ಇನ್ನೂ 800 ಕೋಟಿ ರೂಪಾಯಿ ಮೊತ್ತ ಷೇರಿನ ಮಾರಾಟದ ಮೂಲಕವೇ ಬರಬಹುದು ಎಂಬ ಅಂದಾಜಿದೆ. ಈ ಹಿಂದೆ ಇ.ಡಿ. ಸಹಾಯದಿಂದಲೇ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳು ಷೇರುಗಳ ಮಾರಾಟದಿಂದ 1357 ಕೋಟಿ ರೂಪಾಯಿ ವಸೂಲು ಮಾಡಿವೆ. ಇನ್ನು ಇ.ಡಿ.ಯಿಂದ ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳಲ್ಲಿ ಒಂದಿಷ್ಟು ಭಾಗ ಮಾರಾಟ ಮಾಡಿ 9041.5 ಕೋಟಿ ರೂಪಾಯಿ ಸಂಗ್ರಹಿಸಬಹುದು.

ಇಲ್ಲಿಯ ತನಕ ಪಿಎಂಎಲ್​ಎ ಅಡಿಯಲ್ಲಿ 18,170.02 ಕೋಟಿ ರೂಪಾಯಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 329.67 ಕೋಟಿ ರೂಪಾಯಿ ಆಸ್ತಿ ಜಪ್ತಿ ಮಾಡಲಾಗಿದೆ. 9041.5 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು, ಅಂದರೆ ಒಟ್ಟು ನಷ್ಟದ ಶೇ 40ರಷ್ಟನ್ನು ಸಾರ್ವಜನಿಕ ವಲಯದ ಬ್ಯಾಂಕ್​ಗಳಿಗೆ ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ: ವಿಜಯ್ ಮಲ್ಯ ಆಸ್ತಿ, ಸೆಕ್ಯೂರಿಟೀಸ್ ಹರಾಜಿಗೆ ಬ್ಯಾಂಕ್​ಗಳಿಗೆ ಅನುಮತಿ ನೀಡಿದ ಪಿಎಂಎಲ್ಎ ಕೋರ್ಟ್

(Enforecement Directorate transferred assets worth Rs 8441 Crore to PSBs who suffered loss by Vijay Mallya, Nirav Modi and Mehul Choksi)